ಹಣತೆ ಹಾಡುತ್ತಿದೆ
ಸ್ಮಿತಾ ಅಮೃತರಾಜ್
ಮಗಳೆಂದಳು,
ಅಮ್ಮಾ…
ಈ ಸಲದ ದೀಪಾವಳಿಗೆ
ಮನೆ ಜಗಲಿಯ ಸುತ್ತಾ
ಮಣ್ಣ ಹಣತೆ ಹಚ್ಚಿಡುವಾ…

ಬರೇ ದುಂದು ವೆಚ್ಚ
ಹೇಗೂ ದಿನ ನಿತ್ಯ
ಉರಿಯುತ್ತಲೇ ಇರುತ್ತದಲ್ಲ
ವಿದ್ಯುತ್ ದೀಪ
ಪುಟ್ಟ ಮಗನ ಉವಾಚ.
**
ಚೆಂಡು ಹೂವು ಸೇವಂತಿಗೆಯ
ರಂಗೋಲಿ ಇಟ್ಟು
ನಡುವಲ್ಲೆಲ್ಲಾ ಪುಟ್ಟ ಪುಟ್ಟ
ಹಣತೆ ಹಚ್ಚಿಟ್ಟು
ಸಂಸ್ಕೃತಿಯ ಎಳೆಗೆ ಕಸೂತಿ
ನೇಯುತ್ತಿದ್ದಾಳೆ ಮಗಳು.
ಆ ಬೆಳಕ ಪ್ರಭೆಯಲ್ಲಿ
ಸಾಲಂಕೃತವಾಗಿ ಮೆರವಣಿಗೆ
ಹೊರಟು ಸೀದಾ ನನ್ನೂರ ಮುಟ್ಟಿವೆ
ಅಳಿದುಳಿದ ಸ್ಮೃತಿಯ ಅಚ್ಚುಗಳು.
ದೂರದಲ್ಲಿ ರಾಕೇಟು ನೆಟ್ಟು
ಅಷ್ಟೇ ಎಚ್ಚರಿಕೆಯಿಂದ ಅದಕೆ
ಬೆಂಕಿ ಕೊಟ್ಟು
ನೆಲದ ನಕ್ಷತ್ರ ಆಕಾಶಕ್ಕೆ
ಲಗ್ಗೆಯಿಡುವ ವಿಸ್ಮಯಕ್ಕೆ
ತೆರೆದುಕೊಳ್ಳುತ್ತಿದ್ದಾನೆ ಮಗ.
** ** **
ತುಳಸಿ ಕಟ್ಟೆಯಲ್ಲಿ ಹಚ್ಚಿಟ್ಟ
ಕಿರು ಮಣ್ಣ ಹಣತೆ ಧ್ಯಾನಿಸುತ್ತಿದೆ.
ಸುಳಿವ ಗಾಳಿಗೆ ತುಯ್ಯುತ್ತಾ
ಒಡ್ಡಿಕೊಳ್ಳುತ್ತಾ ಚಾಚಿದ ಇರುಳ
ಬೆರಳನ್ನೆಲ್ಲಾ ಇಂಚಿಂಚೇ ನುಂಗುತ್ತಾ..
ಕತ್ತಲ ನೀಗುವುದಿದೆ
ಬಹಳಷ್ಟು..
ಕಾಲ ದೇಶಗಳ ಮೀರಿ ದೀಪ
ದಾಟಿಸಬೇಕಿದೆ ದೂರ
ಎರೆದು ಬಿಡಿ ಇಷ್ಟಿಷ್ಟೇ ತೈಲ
ಹಾಡುವ ಹಣತೆಯೊಳಗೆ
ಬ್ರಹ್ಮಾಂಡವನ್ನೇ ಬೆಳಗುವ ಛಲ.






Padya chennagide Smita….
Rupa
ಪದ್ಯ ಇಷ್ಟವಾಯಿತು ಮೇಡಂ.
nice poem smitha
ಕತ್ತಲ ನೀಗುವುದಿದೆ
ಬಹಳಷ್ಟು..
ಕಾಲ ದೇಶಗಳ ಮೀರಿ ದೀಪ
ದಾಟಿಸಬೇಕಿದೆ ದೂರ
ಎರೆದು ಬಿಡಿ ಇಷ್ಟಿಷ್ಟೇ ತೈಲ
ಹಾಡುವ ಹಣತೆಯೊಳಗೆ
ಬ್ರಹ್ಮಾಂಡವನ್ನೇ ಬೆಳಗುವ ಛಲ.
excellent…
nimma padyagalu pakvateyannu padedu kollhuttiruvudara sanketa illi kaanasiguttide.vasudev
tumbaa chendada kavana heNediddiri deepavaLige smita…
ಪದ್ಯ ಚೆನ್ನಾಗಿದೆ….