ಹಾದರಳ ಹೆಣ
ಅರ್ಚನಾ. ಹೆಚ್
ಹಾದರಕೆ ಮೈಯೊಡ್ಡಿ
ಸೂಳೆ ಪಟ್ಟವು ಗಟ್ಟಿ..!!
ಹಾದರಳು ಹೆಣವಾಗಿ
ಹೊರುವುದಕೆ ನಾಕಿಲ್ಲ..
ಹೆಂಗಳೆಯರ್ವದನ
ಸಂತಸದಿ ಅರಳಿತಲ್ಲ..!!
ಮಸಣದ ನೆಲದಲಿ
ಮೂರ್ಹಿಡಿಯ ಮಣ್ಣಿಲ್ಲ..!
ಸುಡುವುದಕೆ ಕೊರಡು
ಕೊನರಿತಲ್ಲ..!!??
ಅವಳೆಂಜಲೂಟ ರುಚಿಸುಂಡ
ಗಂಡುನಾಯಿಗಳ ಸುಳಿವಿಲ್ಲ..
ಅವಳಧರದೊಡಲೊಳಿಳಿದು
ಮಧುವ್ಹೀರಿ ದುಗ್ಗಾಣಿ
ಸುರಿದಿದ್ದ ಭ್ರಮರಗಳ ಬರುವಿಲ್ಲ..
ಪೂವ ಪಲ್ಲಂಗದಿ ಕಾಮಕೇಲಿಯನಾಡಿ…
ಮದನಿಕೆ ಚಂದ್ರಿಕೆ ತಿಲೋತ್ತಮೆಯ ಉಪಮೆ ನೀಡಿ..
ಅವಳಂದ ಪೊಗಳಿದ್ದ
ಕಾದಲರು ಬರಲಿಲ್ಲ..
ಮೊದಲ ಮೈಥುನಕ್ಹೆದರಿ
ಕೆಳೆಯರಾದೇಶಕೆ ಮಣಿದು
ಸರಿರಾತ್ರಿ ಜಾರಿಣಿಯ ಮನೆಪೊಕ್ಕು ಕಳ್ಳಕಾಸಿಟ್ಟ
ಪೋರ ಪೋಕರರ ಸುಳಿವಿಲ್ಲ..

ರಾಮಣ್ಣನೆದೆಯಲ್ಲಿ
ದುಃಖ ಮಡುಗಟ್ಟಿ..
ಅವನೊಡತಿ ಸಂತಸದಿಂದ
ಹೋಳಿಗೆಯ ತಟ್ಟಿ..
ಮೊನ್ನೆ ಮುಡಿದಿದ್ದ
ಮೊಲ್ಲೆಯ ಘಮಲಿಲ್ಲ
ಕಮರಿತ್ತು ಕರ್ರಗೆ ..
ಹೊಸಕಿ ನೀಲಿಗಟ್ಟಿ
ತನು ಬಾಡಿತ್ತು ಬಿಮ್ಮಗೆ..
ಸತ್ತೆರಡು ಬೈಗು ಕಳೆದಿದ್ದು
ಗುಮ್ಮಗೆ..
ಗರತಿಯರ ಹಿಡಿಶಾಪ
ಇಡಿಯಾಗಿ ತಟ್ಟಿತ್ತು..
ಬೀದಿಕಾಮಣ್ಣರ ಚಪಲ
ಹಿಡಿಯಾಗಿ ಇಂಗಿತ್ತು..
ಧಾತುಕರಿಲ್ಲದ ಹೆಣ
ಕಣ್ಣೀರಿಟ್ಟು ಕೊರಗಿತ್ತು..






ತುಂಬಾ ಚೆನ್ನಾಗಿ ಬರೆದಿದ್ದಿರಾ ಹೀಗೆ ಮುಂದುವರೆಯಲಿ ನಿಮ್ಮ ಬರವಣಿಗೆ
ಧನ್ಯವಾದಗಳು ಸರ್
ತುಂಬಾ ಚೆನ್ನಾಗಿದೆ ಬರಹ..
ಹೀಗೆ ಮುಂದುವರೆಯಲಿ
ಧನ್ಯವಾದಗಳು ಸರ್
ತುಂಬ ಚೆನ್ನಾಗಿದೆ
ಧನ್ಯವಾದಗಳು ಸರ್