ನಾಗರೇಖಾ ಗಾಂವಕರ ಬರೆದ ‘ಬಿಳಿ ಬಟ್ಟೆಯೂ… ಪಾದರಕ್ಷೆಯೂ..’

– ನಾಗರೇಖಾ ಗಾಂವಕರ

ಆಗಷ್ಟೇ ಹಾಸಿಗೆಗೆ ಅಡ್ಡಾದ ಕೆರೆಕೇರಿಯ ಉಮ್ಮಣ್ಣ ಭಟ್ಟರಿಗೆ ಮಗ್ಗಲು ಬದಲಿಸುವ ಕೆಲಸನೇ ಆಗ್ಹೋಯ್ತು. ನಿದ್ದೆ ಜಪ್ಪಯ್ಯ ಎಂದರೂ ಹತ್ತಿರ ಸುಳಿಯುತ್ತಿಲ್ಲ. ಪಕ್ಕದ ಕೋಣೆಯಲ್ಲಿ ವಯಸ್ಸಾದ ತಾಯಿಯ ಕೆಮ್ಮು ಮುಲುಗುವಿಕೆ. ಉಸ್ಸು… ಉಸ್ಸು… ಕೇಳಿ ಬರುತ್ತಲೂ ಭಟ್ಟರಿಗೆ ಎದೆಗೆ ಇಕ್ಕಳದಿಂದ ಬಗೆದಂತೆ ನೋವು ಕಾಣಿಸಿಕೊಂಡಿತು. ಹೃದಯದಲ್ಲಿ ಹೆಪ್ಪುಗಟ್ಟಿದ ನೋವು. ತಾನು ತನ್ನ ತಾಯಿಗೆ ಹೀಗೆ ನೋವು ಕೊಟ್ಟಿದ್ದೆನೆ?

“ಅದೇ ಕೇಳಿರಾ.. ಕೆರೆಭಟ್ಟರ ಮಗ ಸಮಗಾರ ಹುಡ್ಗಿ ಕೂಡಕಂಡ ಓಡಹೋದ್ನಂತೆ.”

ದಾರಿಯಲ್ಲಿ ಬರುತ್ತಲೂ ಹಳ್ಳೇರ ಹೈದ ತನ್ನನ್ನು ನೋಡಿಯೇ ಕಂಡು ಕಾಣದ ಹಾಗೆ ನಾಟಕ ಮಾಡಿ ಮುದ್ದಾಂ ಆಗಿ ಹೇಳಿದಾಗ ಕಿವಿಯಲ್ಲಿ ಕಾದ ಸೀಸೆ ಹೊಯ್ದಂತೆ ಆದದ್ದು. ಈಗ ವರ್ಷ ಕಳೆದರೂ ಗುಂಯ್ ಗುಡುವ ಆ ಮಾತು ತನ್ನ ಆಯಸ್ಸನ್ನು ಹತ್ತು ವರ್ಷ ಕಡಿಮೆ ಮಾಡಿದ್ದು ಹೌದು. ತಾನೆಲ್ಲಿ ಎಡವಿದೆ? ಮಾಧವ ಸಂಸ್ಕೃತ ವೇದ ಶಾಲೆಯಲ್ಲಿ ಕಲಿತು ಹೀಗೇಕಾದ? ನಿದ್ದೆ ಬಾರದೆ ಹೊರಳಾಡತೊಡಗಿದರು.
“ಯಾಕೋ ಉಮ್ಮಣ್ಣ? ನಿದ್ರೆ ಬತ್ತಿಲ್ಯಾ, ಸುಮ್ನೆ ಇಲ್ಲದ ವ್ಯಸನ ಮಾಡ್ಕತೇ ನೀನು. ನಾ ಸಾಯೋ ಮುದುಕಿ. ನಂಗೆ ನಿದ್ರೆ ಇಲ್ಲ ಅಂದ್ರೆ, ಈಗೀಗ ನಿಂಗೂ ನಿದ್ರೆನೇ ಇಲ್ದಂಗ್ ಆಯ್ತಲ್ಲೋ? ಯಾವ ಜನ್ಮದ ಕರ್ಮನೋ?” ಎಂದು ತಾಯಿ ಮಲಗಿದಲ್ಲೇ ಮುಲುಗಿ ಹಳಹಳಿಸಿದರೆ, ಮರು ಮಾತಾಡದೆ ಬಟ್ಟರು ಸುಮ್ಮನೆ ಮಗ್ಗುಲ ಬದಲಿಸಿ ಮತ್ತೆ ಮಲಗಿದರು.

ಸುತ್ತಮುತ್ತ ಕಾಡಿನ ಹೊದಿಕೆ ಇದ್ದ ಊರಲ್ಲಿ ತಂಪಾದ ನೆಲೆ ಸೆಲೆ ಇದೆ. ಪ್ರಕೃತಿಯ ಮುದ್ದಿನ ಕೈಗೂಸು ಎಂಬಂತೆ ಮುಗಿಲೆತ್ತರದ ಮರಗಳು, ಹಬ್ಬಿಕೊಂಡ ಪೊದೆ ಹಿಂಡುಗಳು ಕಸಕ್ ಪಸಕ್ ಅಂತ ಅಲ್ಲೆಲ್ಲಾ ಸದ್ದು ಮಾಡೋ ಕಬ್ಬೆಕ್ಕು, ಮುಂಗುಸಿ, ಮೊಲಗಳು. ಭಟ್ಟರ ಮನೆ ಹಿಂದೆ ಸಣ್ಣಕೆರೆ ಇದ್ದು ನೀರು ಬತ್ತಿದ ಸಂದರ್ಭ ಬಹು ಅಪರೂಪ. ಕೆಲವೊಮ್ಮೆ ಮೇಲಿನ ನೀರು ಇಂಗಿದರೂ ಅಂತರ್ಜಲ ಇದ್ದು ಸಣ್ಣ ಗುಂಡಿ ತೋಡಿ ಭಟ್ಟರ ಮನೆಯ ಅಡುಗೆ ಅದೇ ನೀರಿಂದ. ಪ್ರಕೃತಿಗೆಂದೂ ವಿರುದ್ಧವಾಗಿ ನಡೆಯದೇ ಇದ್ದ ಸಂಸ್ಕಾರ ಇದ್ದ ಮನೆ. ನೆನೆಯುತ್ತಾ ಭಟ್ಟರ ಕಣ್ಣಂಚು ಒದ್ದೆಯಾಯಿತು. ಎಣ್ಣೆ ಜಿಡ್ಡುಗಟ್ಟಿ ಕಮಟು ವಾಸನೆ ನಾರುತ್ತಿದ್ದ ತಲೆದಿಂಬಿಗೆ ಅವರ ಕಣ್ಣೀರು ಇಂಗಿಸಿಕೊಳ್ಳಲಾಗಲಿಲ್ಲ. ಶಾರದೆ ಇಷ್ಟು ಬೇಗ ಹೋಗಬಾರದಿತ್ತು. ಹೀಗಾಗೇ ಇದ್ದೊಬ್ಬ ಮಗ ಮನೆ ಬಿಟ್ಟು ಹೆತ್ತವರ ಬಿಟ್ಟು ಆ ಹೆಣ್ಣಿನ ಕೂಡ ಓಡಿಹೋದ. ದುಃಖ ಉಮ್ಮಳಿಸಿತು.

ಎದ್ದು ಹಚ್ಚಿಗೆ ಹುಡುಕಿದರು. ಎಲೆಅಡಿಕೆ ಹಾಕಿಕೊಂಡು ಬಂದರೆ ಸರಿ ಹೋಯ್ತದೆ ಎನ್ನುತ್ತಾ ಅಡಿಕೆ ಹೋಳು ಬಾಯಿಗೆ ಹೊಡೆದು ಎಲೆ ಒರೆಸಿ ಸುಣ್ಣ ಸ್ವಲ್ಪ ಹೆಚ್ಚೆ ಬಳಿದು ಕೊಂಡು ಚೂರು ತಂಬಾಕಿನ ಪುಡಿ ಕುಟ್ಟಿ, ಎಲ್ಲವನ್ನೂ ಮಡಿಚಿ ಉಂಡೆ ಮಾಡಿ ಬಾಯಿಗಿಟ್ಟುಕೊಂಡು ಹೊರ ಜಗುಲಿಯ ಮೇಲೆ ಬಂದು ಕೂತರು. ಗವ್ವ… ಅನ್ನೋ ಕತ್ತಲು ಹೆಬ್ಬಾವಿನ ಹಾಗೇ ಬಿದ್ದುಕೊಂಡಂತೆ ಕಾಣುತ್ತಿತ್ತು. ತಾನು ಸಣ್ಣದಿದ್ದಾಗ ಕತ್ತಲೆಗೆ ಬಹಳ ಹೆದರುತ್ತಿದ್ದ ಸಂದರ್ಭಗಳ ನೆನಸಿಕೊಂಡು ಮುಗುಳ್ನಕ್ಕರು. ಆಮೇಲೆ ಮಗ ಹುಟ್ಟಿದ ಮೇಲೆ ರಾತ್ರಿ ಊಟ ಮಾಡಿ ಹೆಚ್ಚಾದಾಗಲೆಲ್ಲಾ ಆತ ಬಯಲಿಗೆ ಹೋಗಬೇಕಾದಾಗಲೆಲ್ಲಾ ತಮ್ಮ ಪಂಚೆ ಹಿಡಿದೇ ಕೂರುತ್ತಿದ್ದ ದಿನಗಳು ಕಣ್ಮುಂದೆ ಬಂದವು. ಈಗ ಈ ಕತ್ತಲು ಒಳಗೋ ಹೊರಗೋ… ಎಂಥದೋ ತಿಳಿತಿಲ್ಲ.

ನಾಳೆಯ ತಮ್ಮ ನಿತ್ಯ ಕಲಾಪಗಳು ಬಹಳೇ ಇವೆ ಎಂದು ಕೊಳ್ಳುತ್ತ ತಮ್ಮನ್ನು ತಾವೇ ಸಮಾಧಾನಿಸಿಕೊಳ್ಳುತ್ತ ನಿದ್ದೆದೇವಿಗಾಗಿ ಕನವರಿಸಿದರು. ನಾಳೇ ಕಾರೇಬೈಲಿಗೆ ಹೋಗಬೇಕು. ಕಾರೇಬೈಲಿನ ಮೋನಪ್ಪ ಮಾಸ್ತರ ಮನೆಯಲ್ಲಿ ಸತ್ಯನಾರಾಯಣ ಪೂಜೆಗೆ ಹೇಳಿದ್ದಾರೆ. ಪುರೋಹಿತ ಮಾಡಿಕೊಂಡಿರುವ ತನಗೆ ಅದನ್ನು ಬಿಟ್ಟರೆ ಬೇರೆ ಆದಾಯವಿಲ್ಲ. ಅಲ್ಲದೇ ಅಕ್ಕಪಕ್ಕ ತನ್ನ ಬಿಟ್ಟರೆ ಬೇರೆ ಪುರೋಹಿತರಿರಲಿಲ್ಲ. ತನ್ನೂರು ಸರಳೇಬೈಲಿನಿಂದ ಹೆಚ್ಚೆಂದರೆ 15 ಕಿ. ಮಿ. ಪ್ರತಿಸಲವೂ ಸೈಕಲ್ಲು ತುಳಿದೇ ಹೋಗುವುದು ರೂಢಿ. ಕಾರೇಬೈಲಿನ ಎಲ್ಲ ಮನೆಗಳ ಪೂಜೆ-ಪುರಸ್ಕಾರ, ಮದುವೆ-ಮುಂಜಿ, ನಾಮಕರಣ ದೇವರ ಕಾರ್ಯ ಅಂತೆಲ್ಲ ಐದಳ್ಳಿಗೆ ತಾವೇ ಹೋಗಬೇಕಾದ ಅನಿವಾರ್ಯ.

ಎಷ್ಟು ಹೊತ್ತಿಗೆ ನಿದ್ದೆ ಬಿತ್ತೋ ತಿಳಿದ ಹಾಗೆ ಮತ್ತೆ ಎಚ್ಚರವಾದದ್ದು ಕೋಳಿ ಕೂಗಿದಾಗಲೇ. ಬೆಳಗ್ಗೆ ಎದ್ದ ಕೂಡಲೇ ತಮ್ಮ ಪ್ರಾತಃವಿಧಿಗಳನ್ನು ಮುಗಿಸಿ, ತಾಯಿಗೆ ಸ್ನಾನಕ್ಕೆ ನೀರು ಕಾಯಲಿಟ್ಟು ಬೆಳಗ್ಗೆಯ ತಿಂಡಿ ತಯಾರಿಸತೊಡಗಿದರು. ನಿನ್ನೆ ಅರೆದಿಟ್ಟ ದೋಸೆ ಹಿಟ್ಟು ಉಬ್ಬಿ ಪಾತ್ರೆಯನ್ನೆಲ್ಲಾ ವ್ಯಾಪಿಸಿ ಮುಚ್ಚಿದ್ದ ಮುಚ್ಚಳವನ್ನು ಕೆಡವಿತ್ತು. ಮನದಲ್ಲೆ ‘ಈ ವೈಚಿತ್ರ್ಯ ನೋಡು’ ಎಂದುಕೊಂಡರು. ಯಾವುದೂ ಇದ್ದ ಹಾಗೇ ಇರಲೊಲ್ಲದು. ಆದರೆ ನಾನು? ಬದಲಾವಣೆಗೆ ತೆರೆದುಕೊಳ್ಳಬೇಕೆಂದರೂ… ಮತ್ತೇ ಯೋಚಿಸಲು ಹೋಗದೇ ನಿಧಾನವಾಗಿ ಕಾವಲಿಗೆ ಎಣ್ಣೆ ಸವರಿ ಹಿಟ್ಟು ಬಿಟ್ಟು ಹದವಾಗಿ ಕೈಯಾಡಿಸಿ ಮುಚ್ಚಳ ಮುಚ್ಚಿದರು. ಮರುಕ್ಷಣ ತೆಗೆದು ತಿರುವಿ ಹಾಕಿದರು. ಬದುಕಿನ ಹಾಳೆಯಂತೆ ಅದು ಕ್ಷಣಕ್ಷಣ ಬಣ್ಣ ಬದಲಾಯಿಸುತ್ತ ಬಿಳಿಯ ಹಿಟ್ಟು ಕೆಂಪಗೆ ಹದವಾದ ದೋಸೆಯಾಗುತ್ತಲೇ ತೆಗೆದು ಇನ್ನೊಂದು ಸುರಿದರು. ವಿಚಿತ್ರದ ಸಂದೇಶ ಕೊಡುವಂತೆ ದೋಸೆ ಅವರ ಮನಸ್ಸನ್ನೆಲ್ಲಾ ಆಕ್ರಮಿಸಿತು.

ಅರೇ ಹೀಗೆ ವಿಚಾರ ಮಾಡುತ್ತ ನಿಂತರೆ ನನ್ನ ಕೆಲಸದ ಗತಿ ಎನ್ನುತ್ತ ಬೇಗ ಬೇಗ ತಾಯಿಗೆ ಎಬ್ಬಿಸಿ ಅವರ ಸ್ನಾನ ಮುಗಿದು ಬರುತ್ತಲೂ ಒಟ್ಟಿಗೆ ಚಹ ತಯಾರಿಸಿಟ್ಟು ಕಾಯತೊಡಗಿದರು. ಆಕೆ ಬರುತ್ತಲೂ ತಾಯಿಗೆ ಚಾ ಕೊಟ್ಟು ತಾನೂ ತಿಂದು ಬರಬರ ಎಲ್ಲ ಎತ್ತಿಟ್ಟು ಕೈಕಾಲು ತೊಳೆದು ಈಗ ಎದ್ದೇ ಬಿಟ್ಟರು. ಬಿಳಿ ಬಣ್ಣದ ಧೋತಿ ಮೇಲಂಗಿ ಧರಿಸಿ ಸೈಕಲ್ಲು ತುಳಿಯುತ್ತಾ ಡಾಂಬರು ರಸ್ತೆ ದಾಟಿ ಅಡ್ಡದಾರಿಯಲ್ಲಿ ಹೊರಳಿದರೆ ಅದು ಕಚ್ಚಾ ರಸ್ತೆ. ಮಣ್ಣಿನ ದಾರಿಗುಂಟ ಹಚ್ಚಹಸಿರು ಮನಸ್ಸನ್ನು ಮುದಗೊಳಿಸುತ್ತಾ, ಮನಸ್ಸು ನಿನ್ನೆಯ ದುಗುಡವನ್ನು ಕೊಂಚ ಮರೆತಿತ್ತು. ಇನ್ನೇನೂ ಮುಟ್ಟಿದೆ ಎನ್ನುವಾಗಲೇ ತಿರುವಿನಲ್ಲಿ ಆ ಮನೆ. ವಿಷ್ಣು ಹೆಬ್ಬಾರರ ಮನೆ. ಹವ್ಯಕರೇ ಆದರೂ ತೋಟ ಗದ್ದೆ ಮಾಡಿಕೊಂಡಿದ್ದ ಜನ ಅವರು. ಪೌರೋಹಿತ್ಯ ಮಾಡುತ್ತಿರಲಿಲ್ಲ. ಸ್ವಲ್ಪ ಆಧುನಿಕ ಸಂಪ್ರದಾಯಸ್ಥರೆಂದು ಹೆಸರಾಗಿದ್ದರು. ವಿಷ್ಣು ಹೆಬ್ಬಾರರು ಕಾಲವಾಗಿ ಹತ್ತಾರು ವರ್ಷಗಳಾಗಿತ್ತು. ಅವರ ಮಗ ಸುಬ್ರಾಯ ಮೊನ್ನೆ ಮೊನ್ನೆ ಮಗನ ಮದುವೆ ಮಾಡಿದ್ದರು.

ತನ್ನನ್ನೇ ಕರೆದಿದ್ದರೂ ಆ ಸಂದರ್ಭದಲ್ಲಿ ತೀವ್ರ ಅನಾರೋಗ್ಯದ ಕಾರಣ ತನಗೆ ಹೋಗಲಾಗಿರಲಿಲ್ಲ. ಹೆಣ್ಣು ಕೂಡಾ ಅನ್ಯ ಜಾತಿಯದ್ದೆಂದು ಸುದ್ದಿ ಇತ್ತು. ರಸ್ತೆಯಿಂದ ಕೊಂಚ ತಗ್ಗಿಗೆ ಇರುವ ಮನೆ ಜಗುಲಿ ಮೇಲೆ ಕೂತು ವಿಷ್ಣು ಹೆಬ್ಬಾರರ ಮಗ ಸುಬ್ರಾಯ ಹೆಬ್ಬಾರರು ಏನೋ ಹೊಸೆಯುತ್ತಿದ್ದ ಹಾಗೆ ಕಾಣಿಸಿತು. ನಿಲ್ಲಿಸಿ ಮಾತನಾಡಿಸಿಕೊಂಡು ಹೋಗುವ ಎಂದರೂ ಪೂಜೆಗೆ ವಿಳಂಬವಾದರೆ ಎಂದು ಬರುವಾಗ ಹೋದರಾಯಿತೆಂದು ಕೊಂಡರು. ಆದರೆ ಮನಸ್ಯಾಕೋ ತಡಿಲಿಲ್ಲ. ಸೈಕಲ್ಲು ನಿಲ್ಲಿಸಿ ಕೆಳಗಿಳಿದು ಮನೆ ಕಡೆ ಹೆಜ್ಜೆ ಹಾಕಿದರು. ಹೊಸ್ತಿಲಿಗೆ ನೂರು ಗಜ ಇರುವಾಗಲೇ ಪಡಸಾಲೆಯಿಂದ ಪ್ರಾಯದ ತರುಣಿಯೊಬ್ಬಳು ಹೊರಬಂದಳು. ಬ್ರಾಹ್ಮಣ ಹೆಣ್ಣು ಅನ್ನಿಸಲಿಲ್ಲ. ಗೋದಿಬಣ್ಣದ ಮುಖದಲ್ಲೊಂದು ವಿಚಿತ್ರ ಸೆಳೆತವಿದೆ. ಒಂದು ಕೈಯಲ್ಲಿ ನೀರು ತುಂಬಿದ ಚರಿಗೆ ಇನ್ನೊಂದರಲ್ಲಿ ಕುಂಕುಮದ ಭರಣಿ ಹಿಡಿದ ಅವಳು ಮನೆ ಮುಂದಿನ ತುಳಸಿಕಟ್ಟೆ ತೊಳೆಯತೊಡಗಿದಳು. ಭಟ್ಟರು ಅವಳನ್ನೇ ನೋಡುತ್ತ ಜಗುಲಿಗೆ ಬರುತ್ತಲೂ ಆ ತನಕವೂ ತಗ್ಗಿದ ತಲೆಯಲ್ಲಿ ತೆಂಗಿನ ಕತ್ತ ಹೊಸೆಯುತ್ತಿದ್ದ ಹೆಬ್ಬಾರರು ಒಮ್ಮೆಲೆ ನೋಡಿ “ಅರೆರೆ ಇದೆಂಥ ಮಾರಾಯ್, ಬಂದಿದ್ದೇ ತಿಳಿತಿಲ್ಯೇ… ಎಷ್ಟೋತ್ತಿಗೇ ಬಂದ್ಯಾ? ಬಾ… ಕುಳ್ಳು… ಆಸರಿಕೆ ಕುಡ್ದು ಮಾತಾಡಿದ್ರಾಯ್ತು” ಎಂದು ಉಪಚರಿಸಿದರು. ಬೆಳ್ಳಂಬೆಳಗ್ಗೆ ಬಂದ ಇವರನ್ನು ನೋಡಿ ಅವರಿಗೆ ಆಶ್ಚರ್ಯ. ಅಡುಗೆ ಕೋಣೆಯಲ್ಲಿದ್ದ ಹೆಂಡತಿ ಕೂಗಿ ಹೇಳಿದರು.

“ಗುಲಾಬಿ, ಎರಡು ಲೋಟ ಚಾ ಮಾಡ್ಕಂಬಾ… ಹಾಂಗೇ ದೋಸೆನೂ ತಾ. ಸರಳೆ ಬೈಲಿಂದ ಉಮ್ಮಣ್ಣ ಬಂದಾನೇ” ಎನ್ನುತ್ತಲೇ ಒಳಬಾಗಿಲ ತುದಿಯಿಂದ ಆಕೆ ಹೊರಬಂದು ಮಾತಾಡಿಸಿದಳು. “ಬಾಳದಿನಾ ಆಗ್ಹೋಯ್ತು ಕಾಣ್ದೆ. ಇತ್ಲಾಗೇ ಬರ್ಲೇ ಇಲ್ಲ ಕಾಣ್ತು ಸದ್ಯ.” ಎಂದು ಹೇಳಿ ಗಂಗವ್ವನ ಆರೋಗ್ಯ ವಿಚಾರಿಸಿ ಒಳನಡೆದಳು. ಅಷ್ಟೇ ಹೊತ್ತಿಗೆ ತುಳಸಿ ಪೂಜೆ ಮುಗಿಸಿ ಬಂದ ಸೊಸೆ ಕಳೆಕಳೆಯಾಗಿ ಕಾಣುತ್ತಲೇ ಹೆಬ್ಬಾರರು ‘ಮಾಣಿ ಎದ್ನಾ ಇನ್ನೂ ಮಲಗೇ ಇದ್ನಾ’ ಎಂದು ಆಕೆಗೆ ವಿಚಾರಿಸಿದರು. ‘ಈಗ ಎಬ್ಬಿಸಿ ಬರ್ತಿನ್ರೀ…’ ಎನ್ನುತ್ತಾ ಆಕೆ ನಗುತ್ತಾ ಒಳ ಕೋಣೆ ಒಳಹೊಕ್ಕಳು. ಹೆಬ್ಬಾರರ ಮುಖದಲ್ಲಿ ಸಣ್ಣಗೆ ಮುಗುಳುನಗು ಮನೆ ಮಾಡಿದ್ದನ್ನು ಗ್ರಹಿಸಿದ ಭಟ್ಟರು ಕೂಡಾ ಅದರ ಒಳಾರ್ಥ ತಿಳಿದು ತಾವು ನಕ್ಕರು.

‘ಹೊಸ ಜೋಡಿ, ಅದ್ಕೆಯಾ ನಾನು ಅಂವಗೆ ಎಬ್ಬಿಸಿಲ್ಲೇ. ರಾತ್ರಿಯೆಲ್ಲ ಜಾಗರಣೆ ಮಾಡ್ತ್ರು’ ಎನ್ನುತ್ತಾ ಇನ್ನೊಮ್ಮೆ ನಕ್ಕರು. ಸೊಸೆ ಕಲಿತವಳೆಂದು ಹೇಳಿದರು. ಡಿಪ್ಲೊಮೊ ಮುಗಿಸಿದ ಮಗ ನೌಕರಿಯ ಹುಚ್ಚು ಹಿಡಿಸಿಕೊಳ್ಳದೇ ಹೊಲಗದ್ದೆ ನೋಡಿಕೊಂಡು ಊರಲ್ಲೇ ಇದ್ದ. ಈಗ ಹೆಣ್ಣು ಹುಡುಗಿಯರು ಜಾತಿಯಲ್ಲಿ ಸಿಗುವುದೇ ಅಪರೂಪ. ಅದರಲ್ಲೂ ಮನೆಯಲ್ಲಿದ್ದ ಗಂಡನ್ನು ಮದುವೆಯಾಗಲು ಕಲಿತ ಹೆಣ್ಣುಗಳು ಮನಸ್ಸು ಮಾಡುವುದಿಲ್ಲ. ಇವೆಲ್ಲ ವಿಚಾರಗಳು ಭಟ್ರ ಮನದಲ್ಲಿ ಹಾದು ಹೋಗುತ್ತಾ ಇರುವಾಗಲೇ ಹೆಬ್ಬಾರರ ಮಾತು ಕೇಳಿತು.” ಮತ್ತೆ ಮನೆ ಕಡೆ ಎಲ್ಲ ಹುಷಾರ ಕಾಣ್ತು. ಮಾಣಿ ಮದುವೆ ಮಾಡ್ಕಂಡ ಸುದ್ದಿ ಕೇಳ್ದೆ.” ಭಟ್ರು ಮಾತಾಡಲಿಲ್ಲ. ಹೆಬ್ಬಾರರೇ ಮುಂದುವರಿಸಿದರು.

“ಮಂಜುಳಾ, ಇಕಾ ಮಗಾ ಈ ವಾಟೆ, ತಟ್ಟೆ ಎತ್ತಿಡಾ” ಎಂದು ಆಪ್ತತೆಯಿಂದ ಕರೆದು ಹೇಳಿದರು. ಆ ಮುದ್ದಾದ ಹುಡುಗಿ ಅವುಗಳನ್ನೆಲ್ಲಾ ಎತ್ತಿ ಕೊಂಡು ಹೋಗುವರೆಗೂ ಸುಮ್ಮನಿದ್ದ ಭಟ್ರು “ಸುಬ್ರಾಯ್ ಯಾವ ಕಡೆ ಹೆಣ್ಣು?” ಮಾತು ಗೊತ್ತಿಲ್ಲದೇ ಬಂದಿತ್ತು. “ಯ್ಯಾವ ಕಡೆದಾದ್ರೇನು ಹೆಣ್ಣು ಚೆಂದ. ಮನೆ ಸಂಭಾಳಿಸೋ ತಾಕತ್ತಿದ್ದು, ಸಾಕು ಈಗೆಲ್ಲ ಅದೆಲ್ಲ ನೋಡ್ತ ಕೂಂತ್ರೆ ಸಂತಾನ ಮುಂದುವರಿತಿಲ್ಲೇ. ಮಗ ಸೊಸೆ ಹಚ್ಚಂಡಿದ್ದು. ಗಂಡ ಜಾತಿ ಹೆಣ್ಣ ಜಾತಿ ಆಷ್ಟೇಯಾ? ಎಂದು ಅದನ್ನು ಮುಂದುವರಿಸೋ ಇಚ್ಛೆ ಇಲ್ಲದವರಂತೆ ಸೊಸೆ ಹೋದತ್ತಲೇ ಅಭಿಮಾನದ ನೋಟ ಬೀರಿದರು. ಭಟ್ರರಿಗೆ ಅಲ್ಲಿ ಹೆಚ್ಚು ಹೊತ್ತು ಕುಳಿತುಕೊಳ್ಳಲಾಗಲೆ ಇಲ್ಲ. ಇದೆಲ್ಲಾ ಹೇಗೆ ಏನು ಎತ್ತ ಸರಿಯೋ ತಪ್ಪೋ ಒಂದರಡೆನ್ನದೇ ಹಲವು ಹುಳಗಳು ತಲೆ ಕೊರೆಯಲಾರಂಭಿಸಿದವು.

“ಸುಬ್ರಾಯಾ ನಾ ಬತ್ನೋ.. ಮತ್ತೊಂದಿನ ಬತ್ತೆ” ಭಟ್ರು ಪಂಚೆ ಹೆಗಲಿಗೇರಿಸಿ ನಿಂತರು. ಮನೆ ಅಂಗಳದವವರೆಗೆ ಸುಬ್ರಾಯ ಹೆಬ್ಬಾರರು ಬಂದರೂ ಇಬ್ಬರೂ ಮಾತನಾಡಲಿಲ್ಲ. ಹೆಬ್ಬಾರರು ಕೈಸನ್ನೆಯಲ್ಲೇ ಸೈಕಲ್ ಏರಿದ ಭಟ್ಟರಿಗೆ ವಿದಾಯ ಹೇಳಿದರು. ಭಟ್ಟರ ಸೈಕಲ್ಲು ಮೋನಪ್ಪ ಮಾಸ್ತರ ಮನೆ ಕಡೆ ಹೊರಟಿತು. ಪೂಜೆಗೆಲ್ಲ ತಯಾರಿ ಮಾಡಿಕೊಂಡಿದ್ದ ಮಾಸ್ತರರು ಭಟ್ಟರನ್ನು ಕಂಡ ಕೂಡಲೇ ನಮಸ್ಕರಿಸಿ, ಎಳೆನೀರೊಂದನ್ನು ಕುಡಿಯಲು ಕೊಟ್ಟು ಕುಶಲೋಪರಿ ವಿಚಾರಿಸಿದರೂ ಅದೇನೋ ಉತ್ತರಿಸುತ್ತಿದ್ದ ಭಟ್ಟರಿಗೆ ಮನದ ತುಂಬಾ ಹೆಬ್ಬಾರರ ಸೊಸೆ ಮತ್ತು ತಮ್ಮ ಸೊಸೆಯ ಚಿತ್ರಗಳೇ ಕಾಣತೊಡಗಿದವು. ಹಾಗೂ ಹೀಗೂ ಪೂಜೆ ಸಾಂಗವಾಗಿ ಮುಗಿಸಿಕೊಟ್ಟರೂ ಮಾಸ್ತರರಿಗೆ ಇಂದು ಭಟ್ಟರ ಇಲ್ಲದ ಆತುರ ಕಂಡು ಆಶ್ಚರ್ಯ ಜೊತೆಗೆ ಕಸಿವಿಸಿ. ಮೋನಪ್ಪ ಮಾಸ್ತರ ಕೊಟ್ಟ ಪೂಜಾ ದೇಣಿಗೆ ಪಡೆದು ಚೀಲ ಸೈಕಲ್ಲಿಗೆ ಏರಿಸಿ ಹೊರಟೇ ಬಿಟ್ಟರು. ಪ್ರತಿಸಲವೂ ಬಂದಾಗ ಒಂದಿಷ್ಟು ಹರಟೆ ಹೊಡೆದು ಹೋಗುತ್ತಿದ್ದ ಭಟ್ಟರ ಇಂದಿನ ಮನಸ್ಥಿತಿ ಮಾಸ್ತರರಿಗೆ ಅರ್ಥವಾಗಲಿಲ್ಲ.

ಭಟ್ಟರು ಪೆಡಲ್ ತುಳಿದೇ ತುಳಿದರು. ಶಾಸ್ತ್ರಾಧ್ಯಯನ ಮಾಡದ ಸುಬ್ರಾಯ ಎಷ್ಟು ಮಾರ್ಮಿಕವಾಗಿ ಮಾತಾಡಿದ?ಮುಟ್ಟಿಸಿ ಕೊಳ್ಳುವುದೆಂದರೆ ಮನಸ್ಸನ್ನೋ ದೇಹವನ್ನೋ? ಕೊಡಸಣಿಯಲ್ಲಿ ಮಗ ಮನೆ ಮಾಡಿದಂದಿನಿಂದ ತಾನು ಅಲ್ಲಿಗೆ ಕಾಲಿಡುತ್ತಿಲ್ಲ. ಯಾರು ಬಂದು ಕರೆದರೂ ಕೊಡಸಣಿಯಲ್ಲಿಯ ಯಾವ ದೇವತಾಕಾರ್ಯದ ಕೆಲಸಕ್ಕೂ ಹೋಗುತ್ತಿಲ್ಲ, ಯೋಚಿಸುತ್ತ ಸೈಕಲ್ಲು ತುಳಿಯುತ್ತಲೇ ಇದ್ದರು ಯಾವುದೋ ಮಾಯೆಗೆ ಒಳಗಾದಂತೆ. ಒಮ್ಮೆಲೆ ಎಡಗಾಲಲ್ಲಿಯ ಚಪ್ಪಲಿಯ ಅಂಗುಟ ಸೈಕ್ಲಲಿಗೆ ಪೆಡ¯ಗೆ ಸಿಕ್ಕು ಕಿತ್ತು ಬಂತು. ಸೈಕಲ್ಲು ನಿಲ್ಲಿಸಿ ಚಪ್ಪಲಿಯ ಕೈಯಲ್ಲಿ ಹಿಡಿದು ಕಿತ್ತ ತೂಬಿನಲ್ಲಿ ತೂರಿ ಸರಿ ಮಾಡಿಕೊಂಡರು. ಸೃಷ್ಟಿ ಪ್ರಕ್ರಿಯೆಯ ವಿಭಿನ್ನ ಆಯಾಮ ಗೃಹಿಸಿದಂತೆ ಎಲ್ಲವೂ ಮನದ ಮಾಯೆಯಲ್ಲದೇ ಬೇರಲ್ಲ ಎನ್ನಿಸಿಬಿಟ್ಟತು. ಆ ಪ್ರಜ್ಞೆಗೆ ಒಮ್ಮೆಲೇ ಅವಕ್ಕಾದರು. ಅರೇ ಇದ್ಯಾವ ದಾರಿಯಲ್ಲಿ ಬಂದೇ ಎನ್ನುವಷ್ಟರಲ್ಲೇ ಸೈಕಲ್ಲು ಕೊಡಸಣಿಗೆ ಬಂದು ತಲುಪಿತ್ತು. ವಿಶಾಲ ಭಾಗಾಯತದ ಮನೆಯೊಂದರ ಮುಂದೆ ಭಟ್ಟರು ಸೈಕಲ್ಲು ಇಳಿದರು. ಆ ಮನೆಯ ಬಾಗಿಲು ತಮಗಾಗಿಯೇ ತೆರೆದಿತ್ತೋ ಎಂಬಂತೆ ಭಟ್ಟರು ಆ ಮನೆಯೊಳಗೆ ಎದ್ದು ನಡೆದರು.

‍ಲೇಖಕರು nalike

August 2, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. R S Nayak, Bhatkal

    ತುಂಬಾ ಅದ್ಭುತವಾದ ಕತೆ ನಾಗರೇಖಾ. ವಸ್ತು, ಅದನ್ನು ಪ್ರಸ್ತುತ ಪಡಿಸಿದ ರೀತಿ, ಬರವಣಿಗೆಯಲ್ಲಿನ ಸಂಯಮ ಎಲ್ಲವೂ ಇಷ್ಟವಾಯಿತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: