ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೃದು ಸ್ಪರ್ಶದ ನೆನಪಿನಲಿ ಮರೆತ ದೇಹದ ಭಾರ..

ಎರಡು ಕವನಗಳು

– ನಾ ದಿವಾಕರ್

ಕಂದಮ್ಮನಿಗೆ

ಯಾವುದೋ ಅವ್ಯಕ್ತ

ಘಳಿಗೆಯಲಿ ಮೂಡಿದ

ವಾಂಛೆಯ ಕುಡಿ ನೀನು

ಪವಿತ್ರವಲ್ಲವೇ

ಒಡಳಾಲದಿಂ ಹರಿದ

ನೆತ್ತರ ಸುಳಿ !

ನಿನ್ನ ತೊದಲು ನುಡಿ

ತಪ್ಪು ಹೆಜ್ಜೆಗಳ ಗುರುತು

ಹೃನ್ಮನಗಳಲ್ಲಿ ಶಾಶ್ವತ ;

ಮುದ್ದಾಡಿದ ಅಧರಗಳು

ಎತ್ತಾಡಿಸಿದ ಕೈಗಳು

ದಿಗಂತದ ದಿಕ್ಸೂಚಿಗಳಂತೆ

ಅನಂತಾನಂತ !

ನಡೆವ ಕಾಲೇ

ಎಡವುವುದು ನುಡಿವವರೇ

ತೊದಲುವುದು

ಪಡೆದವರೇ ತ್ಯಜಿಸುವುದು

ಪ್ರಕೃತಿ ನಿಯಮ ;

ಬಾಳ ಪಯಣದಿ

ಕಾಣ್ವ ತಡೆಗಳನು

ತೊಡೆಯುವುದು

ಜೀವನದ ನಿಯಮ !

ಒಂಟಿ ಕಾಲಲಿ

ಓಡಲೆಣಿಸದಿರು ಮಗೂ ;

ತುಂಟ ನುಡಿಗಳಲಿ

ಕಥನ ಕಾವ್ಯ ಕಟ್ಟದಿರು

ಮಗೂ ! ಕೆಟ್ಟ ಘಳಿಗೆಯದು

ನಿತ್ಯಭಾವವ ಕೆಣಕಿ

ಮುಗ್ಗರಿಸುವುದು ಮನ

ತತ್ತರಿಸುವುದು ಯೌವ್ವನ !

ಭಾವನೆಗಳ ಮೆರವಣಿಗೆ

ಜೀವಾತ್ಮದಲಿ ಕಲೆತು

ಕಾಲ್ಪನಿಕ ಲೋಕದಲಿ

ಮನ ವಿಹರಿಸುವಾಗ

ಎತ್ತಲೋ ಹರಿವ ತಂಗಾಳಿ

ಅಗ್ನಿಶಿಖೆಯಾದೀತು ;

ನೆಲದ ಮೇಲಿನ

ಹೆಜ್ಜೆ ಮಲಿನವಾದೀತೆಂದು

ಎದೆಯೊಳಗೆ

ಹೆಜ್ಜೆ ಮೂಡದಿರಲಾದೀತೇ ?

ಕ್ಷಣಿಕ ಪಯಣವಿದು

ಆಗಂತುಕರೊಡನೆ ;

ಹಾದಿಯಲಿ ಎನಿತೋ

ಬದಿಯಲ್ಲಿ ಎನಿತೋ ;

ಲೆಕ್ಕಿಸದಿರು ಪಯಣಿಗರ

ದಿಕ್ಕು ಮಾತ್ರವೆ

ಅಮರ

ನೆತ್ತರೊಳಗಿನ ಬೆವರು

ಮುನ್ನಡೆಗೆ ಲಾಂಛನ !

ಅಳಿಯುತ್ತಲೇ ಇರುತ್ತದೆ

ನೆಲದ ಮೇಲಿನ ಹೆಜ್ಜೆ

ಮೊಳಗುತ್ತಲೇ ಇರುತ್ತದೆ

ಆಂತರ್ಯದ ಗೆಜ್ಜೆ ;

ವ್ಯಷ್ಟಿಯಲಿ ಕಾಣದ

ಸೌಂದರ್ಯ ಸಮಷ್ಟಿಯಲಿ

ಕಂಡೀತು ; ಸ್ವಪ್ರಜ್ಞೆ

ಇರಲಿ ಸುಪ್ರಜ್ಞೆ ಇರಲಿ

ಹೃದಯಾಂತರಾಳದಲಿ

ಮಾನವೀಯತೆ ಇರಲಿ ;

ಅದುವೆ ಅಂತಿಮ ಸತ್ಯ !

 

ದಕ್ಷಿಣಾಭಿಮುಖಿ

ಊರ ಜಾತ್ರೆಯಲಿ ಕಿರು ಬೆರಳು ಹಿಡಿದ

ಮುದ್ದಿನ ಕೂಸು

ಕೇಳುತ್ತಿತ್ತು, ಅಪ್ಪಾ ಆ ಬೊಂಬೆಯನ್ನೇಕೆ

ಕೊಡಿಸುವುದಿಲ್ಲ ?

ಮಗೂ, ಅದು ಸಿರಿವಂತರ ಸ್ವತ್ತು

ನಮಗೇಕೆ ಆ ಗತ್ತು !

ಎಂದು ತಲೆ ನೇವರಿಸುವಾಗ

ಕಣ್ಣಾವೆಗಳಲಿ ಹನಿಯಾಡುತ್ತಿತ್ತು !

ಇಂದೂ ಅದೇ ಕಣ್ಣೀರು

ಮನದಾಳದ

ನೆಪ್ಪುಗಳ ತೊಳೆಯುತಿದೆ ;

ಮೃದು ಕೈಗಳ ಸ್ಪರ್ಶ ಸುಖ

ಇನ್ನಿಲ್ಲವಾದಾಗ !

ಎಷ್ಟು ವರ್ಷಗಳಾದವು ಬಾಂಧವ್ಯ

ಹೊಸೆಯಲು ಮಧುರ ಪ್ರೀತಿ

ವಾತ್ಸಲ್ಯಗಳು ಬೆಸೆಯಲು ;

ಒಡಲ ಕುಡಿ ಮಗದೊಂದು

ಹೊಸಿಲ ಮೆಟ್ಟಲು !

ಆಗಲೂ ಅದೇ ಗೊಂದಲ

ಅಪ್ಪಾ ಸಿರಿವಂತರ ಗತ್ತು ಬೇಡಪ್ಪಾ !

ಹೆತ್ತೊಡಲ ತೊರೆದು ಅನ್ಯತೆಯಲಿ

ಬೆಸೆದುಕೊಳ್ಳುವುದು ಅನಿವಾರ್ಯವೇ ?

ಇರಲಿ ಮಗು ಉತ್ತರ

ದಕ್ಷಿಣಗಳು ಬಾಳ ಬುತ್ತಿಗಳು

ವಾತ್ಸಲ್ಯದ ಉತ್ತುಂಗವೇ

ಒಡಲ ಕುಡಿಯ ಸುಖ

ಮನದಾಳದಿ ನೆಲೆಸಿರುವೆ

ಕಂದರ ಇನ್ನೆನಿತು ಎಂದ ನೆನಪು !

ಹೆತ್ತೊಡಲ ಆಕಾಂಕ್ಷೆ ಸುಖ ಸಿರಿಯ

ವಾಂಛೆ ; ಏರುವ ಅಲೆಗಳ-

ನೆದುರಿಸಿ ಮುನ್ನಡೆವ ಛಲ

ಉತ್ತರದ ಪಯಣಕೆ ಲಾಂಛನ ;

ಕಂಡವರಾರು ಕಾಂಚಾಣದಿ

ಕರಗುವ ಸಿಂಧೂರವನು ;

ಕಂದಮ್ಮ ದಕ್ಷಿಣಾಭಿಮುಖವಾಗಿ

ಹಿಂದಿರುಗಿದಾಗ

ಅದೇ ಜಾತ್ರೆಯ ಕಿರು ಬೆರಳ

ನೆನಪು !

ಮೃದು ಸ್ಪರ್ಶದ ನೆನಪಿನಲಿ

ಮರೆತ ದೇಹದ ಭಾರ !

 

‍ಲೇಖಕರು G

14 November, 2012

1 Comment

  1. Raghunandan K

    ಇಷ್ಟವಾಯಿತು…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading