ಶ್ವೇತಾ ಹೊಸಬಾಳೆ
ಇತ್ತೀಚೆಗೆ ಓದಿದ ಎರಡು ಪುಸ್ತಕಗಳು, ಮಕ್ಕಳ ಮನೋಲೋಕವನ್ನು ನಮ್ಮೆದುರು ತೆರೆದಿಡುವ ‘ತುಂಗಾ’, ಮತ್ತು ಮಣ್ಣು-ಕೃಷಿ-ನಾವಿರುವ ಜಾಗದೊಂದಿಗೆ ಬೆಸೆದುಕೊಳ್ಳುವುದರಲ್ಲಿನ ಖುಷಿ, ಸಿಗುವ ಸಂತೃಪ್ತಿಯ ಬಗ್ಗೆ ಹೇಳುವ ‘ITಯಿಂದ ಮೇಟಿಗೆ’ ನನ್ನ ಮನಸ್ಸನ್ನು ತುಂಬಾ ಉಲ್ಲಸಿತಗೊಳಿಸಿದವು. ಹೊಸಾ ವಿಷಯಗಳನ್ನು ತಿಳಿಸುವುದರ ಜೊತೆಗೆ ನನ್ನೆದುರು ಹೊಸಾ ಪ್ರಪಂಚವೊಂದನ್ನೇ ತೆರೆದಿಟ್ಟವು. ಈ ಎರಡೂ ಪುಸ್ತಕಗಳು ನಮಗೆ ಗೊತ್ತಿರದ, ಗೊತ್ತಿದ್ದೂ ಗಮನಕ್ಕೆ ಹೋಗಿರದ ತುಂಬಾ ಆಳವಾದ ಸತ್ಯವನ್ನು ಪ್ರತಿಪಾದಿಸುತ್ತವೆ ಎನಿಸಿತು.
ಮಕ್ಕಳ ಮಗು ಮನಸ್ಸನ್ನು ರೆಸ್ಟ್ರಿಕ್ಟ್ ಮಾಡದೆ ಸಹಜವಾಗಿ ಅರಳಲು ಅನುವು ಮಾಡಿಕೊಡಬೇಕು, ಅಂಥಾ ವಾತಾವರಣ ಕಲ್ಪಿಸಬೇಕು ಎಂದು ಹೇಳುವ ‘ತುಂಗಾ’ ಕಾದಂಬರಿಯೂ, ಸಹಜತೆಗೆ ಮರಳುವುದರಲ್ಲಿ ಕೃಷಿ ಬದುಕನ್ನು ಆಯ್ದುಕೊಂಡು ಪ್ರಕೃತಿಗೆ ಹತ್ತಿರವಾಗಿ ಬದುಕುವುದರಲ್ಲಿ, ಆ ಮೂಲಕ ನೆಲದ ಪರಂಪರೆಯನ್ನು ಮುಂದಿನ ತಲೆಮಾರಿಗೆ ದಾಟಿಸಬೇಕೆನ್ನುವ ‘ITಯಿಂದ ಮೇಟಿ’ಗೆ ಪುಸ್ತಕವೂ ಒಂದಕ್ಕೊಂದು ಕನೆಕ್ಟ್ ಆಗುತ್ತವೆ. ‘ಅತ್ಯುತ್ತಮ ಶಿಕ್ಷಣವೆನ್ನುವುದು ನಮಗೆ ಕೇವಲ ಮಾಹಿತಿಯನ್ನು ಕೊಡುವಂತದ್ದಾಗಿರದೆ ಪ್ರತಿಯೊಂದು ಸೃಷ್ಟಿಯ ಜೊತೆಗೂ ನಮ್ಮ ಬದುಕನ್ನು ಸಾಮರಸ್ಯ ಗಳಿಸುವಂಥದ್ದಾಗಿರುತ್ತದೆ’ ಎನ್ನುವ ರವೀಂದ್ರನಾಥ ಟ್ಯಾಗೋರರ ಚಿಂತನೆಯಂತೆ ಈ ಕಾದಂಬರಿಯಲ್ಲಿನ ಮಾಂಡವಿ ಟೀಚರ್ ಪಾತ್ರ ಯೋಚಿಸಿ ಮಕ್ಕಳನ್ನು ಪ್ರಕೃತಿಗೆ ಹತ್ತಿರವಾಗಿಸುವ ಚಟುವಟಿಕೆಗಳನ್ನು ಶಿಕ್ಷಣ ಕ್ರಮದಲ್ಲಿ ಸೇರಿಸಿಕೊಳ್ಳುತ್ತದೆ.
ಮಕ್ಕಳನ್ನು ಒಂದು ಕೊಠಡಿಯಲ್ಲಿ ಕೂಡಿಹಾಕಿ ಬರೀ ತಲೆಗೆ ಮಾತ್ರ ಕೆಲಸ ಕೊಡುವ, ಹೇಳಿಕೊಟ್ಟಿದ್ದನ್ನು ಉರು ಹಾಕಿ ಒಪ್ಪಿಸುವ, ಅದೇ ಶ್ರೇಷ್ಠ ಎನ್ನುವ ಸಾಂಪ್ರದಾಯಿಕ ಶಿಕ್ಷಣಪದ್ಧತಿ ಮಕ್ಕಳ ನಿಜವಾದ ವಿಕಸನಕ್ಕೆ ಹೇಗೆ ಮಾರಕ ಎನ್ನುವುದನ್ನು ‘ತುಂಗಾ’ ಕಾದಂಬರಿ ಹೇಳಿದರೆ ಇದೇ ಚಿಂತನೆಯನ್ನು ಬಹಳ ವಿಶಾಲವಾದ ರೀತಿಯಲ್ಲಿ ಇಡೀ ಬದುಕಿಗೆ ಅನ್ವಯಿಸಿ ‘ITಯಿಂದ ಮೇಟಿ’ಗೆ ಪುಸ್ತಕದ ಲೇಖಕರು ಹೇಳುತ್ತಿದ್ದಾರೆ. ಸಾಫ್ಟ್ ವೇರ್ ಎಂಜಿನಿಯರ್ ಕೆಲಸವೋ ಅಥವಾ ಕಂಪ್ಯೂಟರ್ ಮುಂದೆ ಕುಳಿತಲ್ಲೇ ಕೂತು ಮಾಡುವ, ಮೆದುಳಿಗೆ ಮಾತ್ರ ಶ್ರಮ ಕೊಡುವ ಇನ್ಯಾವುದೇ ಕೆಲಸಕ್ಕಿಂತ ದೈಹಿಕ ಶ್ರಮವೇ ಮುಖ್ಯವಾಗಿರುವ ಕೃಷಿ ಕೆಲಸ ಕೊಡುವ ಆನಂದ ಆರೋಗ್ಯ ಈ ಲೇಖಕರಿಗೆ ಮೇಲೆನಿಸುತ್ತದೆ.
ನಗರದ ಬದುಕು ಕೆಲಸ ಕೊಡುವ ಹಣ ಕೀರ್ತಿ ಸವಲತ್ತು ಐಷಾರಾಮದ ಬದುಕಿಗಿಂತ ಪ್ರಕೃತಿಗೆ ಹತ್ತಿರವಾಗಿ ಬದುಕಲು ಪೂರಕವಾಗಿರುವ ಕೃಷಿ ಕೆಲಸದಲ್ಲಿ ನಿಜವಾಗಿಯೂ ಏನೆಲ್ಲಾ ಲಾಭಗಳಿವೆ ಎಂಬುದನ್ನು ತಿಳಿಸುತ್ತಾ ಹೋಗುತ್ತಾರೆ. ನಾವು ನೀವೆಲ್ಲಾ ಅಂದರೆ ಬಹುಸಂಖ್ಯಾತರು ತಿಳಿದುಕೊಂಡಿರುವಂತೆ ಆಧುನಿಕ ಬದುಕು ಕೊಡಮಾಡುವ ಸುಖ ಸಂತೋಷಗಳು ಮೂಲದಲ್ಲಿ ಹೇಗೆ ನಮ್ಮ ಬದುಕಿಗೆ ಅಪಾಯಕಾರಿಯಾಗಿವೆ? ನಮ್ಮನ್ನು ನಮ್ಮ ನೆಲದಿಂದ ಬೇರ್ಪಡಿಸಿ ಅತಂತ್ರರನ್ನಾಗಿಸಿ ಹೇಗೆಲ್ಲಾ ಆತಂಕಕ್ಕೆ ದೂಡುತ್ತವೆ ಎಂಬುದನ್ನು ಹಲವಾರು ನಿದರ್ಶನಗಳ ಮೂಲಕ ಸಾಬೀತುಪಡಿಸುತ್ತಾರೆ.

ಇದೇ ರೀತಿ ನಿಜ ಬದುಕಿನಿಂದ ಮಕ್ಕಳನ್ನು ಪರಕೀಯಗೊಳಿಸದ ಮಣ್ಣಿನೊಂದಿಗೆ ನೆಲದೊಂದಿಗೆ ಪರಿಸರದೊಂದಿಗೆ ಬೆಸೆಯುವ ಶಿಕ್ಷಣ ಬೇಕು ಎಂದು ‘ತುಂಗಾ’ ಕಾದಂಬರಿಯ ಪಾತ್ರವೂ ಹೇಳುತ್ತದೆ. ಪಾಠದಂತೆ ಆಟಕ್ಕೂ ಉತ್ತೇಜನ ಕೊಡುವುದು, ತರಗತಿಯ ಒಳಗಿನ ಪಠ್ಯದ ಜೊತೆಗೆ ಬದುಕಿಗೆ ಸಂಬಂಧಪಟ್ಟ ಇತರೆ ವಿಷಯಗಳ ಕಲಿಕೆಗೂ ಪ್ರಾಮುಖ್ಯತೆಯಿರುವುದು, ಮಕ್ಕಳನ್ನು ಈಜಾಡಲು, ನಿಸರ್ಗದ ವಿದ್ಯಮಾನಗಳನ್ನು ಗಮನಿಸಲು ಸಹಾಯಕವಾಗುವಂತೆ ವಾಕಿಂಗ್ ಕರೆದುಕೊಂಡು ಹೋಗುವುದು, ನಾವು ತಿನ್ನುವ ಅನ್ನ ಹೇಗೆ ಬೆಳೆಯುತ್ತದೆ ತಿಳಿದುಕೊಳ್ಳಲು, ಉತ್ಪತ್ತಿಯ ಹಿಂದಿನ ಶ್ರಮ ಅರ್ಥವಾಗಲು ಬೇಸಾಯದ ಕೆಲಸದಲ್ಲಿ ತೊಡಗಿಸುವುದು ಇವೆಲ್ಲವನ್ನೂ ಒಳಗೊಂಡ ಶಿಕ್ಷಣ ಮಕ್ಕಳಿಗೆ ಬದುಕಲು ಬೇಕಾದ ತಿಳುವಳಿಕೆಯನ್ನು ಮೂಡಿಸುತ್ತದೆ. ‘ಪ್ರಕೃತಿಯ ನಿಯಮಗಳನ್ನು ಅನುಸರಿಸುವ, ರೂಢಿಸಿಕೊಂಡ ಲಯಬದ್ಧ ವ್ಯಕ್ತಿತ್ವವು ಸುಂದರವೂ ಶಕ್ತಶಾಲಿಯೂ ಆಗಿರುತ್ತದೆ’ ಎಂದು ಯೋಚಿಸುವ ಮಾಂಡವಿ ಟೀಚರ್ ಅಂಥ ಟೀಚರ್ ಮತ್ತು ಶಾಲೆ ನಮ್ಮ ಮಕ್ಕಳಿಗೂ ಎಲ್ಲರಿಗೂ ಸಿಗಬಾರದೇ ಎಂದು ಹಂಬಲಿಸುವಂತಾಗುತ್ತದೆ.
ಹಾಗೆಯೇ ಮಕ್ಕಳ ಬೆಳವಣಿಗೆಯ ಹಂತದಲ್ಲಿ ಹಳ್ಳಿಯ ವಾತಾವರಣವೆಷ್ಟು ಅನುಕೂಲಕರ; ಮಣ್ಣಿನಲ್ಲಿ ಆಟವಾಡುತ್ತಾ ಬೆಳೆಯುವುದೆಷ್ಟು ಹಿತಕರ; ಗಿಡ,ಮರ,ತೋಟ,ಪರಿಸರದಲ್ಲಿನ ಜೀವವೈವಿಧ್ಯದ ಪರಿಚಯದೊಂದಿಗೆ, ಹಳ್ಳಿಯ ಬದುಕಿನೊಂದಿಗೆ ಬೆಸೆದುಕೊಂಡು ಮಗುವಿನ ಒಟ್ಟಾರೆ ವ್ಯಕ್ತಿತ್ವ ರೂಪುಗೊಳ್ಳುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ‘ITಯಿಂದ ಮೇಟಿ’ಗೆ ಪುಸ್ತಕದ ಲೇಖಕರೂ ವಿವರಿಸಿದ್ದಾರೆ. ಸ್ವಯಂ ಅನುಭವಗಳಿಂದ ಪಾಠ ಕಲಿಯುತ್ತಾ ಬೆಳೆಯುವ ಮಗುವಿನ ಅನುಭವ ಮುಂದೆ ಬದುಕನ್ನು ಕಟ್ಟಿಕೊಳ್ಳಲು ಸಹಾಯವಾಗುವ ಬಗ್ಗೆ ಸ್ವತಃ ತಮ್ಮ ಮಗುವಿನ ಕಲಿಕೆಯಲ್ಲಿ ಕಂಡಿದ್ದನ್ನು ದಾಖಲಿಸಿದ್ದಾರೆ.
“ಪ್ರತಿಕ್ಷಣವೂ ನಾವು ನಮ್ಮೊಳಗಿನ ನೀರು, ಗಾಳಿ, ಚರ್ಮದ ಹೊರಪದರ, ಘನತ್ಯಾಜ್ಯಗಳನ್ನೆಲ್ಲ ವಾತಾವರಣಕ್ಕೆ ಬಿಟ್ಟುಕೊಡುತ್ತೇವೆ. ಮತ್ತಷ್ಟೇ ಪಂಚಭೂತಗಳನ್ನು ಒಳಸೇವಿಸುತ್ತೇವೆ. ಅಂದರೆ ನಾವು ಮತ್ತು ನಮ್ಮ ಹೊರಗಿನದು ಎಂಬ ಪ್ರತ್ಯೇಕತೆಯೇ ನಿಜಕ್ಕೆ ನೋಡಿದರೆ ಇಲ್ಲ. ಹೊರಗಿನದು ನಮ್ಮೊಳಕ್ಕೆ ಚಾಚಿದೆ ಮತ್ತು ನಾವು ಹೊರಕ್ಕೆ ಚಾಚಿದ್ದೇವೆ. ಆ ಕಾರಣಕ್ಕೆ ನಾವು ಸಾಧ್ಯವಾದಷ್ಟು ನಮ್ಮ ಮೂಲವಸ್ತುಗಳ ನೇರ ಸಂಪರ್ಕದಲ್ಲಿರುವುದು, ನೀರು, ಗಾಳಿ, ಮಣ್ಣುಗಳನ್ನು ಅವುಗಳ ಶುದ್ಧರೂಪದಲ್ಲಿ ಅನುಭವಿಸುತ್ತಿರುವುದು ಅತ್ಯಗತ್ಯ.
ನನ್ನ ಮಗ ಕಜೆಯಲ್ಲಿ ಬೆಳೆಯುತ್ತಿರುವುದರಿಂದ ಆದ ಒಂದು ಮುಖ್ಯವಾದ ಲಾಭವೆಂದರೆ ಮಣ್ಣಿನ ನೇರ ಸಂಪರ್ಕ. ಎಲ್ಲಾ ಮಕ್ಕಳು ಮಣ್ಣಿನೊಂದಿಗೆ ಬೆರೆಯಲು ಬಯಸುತ್ತಾರೆ. ಬಹುಷಃ ಆ ರೀತಿ ನಿಸರ್ಗವೇ ಅವರನ್ನು ತಯಾರಿಸಿದೆ. ನಮ್ಮ ಮಕ್ಕಳು ಮಣ್ಣನ್ನು ದಿನಕ್ಕೊಂದೆರಡು ಬಾರಿಯಾದರೂ ಸಹಜವಾಗಿ ಮುಟ್ಟುತ್ತಿಲ್ಲವಾದರೆ ಅವರನ್ನೆಷ್ಟು ಗಟ್ಟಿಯಾದ ಕೃತಕ ಕವಚದೊಳಗೆ ಕೂಡಿಡುತ್ತಿದ್ದೇವೆ ಎನ್ನುವುದು ನಮ್ಮನ್ನು ಚಿಂತೆನೆಗೆ ಹಚ್ಚಬೇಕಾಗಿದೆ” ಎನ್ನುವ ಅವರ ಮಾತು ಎಲ್ಲರೂ ಅದರಲ್ಲೂ ಮಕ್ಕಳಿಗೆ ಮಣ್ಣಿನ ಸಂಪರ್ಕವೆಷ್ಟು ಮುಖ್ಯ ಎಂಬುದನ್ನು ಹೇಳುತ್ತದೆ.
ಬರಿಗಾಲಿನಲ್ಲಿ ನಡೆಯಲು ಇಷ್ಟಪಟ್ಟ ಮಗು ವಿವಿಧ ರೀತಿಯ ಮಣ್ಣು ಕಲ್ಲುಗಳ ರಚನೆಯನ್ನು ಸ್ವತಃ ಗ್ರಹಿಸಿ ಅಗತ್ಯಬಿದ್ದಾಗ ತನ್ನ ರಕ್ಷಣೆಯನ್ನು ತಾನೇ ಮಾಡಿಕೊಳ್ಳುವ ವಿಧಾನ ಅನುಸರಿಸಿದ್ದರ ಬಗ್ಗೆ ಹೇಳಿದ್ದಾರೆ. ಅದೇ ರೀತಿ ಎಲ್ಲವನ್ನೂ ಬರಿಯ ಬೋಧಿಸದೆ ಅವರಾಗಿಯೇ ತಿಳಿದುಕೊಳ್ಳುವಂತೆ ಅವರಿಗೇ ಮನದಟ್ಟಾಗುವಂತೆ ಕೆಲಸಗಳನ್ನು ಮಾಡಿಸುವುದರಲ್ಲಿ, ಮಕ್ಕಳನ್ನು ತಮ್ಮ ಪಾಡಿಗೆ ಬಿಡುವಲ್ಲಿ ತುಂಗಾ ಕಾದಂಬರಿಯ ಮಾಂಡವಿ ಟೀಚರ್ಗೆ ಒಲವಿದೆ. ತುಂಗಾಳ ಪರ್ಸ್ ಸಗಣಿಗುಂಡಿಗೆ ಬಿದ್ದಾಗಿನ ಘಟನೆಯಲ್ಲಿ ಅವರ ವರ್ತನೆ ಇದಕ್ಕೆ ಉತ್ತಮ ಉದಾಹರಣೆ. ಬರೀ ಶಿಕ್ಷಕರು ಮಾತ್ರವಲ್ಲ, ಮಕ್ಕಳ ತಂದೆ ತಾಯಂದಿರೂ ಅವರ ಮಕ್ಕಳ ಸಹಜ ಕುತೂಹಲದ ಸ್ವಭಾವ, ವಿಕಾಸಕ್ಕೆ ಅಡ್ಡಿಯಾಗದಂತೆ ಹೇಗೆ ನಡೆದುಕೊಳ್ಳಬಹುದು ಎಂಬುದನ್ನು ವಿಭಿನ್ನ ವ್ಯಕ್ತಿತ್ವದ ಮಕ್ಕಳ ಮನಸ್ಸಿನ ಲೋಕವನ್ನು ನಮ್ಮ ಮುಂದೆ ತೆರೆದಿಡುವುದರ ಮೂಲಕ ಹೇಳುತ್ತದೆ ತುಂಗಾ’ ಕಾದಂಬರಿ.
ಮಕ್ಕಳು ವಿಭಿನ್ನ ಪರಿಸ್ಥಿತಿಗಳ ಸಂಪೂರ್ಣ ಅನುಭವ ಪಡೆದು ಪ್ರತಿಯೊಂದರಿಂದಲೂ ಕಲಿಯುತ್ತಾ ಹೋಗಬೇಕು ಎನ್ನುವ ಮಾಂಡವಿ ಟೀಚರ್ನಂತೆ ಎಷ್ಟು ಜನ ಪೋಷಕರು ತಾಳ್ಮೆಯಿಂದ ವರ್ತಿಸುತ್ತಾರೆ? ಅನುವು ಮಾಡಿಕೊಡುತ್ತಾರೆ ಎಂಬುದು ಗಮನಾರ್ಹ. ಅಪ್ಪನ ಬದಲಿಗೆ ತನ್ನ ಬೇಕು ಬೇಡಗಳೆಲ್ಲವನ್ನೂ ನೋಡಿಕೊಂಡು ಕಾಳಜಿವಹಿಸುವ ಅಮ್ಮನ ಹೆಸರಿನ ಅಕ್ಷರವನ್ನೇ ತನ್ನ ಹೆಸರಿನ ಮುಂದೆ ಸೇರಿಸಿಕೊಳ್ಳಬಾರದೇಕೆ? ಎನ್ನುವವರೆಗೆ ಯೋಚಿಸುವ ತುಂಗಾ ಮಕ್ಕಳ ಸ್ವತಂತ್ರ ಯೋಚನೆಯ ಹರಹು ಎಲ್ಲಿಯವರೆಗಿರಬಹುದು? ಎಷ್ಟು ಸರಿಯಾಗಿರಬಹುದು? ಎಂಬುದಕ್ಕೆ ಸಾಕ್ಷಿ. ಮಕ್ಕಳ ಬುದ್ಧಿ ಭಾವಲೋಕಗಳನ್ನು ಸಣ್ಣ ಸಣ್ಣ ವಿವರಗಳೊಂದಿಗೆ ವರ್ಣಿಸುವ ಈ ಪುಸ್ತಕ, ಒಂದು ಕ್ಷಣವೂ ನಿಂತಲ್ಲಿ ನಿಲ್ಲದೆ ಪ್ರತಿಯೊಂದು ಹೊಸಾ ವಸ್ತುಗಳ ಬಗೆಗೂ ಅತೀವ ಕುತೂಹಲ ತಾಳುತ್ತಾ ತನಗೆ ಸಿಕ್ಕ ಗುಜರಿ ವಸ್ತುಗಳಿಗೇ ಏನಾದರೊಂದು ಹೊಸಸರೂಪ ಕೊಟ್ಟೋ ಅಥವಾ ಕಲ್ಪಿಸಿಕೊಂಡೋ ಮತ್ತೇನಾಗೋ ಅಳವಡಿಸಿಕೊಂಡು ಆಟವಾಡುವ, ಅತೀ ಚಟುವಟಿಕೆಯಿಂದ ಹೇಳಿದ್ದನ್ನು ಕೇಳದೆ ತಲೆನೋವಾಗುವ, ಉತ್ತರ ಗೊತ್ತಿಲ್ಲದ ಪ್ರಶ್ನೆಗಳನ್ನು ಕೇಳುವ, ವಿಪರೀತ ಹಠಕ್ಕೆ ಬೀಳುವ ನನ್ನ ಮಗನ ಜೊತೆ ಸ್ವಲ್ಪ ಉದಾರವಾಗಿ ನಡೆದುಕೊಳ್ಳುವಂತೆಯೂ, ಬೇಸರಿಸಿಕೊಳ್ಳದಿರುವಂತೆಯೂ ಪ್ರೇರೇಪಿಸುತ್ತದೆ.

ಸಾಫ್ಟ್ ವೇರ್ ಉದ್ಯಮ ಕೊಡಮಾಡುವ ಹಣ ಹೇಗೆ ಕೊಳ್ಳುಬಾಕಸಂಸ್ಕೃತಿಯನ್ನು ಪ್ರೇರೇಪಿಸುತ್ತದೆ? ಸುಖಕ್ಕೆ ಒಗ್ಗಿಕೊಂಡ ಮನಸ್ಸು ಇನ್ನಷ್ಟು ಮತ್ತಷ್ಟು ಬೇಕೆನ್ನುವ ಹಪಾಹಪಿಗೆ ಒಳಗಾಗಿ ಹೇಗೆ ಹೆಚ್ಚೆಚ್ಚು ನಿಸರ್ಗದ ನಾಶಕ್ಕೆ ಕಾರಣವಾಗುತ್ತದೆ? ನೆಲಮೂಲ ಸಂಸ್ಕೃತಿಯಿಂದ ದೂರವಾದ ಮನುಷ್ಯ ಮೇಲ್ನೋಟಕ್ಕೆ ಸುಖವನ್ನು ಅನುಭವಿಸುತ್ತಿರುವುದು ಹೌದಾದರೂ ಅದು ತಂದೊಡ್ಡುತ್ತಿರುವ ಹೊಸಾ ಹೊಸಾ ಆರೋಗ್ಯ ಸಮಸ್ಯೆಗಳು, ಅವುಗಳನ್ನು ಪರಿಹರಿಸಲು ಮತ್ತೆ ತಂತ್ರಜ್ಞಾನಕ್ಕೇ ಮೊರೆ ಹೋಗಬೇಕಾಗುವುದರಿಂದ ಉದ್ಭವಿಸಿರುವ ಸಮಸ್ಯೆಗಳ ಬಗ್ಗೆ ‘ITಯಿಂದ ಮೇಟಿ’ಗೆ ಪುಸ್ತಕ ಹೇಳುತ್ತದೆ.
ಹಳ್ಳಿಯಲ್ಲಿ, ಕೃಷಿ ಕೆಲಸದಲ್ಲಿ ತೊಡಗಿಕೊಂಡಿರುವವರಲ್ಲಿ ಪರಂಪರಾಗತವಾಗಿ ಸಹಜವಾಗಿ ಬಂದಿರುವ ಜ್ಞಾನ, ಕುಶಲತೆಗಳು ಇಂದಿನ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಹೇಗೆ ನಗಣ್ಯವೆಂಬಂತೆ ಬಿಂಬಿಸಲ್ಪಡುತ್ತಿವೆ? ಇದರಿಂದಾಗಿ ಒಂದಿಡೀ ತಲೆಮಾರೇ ಕಂಪ್ಯೂಟರ್ ಜಗತ್ತಿಗೆ ಆಕರ್ಷಿತರಾಗಿ ಅದೇ ಶ್ರೇಷ್ಠ ಎಂದು ನಂಬಿಕೊಂಡ ಪರಿಣಾಮ ಹೇಗೆ ಒಂದು ಮಿತಿಗಿಂತ ಹೆಚ್ಚಾಗಿ ಭ್ರಾಮಕ ಜಗತ್ತು ಬೆಳೆದು ವಾಸ್ತವವನ್ನು ಮರೆಸುತ್ತಿದೆ? ಅದು ಹೇಗೆ ಎಷ್ಟು ಬಳಸಿದರೂ ಮುಗಿಯದೇ ಇದ್ದ ಪ್ರಾಕೃತಿಕ ಶಕ್ತಿ ಸಂಪನ್ಮೂಲಗಳಿಗೂ ಕುತ್ತು ತಂದು ತನ್ನ ವಿನಾಶಕ್ಕೆ ತನ್ನ ಶಕ್ತಿಯನ್ನೇ ಬಳಸಿಕೊಂಡ ಭಸ್ಮಾಸುರನ ಸ್ಥಿತಿಯಂತಾಗಿದೆ ಎಂಬುದನ್ನು ವಿವರಿಸಿದ್ದಾರೆ. ಇದಕ್ಕೆಲ್ಲಾ ಪರಿಹಾರವೆಂದರೆ ಮತ್ತೆ ಪರಿಹಾರರೂಪದ ಸಮಸ್ಯೆಯನ್ನು ಹುಟ್ಟುಹಾಕುವುದರ ಬದಲು ನೈಜತೆಯನ್ನು ಅಪ್ಪಿಕೊಳ್ಳುವುದು. ಅಂದರೆ ಕೃಷಿ ಕೆಲಸ ಹೇಗೆಲ್ಲಾ ನಿಸರ್ಗಕ್ಕೆ ನಿಕಟವಾಗಿದೆ? ಗಾಳಿ, ಬಿಸಿಲು, ಮಳೆಯಂತಹ ಪ್ರಕೃತಿಶಕ್ತಿಗಳ ಅಧೀನವಾಗಿದೆ; ಬೆವರಿ ದುಡಿಯುವುದು ಅಲ್ಲಿ ಅನಿವಾರ್ಯವಾಗಿರುವುದರಿಂದ ಜೀವನಶೈಲಿಯಲ್ಲಿಯೇ ಶ್ರಮ, ವ್ಯಾಯಾಮ ಸೇರಿಕೊಳ್ಳುವುದರ ಲಾಭ! ಅಲ್ಲಿ ಆದಾಯ ಒಂದು ಮಿತಿಯಲ್ಲಿರುವುದರಿಂದ ಅದು ಸರಳ ಜೀವನಕ್ಕೆ ಪ್ರೋತ್ಸಾಹದಾಯಕವಾಗಿರುವುದು; ಅದರಿಂದ ಕೊಳ್ಳುಬಾಕತನವನ್ನು ಮೀರುವುದಕ್ಕೆ ಆಗುವ ಸಹಾಯ; ಪರಿಸರದೊಂದಿಗೆ ಬೆರೆತಷ್ಟೂ ಅಸಂಬದ್ಧಗಳನ್ನು ಮಾಡುವ ಸಾಧ್ಯತೆ ಹೇಗೆ ಕಡಿಮೆಯಾಗುತ್ತದೆ; ಬದಲಿಗೆ ನಮ್ಮನ್ನು ಸಂರಚಿಸುವ ಮೂಲವಸ್ತುಗೊಡನೆ ಬೆರೆಯುವ ಅವಕಾಶ ಹೆಚ್ಚಿರುವುದು.
ಈ ಎಲ್ಲಾ ಕಾರಣಗಳಿಂದ ತಿಂಗಳ ಸಂಬಳದ ಮೋಹ ಮೋಜಿನ ಬದುಕನ್ನು ತ್ಯಜಿಸಿ ಸತ್ಯದ ದಾರಿಯನ್ನು ಕಂಡುಕೊಂಡ ರೀತಿ, ಆಗ ಎದುರಾದ ಜಿಜ್ಞಾಸೆ, ಮನದಟ್ಟಾದ ಉತ್ತರಗಳು ಇವೆಲ್ಲವನ್ನೂ ವಸಂತ ಕಜೆ ಮನಮುಟ್ಟುವಂತೆ ‘ITಯಿಂದ ಮೇಟಿ’ಗೆ ಪುಸ್ತಕದುದ್ದಕ್ಕೂ ವಿವರಿಸುತ್ತಾ ಹೋಗಿದ್ದಾರೆ. ನಮ್ಮ ಕುಟುಂಬಗಳಲ್ಲಿ ನಡೆಯುವ ಹುಟ್ಟಲ್ಲದೆ ಪ್ರಕೃತಿಯಲ್ಲಿನ ಇತರೆ ಜೀವಿಗಳ ಹುಟ್ಟು, ಜೀವನಚಕ್ರ, ಗಿಡ, ಮರಗಳನ್ನು ಬೀಜದಿಂದ ಬೆಳೆಸಿ ನೆಟ್ಟು ಅದರ ಫಲವನ್ನು ಕೊಯ್ಯುವ ಚಕ್ರದಲ್ಲಿ ಪಾಲ್ಗೊಳ್ಳುವ ಆನಂದ, ಪರಿಸರದಲ್ಲಿನ ಪ್ರತಿಯೊಂದು ಜೀವಿಯೂ ಇನ್ನೊಂದು ಜೀವಿಯ ಜೊತೆ ಹೊಂದಿರುವ ಸಂಬಂಧ, ಜೀವ ವೈವಿಧ್ಯತೆಯ ಬೆರಗು, ನಮ್ಮ ಅನ್ನ, ತರಕಾರಿಗಳನ್ನು ನಾವೇ ಬೆಳೆದುಕೊಳ್ಳುವ ಖುಷಿ ಈ ಥರದ ವಿಷಯಗಳು ನನ್ನನ್ನೂ ಸೇರಿಸಿ ಪರಿಸರದ ಬಗ್ಗೆ ಆಸ್ಥೆ ಹೊಂದಿರುವ ಯಾರಿಗೇ ಆದರೂ ಆಸಕ್ತಿ ಹುಟ್ಟಿಸುತ್ತವೆ. ದುಡ್ಡೇ ದೊಡ್ಡಪ್ಪ ಎನ್ನುವ ಮನಸ್ಥಿತಿಯಿಂದ ಹೊರಬಂದು ನಮ್ಮ ಇತರರ ಅಮೂಲ್ಯ ಸಂಪತ್ತುಗಳ ಬಗ್ಗೆ ಪ್ರೀತಿಮಮತೆಗಳು ಹೆಚ್ಚಾಗಬೇಕೆನ್ನುವುದು ಅವರ ಇಂಗಿತ.
“ಉಣ್ಣುವ ಪ್ರತಿಯೊಬ್ಬನೂ ತಾನು ಉಣ್ಣುವುದು ಏನು? ಅದಕ್ಕೆ ಜೀವನಾಧಾರವಾಗಿರುವ ಒಂದಿಂಚು ಭೂಮಿಯ ಮಹತ್ವವೇನು? ಸಸ್ಯಗಳು, ಕೀಟ ಹಕ್ಕಿಗಳಾದಿ ಇತರೆ ಜೀವಿಗಳು ನಮ್ಮ ಜೀವನದಲ್ಲಿ ಯಾವ ರೀತಿ ಹೆಣೆದು ಹಾಸಿ ಹೊಕ್ಕಿವೆ? ಇವನ್ನೆಲ್ಲಾ ನಾವುಗಳು ಪುಸ್ತಕದ ಬದನೇಕಾಯಿಯಂತಲ್ಲದೆ ಸಹಜಾಸಕ್ತಿಯಿಂದ ನೋಡಿ ತಿಳಿಯುವಂಥ ಜನಸಾಮಾನ್ಯರ ಪ್ರಕೃತೀಜ್ಞಾನದ ಸರಾಸರಿ ಮಟ್ಟವನ್ನು ಈಗಿರುವ ಪಾತಾಳದ ಮಟ್ಟಕ್ಕಿಂತ ಮೇಲಕ್ಕೆ ತರುವಂಥ ಸಮಗ್ರಸಹಜ ವ್ಯವಸ್ಥೆಯೊಂದು ನಮಗೆ ಬೇಕಾಗಿತ್ತಲ್ಲವೇ? ಸಸ್ಯ, ಪ್ರಾಣಿ, ಮನುಷ್ಯ, ಮತ್ತು ಜಡವಸ್ತುಗಳನ್ನು ಬೆಸೆಯುವ ಜ್ಞಾನದ ಕೊಂಡಿಗಳು ನಮಗಿಂದು ಬೇಕಾಗಿವೆ ಎಂಬುದು ನನ್ನ ನಮ್ರ ಆಗ್ರಹ. ಮಾಹಿತಿಗಳ ಮಹಾಪೂರದಲ್ಲಿ ಕೊಚ್ಚಿಹೋಗಿರುವ ನಮ್ಮನ್ನು ನಮ್ಮ ಸುತ್ತಮುತ್ತಲ ಪ್ರಕೃತಿಯೊಂದಿಗೆ ಮತ್ತೆ ಬೆಸೆಯುವ ಈ ಅರಿವು ನಮ್ಮ ಭವಿಷ್ಯದ ಉಳಿವಿಗೆ ನಿರ್ಣಾಯಕವಾದುದೆಂದು ನನ್ನ ಭಾವನೆ” ಎನ್ನುತ್ತಾ ನಮ್ಮ ಶಿಕ್ಷಣ ವ್ಯವಸ್ಥೆಯ ಮೂಲ ಉದ್ದೇಶದ ಆಶಯ ಏನಿರಬೇಕೆಂದು ಆಳವಾಗಿ ಯೋಚಿಸಬಲ್ಲವಾಗಿದ್ದಾರೆ. ಅದು ಮಕ್ಕಳನ್ನು ಕುಟುಂಬದಿಂದ ಒಡೆದು ಹೊರಗೋಡಿಸುವುದಾಗಿರದೆ ಮತ್ತೆ ಬದುಕಿಗೆ, ಮಣ್ಣಿಗೆ, ಪರಂಪರೆಗೆ ಬೆಸೆಯುವಂಥದ್ದಾಗಿರಬೇಕೆನ್ನುತ್ತಾರೆ.
ಹೀಗೆ ಹಲವಾರು ರೀತಿಯಲ್ಲಿ ಒಂದಕ್ಕೊಂದು ಕನೆಕ್ಟ್ ಆಗುವ ವಿಚಾರಗಳನ್ನು ತಿಳಿಸುತ್ತಾ ಹೋಗುವ, ಚಿಂತನೆಗೆ ಹಚ್ಚುವ ಈ ಎರಡೂ ಪುಸ್ತಕಗಳ ಬ್ಯಾಕ್ ಟು ಬ್ಯಾಕ್ ಓದು ನಿಜಕ್ಕೂ ವಿಶಿಷ್ಟ ಅನುಭೂತಿಯನ್ನೇ ನೀಡಿತು. ಕೆಲವೊಮ್ಮೆ ಪುಸ್ತಕಗಳ ಓದಿಗೆ ನಾವಿರುವ ಸಂದರ್ಭ, ಪರಿಸರ ಮನಸ್ಥಿತಿಗಳೂ ಮುಖ್ಯವಾಗುತ್ತವೆ, ಹದವಾದ ಹಿನ್ನೆಲೆಯನ್ನೊದಗಿಸುತ್ತವೆ ಎನ್ನುವುದೂ ನಿಜ. ಹಳ್ಳಿಯಲ್ಲೇ ಹುಟ್ಟಿ ಬೆಳೆದು ನಂತರ ಪೇಟೆ ಸೇರಿ ಈಗ ಲಾಕ್ಡೌನ್ ಸಮಯದಲ್ಲಿ ಮೂರು ತಿಂಗಳಿಕೂ ಮಿಕ್ಕಿ ಹಳ್ಳಿಯಲ್ಲೇ ಇರುವ ಅವಕಾಶವೊದಗಿ ದಿನಾ ಬೆಳಿಗ್ಗೆ ಒದೊಂದು ಕಡೆ ಅಲೆದಾಟದ ಸುಖ ಅನುಭವಿಸುತ್ತಾ, ಪ್ರಕೃತಿಯ ವಿಸ್ಮಯ ಬೆರಗುಗಳಿಗೆ ತೆರೆದುಕೊಳ್ಳುತ್ತಾ ಕಣ್ಣರಳಿಸುತ್ತಿದ್ದ ನನಗೆ ಅಂಥಾ ಚೈತನ್ಯದಾಯಕ ಅನುಭವಕ್ಕೆ ಇಂಬುಕೊಡುವಂತಿತ್ತು ಈ ಪುಸ್ತಕಗಳ ಓದು ಮತ್ತು ಅದರಲ್ಲಿನ ವಿಚಾರಗಳು.
ಒಂದೇ ಒಂದು ವ್ಯತ್ಯಾಸವೆಂದರೆ ‘ತುಂಗಾ’ ಕಾಲ್ಪನಿಕ ಕಾದಂಬರಿ, ‘ITಯಿಂದ ಮೇಟಿಗೆ’ ವಾಸ್ತವದ ಬದುಕು ನಿರ್ಧಾರಗಳಿಗೆ ಸಂಬಂಧಿಸಿದ್ದು. ಆದರೆ ಸಾಮ್ಯತೆಯಿರುವುದು ಪ್ರತಿಪಾದಿಸುವ ವಿಚಾರಗಳಲ್ಲಿ; ಸಹಜತೆಯನ್ನು ಆನಂದಿಸುವುದರಲ್ಲಿ, ಸಹಜತೆಗೆ ಮರಳುವುದರಲ್ಲಿ ಸುಖವಿದೆ ಸಂತಸವಿದೆ ಎಂದು ಹೇಳಿದ ರೀತಿಯಲ್ಲಿ. ಅಚಾನಕ್ಕಾಗಿ ಎದುರಾದ ಕೋವಿಡ್ ವಿಪತ್ತೂ ಮನುಷ್ಯನಿಗೆ, ಇಡೀ ಜಗತ್ತಿಗೆ ಕಲಿಸಿದ ಪಾಠವೂ ಇದೇ ಆಗಿದೆ. ಪ್ರಕೃತಿಗೆ ಹತ್ತಿರವಾಗುವುದರಲ್ಲಿ, ಅದರ ಲಯಬದ್ಧತೆ ಸ್ಥಿರತೆಯಲ್ಲಿ ಮನಸ್ಸಿನ ಬೇಸರ ಚಡಪಡಿಕೆ, ಉದ್ವೇಗಗಳಿಗೆ ಸಾಂತ್ವಾನವಿದೆ ಎಂದು ಸ್ವತಃ ತಿರುಗಾಟದ ಮೂಲಕ ಕಂಡುಕೊಳ್ಳುವಂತಾಗಿದ್ದು, ಅದೇ ರೀತಿಯ ವಿಷಯಗಳನ್ನು ಪ್ರತಿಪಾದಿಸುವ ಪುಸ್ತಕಗಳನ್ನು ಅದೇ ಕಾಲದಲ್ಲಿ ಓದಲು ಎತ್ತಿಕೊಂಡಿದ್ದು, ಕರೋನಾ ಹಾವಳಿ ಮೂಲಕ ಪ್ರಕೃತಿ ಮನುಷ್ಯನಿಗೆ ತಿಳಿಸಿದ್ದೂ ಒಂದೇ ಆಗಿದ್ದು ಏಕಕಾಲದಲ್ಲಿ ಮೂರು ಮಾದರಿಗಳು, ಅವು ಹೇಳುವ ವಿಷಯಗಳೂ ಒಂದೇ ಆಗಿರುವ ವಿಸ್ಮಯ, ನನ್ನಲ್ಲಿ ವಿಶಿಷ್ಟ ಅನುಭೂತಿ ಮೂಡಿಸಿ ಸಂತಸ, ಅತೀವ ಅಚ್ಚರಿಯ ಭಾವಗಳನ್ನು ಹುಟ್ಟಿಸಿತು.






0 Comments