ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೇಲೆ ಹುಯ್ಯುವ ಮಳೆ.. ಚಾಪ್ಲಿನ್ ನೆನಪಾದ..

lakshman geetha

ಲಕ್ಷ್ಮಣ್

ಮುಖಪುಟ ಚಿತ್ರ : ಸುಮನ್ ಕಿತ್ತೂರ್/ ಚಿತ್ರದಲ್ಲಿ: ಬಾದಲ್ ನಂಜುಂಡ ಸ್ವಾಮಿ

ಈ ನೆನಪುಗಳೇ ಹಾಗೆ, ಶರಾಬಿನಂತೆ. ಹಳೆಯದಾಂತೆಲ್ಲ ರುಚಿ ಜಾಸ್ತಿ. ಇದು ಇಪ್ಪತ್ತೈದು ವರ್ಷದ ಹಿಂದೆ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಮೊದಲ ದಿನದ ಅನುಭವ, ಹಳೆಯ ಟ್ರಂಕಿನೊಳಗಿಂದ ನೆನಪುಗಳ ಹೆಕ್ಕಿ ತೆಗೆದು ಮೊಟ್ಟ ಮೊದಲಬಾರಿಗೆ ತೆಗೆಸಿಕೊಂಡ ಬಣ್ಣದ ಫೋಟೋಗಳೊಂದಿಗೆ ಕಪ್ಪು ಬಿಳುಪಿನ ಬದುಕಿನ ಬಣ್ಣದ ಅನಾವರಣವಿದು.

ಅಷ್ಟಕ್ಕೂ ನಾನು ಬಯಲು ಸೀಮೆಯ ಊರಿನಿಂದ ಓದಲು ಧಾರವಾಡವನ್ನೇ ಏಕೆ ಆಯ್ದುಕೊಂಡೆ ಎಂಬ ಜಿಜ್ಞಾಸೆ ನನ್ನಲ್ಲೇ ಇರಲಿ. ಈ ಮಹಾನಗರದ ಮಾಯಾವಿ ಸೆಳೆತ ಅಷ್ಟಿಷ್ಟಲ್ಲ. ಹಾಂ!! ನಾನು ಚೆನ್ನಾಗಿ, ತುಂಬ ಚೆನ್ನಾಗಿ ಓದಿ ಡಾಕ್ಟರ್ ಆಗಬೇಕೆಂಬ ಕನಸು ಬಹುಶಃ ಬಡ ರೈತನ ಮಗನೊಬ್ಬ ಓದಲು ಧಾರವಾಡದ ದಾರಿ ತುಳಿದಿದ್ದು ಎಷ್ಟು ಸವಾಲಿನ ಸಂಗತಿಯೋ ಅಷ್ಟೇ ಆತಂಕದ ವಿಚಾರವಾಗಿತ್ತು.

chappalsಈ ಖರ್ಚುವೆಚ್ಚವನ್ನೆಲ್ಲಾ ನಾವು ಭರಿಸಬಲ್ಲವೇ? ಮಗ ಹಸಿವಾದರೆ ಎಲ್ಲಿ ಉಂಡಾನು? ಕಾಯಿಲೆ ಕಸಾರಿಕೆಗೆ ಯಾರು ಗತಿ ಎಂಬ ದುಗುಡ ಅಮ್ಮನದಾದರೆ ನನಗೆ ನನ್ನ ಕನಸುಗಳ ಚಿಂತೆ. ನಾನು ಯಶಸ್ವಿಯಾಗಬಲ್ಲೆನೇ?

ಅಷ್ಟಕ್ಕೂ ನಾನು ನನ್ನ ಹಳ್ಳಿಯಿಂದ ಒಂದು ಹಳೆಯ ಟ್ರಂಕು, ಎರಡು ಜೊತೆ ಬಟ್ಟೆ, ರಬ್ಬರ ಬೆಲ್ಟಿನ ಪ್ಯಾರಾಗಾನ್ ಹವಾಯಿ, ಅಮ್ಮ ಕಟ್ಟಿಕೊಟ್ಟ ಎರಡೊತ್ತಿನ ರೊಟ್ಟಿ ಬುತ್ತಿ ಮತ್ತು ಕಣ್ಣು ತುಂಬ ಕನಸು ಕಟ್ಟಿಕೊಂಡು ಮಹಾನಗರದ ದಾರಿ ತುಳಿದರೆ ಕೃಷ್ಣನ ಗೋಕುಲ ನಿರ್ಗಮನದ ನೆನಪು ಅಥವ ಊರುಭಂಗ.

ಈ ಎಲ್ಲ ಗೊಂದಲ ಗೋಜುಲುಗಳ ನಡುವೆಯೇ ಪ್ರತಿಷ್ಠಿತ ಕರ್ನಾಟಕ ಕಾಲೇಜಿನ ಪ್ರವೇಶ ಪಡೆದಿದ್ದೆ. ಅದು ಮಲೆನಾಡನ್ನೇ ಕತ್ತರಿಸಿ ತಂದು ಕಾಲೇಜಿನಲ್ಲಿ ಇಟ್ಟ ಹಚ್ಚ ಹಸುರಿನ ವಿಶಾಲ ಆವರಣ. ಅವು ಜೂನ್ ತಿಂಗಳಿನ ಉತ್ತರಾರ್ಧದ ದಿನಗಳು, ಮುಂಗಾರು ಪ್ರವೇಶಿಸಿತ್ತು. ಎಲ್ಲಿ ನೋಡಿದರಲ್ಲಿ ವಸಂತನ ಕುಣಿತ ಮತ್ತು ವರ್ಷ ಋತುವಿನ ವೈಭವ.

ಒಂದು ಡಿಪಾರ್ಟಮೆಟಿನಿಂದ ಇನ್ನೊಂದು ಡಿಪಾರ್ಟಮೆಂಟಿಗೆ ಐದೈದು ನಿಮಿಷದ ದಾರಿ ನಡೆಯುತ್ತ ಕ್ರಮಿಸಬೇಕು. ನಾನು ವಿಜ್ಞಾನದ ವಿದ್ಯಾರ್ಥಿ. ಆದ್ದರಿಂದ ಭೌತ, ರಸಾಯನ, ಗಣಿತ ದ ತರಗತಿಗಳಿಗೆ ಅಲ್ಲಿಂದಿಲ್ಲಿಗೆ ಓಡಾಡಬೇಕು. ಹೇಗೋ ತರಗತಿಗಳ ವೇಳಾಪಟ್ಟಿಯನ್ನು ಕೈಲಿ ಹಿಡಿದು ಒಂದು ಗಂಟೆ ತಿರುಗಿದ್ದೇ ಬಂತು.. ಕೊನೆಗೆ ಉಸ್ಸಪ್ಪಾ ಎನ್ನುವಷ್ಟರಲ್ಲಿ ಭೌತಶಾಸ್ತ್ರದ ವಿಭಾಗ ಹುಡುಕಿದೆ. ಪಾಠ ಶುರುವಾಗಿ ಎಷ್ಟು ಹೊತ್ತಾಗಿತ್ತೆನ್ನುವುದೂ ಗೊತ್ತಿರಲಿಲ್ಲ. ಅಳುಕಿನಿಂದಲೇ May I come in sir ಎಂದು ಕೇಳಿದೆ. ಮೇಷ್ಟ್ರು ನನ್ನೆಡೆಗೆ ತಿರುಗಿಯೂ ನೋಡದೆ ಕೈ ಸನ್ನೆ ಮಾಡಿ ಒಳಗೆ ಬರಲು ತಿಳಿಸದರು. ಅಬ್ಬ!! ಅದೊಂದು ಕ್ಲಾಸಾ! ? ಸಿನೇಮಾ ನೋಡಲು ಕುಳಿತಂತೆ ನೂರು ವಿದ್ಯಾರ್ಥಿ/ನಿಯರು ಅವರು ಹಾಕಿಕೊಂಡ ಬಟ್ಟೆ, ಪೂಸಿಕೊಂಡ ಅತ್ತರು, ಎತ್ತರೆತ್ತರವಾಗಿ ಅಡಿಟೋರಿಯಮನ್ ನಂತಹ ಹಾಲು.. ನಿಬ್ಬೆಗೆರಗಾಗಿದ್ದೆ!!

ಕ್ರಮೇಣ ಹೊರಗಡೆಯ ಬೆಳಕಿಗೆ ಹೊಂದಿಕೊಂಡಿದ್ದ ಕಣ್ಣುಗಳು ಕ್ಷಣ ಹೊತ್ತಲ್ಲಿ ತರಗತಿಯೊಳಗಿನ ಬೆಳಕಿಗೆ ಹೊಂದಿಕೊಂಡು ತರಗತಿಯ ಚಿತ್ರ ಸ್ಪಷ್ಟವಾಗತೊಡಗಿತು. ಇನ್ನು ಮೇಷ್ಟ್ರು ಹೇಳುತಿದ್ದ ಪಾಠ ಪ್ರತಿಧ್ವನಿಸಿ ಅವರು ತಮ್ಮಷ್ಟಕ್ಕೆ ತಾವೇ ಸ್ವಗತದಲ್ಲಿ ಮಾತನಾಡಿಕೊಂಡಂತೆ sound and light (ಬೆಳಕುಮತ್ತು ಶಬ್ದದ) ಬಗ್ಗೆ ಹೇಳುತಿದ್ದರು. ಕೊನೆಯದಾಗಿ ಬಂದಿದ್ದಕ್ಕೆ ನನಗೆ ಕೊನೆಯ ಬೆಂಚೇ ಗತಿಯಾಗಿತ್ತು.

ಅವರು ಇಂಗ್ಲಿಷ್ ನಲ್ಲಿ ಅದೇನೋ ಪಾಠ ಮಾಡುವುದು ಈ ಹುಡುಗ/ಗಿಯರು ಬರೆದು ಕೊಳ್ಳುವುದು ನನಗಂತೂ ಅದರ ತಳ ಬುಡವೇ ಅರ್ಥವಾಗುತ್ತಿಲ್ಲ. ಒಂದು ಹಂತದವರೆಗೆ ಸುಮ್ಮನೇ ಆಲಿಸುತ್ತ.. ಕಣ್ಣು ಮುಚ್ಚಿದೆ. ಉಹೂಂ ಏನೆಂದರೆ ಏನೂ ಅರ್ಥ ವಾಗುತ್ತಿಲ್ಲ. ಅಬ್ಬ ಕನ್ನಡ ಮಾಧ್ಯಮದಲ್ಲಿ ಓದಿದ ನನಗೆ ಅವರ ಪಾಠ ದೂರದರ್ಶನದಲ್ಲಿ ಇಂಗ್ಲಿಷ್ ವಾರ್ತೆ ಕೇಳಿದಂತೆ ಭಾಸವಾಗತೊಡಗಿತು.

hawai chappalಅವರು ಹೇಳುವ ಬೆಳಕು ನನ್ನೊಳಗೆ ಕತ್ತಲಾದಂತೆ ಅನಿಸತೊಡಗಿತು. ಪಾಠದ ಶಬ್ದ ತರಂಗಗಳು ನನ್ನ ಭಾವ ಕೋಶವನ್ನು ತೆರೆಯಲು ಹರಸಾಹಸ ಪಡುತ್ತಿರುವಾಗಲೇ ಬೆಲ್ ಆಯಿತು. ಮುಂದಿನ ತರಗತಿ ರಸಾಯನಶಾಸ್ತ್ರ.

ಅಷ್ಟರಲ್ಲಿ ಹೊರಗಡೆ ಧಾರವಾಡದ ಧೋ ಮಳೆ !! ಈಗ ಬಿಟ್ಟೀತು ಆಗ ಬಿಟ್ಟೀತು.. ಉಹುಂ ನನ್ನ ಬಳಿ ಕೊಡೆಯೆಲ್ಲಿ? ನನ್ನ ಉಳಿದ ಸಹಪಾಠಿಗಳು ಹೊರಟೇ ಬಿಟ್ಟಿದ್ದರು. ತರಗತಿ ತಪ್ಪಿಸುವಂತಿಲ್ಲ. ಈ ಹಾಳು ಮಳೆ ನಿಲ್ಲುತ್ತಿಲ್ಲ. ಯಾರ ಜೊತೆಗಾದರೂ ಕೊಡೆಯಲ್ಲಿ ಹೋಗೋಣವೆಂದರೆ ಸತ್ತು ಹೋಗುವಷ್ಟು ಮುಜುಗರ. ಆದದ್ದಾಗಲಿ ಮಳೆಯಲ್ಲೇ ನಡೆದೆ… ಸ್ವಲ್ಪ ದೂರ ನಡೆದೆ ರಬ್ಬರ ಬೆಲ್ಟಿನ ಚಪ್ಪಲಿ ಧಾರವಾಡ ಕೆಂಪು ಮಣ್ಣಿನ ಚಿತ್ತಾರ ನನ್ನ ಪ್ಯಾಂಟಿನ ಹಿಮ್ಮಡಿಯಿಂದ ಅಂಡಿನ ತನಕ ಚಿತ್ತಾರ ಬರೆದಿದ್ದೇ ಬರೆದಿದ್ದು. ಹುಡುಗಿಯರು ನೋಡಿ ನಕ್ಕು ಬಿಟ್ಟಾರೆಂಬ ನಾಚಿಕೆ, ಆದರೂ ನಡೆದೆ.

ಆ ಒಂದು ಕ್ಷಣದಲ್ಲಿ ತಕ್ಷಣ ನನ್ನ ಊರು ನೆನಪಾಯಿತು. ನನ್ನ ಗೆಳೆಯರು, ಅಪ್ಪ, ಅಮ್ಮ.. ಎಲ್ಲ ಎಲ್ಲ ಅಂದರೆ ಎಲ್ಲ ನೆನಪಾಗಿ ಕಣ್ಣೀರು ಧಾರಾಕಾರ, ಮೇಲೆ ಹುಯ್ಯುವ ಮಳೆ.. ಚಾಪ್ಲಿನ್ ನೆನಪಾದ, ಮಳೆಯಲ್ಲಿ ನಡೆದರೆ ಕಣ್ಣೀರು ಕಾಣಿಸುವುದಿಲ್ಲ!! ಹಾಗೇ ಸೀದಾ ಹೋಗಿ ನಡೆದ್ದು ರಸಾಯನ ಶಾಸ್ತ್ರದ ತರಗತಿಗಲ್ಲ ಕಾಲೇಜಿನ ಹಿಂಬದಿಯ ಗೇಟಿನಿಂದ ಸೀದಾ ರೂಮಿಗೆ.

ದುಖಃ ತಡೆಯಲಾಗಲಿಲ್ಲ ರೂಮೇಟು ಇರಲಿಲ್ಲ ರೂಮಿನ ಕದವಿಕ್ಕಿಕೊಂಡು ಬಿಕ್ಕಿ ಬಿಕ್ಕಿ ಅಳತೊಡಗಿದೆ. ಅರ್ಥ ವಾಗದ ಪಾಠ, ಎಡೆಬಿಡದೆ ಸುರಿಯುವ ಈ ಮಳೆ, ಕೊಡೆ ಖರೀದಿಸಲಾಗದ ನನ್ನ ಅಸಹಾಯಕತೆ, ಹೋಗಲಿ ಪ್ಯಾಂಟ್ ಹಿಂಬದಿಯ ಈ ಚಿತ್ತಾರ! ? ಅವಮಾನದಿಂದ ಕುಗ್ಗಿ ಹೋದೆ.

ಊರಿಗೆ ಹೊರಟು ಬಿಡಲೇ?

ಅಡ್ಮಿಷನ್ ದುಡ್ಡು? ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಕನಸು? ತುಘಲಕ ನೆನಪಾದ. ಕನಸಿಲ್ಲದ ದಾರಿ ಸವೆಸುವದಾದರೂ ಹೇಗೆ?
ದಿನಗಳು ಕಳೆದವು. ಮಳೆಗಾಲ ಕಳೆಯಿತು, ನಿಧಾನವಾಗಿ ಎಲ್ಲಾ ಸ್ಪಷವಾಗತೊಡಗಿತು. ಮೇಷ್ಟ್ರು ಹೇಳಿದ ಬೆಳಕಿನ ಪಾಠಗಳು ನನ್ನೊಳಗನ್ನೂ ಬೆಳಗತೊಡಗಿದವು. ಶಬ್ದ ತರಂಗಗಳು ಎದೆಯ ಮೂಲೆಗಳಿಗೂ ತಲುಪಿ.. ಧಾರವಾಡದ ದಿನಚರಿ ಹಳಿಗೆ ಬಂದು ಈಗ ಕನಸಿನಲ್ಲೂ ಬಂದು ಕಾಡುವುದೆಂದರೆ
ನೀವು ನಂಬಲೇಬೇಕು.

‍ಲೇಖಕರು Admin

20 June, 2016

4 Comments

  1. Sangeeta Kalmane

    ನಿಜ. ನೆನಪುಗಳು ಕಾಡಿದಾಗ ಅದೇನೊ ಖುಷಿ. ಹವಾಯಿ ಚಪ್ಪಲಿ ಸಿಡಿಯುತ್ತೆ ಅಂತ ಕೈಯಲ್ಲಿ ಹಿಡಿದು ನಡೆದದ್ದೆ ಜಾಸ್ತಿ. ಸಿಡಿಸಿಕೊಂಡು ಅವಮಾನ ಬಟ್ಟೆ ಕಲೆಯಾಯಿತಲ್ಲ ಅನ್ನುವ ಬೇಸರ. ಚೆನ್ನಾಗಿದೆ ನಿಮ್ಮ ಅನುಭವ.☺

  2. Vihi wadawadagi

    Sir chendada baravanige hogalalu baayi saaladu,nanu nimmannu modalu bheti aadaddu koneya varshada Ninasam culture coursenalli aagale nimma chintana laharige maatina gahana gambhiratege tale doogidde baravanige munduvareyali mattomme sigona,kappu bilupina badukina bannada anaavarana estu chenda

    • Anonymous

      ಸರ್ ತುಂಬ ಖುಷಿಯಾಯಿತು ಸಂಪರ್ಕದಲ್ಲಿರಿ ನಿಮ್ಮ ನಂಬರು ಕೊಡಿ ನನ್ನ ನಂಬರು ೯೦೬೬೧೭೨೬೬೯

  3. ಲಕ್ಷ್ಮಣ್

    ಧನ್ಯವಾದಗಳು,ಸಂಗೀತಾ ಮೇಡಂ, ವಡವಡಗಿ ಸಾರ್ ಹಾಗು ಎಂದಿನ ಪ್ರಾಣಕಾಂತಾ ಪ್ರವೀಣ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading