ರಾಘವೇಂದ್ರ ರಾವ್ .ಕೆ
ಇತ್ತೀಚೆಗೆ ಡಿ.ವಿ.ಜಿ ಅವರ ಜ್ಞಾಪಕ ಚಿತ್ರಶಾಲೆಯನ್ನು ಓದುವುದಾಗಿತ್ತು. ಬಹಳ ಹಿಂದೊಮ್ಮೆ ಓದಿದ್ದ ಪುಸ್ತಕ ಅದು. ಪುಸ್ತಕ ಅನ್ನುವುದಕ್ಕಿಂತ ಹೆಚ್ಚಾಗಿ ವ್ಯಕ್ತಿ-ವ್ಯಕ್ತಿತ್ವಗಳ ಚಿತ್ರಣ ಎಂದರೆ ಸೂಕ್ತ ಅನಿಸುತ್ತದೆ. ಅದರಲ್ಲಿನ ಒಂದೊಂದು ಬರಹವು ಜೀವರೂಪ ತಾಳಿ, ಕಣ್ಣ ಮುಂದೆ ಸುಳಿದಂತಿರುತ್ತವೆ. ನಿಜವಾಗಿಯೂ ಚಿತ್ರಗಳ ರೂಪದಲ್ಲಿ ಮೂಡಿ ಬಂದಂತೆ ತೋರುತ್ತದೆ. ಮತ್ತದು ನಮ್ಮಲ್ಲಿ ಮತ್ತೆ ಮತ್ತೆ ನೆನಪಿಗೆ ಬರುತ್ತಿರುತ್ತದೆ. ನೈಜ ಜೀವನಾಧಾರಿತ ವ್ಯಕ್ತಿಚಿತ್ರಣಗಳ ಅಪೂರ್ವ ಸಂಕಲನ ಹಾಗೂ ಅತ್ಯಂತ ಉಪಾಧೇಯವಾದ ಕೃತಿ ‘ಜ್ಞಾಪಕ ಚಿತ್ರಶಾಲೆ’. ನೆನಪಿನಲ್ಲಿ ಉಳಿವ ಚಿತ್ರಣಗಳು, ಪ್ರತಿಯೊಂದು ವ್ಯಕ್ತಿತ್ವ ಪರಿಚಯವು ವಿಶೇಷ ವ್ಯಕ್ತಿ ವಿಷಯಗಳನ್ನು, ವಿಶೇಷಗಳನ್ನು, ವಿಚಾರಗಳನ್ನು ತೆರೆದಿಡುತ್ತವೆ. ಆದಕಾರಣ ಇದರ ಹೆಸರು ‘ಜ್ಞಾಪಕ ಚಿತ್ರಶಾಲೆ’ ಎಂದು ಇರಿಸಿರಬೇಕು ಎಂದೆನಿಸುತ್ತದೆ.
ಅಂದು ಶುಕ್ರವಾರ ಸಂಜೆಯ ಸಮಯ. ಸುಮಾರು 5:30 ಆಗಿರಬೇಕು. ಕೆಲಸ ಮುಗಿಸಿ ಕುಳಿತಿದ್ದ ನಾನು, ನನ್ನ ಸ್ನೇಹಿತರೊಬ್ಬರಿಗೆ ಕರೆ ಮಾಡಿದ್ದಾಗ, ಉಭಯಕುಶಲೋಪರಿ ಸಾಗಿತ್ತು. ಒಂದಿಷ್ಟು ಕೆಲಸದ ಬಗ್ಗೆ ಮಾತನಾಡಿ, ಸಹೋದ್ಯೋಗಿಗಳ ಬಗೆಗೆ ವಿಚಾರಿಸಿದೆ. ಅವರಿದ್ದ ಊರಿನಲ್ಲಿ ಕೊರೊನಾದ ವಿಚಾರ, ಅಲ್ಲಿನ ಜನಜೀವನ ಇತ್ಯಾದಿಯಾಗಿ ಮಾತು ಬೆಳೆಯುತ್ತಿತ್ತು. ಅವರೂ ಸಹ, ನಾನಿದ್ದ ಬೆಂಗಳೂರಿನ ಸ್ಥಿತಿಗತಿಗಳ ಬಗೆಗೆ ವಿಚಾರಿಸುತ್ತಾ, ಒಂದಿಷ್ಟು ಮಾತು ಮುಂದುವರಿದಿತ್ತು. ನಂತರ ಅವರು ಯಾವುದಾದರೂ ಪುಸ್ತಕ ಓದುತ್ತಿರುವಿರಾ ಎಂದಾಗ, ನಾನು ‘ಜ್ಞಾಪಕ ಚಿತ್ರಶಾಲೆ’ಯ ಬಗೆಗೆ ಹೇಳತೊಡಗಿದೆ. ಅವರು ‘ಕೆನ್ನಾಯಿಯ ಜಾಡಿನಲ್ಲಿ’ ಎಂಬ ಪುಸ್ತಕವನ್ನು ಇತ್ತೀಚೆಗೆ ಓದಿ ಮುಗಿಸಿದ್ದಾಗಿ ತಿಳಿಸಿದರು. ಆಗ ನಾನು, ಗುರುಗಳಾದ ಶತಾವಧಾನಿ ಆರ್. ಗಣೇಶ್ ಅವರು ಬರೆದಿರುವ ‘ಬೆಲೆಬಾಳುವ ಬರಹಗಳು’ ಎಂಬ ಕೃತಿಯ ಬಗೆಗೆ, ಮತ್ತೆ ಅವರೇ ಬರೆದಿರುವ ಇನ್ನೊಂದು ಕೃತಿಯಾದ ‘ಬ್ರಹ್ಮಪುರಿಯ ಭಿಕ್ಷುಕ’ ಕೃತಿಯ ಬಗೆಗೆ ಹೇಳುತ್ತಾ, ಅವನ್ನು ಇನ್ನೊಮ್ಮೆ ಓದಬೇಕೆಂದು ಹೇಳಿದೆ. ಈ ಎರಡು ಪುಸ್ತಕಗಳು ಡಿ.ವಿ.ಜಿ ಯವರ ಕುರಿತಾದದ್ದು. ನಂತರ ಅವರು ‘ವಿರಕ್ತ ರಾಷ್ಟ್ರಕ ಡಿ.ವಿ.ಜಿ’ ಎಂಬ ಕೃತಿ ಇದೆ. ಇದನ್ನು ಡಿ. ಆರ್. ವೆಂಕಟರಮಣನ್ ಅವರು ಬರೆದಿದ್ದಾರೆ ಎಂದರು. ಎಸ್.ಆರ್. ರಾಮಸ್ವಾಮಿಯವರ ‘ದೀವಟಿಗೆಗಳು’ ಎಂಬ ಕೃತಿಯು ವ್ಯಕ್ತಿಚಿತ್ರಗಳ ಸಂಗ್ರಹವಾಗಿದ್ದು, ಬಹಳ ಚೆನ್ನಾಗಿ ಮತ್ತು ಸ್ವಾರಸ್ಯ ಭರಿತವಾಗಿದೆ ಎಂದು ನುಡಿದರು.
ಮತ್ತೆ ಜ್ಞಾಪಕ ಚಿತ್ರಶಾಲೆಯ ವಿಚಾರಕ್ಕೆ ಮರಳಿ, ನಾನಂದು ಓದಿದ್ದ ಪುಟ್ಟಣ್ಣ ಶೆಟ್ಟರು, ಸಿ.ರಾಜಗೋಪಾಲಾಚಾರ್ಯರು, ಎಂ. ಎಲ್. ಶ್ರೀಕಂಠೇಶಗೌಡರು, ಸರ್ ಮಿರ್ಜಾ ಇಸ್ಮಾಯಿಲ್ ಇವರುಗಳ ವ್ಯಕ್ತಿಚಿತ್ರಗಳನ್ನು ಓದಿದೆ ಎಂದು ನನ್ನ ಸ್ನೇಹಿತರಿಗೆ ತಿಳಿಸಿ, ಅವರುಗಳ ಜೀವನಗಳಲ್ಲಿನ ಘಟನೆಗಳು ಕಣ್ಣ ಮುಂದೆ ಸುಳಿಯುವಂತೆ ಡಿ.ವಿ.ಜಿ ಯವರು ತಮ್ಮ ಬರಹದಲ್ಲಿ ಚಿತ್ರಿಸಿದ್ದಾರೆ ಎಂದು ಹೇಳುತ್ತಿದ್ದೆ. ಹಾಗೂ ಇಂತಹ ಬರಹಗಳು, ಕೃತಿಗಳು ಇತಿಹಾಸದ ಪುಟಗಳನ್ನು ತೆರೆದು, ಅಂದಿನ ಚಿತ್ರಣಗಳನ್ನು ನಮ್ಮ ಮುಂದೆ ತೆರೆದಿಡುತ್ತವೆ ಮತ್ತು ಆದರ್ಶಪ್ರಾಯವಾದ ವ್ಯಕ್ತಿತ್ವಗಳು ನಮ್ಮೆದೆಯಲ್ಲಿ ಒಂದು ರೀತಿಯ ಅಚ್ಚನ್ನೇ ಒತ್ತಿ ಸಾಗಿರುತ್ತವೆ. ಅವುಗಳು ನಮ್ಮ ಚಿಂತನೆ ಹಾಗೂ ವ್ಯಕ್ತಿತ್ವಗಳ ಮೇಲೆ ಸಕರಾತ್ಮಕವಾದ ಪರಿಣಾಮವನ್ನು ಬೀರದೆ ಇರುವುದಿಲ್ಲ ಎಂದು ನನ್ನ ಸ್ನೇಹಿತರಿಗೆ ತಿಳಿಸಿದೆ. ಅವರು ಆ ಸಮಯಕ್ಕೆ, ತಾವು ಜ್ಞಾಪಕ ಚಿತ್ರಶಾಲೆಯನ್ನು ವರುಷಗಳ ಹಿಂದೆ ಓದಿದುದ್ದಾಗಿಯೂ, ಆ ಕೃತಿಯಲ್ಲಿನ ಒಂದು ವ್ಯಕ್ತಿಚಿತ್ರಣ ಇನ್ನೂ ಚೆನ್ನಾಗಿ ನೆನೆಪಿದೆಯೆಂದು ಹೇಳುತ್ತಾ, ಶಿವಪಿಚ್ಚೈ ಮೊದಲಿಯಾರ್ ಎಂಬ ಹೆಸರನ್ನು ಹೇಳಿದರು. ಆ ಕೃತಿಯಲ್ಲಿನ ಪಿಚ್ಚೈರವರ ವ್ಯಕ್ತಿಚಿತ್ರ ಹೇಗೆ ಇನ್ನೂ ಮಾಸದ ನೆನಪಾಗಿ, ಅಚ್ಚಳಿಯದೇ ಉಳಿದಿದೆಯೆಂದು ವಿವರಿಸಿದರು. ನಾನು ಅಂದು ಸಂಜೆಯೇ ಶಿವಪಿಚ್ಚೈ ಅವರ ಬಗೆಗಿನ ಬರಹವನ್ನು ಓದಿದೆ. ನಿಜಕ್ಕೂ ಅಪರೂಪದ ವ್ಯಕ್ತಿತ್ವ ಪಿಚ್ಚೈ ಅವರದು. ನಾನು ನನ್ನ ಸ್ನೇಹಿತರಿಗೆ ಕರೆ ಮಾಡಿ, ನಾನು ಆ ಬರಹವನ್ನು ಮತ್ತೊಮ್ಮೆ ಓದಿದ್ದಾಗಿ, ಈಗ ಓದುವಾಗ ಒಂದು ಹೊಸ ದೃಷ್ಟಿಕೋನದಲ್ಲಿ ಓದಿದ ಅನುಭವವನ್ನು ಹಂಚಿಕೊಂಡೆ.
ಮರುದಿನ ಸಂಜೆ ಹೀಗೆ ಕುಳಿತಿರುವಾಗ, ಪಿಚ್ಚೈರವರ ಬಗೆಗೆ ಹಿಂದಿನ ದಿನದ ಓದು ನೆನೆಪಾಯಿತು. ಕೃತಿಯಲ್ಲಿ ವಿವರಿಸಿದಂತೆ, ಡಿ.ವಿ.ಜಿ. ಯವರು ಪಿಚ್ಚೈಯವರನ್ನು ಭೇಟಿ ಮಾಡಿದ ಸಂದರ್ಭ, ಗಾರೆ ಕೆಲಸದ ಬಗ್ಗೆ ಅವರಿಗಿದ್ದ ಚಾಕಚಕ್ಯತೆ, ಕೆಲಸ ಮತ್ತು ಬಿಡುವಿನ ಸಾಮರಸ್ಯತೆ, ಶಿವ ಪಿಚ್ಚೈ ಎಂಬ ಹೆಸರಿನ ಹಿಂದಿರುವ ಸ್ವಾರಸ್ಯ, ಅವರ ಸ್ವಭಾವದ ಬಗೆಗಿನ ನುಡಿಗಳು, ಅವರ ಜೀವನದ ಬಗೆಗಿನ ಘಟನೆಗಳು, ಹೀಗೆ ಡಿ.ವಿ.ಜಿ. ಯವರು ಪಿಚ್ಚೈರವರ ಬದುಕಿನ ಅನೇಕ ಸ್ವಾರಸ್ಯಪೂರ್ಣ ಸಂಗತಿಗಳನ್ನು ಜ್ಞಾಪಕ ಚಿತ್ರಶಾಲೆಯಲ್ಲಿ ಚಿತ್ರಿಸಿದ್ದಾರೆ. ಪಿಚ್ಚೈರವರು ತಮ್ಮ ಮನೆಯನ್ನು ತಮ್ಮ ಸೋದರಿಗೆ ನೀಡಿ, ದೇಶ ಸಂಚಾರ ಹೊರಡುವ ಚಿತ್ರಣ ಅಪರೂಪದ್ದು. ಒಂದು ರೀತಿಯ ಪರಿವ್ರಾಜಕತೆ ಪಿಚ್ಚೈ ಅವರಲ್ಲಿ ಕಾಣುತ್ತದೆಂದು ನನಗೆ ತೋರುತ್ತದೆ.

ಹೀಗೆ ಈ ಚಿತ್ರಣ ನೆನಪಾಗುತ್ತಿದ್ದಾಗ, ನಾನು ಹಿಂದೊಮ್ಮೆ ಓದಿದ್ದ ಸುಬ್ಬಣ್ಣ ಹಾಗೂ ಸಂಧ್ಯಾರಾಗ ಕೃತಿಗಳು ನೆನೆಪಿಗೆ ಬಂದವು. ಅ.ನ.ಕೃ ಅವರ ಸಂಧ್ಯಾರಾಗದಲ್ಲಿ ಬರುವ ಕಥಾನಾಯಕನಾದ ಲಕ್ಷ್ಮಣನು ಸಂಗೀತದಲ್ಲಿ ಅಗಾಧವಾದ ಪಾಂಡಿತ್ಯವನ್ನು ಸಾಧಿಸಿ, ಸಾಕಷ್ಟು ಸಾಮಾಜಿಕ ಮನ್ನಣೆ, ಕೀರ್ತಿ, ಪ್ರತಿಷ್ಠೆಗಳು ದೊರತರೂ, ಅವೆಲ್ಲವುಗಳಿಂದ ದೂರ ಸರಿದು, ಊರಿಂದೂರಿಗೆ ಅಲೆವ ಚಿತ್ರಣವಿದೆ.
ಸುಬ್ಬಣ್ಣನ ಪಾತ್ರವಾದರೂ ಬದುಕಿನಲ್ಲಿ ತನ್ನವರೆಲ್ಲರನ್ನು ಕಳೆದುಕೊಂಡು , ತನ್ನದೆಲ್ಲವನ್ನು ತೊರೆದು ಪರಿತ್ಯಕ್ತನಂತೆ ಅಧ್ಯಾತ್ಮದೆಡೆಗೆ ಸಾಗುವ ವ್ಯಕ್ತಿ. ಜೀವನದುದ್ದಕ್ಕೂ ನೋವಿನ ಹಾದಿಯನ್ನೇ ಸವೆಸಿ, ತನ್ನ ಆಪ್ತರನ್ನೆಲ್ಲರನ್ನು ಕಳೆದುಕೊಂಡು ಕೊನೆಗೊಮ್ಮೆ ಒಂಟಿಯಾಗಿ ಊರೂರು ಅಲೆವ ಜಂಗಮನಾಗಿ ಬಿಡುತ್ತಾನೆ. ಸಂಧ್ಯಾರಾಗದ ಲಕ್ಷ್ಮಣನ ಪಾತ್ರ, ಸುಬ್ಬಣ್ಣ ಕೃತಿಯಲ್ಲಿನ ಸುಬ್ಬಣ್ಣನವರ ಚಿತ್ರಣ, ಪಿಚ್ಚೈಯವರಂತೆಯೇ ಎಲ್ಲವನ್ನೂ ಬಿಟ್ಟು ದೇಶಸಂಚಾರ ಹೊರಡುವಂತಹ ಗಾಢವಾದ ಪಾತ್ರಗಳು. ಅರೆರೇ, ಇವು ಮೂರರಲ್ಲಿ ಎಷ್ಟು ಸಾಮ್ಯತೆ ಇದೆ ಎಂದೆನಿಸಿತು. ತಕ್ಷಣವೇ ನನ್ನ ಸ್ನೇಹಿತರಿಗೆ ಒಂದು ಸಂದೇಶ ಕಳುಹಿಸಿದೆ.
ಅದು ಹೀಗಿತ್ತು: ಮಾಸ್ತಿಯವರ ‘ಸುಬ್ಬಣ್ಣ’ ಕಾದಂಬರಿಯ ಸುಬ್ಬಣ್ಣರ ಪಾತ್ರ ಹಾಗೂ ಅ.ನ.ಕೃ ಅವರ ‘ಸಂಧ್ಯಾರಾಗ’ ದಲ್ಲಿನ ಲಕ್ಷ್ಮಣನ ಪಾತ್ರಗಳಿಗೂ, ಶಿವಪಿಚ್ಚೈ ಮೊದಲಿಯಾರರ ವ್ಯಕ್ತಿಚಿತ್ರಕ್ಕೂ ಬಹಳ ಸಾಮ್ಯತೆ ಇದೆ. ಏಕೆಂದರೆ ಮೂರು ಪಾತ್ರಗಳಲ್ಲಿ ತತ್ತ್ವ ಸಂಹಿತತೆ ಮತ್ತು ಎಲ್ಲವನ್ನೂ ಬಿಟ್ಟು ದೇಶಸಂಚಾರ ಮಾಡುವ ಚಿತ್ರಣವಿದೆ.
ಅದಕ್ಕೆ ನನ್ನ ಸ್ನೇಹಿತರು ಕಳುಹಿಸಿದ್ದ ಸಂದೇಶ ಹೀಗಿತ್ತು: ಹೌದು, ಬಹಳ ಸಾಮ್ಯತೆ ಇವೆ ಆ ಪಾತ್ರಗಳಲ್ಲಿ. ಒಂದು ವ್ಯತ್ಯಾಸವೆಂದರೆ, ಸುಬ್ಬಣ್ಣ ಮತ್ತು ಸಂಧ್ಯಾರಾಗದಲ್ಲಿನ ಲಕ್ಷ್ಮಣ ಅವರುಗಳು ಸಂಗೀತ ಕಲಾವಿದರು. ಆದರೆ ಇವರು (ಶಿವಪಿಚ್ಚೈ) ಗಾರೆ ಕೆಲಸದಂತಹ ಸಾಮಾನ್ಯವಾದ ಕೆಲಸದಲ್ಲಿದ್ದು, ಇವರು ಸಾಧಿಸಿದ ಮನಸ್ಥಿತಿ ವಿಸ್ಮಯವಾದದ್ದು.
ಲೌಕಿಕ ಜಗತ್ತಿನ ಉದಾಸೀನತೆ, ಕಲೆಯಲ್ಲಿ ತಾವು ಸಾಧಿಸಿದ ಸಾರ್ಥಕ್ಯ ಭಾವ, ತತ್ತ್ವಯುಕ್ತವಾದ ಮಾತುಗಳು, ಉದಾರ ಮನೋಭಾವಗಳು ಈ ಪಾತ್ರಗಳಲ್ಲಿ ಕಾಣಸಿಗುವ ಸಾಮ್ಯತೆಗಳು. ವಾಸ್ತವದ ಬದುಕಿನಲ್ಲಿ ತಮ್ಮ ವಿದ್ಯೆ, ಕಲೆಗಳನ್ನು ನೆಚ್ಚಿ, ಲೌಕಿಕಾಸಕ್ತಿಗಳನ್ನು ಪಕ್ಕಕ್ಕಿಟ್ಟು ಬಾಳ್ವೆ ನಡೆಸಿದ ರೀತಿ, ಸಾಮಾನ್ಯ ಜೀವನಾಸಕ್ತಿಗಳನ್ನು ಮೀರಿದ ಭಾವಗಳು ಅವರಲ್ಲಿದ್ದಿತು. ಇವರ ಹೆಜ್ಜೆಗಳು ಮಾತ್ರ ಇಹದಲ್ಲಿ, ಮನದಲ್ಲಿನ ಉನ್ನತ ಭಾವಗಳು ಅವರಿಗೆ ರೆಕ್ಕೆ ನೀಡಿ ಸದಾ ಆಗಸದಲ್ಲಿ ಹಾರಾಡುವಂತಿರಲು ಪ್ರೇರಕ ಶಕ್ತಿಗಳಾಗಿದ್ದಂತೆ ತೋರುತ್ತದೆ.
ಸಂಧ್ಯಾರಾಗದ ಪಾತ್ರ ಕಲ್ಪಿತವಾದದ್ದು. ಸುಬ್ಬಣ್ಣ ಹಾಗೂ ಪಿಚ್ಚೈ ಅವರದ್ದು ನೈಜವಾದದ್ದು. ಹೀಗೆ ಒಂದು ಕಲ್ಪಿತ ಪಾತ್ರ, ಎರಡು ನಿಜ ಜೀವನದಲ್ಲಿನ ಪಾತ್ರಗಳಲ್ಲಿನ ಸಾಮ್ಯತೆ ನನಗೆ ತೀರಾ ಅಪರೂಪದ್ದು ಎನಿಸಿತು. ಇಂತಹ ವ್ಯಕ್ತಿಚಿತ್ರಣಗಳು, ಅವುಗಳು ಬೀರುವ ಔದಾರ್ಯ ಪ್ರಜ್ಞೆಗಳು ಬದುಕಿಗೆ ದೀವಟೀಗೆಗಳಂತೆ ಮನಸ್ಸಿನಲ್ಲಿ ನಿಂತು, ಅಂತಃಕರಣವನ್ನು ಪ್ರೀತ್ಯೌದಾರ್ಯಗಳಿಂದ ಜಾಜ್ವಲ್ಯಮಾನವಾಗಿ ಬೆಳಗಿಸುತ್ತವೆ. ಅವರಲ್ಲಿನ ಜೀವನಾದರ್ಶಗಳು, ತತ್ವವಿವೇಕಾದಿ ವಿಚಾರಗಳು, ಭಾವಶುದ್ದಿ, ಪರಿತ್ಯಕ್ತತೆ, ಅವರುಗಳು ಜೀವನವನ್ನು ಕಂಡ ದೃಷ್ಟಿಕೋನ ಅನನ್ಯವಾದದ್ದು.






ನಿಜ. ಬೆಳಗೆರೆ ಕೃಷ್ಣಶಾಸ್ತ್ರಿಗಳ ಮರೆಯಲಾದೀತೆ ಮತ್ತು ಟಿ. ವಿ. ವೆಂಕಟಾಚಲ ಶಾಸ್ತ್ರಿಗಳ ಉದಾರಚರಿತರು ಉದಾತ್ತ ಪ್ರಸಂಗಗಳು ಓದು ಕೂಡ ಹೀಗೆ..
Starಗಿರಿ, ಹಮ್ಮು ಬಿಮ್ಮು ಇಲ್ಲದ ನಿರ್ಮಲ ಮನಸ್ಸಿನ ಮನುಷ್ಯ ಚಿತ್ರಗಳು.