ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೂವರು ರಾಮರೂ, ಒಂದೇ ರಾಮಾಯಣವೂ..

ಜಿ ಎನ್ ನಾಗರಾಜ್ 

ಮೂವರು ರಾಮರೂ, ಒಂದೇ ರಾಮಾಯಣವೂ ಮತ್ತು ರಾಮ ನವಮಿಯೂ:

ನಮ್ಮ ಮಹಾಕಾವ್ಯ, ಪುರಾಣಗಳಲ್ಲಿ ಮೂವರು ರಾಮರಿದ್ದಾರೆ. ಹಾಗೇ ನೆನಪಿಸಿಕೊಳ್ಳಲು ಪ್ರಯತ್ನಿಸಿ. ರಾಮ ನವಮಿಯ ದಿನವಾದರೂ.

ಈ ಮೂವರು ರಾಮರು ಪರಶುರಾಮ, ಬಲರಾಮ, ಕೋದಂಡರಾಮ.

ಈ ಮೂವರೂ ತಂತಮ್ಮ ಮೂರು ಆಯುಧಗಳಿಗಾಗಿ ಪ್ರಸಿದ್ಧರಾದವರು.

ಇಬ್ಬರದಂತೂ ಹಾಗೂ ಹೆಸರಿನಲ್ಲಿಯೇ ಸೇರಿದೆ. ಆದರೆ ಮಧ್ಯದ ಬಲರಾಮನದು. ಅವನ ಹೆಸರೂ ಆಯುಧ ಪ್ರಸಿದ್ಧವೇ . ಅವನು ಹಲಾಯುಧ. ಹಲವೇ ಬಲವಾಗಿದೆ . ನೇಗಿಲೇ ಅವನ ಆಯುಧ. ಮಾನವನ ವಿಕಾಸದಲ್ಲಿ ಈ ಮೂರು ಆಯುಧಗಳೂ ಅವನ ಬೆಳವಣಿಗೆಯ ಮೂರು ಮುಖ್ಯ ಹಂತಗಳ ಸೂಚಕ.

ಕೊಡಲಿಯಿಲ್ಲದೆ ಕಾಡನ್ನು ನಾಡಾಗಿಸಿ ಕ್ಷೇಮಕರ ವಾಸ ಸ್ಥಾನವಾಗಿಸಲು ಸಾಧ್ಯವಾಗುತ್ತಿರಲಿಲ್ಲ. ನೇಗಿಲಿನ ಪ್ರಾಮುಖ್ಯತೆ ಹೇಳುವುದೇ ಬೇಡ. ಇನ್ನು ಬಿಲ್ಲು ಬೇಟೆಯಿಂದ ಆಹಾರ ಒದಗಿಸುವುದರ ಜೊತೆಗೆ ಯುದ್ಧದ ಉಪಕರಣ. ಆಕ್ರಮಣ, ರಾಜ್ಯ , ಸಾಮ್ರಾಜ್ಯ ಸ್ಥಾಪನೆಯ ಉಪಕರಣ.

ಈ ಮೂರು ರಾಮರೂ ಕೂಡ ತಮ್ಮ ಆಯುಧಗಳಿಂದಲೇ ಪ್ರಸಿದ್ಧರು. ಹಾಗಾದರೆ ಈ ಆಯುಧಗಳ ಜೊತೆ ಜೋಡಣೆಯಾಗಿರುವ ರಾಮ ಎಂಬ ಪದದ ಅರ್ಥವೇನು ? ಈಗ ಅದಕ್ಕೆ ಕಲ್ಪಿಸಿರುವ ನಾನಾ ಅರ್ಥ ವೈಭವವನ್ನು ಪಕ್ಕಕ್ಕಿಟ್ಟು ಯೋಚಿಸೋಣ. ಮೂರೂ ಆಯುಧಗಳ ಜೊತೆ ಜೋಡಿಸಿಕೊಂಡಿರುವ ರಾಮ ಎಂಬ ಪದದ ಅರ್ಥ ಕೇವಲ ಆಯುಧವನ್ನು ಹಿಡಿದವ, ಪಡೆದವ ಎಂದಿರಬಹುದೇ ? ಕೊಡಲಿಯನ್ನು ಹಿಡಿದವನು ಯಾವನೋ ಅವನು ಎಂಬ ಬಹುವ್ರೀಹೀ ಸಮಾಸ . ಅಷ್ಟೇ ಆಗಿರಬಹುದಲ್ಲವೇ !

ರಾಮ ಎಂಬ ಪದಕ್ಕೆ ವಿಶೇಷಾರ್ಥವೇನೂ ಇಲ್ಲ. ಇರುವುದೆಲ್ಲ ನಂತರದ ಕಲ್ಪಿತಗಳೇ. ಮಾನವನ ಇತಿಹಾಸದಲ್ಲಿ ಮೂರು ಉಪಕರಣಗಳು ಮತ್ತು ಅವುಗಳನ್ನು ಬಳಸಿದ ಮನುಷ್ಯರು ಒಂದೊಂದೂ ಒಂದು ನೆಗೆತಗಳನ್ನು ತಂದುಕೊಟ್ಟವರು. ಆದರೆ ರಾಮಾಯಣ ಬರೆಯಲ್ಪಟ್ಟಿರುವುದು ಕೋದಂಡ ರಾಮನಿಗೆ ಮಾತ್ರ. ಉಳಿದವರದು ಕೇವಲ ಉಪ ಪಾತ್ರಗಳಾಗಿ ಉಲ್ಲೇಖ ಮಾತ್ರ. ಅವನದೇ ಜಯಂತಿ, ಕೀರ್ತನೆ. ಎಷ್ಟೊಂದು ಕಾವ್ಯಗಳು, ಹರಿಕಥೆ, ಪುರಾಣ,ಪ್ರವಚನಗಳು, ನಾಟಕ, ಯಕ್ಷಗಾನ, ಸಂಗೀತ, ನೃತ್ಯಗಳು , ದೇವಾಲಯ ವೈಭವಗಳು.

ಏಕೆ ? ಏಕೆ? ಏಕೆ ?

ಏಕೆಂದರೆ ಬಿಲ್ಲು ಯುದ್ಧದ , ಆಕ್ರಮಣದ ಉಪಕರಣವಾಗಿ ರಾಜ, ಮಹಾರಾಜರನ್ನು ಸೃಷ್ಟಿಸಿದ ಉಪಕರಣ. ಬಿಲ್ಲು ಹಿಡಿದ ರಾಮ ವಾಲಿಯನ್ನು ಹೇಗೆ ಸೋಲಿಸಿದ, ಸಪ್ತ ಸಾಲ ವೃಕ್ಷಗಳನ್ನು ಬೇಧಿಸಿ ಹೇಗೆ ಸುಗ್ರೀವ, ಹನುಮಂತಾದಿಗಳಲ್ಲಿ ಬೆರಗು ಮೂಡಿಸಿದ. ಅವರನ್ನು ತನ್ನ ಅಧೀನರನ್ನಾಗಿ ಮಾಡಿಕೊಂಡ.

ಅದಕ್ಕೂ ಮೊದಲು ರಾವಣನ ಸಂಬಂಧಿ ರಾಕ್ಷಸರನ್ನೆಲ್ಲಾ ವಧಿಸಿದ. ತಾನು ನಿಂತಿರುವ ಎಲ್ಲ ಜಾಗವೂ ಅಯೋಧ್ಯಾ ಸಾಮ್ರಾಜ್ಯಕ್ಕೆ ಸೇರಿದ್ದು , ನೀವು ಪುರಾತನ ಕಾಲದಿಂದ ಅಲ್ಲಿ ವಾಸಿಸಿದ್ದರೇನಂತೆ, ತಾಟಕಾ ವನ ಎಂಬಿತ್ಯಾದಿ ಹೆಸರುಗಳಿದ್ದರೇನಂತೆ ಎಂದು ಪ್ರತಿಪಾದಿಸಿದ.

ಬಿಲ್ಲು ಸಾಮ್ರಾಟನಾದವನ ಕೀರ್ತಿಯನ್ನು ಹಾಡಿ ಹೊಗಳುತ್ತಾರೆ. ವಾಲ್ಮೀಕಿ ಬರೆದ ಕಾಡಿನ ಕಥೆಯನ್ನು ಪಟ್ಟಾಭಿಷೇಕದ , ಸಾಮ್ರಾಟರ ವೈಭವದ ಕಥನವಾಗಿ ಮಾರ್ಪಡಿಸುತ್ತಾರೆ. ನೇಗಿಲು, ಕೊಡಲಿಗಳನ್ನು ಮತ್ತು ಅವುಗಳನ್ನು ಹಿಡಿದವರನ್ಮು ನೆನಪಿಸಿಕೊಳ್ಳುವವರ್ಯಾರು ?

ವಾಲ್ಮೀಕಿ ಬರೆದ ರಾಮಾಯಣ ಯಾವುದು ? ಈಗ ನಮಗೆ ಪರಿಚಿತವಾದ ರಾಮಾಯಣ ಹೇಗೆ ಸಾಮ್ರಾಟರ ರಾಮಾಯಣ, ಪಿತೃ ವಾಕ್ಯ ಪರಿಪಾಲನ, ಪಾತಿವ್ರತ್ಯ, ಅಗ್ರಜ ಪಟ್ಟಾಭಿಷೇಕ ಇವುಗಳ ಸಾಮ್ರಾಜ್ಯ ಮಹತ್ವಗಳ ಬಗ್ಗೆ ಪ್ರತ್ಯೇಕವಾಗಿ ಬರೆಯುತ್ತೇನೆ.

‍ಲೇಖಕರು avadhi

6 April, 2017

1 Comment

  1. G.N.Nagaraj

    ಇಲ್ಲಿ ಹಂಚಿಕೊಂಡಿರುವುದು ಸಂತೋಷಕರ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading