ರಿಂಗ್‌ರೋಡು
-ಸುಶ್ರುತ ದೊಡ್ಡೇರಿ
ಮೌನಗಾಳ

ಎಲ್ಲ ರಸ್ತೆಗಳೂ ನಗರಿಯ
ಕಣ್ಣು ಮೂಗು ಎದೆ ಹೊಕ್ಕುಳು ತೊಡೆ
ಸಂದಿ ಗೊಂದಿಗಳನ್ನು ಹೊಕ್ಕು ಹಾದು
ಹೋಗುತ್ತಿದ್ದರೆ ಇದು ಮಾತ್ರ ಹೊರಗೇ
ಉಳಿದಿದೆ. ಇಡೀ ನಗರಿಯನ್ನೇ
ತನ್ನ ಬಾಹುಗಳಿಂದ ಬಳಸಿ ನಿಂತಿದೆ.
ಇಲ್ಲಿ, ಇಲ್ಲಿಂದ ಹೊರಟರೆ ಇಲ್ಲಿಗೇ ಬರಬಹುದು..
ದಾರಿ ತಪ್ಪಿಸುವವರೇ ಹೆಚ್ಚಿರುವ ಈ ಊರಿನಲ್ಲಿ
ತಪ್ಪು ದಾರಿ ಹಿಡಿದರೂ ಮರಳಿ ಅಲ್ಲಿಗೇ ತಂದು
ಬಿಡುವ ಪುಣ್ಯಾತ್ಮ ಈ ರಸ್ತೆ.
ಮನೆಯಲ್ಲಿ ಅಮ್ಮ ಹೇಳಿ ಕಳುಹಿಸಿದ್ದಳು,
ಹಾಗೆ ಅಂತಹ ಒಳ್ಳೆಯವರ ಸಂಗ ಮಾಡು ಎಂದು..
ಆದರೆ ನನಗೆ ಜಯನಗರದಿಂದ ರಾಜಾಜಿನಗರಕ್ಕೆ
ಹೋಗಬೇಕಿದೆ,
ರಿಂಗ್‌ರೋಡು ಹಿಡಿದರೆ ಪ್ರಯೋಜನವಿಲ್ಲ.
ಎಂಜಿ ರೋಡಿನಲ್ಲಿ ಹೋದವರ್ಯಾರೂ ಮಹಾತ್ಮರಾಗಿಲ್ಲ;
ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿ ಅಡ್ಡಾಡಿದವರು ದೊರೆಗಳಾಗಿಲ್ಲ.
ನಾಗರೀಕನಾಗ ಬಂದವನಿಗೆ ದಾರಿ ತಪ್ಪಿದರೂ ಚಿಂತಿಲ್ಲ;
ಹೊಸ ದಾರಿ ಸಿಕ್ಕಂತಾಗುತ್ತದೆ..
ಇದೇ-ಇಂಥದೇ ದಾರಿಯಲ್ಲಿ ಹೋಗಬೇಕೆನ್ನುವ ತಲೆಬಿಸಿಯೆಲ್ಲಾ
ಗುರಿಯಿದ್ದವನಿಗೆ.. ಅನಿಕೇತನನಿಗೆ ಯಾವ ದಾರಿಯಾದರೂ
ಆದೀತು: ರಿಂಗ್‌ರಸ್ತೆಯೊಂದನ್ನು ಬಿಟ್ಟು.
ತೀರಾ ತಪ್ಪಿಯೇ ಹೋದರೆ ದಾರಿ, ಮೆಜೆಸ್ಟಿಕ್ಕಿಗೆ ಹೋದರಾಯಿತು:
ಅಲ್ಲಿಂದ ಬದುಕನ್ನೇ ಪುನರಾರಂಭಿಸಬಹುದು.
ಗುಟ್ಟು: ಮೆಜೆಸ್ಟಿಕ್ಕಿಗೆ ರಿಂಗ್‌ರೋಡ್ ಇಲ್ಲ!






Really Wonderful..