ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೊದಲ ಹೂವಿನ ತಲೆ ಕತ್ತರಿಸಿದ ರಾತ್ರಿ….

ರವಿ ಮೂರ್ನಾಡು, ಕ್ಯಾಮರೂನ್


ಹುಡುಕಾಡಿದೆ, ಸಿಗಲೇ ಇಲ್ಲ
ಮರಗಳ ಸ್ವರಗಳು
ಕಳೆದುಹೋದ ಸಮುದ್ರದ ಹಾಳೆಗಳು
ಹೆಬ್ಬಂಡೆ ಮೌನಗಳು |
 
ಎಲ್ಲವೂ ಅಲ್ಲೇ ಇದೆ
ಎಚ್ಚರವಿರದ ನಿದ್ದೆಗೆ ಬಿದ್ದಿವೆ |
 
ಮೇಲೆ ಸೇತುವೆಗೆ
ಕೆಳಗೆ ಹರಿವ ನದಿ ಮಾತಿಗಿಳಿದಿದೆ
ಕಿವಿ ನಿಮಿರಿ ಕಿನಾರೆಗಳು ಆಲಿಸುತ್ತಿವೆ |
 
ಎಲ್ಲೆ ಮೀರದ ಅಸುರಕ್ಷಿತ ಕೋಟೆ |
 
ಇದ್ಯಾವುದೂ ಸರಿ ಹೊಂದುವುದಿಲ್ಲ,
ಬಾಲ್ಯದ ಮನೆಯೊಳಗೆ ಎದ್ದ
ಕಾರಂಜಿಗಳಿಗೆ ಮಣ್ಣು ಮಗುಚಿದೆ
ಎಲೆಗಳು ಮುಚ್ಚಿವೆ |
 
ತಾಯ ನೀಳ ಬೆರಳುಗಳಿಗೆ
ಮನೆಯ ಕಲಹದ ಅರಗಿನ ಮಾತುಗಳು
ಕಗ್ಗಂಟಾಗುತ್ತಾ, ಮತ್ತೊಮ್ಮೆ ಬಿಚ್ಚುತ್ತಾ
ಕಸೂತಿ ಹೆಣೆಯುತ್ತಿವೆ ರಾತ್ರಿಗಳು |
 
ತಂದೆಯ ಸುಕ್ಕು ಕೈಗಳಲಿ
ರಾತ್ರಿಯ ನೆರಳೊಂದು
ನಶಿಸಿದ ಗಡಿಯಾರದ
ಪುನರುತ್ಥಾನಕೆ ಶ್ರಮಿಸುತ್ತಿದೆ |
 
ಅಥವಾ
ಬಂಧಮುಕ್ತಿಗೊಂಡು
ಅಸಂಖ್ಯ ಹಾರಾಟಕೆ ಹವಣಿಸುತ್ತಿದೆ |
 
ಹುಡುಕಾಡಿದೆ, ಸಿಗಲೇ ಇಲ್ಲ
ಪತ್ತೆಯಾಗದ ಮನೆಯೊಳಗೆ
ಕತ್ತರಿಸಿದ ರೆಕ್ಕೆಗಳ ಕಳಚಿದ ಗರಿಗಳು
ಕಳೆದುಹೋದ ಜೋಡಿ ಚಪ್ಪಲಿ
ಚದುರಿದ ಅ ಆ ಇ ಈ ಅಕ್ಷರಗಳು |
 
ಎಲ್ಲವೂ ಅಲ್ಲೇ ಇದೆ
ಎಚ್ಚರವಿರದ ನಿದ್ದೆಗೆ ಬಿದ್ದಿವೆ |
 
ಅದೋ ರಾತ್ರಿ ಚಲಿಸಿದೆ…
ಕಟ್ಟ ಕಡೆಯ ಶವಯಾತ್ರೆಗೆ ನೆನೆದು
ತಲೆ ಕತ್ತರಿಸಿದ ಮೊದಲ ಮಲ್ಲಿಗೆ-
ಹೂವಿನ ವಶದಲ್ಲಿರುವ
ಪರಿಮಳವ ಆಘ್ರಾಣಿಸುತ್ತಿದೆ |
 

‍ಲೇಖಕರು G

13 February, 2013

5 Comments

  1. chalam

    ತಂದೆಯ ಸುಕ್ಕು ಕೈಗಳಲಿ
    ರಾತ್ರಿಯ ನೆರಳೊಂದು
    ನಶಿಸಿದ ಗಡಿಯಾರದ
    ಪುನರುತ್ಥಾನಕೆ ಶ್ರಮಿಸುತ್ತಿದೆ
    ಎಂತಹಾ ಅದ್ಬುತವಾದ ಸಾಲುಗಳು……ರಾತ್ರಿಯ ನೆರಳೇ ಒಂದು ಅದ್ಬುತ ಪ್ರತಿಮೆ..ಥ್ಯಾಂಕ್ಸ್ ರವಿ ಸರ್

  2. Mohan V Kollegal

    ನನಗೆ ಬರವಣಿಗೆಯ ಪಾಠ ಹೇಳಿಕೊಟ್ಟ ರವಿಯಣ್ಣನ ಕವಿತೆ.
    ಎಲ್ಲವೂ ಅಲ್ಲೇ ಇದೆ
    ಎಚ್ಚರವಿರದ ನಿದ್ದೆಗೆ ಬಿದ್ದಿವೆ – ಕವಿತೆ ಓದುವಾಗ ಒಂದು ರೀತಿಯ ಮೌನ ಆವರಿಸಿಕೊಂಡರೂ, ಒಳಗೆ ಭಗ್ನತೆ ಇದೆ. ವಿಶಾಲಾರ್ಥವಿದೆ. ಪ್ರಪಂಚದ ನಾಗರೋಟದಲ್ಲಿ ಇದ್ದು ಇಲ್ಲದಂತಿರುವ ಆರ್ತಭಾವಗಳು ಒಳಗೊಳಗೆ ಬೇಯುತ್ತಿವೆ. ಒಂದು ಒಳ್ಳೆಯ ಕವಿತೆಯನ್ನು ಓದಿಸಿದ್ದಕ್ಕಾಗಿ ವಂದನೆಗಳು

  3. Prasad V Murthy

    ಮನುಷ್ಯ ತನ್ನ ಗತಕಾಲದ ಸ್ಥಿತ್ಯಂತರ ಮತ್ತು ಗತ್ಯಂತರಗಳನ್ನು ಮತ್ತೊಮ್ಮೆ ಹೊಕ್ಕಿ ನೋಡಿ ತಾನು ನಡೆದು ಬಂದ ಹಾದಿಯನ್ನೊಮ್ಮೆ ಅಳೆದಂತಿದೆ ಕವಿತೆ. ಕಾವ್ಯ ನುಡಿಯುವುದು ಮಾರ್ಮಿಕವಾಗಿ, ನುಡಿದದ್ದೊಂದಾದರೆ ವೇಧ್ಯವಾಗುವುದೊಂದಾಗುವಂತೆ! ಬಹಳ ಚೆಂದದ ಪ್ರಸ್ತುತಿ ರವಿಯಣ್ಣ.
    – ಪ್ರಸಾದ್.ಡಿ.ವಿ.

  4. Paresh Saraf

    ಕವಿತೆ ಓದುತ್ತ ಓದುತ್ತ ಹೃದಯ ಮೌನವಾಯಿತು. ಮಾತಿಲ್ಲ.. ಧನ್ಯವಾದ

  5. ವಸಂತ್ ಕುಮಾರ್

    ಮನದಾಳದ ಭಾವಗಳ ಮಾರ್ಮಿಕ ಅಭಿವ್ಯಕ್ತಿ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading