ಪಿ ಶೇಷಾದ್ರಿ ನಿರ್ದೇಶನದ, ಶಿವರಾಮ ಕಾರಂತರ ‘ಮೂಕಜ್ಜಿಯ ಕನಸುಗಳು’ ಚಿತ್ರದ ಬಗ್ಗೆ ಪ್ರೊ ಸಿ ಎನ್ ಆರ್ ಅವರು ವಿವರವಾದ ನೋಟವನ್ನು ಹರಿಸಿದ್ದರು.
ಇದರಲ್ಲಿ ಒಂದು ಚಿತ್ರ ಮೂಲ ಕೃತಿಗೆ ನಿಷ್ಠವಾಗಿರಬೇಕೇ ಬೇಡವೇ? ಎನ್ನುವ ಪ್ರಶ್ನೆಯನ್ನು ಮುಂದುಮಾಡಿದ್ದರು.
ಇದಕ್ಕೆ ಜೋಗಿ ಬರೆದ ಪ್ರತಿಕ್ರಿಯೆ ಇಲ್ಲಿದೆ
ಈ ಚರ್ಚೆಯಲ್ಲಿ ನೀವೂ ಭಾಗವಹಿಸಬಹುದು
avadhimag@gmail.com ಗೆ ನಿಮ್ಮ ಅನಿಸಿಕೆಯನ್ನುಕಳಿಸಿಕೊಡಿ

ನಮಸ್ಕಾರ
‘ಮೂಕಜ್ಜಿಯ ಕನಸುಗಳು’ ಚಿತ್ರವನ್ನು ನೋಡಿ ನೀವು ಬರೆದ ವಿಸ್ತಾರವಾದ ಟಿಪ್ಪಣಿಯನ್ನು ಓದಿ ಸಂತೋಷವಾಯಿತು. ಈ ದಿನಗಳಲ್ಲಿ ಅಷ್ಟೊಂದು ಸೂಕ್ಷ್ಮವಾಗಿ ನೋಡಿ ಬರೆಯುವವರು ವಿರಳವೆಂದೇ ಹೇಳಬೇಕು. ನನ್ನಂಥ ಸಿನಿಮಾ ಮತ್ತು ಸಾಹಿತ್ಯ ಪ್ರಿಯರಿಗೆ ಅದು ಮತ್ತಷ್ಟು ಆಲೋಚನೆಗಳನ್ನು ಹುಟ್ಟುಹಾಕುತ್ತದೆ.
ಮೂಕಜ್ಜಿಯ ಕನಸುಗಳು ಕಾದಂಬರಿಯಲ್ಲಿರುವ ವೈಚಾರಿಕತೆಯನ್ನು ಸಿನಿಮಾದಲ್ಲಿ ಹೊರಗಿಡಲಾಗಿದೆ. ಆ ಕಾದಂಬರಿಯ ಮೈಕಟ್ಟೇ ವೈಚಾರಿಕತೆಯದು ಎಂಬುದು ನಿಮ್ಮ ವಿಶ್ಲೇಷಣೆ. ಕಾರಂತರ ಮಿಕ್ಕ ಕಾದಂಬರಿಗಳಿಗಿಂತ ಭಿನ್ನವಾದ, ವಿಚಾರವಂತಿಕೆಯ ನೆಲೆಯಲ್ಲೇ ಬೆಳೆಯುತ್ತಾ ಹೋಗುವ ಮೂಕಜ್ಜಿಯ ಕನಸುಗಳು ಕಾದಂಬರಿಯ ಆತ್ಮ ವೈಚಾರಿಕತೆಯಲ್ಲಿದೆಯೋ ಮೂಕಜ್ಜಿಯ ನೆನಪುಗಳಲ್ಲಿದೆಯೋ? ವೈಚಾರಿಕತೆ ಅನ್ನುವುದು ಒಂದು ಕೃತಿಯ ದೇಹವೇ ಆದಾಗ ಏನಾಗುತ್ತದೆ? ಒಂದು ಜೀವನವನ್ನು ನೋಡಿದಾಗ, ಓದಿದಾಗ, ಗ್ರಹಿಸಿದಾಗ ಅದರಿಂದ ವೈಚಾರಿಕತೆ ಹುಟ್ಟಬೇಕೇ ವಿನಾ, ವೈಚಾರಿಕತೆಯು ಮಾತಿನಲ್ಲಿ ವ್ಯಕ್ತವಾದರೆ ಅದು ಶುಷ್ಕವೂ ನೀರಸವೂ ಆಗುವುದಿಲ್ಲವೇ?
ಉದಾಹರಣೆಗೆ ಯಶವಂತ ಚಿತ್ತಾಲರ ‘ಶಿಕಾರಿ’ ಕಾದಂಬರಿ. ಅಲ್ಲಿ ಆರಂಭದಲ್ಲಿ ನಾಗಪ್ಪನ ವೈಚಾರಿಕ ಚಿಂತನೆಯೊಂದಿಗೆ ಶುರುವಾಗುವ ಕಾದಂಬರಿ, ನಂತರದಲ್ಲಿ ಅದನ್ನು ಮರೆಸುವಷ್ಟರ ಮಟ್ಟಿಗೆ ಜೀವನದೊಡನೆ ಬೆರೆತುಹೋಗುತ್ತದೆ. ಶಿಕಾರಿಯನ್ನು ಸಿನಿಮಾ ಮಾಡಹೊರಡುವವನು ಅದರ ಆರಂಭದ ಹತ್ತಿಪ್ಪತ್ತು ಪುಟಗಳನ್ನು ಮರೆತುಬಿಡಬೇಕಾಗುತ್ತದೆ. ಸಿನಿಮಾ ಕ್ರಿಯೆಯನ್ನು ಆಧರಿಸಿದ್ದಾಗಿರುವುದರಿಂದ, ಅಲ್ಲಿ ಕ್ರಿಯೆಯ ಮೂಲಕವೇ ವೈಚಾರಿಕತೆ ಹೊಮ್ಮಬೇಕು.
ಉದಾಹರಣೆಗೆ ಈ ಕೆಳಗಿನ ಪ್ಯಾರಾ ನೋಡೋಣ:

ಇಂಥ ವೈಚಾರಿಕತೆ ಸಿನಿಮಾ ಮಾಧ್ಯಮಕ್ಕೆ ಒಗ್ಗುವಂಥದ್ದು ಅಂತ ನನಗಂತೂ ಅನ್ನಿಸುತ್ತಿಲ್ಲ. ಎಂಥ ಪ್ರಖರ ವೈಚಾರಿಕತೆ ಉಳ್ಳ ನಿರ್ದೇಶಕನೂ ಆ ವೈಚಾರಿಕತೆ ತನ್ನ ಚಿತ್ರದ ಪಾತ್ರಗಳ ಮೂಲಕ, ಘಟನೆಗಳ ಮೂಲಕ ಸೂಚ್ಯವಾಗಿ ಹೊಮ್ಮುವಂತೆ ಮಾಡಬಹುದೇ ಹೊರತು ಅದನ್ನು ವಾಚ್ಯವಾಗಿ ಹೇಳಲಿಕ್ಕೆ ಸಾಧ್ಯವಿಲ್ಲ. ಹಾಗೇನಾದರೂ ಹೇಳಲು ಹೊರಟರೆ, ಆ ಸಿನಿಮಾ ವೈಚಾರಿಕತೆಯ ಜಾಹೀರಾತಿನ ಥರ ಕಂಡೀತೆಂದು ಅನ್ನಿಸುತ್ತದೆ.
ರಿತ್ವಿಕ್ ಘಟಕ್ ನಿರ್ದೇಶಿಸಿದ ‘ಅಜಾಂತ್ರಿಕ್’ ಸಿನಿಮಾ ನೋಡಿದ್ದರೆ, ಸುಬೋಧ್ ಘೋಷ್ ಬರೆದ ಸಣ್ಣಕತೆಗೂ ಆ ಚಿತ್ರಕ್ಕೂ ಇರುವ ವ್ಯತ್ಯಾಸ ಮತ್ತು ಸಾಮ್ಯ ಗೊತ್ತಾಗುತ್ತದೆ. ಕತೆಯನ್ನು ಓದಿ ಸಿನಿಮಾ ನೋಡುವವರ ನಿರೀಕ್ಷೆ ಕೊಂಚ ಹೆಚ್ಚಿಗೇ ಇರುತ್ತದೆ ಎಂದು ನನ್ನ ಅನಿಸಿಕೆ. ಸಿನಿಮಾ ನೋಡಿ ಕತೆ ಓದಿದಾಗ ನಮಗೆ ಆ ಕತೆ ಸಿನಿಮಾದಷ್ಟು ಗಾಢವಾಗಿ ತಟ್ಟದೇ ಹೋಗಬಹುದು. ಅದಕ್ಕೆ ಕಾರಣ ಎರಡೂ ಮಾಧ್ಯಮಗಳನ್ನು ನಾವು ಗ್ರಹಿಸುವ ಕ್ರಮ.
ಸಿನಿಮಾವನ್ನು ನಾವು ಬದುಕಿನ ಹಾಗೆ, ಶಬ್ದ, ದೃಶ್ಯ, ಚಲನೆ ಮತ್ತು ವಾಸ್ತವದ ಮುಖಾಂತರ ಗ್ರಹಿಸುತ್ತೇವೆ. ಕತೆಯನ್ನು ಓದುತ್ತೇವೆ. ಕತೆಯಲ್ಲಿ ನಮಗೆ ದರ್ಶನವಾಗುವ ಮೂಕಜ್ಜಿ ನಾವೆಲ್ಲೋ ಕಂಡ ಮೂಕಜ್ಜಿಯಾಗಿರುತ್ತಾಳೆ. ಸಿನಿಮಾದಲ್ಲಿ ಮೂಕಜ್ಜಿಯ ರೂಪವನ್ನು ನಿರ್ದೇಶಕ, ಛಾಯಾಗ್ರಾಹಕ ಸ್ಥಿರಗೊಳಿಸುತ್ತಾನೆ. ಅಲ್ಲಿಂದಲೇ ನಮ್ಮ ಸಂಘರ್ಷ ಶುರುವಾಗುತ್ತದೆ.
ಬಹುಶಃ ಈ ಕಾರಣಕ್ಕೇ ನಿಮಗೆ ಮೂಕಜ್ಜಿಯ ಕನಸು ಸಿನಿಮಾಕ್ಕೂ ಕತೆಗೂ ಅಂತರವಿದೆ ಅನ್ನಿಸಿರಬಹುದು. ಆದರೆ ಸಿನಿಮಾವನ್ನು ತನ್ನ ಅಭಿವ್ಯಕ್ತಿಯ ಕ್ರಮ, ತನ್ನ ಸೃಜನಶೀಲ ಮಾಧ್ಯಮ ಎಂದು ಭಾವಿಸಿದ ಯಾವ ನಿರ್ದೇಶಕ ಕೂಡ ಅಲ್ಲಿ ಹೇಳಿದ್ದನ್ನು ಯಥಾವತ್ತಾಗಿ ಇಲ್ಲಿ ತೋರಿಸಲಾರ. ಅದು ಅವನ ಅಹಂಕಾರವಲ್ಲ, ಅನಿವಾರ್ಯ ಎಂದೇ ನಾನು ಭಾವಿಸಿದ್ದೇನೆ. ಸಿನಿಮಾ ಎಂಬುದು ಕೃತಿಯ ಅನುವಾದ ಅಲ್ಲ, ಕೃತಿಯೊಂದಿಗೆ ನಡೆಸುವ ಸಂವಾದ ಎಂಬುದು ನನ್ನ ನಂಬಿಕೆ.
ಸಿರಿಗೆರೆಯ ನೀರಿನಲಿ ಬಿರಿದ ತಾವರೆಯಲ್ಲಿ ಕೆಂಪಾಗಿ ನಿನ್ನ ಹೆಸರು ಎಂಬ ಸಾಲನ್ನು ಒಂದು ಕೆರೆ, ಅದರ ತುಂಬ ನೀರು, ಅದರಲ್ಲೊಂದು ತಾವರೆ- ತೋರಿಸಿ ನಂತರ ಯಾವುದೋ ಗೋಡೆಯಲ್ಲಿ ಬರೆದ ಆಕೆಯ ಹೆಸರು ತೋರಿಸಿ ದೃಶ್ಯಮಾಧ್ಯಮದಲ್ಲಿ ಹೇಳಲು ಯತ್ನಿಸಿದ್ದನ್ನು ನಾವು ನೋಡಿದ್ದೇವೆ. ‘ಕಾನೂರು ಹೆಗ್ಗಡಿತಿ’ ಕಾದಂಬರಿಯನ್ನು ಸಿನಿಮಾ ಮಾಡಲು ಹೊರಟಾಗ ಅದು ಸಂಕುಚಿತಗೊಂಡು ಕಾನೂರೇ ಆಗಿ ಉಳಿದದ್ದನ್ನೂ ಗಮನಿಸಿದ್ದೇವೆ. ‘ಲವ್ ಇನ್ ದಿ ಟೈಮ್ ಆಫ್ ಕಾಲೆರಾ’ವನ್ನು ಮೈಕ್ ನ್ಯೂವೆಲ್ ಸಿನಿಮಾ ರೂಪಕ್ಕೆ ತಂದಿದ್ದಾನೆ. ನೀವು ಅದನ್ನೊಮ್ಮೆ ನೋಡಬೇಕು ಸರ್.
ಸಿನಿಮಾ ಕೃತಿಗೆ ನಿಷ್ಠವಾಗಿರಬೇಕೋ ಬೇಡವೋ ಎಂಬುದು ಬಹಳ ಹಳೆಯ ಚರ್ಚೆ. ನೀವು ಅದನ್ನು ಮತ್ತೆ ಶುರುಮಾಡಿರುವುದು ಸಂತೋಷ. ಈ ಸಲದ ಚರ್ಚೆಯಲ್ಲಿ ಹೊಸ ವಿಚಾರಗಳೇನಾದರೂ ಹುಟ್ಟಿಯಾವು. ಅಷ್ಟಕ್ಕೂ ನಮ್ಮಲ್ಲಿ ಮೂಲಕ್ಕೆ ನಿಷ್ಠವಾಗಿದ್ದದ್ದು ಪೌರಾಣಿಕ ಸಿನಿಮಾಗಳು. ಆದರೆ ಸಂಪೂರ್ಣ ರಾಮಾಯಣ ಕೂಡ ಶ್ರೀರಾಮನು ವಾಲಿಯನ್ನು ಕೊಂದ ಔಚಿತ್ಯದ ಕುರಿತ ವೈಚಾರಿಕ ಚರ್ಚೆಯನ್ನು ಹತ್ತಿರಕ್ಕೂ ಸುಳಿಯಲು ಬಿಡಲಿಲ್ಲ ಅನ್ನುವುದು ಗಮನಾರ್ಹ.
ಥ್ಯಾಂಕ್ಸ್ ಸರ್.
ಜೋಗಿ






ಪ್ರಿಯ ಜೋಗಿ ಅವರಿಗೆ:
ನಮಸ್ಕಾರ. ನಿಮ್ಮ ಗಂಭೀರ ಹಾಗೂ ಅನುಭವವನ್ನು ಆಧರಿಸಿದ ಪ್ರತಿಕ್ರಿಯೆಗಾಗಿ ಧನ್ಯವಾದಗಳು. ಇಂದು ನಿಮ್ಮ ಲೇಖನವನ್ನು ಮತ್ತೊಮ್ಮೆ ಓದಿದಾಗ ಮತ್ತೆ ಕೆಲವು ಪ್ರಶ್ನೆಗಳು /ಅನಿಸಿಕೆಗಳು ಉದ್ಭವಿಸಿದುವು; ಅವುಗಳನ್ನು ನಿಮ್ಮೊಡನೆ/ ಇತರ ಓದುಗರೊಡನೆ ಹಂಚಿಕೊಳ್ಳುತ್ತಿದ್ದೇನೆ –ಕೇವಲ ನನ್ನ ಅರಿವನ್ನು ವಿಸ್ತರಿಸಿಕೊಳ್ಳಲು.
ನೀವು ಕಾದಂಬರಿಯಿಂದ ಒಂದು ಮುಖ್ಯ ಹಾಗೂ ದೀರ್ಘ ಭಾಗವನ್ನು ಉದ್ಧರಿಸಿ, ಇದನ್ನು ಚಲನಚಿತ್ರದಲ್ಲಿ ಹೇಗೆ ಅಳವಡಿಸಿಕೊಳ್ಳಲು ಸಾಧ್ಯ ಎಂದು ಕೇಳುತ್ತಾ, ನೇರ ವೈಚಾರಿಕತೆಗೆ ದೃಶ್ಯಮಾಧ್ಯಮದಲ್ಲಿ ಅವಕಾಶವಿಲ್ಲ, ಅದನ್ನು ಸೂಚಿಸಬಹುದು ಅಷ್ಟೇ, ಎಂದು ಮಂಡಿಸಿದ್ದೀರಿ. ಹಾಗಾದರೆ:
ಅ) ಅನೇಕ ವರ್ಷಗಳ ಹಿಂದೆ ಬಂದ ಹಾಗೂ ಕೋಟ್ಯಾಂತರ ಜನರು ವೀಕ್ಷಿಸಿ ಆನಂದಿಸಿದ “ಮಹಾಭಾರತ” ಧಾರಾವಾಹಿಯಲ್ಲಿ, ಕೃಷ್ಣನ ಗೀತೋಪದೇಶ ಸುಮಾರು ಹತ್ತು ಕಂತುಗಳಲ್ಲಿ ಬಂದಿತು ಎಂದು ನೆನಪು. ಕೄಷ್ಣನ ಉಪದೇಶವು ನೇರ ವೈಚಾರಿಕತೆಯಲ್ಲದೆ ಬೇರೇನೂ ಅಲ್ಲ, ಅದಕ್ಕೆ ಯಾವ ದೃಶ್ಯಸ್ವರೂಪವೂ ಇರಲಿಲ್ಲ. ಅದನ್ನು ಪಂಡಿತ-ಪಾಮರರೆಲ್ಲರೂ ಮೆಚ್ಚಿಕೊಂಡದ್ದು ಹೇಗೆ?
ಆ) ನೀವು ಯಕ್ಷಗಾನವನ್ನು ಪ್ರಸ್ತಾಪಿಸಿದ್ದೀರಿ. ಪ್ರಾರಂಭದಲ್ಲಿ ಜನಸಾಮಾನ್ಯರ ಕಲೆಯಾಗಿದ್ದ ಯಕ್ಷಗಾನ ಇತ್ತೀಚೆಗೆ ಬದಲಾಗಿದ್ದು, ಅದರಲ್ಲಿ ವೈಚಾರಿಕ ಸಂವಾದ (ನ್ಯಾಯಾಲಯಗಳಲ್ಲಿ ನಡೆಯು
ಇ) ಚಲನಚಿತ್ರಗಳಲ್ಲಿಯೂ, ಹಿಂದಿನ ಕನ್ನಡ “ಬಭ್ರುವಾಹನ” ಚಿತ್ರದಿಂದ ಪ್ರಾರಂಭಿಸಿ ಇತ್ತೀಚಿನ “ಪಿಂಕ್” ಹಿಂದಿ ಚಿತ್ರದ ವರೆಗೆ ದೀರ್ಘ ಸಂಭಾಷಣೆಗಳು ಹಾಗೂ ’ಭಾಷಣ’ಗಳು ಇವುಗಳನ್ನು ಪ್ರೇಕ್ಷಕರು ಮೆಚ್ಚಿದ್ದರು, ಮೆಚ್ಚಿದ್ದಾರೆ. ಯಾವ ಕಾರಣಕ್ಕಾಗಿ?
ಈ) ದೃಶ್ಯಮಾಧ್ಯಮವೇ ಆದ ನಾಟಕಗಳಲ್ಲಿಯೂ, “ಭಕ್ತ ಕಬೀರ್,” “ಭಕ್ತ ಪ್ರಹ್ಲಾದ” ಇತ್ಯಾದಿಗಳಲ್ಲಿ ದೀರ್ಘ ’ಭಾಷಣ’ಗಳಿರುವುದು ನಿಮಗೆ ಗೊತ್ತು. ಅವುಗಳನ್ನು ನೋಡುಗರು ಏಕೆ ಇಷ್ಟಪಟ್ಟು ನೋಡುತ್ತಾರೆ?
ಅರ್ಥಾತ್, ನಾನು ಹೇಳುವುದು ಇಷ್ಟೇ: ಓದುವ ಸಾಹಿತ್ಯದಲ್ಲಿ ಹೇಗೋ ಹಾಗೆ ನೋಡುವ/ಕೇಳುವ ದೃಶ್ಯಮಾಧ್ಯಮಗಳಲ್ಲಿಯೂ ನೇರ ವೈಚಾರಿಕತೆಗೆ ಸ್ಥಾನವಿದೆ. ಏಕೆಂದರೆ, ಮನುಷ್ಯರೆಲ್ಲರೂ ಕೇವಲ ಭಾವನಾಜೀವಿಗಳಲ್ಲ; ಅವರ ಮಸ್ತಿಷ್ಕಕ್ಕೂ ಅವರು ಏನನ್ನಾದರೂ ಬಯಸುತಾರೆ. ಈ ಹಿನ್ನೆಲೆಯಲ್ಲಿ, ನೀವು ಉದ್ಧರಿಸಿರುವ ಅಜ್ಜಿಯ ದೀರ್ಘ ಹೇಳಿಕೆಯನ್ನು ಹಾಗೆಯೇ (ಅಥವಾ ಅದರ ಒಂದು ಭಾಗವನ್ನು) ಚಿತ್ರದಲ್ಲಿ ಅಜ್ಜಿಯು ಹೇಳಿದಂತೆ ತೋರಿಸಿದ್ದರೆ ಏನು ನಷ್ಟವಾಗುತ್ತಿತ್ತು?
ಕೊನೆಯದಾಗಿ ಒಂದು ಪ್ರಶ್ನೆ; ಇದು ವ್ಯಂಗ್ಯವಲ್ಲ: ಇಂದಿನ ಪತ್ರಿಕಾ ಸಂಪಾದಕರು ’ವಿಮರ್ಶೆಯನ್ನು ಯಾರು ಓದುತ್ತಾರೆ? ಎಂಬ ಪ್ರಶ್ನೆಯನ್ನು ಹಾಗೂ ’ಯಾರೂ ಓದುವುದಿಲ್ಲ’ ಎಂಬ ಉತ್ತರವನ್ನು ತಾವೇ ಕೊಟ್ಟುಕೊಂಡು, ಗಂಭೀರ ವಿಮರ್ಶೆಯನ್ನು/ ಚಿಂತನೆಯನ್ನು ಹೊರಗಿಟ್ಟಂತೆ, ಚಿತ್ರ ನಿರ್ದೇಶಕರೂ ’ಗಂಭೀರ ವಿಚಾರಗಳು ಪ್ರೇಕ್ಷಕರಿಗೆ ಬೇಕಿಲ್ಲ’ ಎಂದು ತಾವೇ ನಿರ್ಧರಿಸಿ ಅವನ್ನು ತಮ್ಮ ಚಿತ್ರಗಳಿಂದ ಹೊರಗಿಡುತ್ತಿದ್ದಾರೆಯೇ?
ಇಷ್ಟನ್ನು ಬರೆಯಲು ಪ್ರೇರೇಪಿಸಿದ ನಿಮ್ಮ ಲೇಖನಕ್ಕೆ ಕೃತಜ್ಞ.
–ಸಿ. ಎನ್. ರಾಮಚಂದ್ರನ್
ಸಿ ಎನ್ ಆರ್ ಸರ್
ಬಹುಶಃ ನಿಮಗೆ ಜೋಗಿಯವರ ಮಾತು ಅರ್ಥವಾಗಿಲ್ಲ ಅನ್ನಿಸುತ್ತದೆ. “ಒಂದು ಜೀವನವನ್ನು ನೋಡಿದಾಗ, ಓದಿದಾಗ, ಗ್ರಹಿಸಿದಾಗ ಅದರಿಂದ ವೈಚಾರಿಕತೆ ಹುಟ್ಟಬೇಕೇ ವಿನಾ, ವೈಚಾರಿಕತೆಯು ಮಾತಿನಲ್ಲಿ ವ್ಯಕ್ತವಾದರೆ ಅದು ಶುಷ್ಕವೂ ನೀರಸವೂ ಆಗುವುದಿಲ್ಲವೇ?”
ಹತ್ತು ಕಂತುಗಳಲ್ಲಿ ಬಂದ ಗೀತೋಪದೇಶ, ಯಕ್ಷಗಾನದ ಸಂವಾದ, “ಬಭ್ರುವಾಹನ” ಚಿತ್ರದಿಂದ ಪ್ರಾರಂಭಿಸಿ ಇತ್ತೀಚಿನ “ಪಿಂಕ್” ಹಿಂದಿ ಚಿತ್ರದ ವರೆಗೆ ದೀರ್ಘ ಸಂಭಾಷಣೆಗಳು ಹಾಗೂ ’ಭಾಷಣ’ಗಳು ಜೋಗಿ ಹೇಳಿದ ಹಾಗೆ ಮಾತಿನಲ್ಲಿ ವ್ಯಕ್ತವಾದ ವೈಚಾರಿಕತೆ ಅಷ್ಟೇ.
ಜೋಗಿ – ಸಿನಿಮಾದಲ್ಲಿ ವೈಚಾರಿಕತೆಯನ್ನು ತೋರಿಸುವ ಉತ್ಕೃಷ್ಟ ವಿಧಾನಗಳಿವೆ /ಉದಾಹರಣೆಗಳಿವೆ. ಅದರಲ್ಲಿ ಗೆದ್ದವರನ್ನೇ ಉತ್ತಮ ನಿರ್ದೇಶಕ ಅನ್ನುವುದು. ಬರಹವು ಹೇಗೆ ಓದುಗನನ್ನು ವಿಚಾರ ಚಿಂತನೆಗೆ ಹಚ್ಚುತ್ತದೆಯೋ ಹಾಗೆಯೇ ಚಲನ ಚಿತ್ರವೂ ನೋಡುಗನನ್ನು ವಿಚಾರಕ್ಕೆ ಹಚ್ಚುತ್ತದೆ. ವೈಚಾರಿಕತೆ ಅಂದ ತಕ್ಷಣ ಅದು ಏಕರೂಪದ್ದು ಮತ್ತು ಬರಹದಲ್ಲಿರುವುದು ಎಂದುಕೊಂಡರೆ ಇಂತಹ ತೀರ್ಮಾನಗಳು ಉಂಟಾಗುತ್ತವೆ. ಬೇರೆ ಬೇರೆ ಕಲೆಯ ವೈಚಾರಿಕತೆಯ ಸ್ವರೂಪ ಬೇರೆ ಬೇರೆ ರೀತಿಯದು. ಅದನ್ನು ಗುರುತಿಸದಿದ್ದರೆ ಕಾದಂಬರಿಯ ಸಾಲುಗಳು ಸಿನಿಮಾದಲ್ಲಿ ತರಲು ಸಾಧ್ಯವಿಲ್ಲ ಅನ್ನುವ ವಾದ ಹೊರಡುತ್ತದೆ. ಒಂದು ಪೇಂಟಿಂಗ್ ಒಂದು ನೃತ್ಯ ಒಂದು ಸಂಗೀತ ಕೂಡಾ ವಿಚಾರವಾದದ ವಾಹಿನಿಯಾಗಬಲ್ಲದು/ಆಗಿದೆ. ಅದನ್ನು ಭಿನ್ನ ನೆಲೆಯಲ್ಲಿ ಗುರುತಿಸಬೇಕು. ಚೀನಾದ ಸಮಾಜವಾದದ ಕುರಿತಾದ ವಿಮರ್ಶಾತ್ಮಕ ಚಲನ ಚಿತ್ರಗಳು (ಉದಾಹರಣೆಗೆ ಟು ಲಿವ್ -https://www.youtube.com/watch?v=ZB7HYhUpDz8&t=550s ) ನಿರ್ದೇಶಕನ ವೈಚಾರಿಕತೆಯನ್ನು – ಅಂದರೆ ನೋಡುಗನ ಜೊತೆಗಿನ ಸಂವಾದ ಸಾಧ್ಯವಾಗಿಸುವ – ಪರಿಣಾಮಕಾರಿಯಾಗಿ ಸೆರೆ ಹಿಡಿದಿವೆ. ಅದನ್ನೇ ಲೇಖನವಾಗಿ /ಅಥವಾ ಕಾದಂಬರಿಯಾಗಿ ಬರೆದರೆ – ನೀವು ಉದಾಹರಿಸಿದ ಪುಟದಂತೆ – ಉತ್ಕೃಷ್ಟ ವೈಚಾರಿಕತೆಯ ಉದಾಹರಣೆ ಆಗುತ್ತದೆ.
ಪ್ರತಿಭಾ ನಂದಕುಮಾರ್