ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೈಕಲ್ ಜಾಕ್ಸನ್‌ ನೆನಪಿನಲ್ಲಿ

ಮೈಕಲ್ಲನ ನೆನಪಿನಲ್ಲಿ

ಎಸ್  ಪಿ  ವಿಜಯಲಕ್ಷ್ಮಿ

ಕಲೆ : ಹಾದಿಮನಿ

ನಿನ್ನ ಕಾಲ್ಕುಣಿತಕ್ಕೆ ಕೀಲಿಸುತ್ತಿದ್ದವು ನನ್ನ ಕಾಲ್ಗಳು
ನೆಲದಿಂದ ಬೇರಾಗದಂತೆ,
ನಿಂತಲ್ಲೆ ಮರಗಟ್ಟಿದಂತೆ.
ನೀ ಕೈಯ್ಯ ಚಾಚಿ, ಬಾಚಿ ಅತ್ತಿತ್ತ ಡೊಂಕಿಸುವಾಗ ಭಾಸವಾಗುತ್ತಿತ್ತೆನಗೆ ಅದೊಂದು
ಮಂತ್ರದಂಡದಂತೆ, ನೀನೊಬ್ಬ
ಜಾದೂಗಾರನಂತೆ….
ನಾ, ನಾಚಿದ್ದುಂಟು ನಿನ್ನ ಆ ಸೊಂಟದಾ ಬಳುಕಿಗೆ, ನೂರೆಂಟು ಥಳುಕಿಗೆ
ಯಾರು ಕಲಿಸಿದರೀ ಲಯಲಾಸ್ಯ ನಿನಗೆ?
ಆ ಮೊಗ, ಅದರೊಳಗಿನಾ ನಿಷ್ಕಪಟ ನಗೆ….ಇಲ್ಲ, ಇಲ್ಲ, ಸೋಲದವರಿರಲಿಲ್ಲ
ಅಲ್ಲವೇ ಮೈಕೆಲ್ಲ!
ಒಮ್ಮೆ, ಒಮ್ಮೆ ನಿನ್ನ ಕಣ್ಣಿನೊಳಹೊಕ್ಕರೇ ಸಾಕು, ಅಬ್ಬ.. ಸಾವಿರ ನಕ್ಷತ್ರಗಳ
ಫಳಫಳದೊಳಗೆ ಕರಗಿಹೋದಂತೆ.
ಹಣೆಯಿಂದ ಮೇಲೆ ಸಿಂಗರದ ಆ ಸುರುಳಿಗೂದಲ ಸಿರಿ, ನಿನಗೆಂದೇ
ನೇಯ್ದಿರಬಹುದು ಆ ದೈವ
ಆಹ್! ಮೆಲ್ಲಮೆಲ್ಲನೆ ನಿನ್ನೆದೆಯೊಳಗಿಂದ ಏಳುವ ಆ ದನಿ ಎಲ್ಲರ ಕಿವಿತಾಗಿ,
ರಸಕದವ ತೆರೆದು ಅರಳಿಸುತ್ತಿದ್ದಂತೆ,
ಒದರುತ್ತ ಕೈಕಾಲ, ಮೇಲೆತ್ತಿ ಮೊಗವ, ನೂರೆಂಟು ಭಂಗಿಯಲಿ
ತಾರಕಕ್ಕೇರಿಸಿದ ಗಂಟಲಲಿ, ಕದ್ದುಬಿಡುತಿದ್ದೆ ರಸಹೃದಯಗಳ, ಮರೆಸಿಬಿಡುತಿದ್ದೆ ಮೈಮನಗಳ,
ಓಹ್. ಮೈಕಲ್ಲ, ನಿನ್ನಂಥವ ನೀನೊಬ್ಬನೇ
ಹೀಗಿದ್ದೂ…….
ಕರಿಯನೆಂಬುವ ಕೊರಗು ನಿನ್ನ ಕಾಡಿದ್ದಾದರೂ ಯಾಕೆ ?
ಬಿಳಿಯನಾಗುವ ಚಪಲ ಎದೆ ಹೊತ್ತಿದ್ದಾದರೂ ಯಾಕೆ ?
ಎಲ್ಲರನು ಅರಳಿಸುವಾ ನಿನ್ನ ಚತುರತೆಗೆ ಕೋಟಿ ಕಣ್ಬೆಳಕಿಗೂ ಮೀರಿದಾ ಬಿಳುಪು ಇತ್ತಲ್ಲ,
ಹೊಳಪು ಇತ್ತಲ್ಲ, ನೀ ಮರೆತಿದ್ದಾದರೂ ಯಾಕೆ ?
ತೊರೆಯಿತೇನು ನಿನ್ನ ತಲೆಯಮೇಲಿನ ಹ್ಯಾಟು, ತೊರೆದರೂ ಆ ನಿನ್ನ ಸಂಗಾತಿ,
ನೀನಾಗೇ ತೊರೆದುಬಿಡುವ ಮನಸಾಗಿದ್ದಾದರೂ ಯಾಕೆ ?
ಮುಗ್ಧಮನವನಳಿಸಲು ಮುತ್ತೆಬಂದ ಆ ‘ದೌರ್ಬಲ್ಯಗಳ’ ದೂರ ತಳ್ಳಲಿಲ್ಲವೇಕೆ ?
ಆ ನಿನ್ನ ಮಂತ್ರದಂಡದ ಕೈಯ್ಯ ನಿನ್ನ ಶೈಲಿಯಲೆತ್ತಿ, ಚಾಚಿ, ಮೇಲಕ್ಕೆತ್ತಿ
ಆಗಸಕ್ಕೊಗೆದು ಬಿಡಲಿಲ್ಲ ಯಾಕೆ ?
ಎಲ್ಲರನು ಪ್ರೀತಿಸುವ ಸಾವು ಕಾಲಮಾಗಿದಾಗ ನಿನ್ನ ಪ್ರೀತಿಸದೇ ಉಳಿಯುತಿತ್ತೇ….!
ಬಳ್ಳಿಯಂತಹ ಕೈಯ್ಯ ಅದರೆಡೆ ನೀನಾಗೇ ಚಾಚಿದ್ದಾದರೂ ಯಾಕೆ,
ಬಾಚಿ ಹಿಡಿದು ಹಾಗೇ…ಒಳಗೆಳೆದಿದ್ದಾದರೂ ಯಾಕೆ ? ಕಂಬನಿ ಮಿಡಿಯುತಿದೆ ಲೋಕ.
ಆದರೂ, ಆದರೂ….
“ನಾ ಕಂಡೆ ನಿನ್ನ ಸಾವಿನಲಿ ನೀ ಸಾಯದೇ ಇರುವುದ, ನೀ ಉಳಿಯುವುದ,
ಉಳಿದು, ಸಾಯದೆ ಇರುವವರೆಗೆ ಸಂಗೀತ ಈ ಇಳೆಯಿಂದ….!”
ಮೈಕೆಲ್ಲ, ನಮ್ಮೆದೆಗೆ ನೀ ಸುರಿದ ಆ ರಸರಸದ ಗಾನಧಾರೆಗೆ ಪ್ರತಿಯಾಗಿ, ಇದೋ…
ನಿನಗೆರಡು ಹನಿ ಕಣ್ಣೀರು-
ಕಣ್ಣಾಳದಿಂದಲ್ಲ, ಎದೆಯಾಳದಿಂದ,
ಭೌತಿಕವಾಗಿ ನೀ ಕಳೆದಿದ್ದಕ್ಕೆ,
ಮಣ್ಣಲ್ಲಿ ಮರೆಯಾದದ್ದಕ್ಕೆ,
ನಮ್ಮೆದೆಗಳು ಸುಡುತ್ತಿರುವುದಕ್ಕೆ…..

‍ಲೇಖಕರು G

9 July, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading