
ಮಂಜುನಾಥ್ ಕಾಮತ್
ಮುಳಿ ಮಾಡಿನ ಮನೆಗಿಂದು ಬೆಳಕು ಬಂತು…..
ಇದಕ್ಕೆ ಪ್ರೇರಣೆಯಾಗಿದ್ದು ಅದೊಂದು ಕೋಳಿ ಹಾಗೂ ಗಂಡು ಮೊಲದ ಮರಿ…..
ಕಲ್ಲೂರು ನಾಗೇಶ್ ಸರ್ ಕರೆ ಮಾಡಿದ್ದರು. ಹಳೆಯ ಗುತ್ತಿನ ಮನೆಗಳ ಫೋಟೋ ಬೇಕಿತ್ತು. ನಮ್ಮನೆಯ ಸಮೀಪ ಒಂದು ಮನೆಯಿದೆ. ಅದರ ಫೋಟೋ ತೆಗಿಯೋಕಂತ ಹೋಗಿದ್ದೆ. ಅಲ್ಲಿಂದ ಮುಂದೆ ತೋಮಣ್ಣನ ಗುಡಿಸಲು ದಾಟಿ ಹಪ್ಪಳ ಸಂಡಿಗೆ ಮಾಡುವ ನನ್ನ ಮಾಮನ ಮನೆಗೆ ಹೋಗಿ ಬಂದಿದ್ದೆ.
ಅಲ್ಲಿಂದ ಮರಳುವಾಗ ಮತ್ತದೇ ಮುಳಿ ಮಾಡ ಗುಡಿಸಲಿನ ದಾರಿ. ಗೂಡಿನ ಮೇಲೆ ಹುಂಜವೊಂದು ಚಂದವಾಗಿ ಕೂತಿತ್ತು. ಅದರದೊಂದು ಫೋಟೋ ತೆಗೆದೆ. “ಮುಳಿ ಮಾಡು ಮತ್ತು ಕೋಳಿ ಗೂಡು” ಎಂಬ ಸ್ಟೇಟಸ್ಸಿನೊಂದಿಗೆ ಫೇಸ್ಬುಕ್ ಪೋಸ್ಟ್ ಹಾಕಿದ್ದೆ.

ಅರ್ದ ಗಂಟೆಯಾಗಿತ್ತೇನೋ. Focus Raghu ಕರೆ ಮಾಡಿದ್ದರು. “ನೀವೀಗ ಹಾಕಿರೋ ಮುಳಿ ಮಾಡಿನ ಮನೆ ಎಲ್ಲಿ? ಅಲ್ಲಿ ಪ್ರಿ ವೆಡ್ಡಿಂಗ್ ಶೂಟ್ ಮಾಡ್ಬಹುದಾ” ಎಂದು ಕೇಳಿದರು. ಅದೇ ಸಂಜೆ ಮತ್ತದೇ ಮನೆಗೆ ಬಂದು ತೋಮಣ್ಣನ ಬಳಿ ವಿಚಾರಿಸಿದೆ. ಅವರೂ ಒಪ್ಪಿದರು. ಮರು ದಿನ ಮುಂಜಾನೆಯೇ ಫೋಕಸ್ ರಾಘು ಬರುವುದಾಗಿ ತಿಳಿಸಿದರು.
ಸೂರ್ಯಾಸ್ತ ಹಾಗೂ ಮರುದಿನದ ಸೂರ್ಯೋದಯದ ನಡುವೆ ಮತ್ತೊಂದು ಫೋಟೋ ಹಾಕಿದ್ದೆ. “ಅಪರೂಪದಲ್ಲೇ ಅಪರೂಪವಾಗಿರುವ ಮುಳಿ ಮಾಡಿನ ಮನೆ ಕಂಡು ಸಂತೋಷ ಪಡಲೋ? ಅವರ ಈ ಪರಿಸ್ಥಿತಿಗಾಗಿ ದುಃಖಿಸಲೋ?”
ಮರುದಿನ ಜೋಡಿಗಳೊಂದಿಗೆ ಬಂದಿದ್ದ ರಾಘು ಸರ್ ಅದೇ ಭಾವನೆಯನ್ನು ವ್ಯಕ್ತ ಪಡಿಸಿದರು. “ರಾತ್ರಿ ನಿದ್ದೆಯೂ ಬಂದಿಲ್ಲ. ಅವರ ಪರಿಸ್ಥಿತಿಯ ಮುಂದೆ ನಾನು ಹೇಗೆ ಫೋಟೋ ತೆಗೆಯಲಿ ಎಂಬ ಚಿಂತೆ. ನಾನೂ ಹುಟ್ಟಿ ಬೆಳೆದದ್ದು ಮುಳಿ ಮಾಡಿನ ಅಡಿಯಲ್ಲೇ” ಎಂದರು.

ಅವರು ಕರೆದು ತಂದಿದ್ದ ಜೋಡಿಗಳ ಫೋಟೋ ತೆಗೆದರು. ಮರಳುವಾಗ ಮನೆಯವರಿಗೆ ದೊಡ್ಡ ಮೊತ್ತವನ್ನು ನೀಡಿದರು. ಇಷ್ಟರಲ್ಲೇ ನಿಲ್ಲದೆ ಅವರಿಗೆ ಶಾಶ್ವತವಾಗಿ ಗಟ್ಟಿ ಮನೆಯೊಂದನ್ನೇ ಕಟ್ಟಿಕೊಡಬೇಕು ಎಂದರು. ಈ ಕುರಿತು ಮಾತಾಡೋಣ. ಶೀಘ್ರವೇ ಕೆಲಸವಾಗಬೇಕೆಂದು ನನ್ನನ್ನೂ ಹುರಿದುಂಬಿಸಿದರು. ಅದೇ ಮುಳಿಮಾಡಿನ ಮನೆಯಲ್ಲಿದ್ದ ಮೊಲದ ಮರಿಯೊಂದನ್ನು ಖರೀದಿಸಿ ನನಗೆ ಉಡುಗೊರೆಯಾಗಿನೀಡಿದರು.
ಹೆಣ್ಣಿಗೊಂದು ಗಂಡುಬೇಕಿತ್ತು. ತೋಮಣ್ಣನ ಮನೆಯಲ್ಲಿ ಇನ್ನೂ 13 ಮೊಲದ ಮರಿಗಳಿದ್ದವು. ಗಂಡೊಂದನ್ನು ಕೇಳಿ ತರಬೇಕೆಂದು ಕಾಲೇಜಿಂದ ಬರುವಾಗ ಕತ್ತಲಾದರೂ ಅವರ ಮನೆಗೆ ಹೋದೆ. ಆರು ಜನರಿರುವ ಅವರ ಗುಡಿಸಲು ಪೂರ್ತಿ ಕತ್ತಲು. ಕರೆಂಟಿಲ್ಲ. ನಾನು ಹೋಗಿದ್ದು ನೋಡಿ ತೋಮಣ್ಣನ ಮಗಳು ಚುಮುಣಿಯೊಂದನ್ನು ಹೊರ ತಂದಳು. ಕಂಕುಳಲ್ಲಿ ಅವಳ ಮಗು.
ಚುಮುಣಿಯ ಬೆಳಕಿಗೆ ಮಗುವಿನ ಮುಖ ಹೊಳೆಯುತ್ತಿತ್ತು. ಆದರೆ ನನ್ನ ಮನಸ್ಸು ಹೊತ್ತಿ ಉರಿಯುತ್ತಿತ್ತು. ಒಮ್ಮೆಲೇ ಮನೆ ಕಟ್ಟೋಕೆ ನಮ್ಮಿಂದ ಆಗುತ್ತೋ ಇಲ್ವೋ, ಕನಿಷ್ಟ ಬೆಳಕನ್ನಾದರೂ ಕೊಡಿಸಬೇಕು ಅಂತ ಮನಸ್ಸು ಬೊಬ್ಬಿಟ್ಟಿತು.

ಉಡುಪಿ ನಿರ್ಮಿತಿ ಕೇಂದ್ರದ ಓರ್ವರು ನನಗೆ ಫೇಸ್ಬುಕ್ಕಿನಿಂದಾಗಿ ಪರಿಚಯವಾಗಿದ್ದರು. ಶಿಶಿರ್ ಶೆಟ್ಟಿ. ಸಾಮಾಜಿಕ ಜಾಲತಾಣಗಳಲ್ಲಿ ಸ್ನೇಹವೇನಿದ್ದರೂ ಲೈಕು, ಕಮೆಂಟು, ಶೇರುಗಳಿಗಷ್ಟೆ ಸೀಮಿತ. ಎದುರು ಸಿಕ್ಕರೆ ಮುಖ ನೋಡುವವರೂ ಇಲ್ಲ ಅನ್ನುತ್ತಾರೆ. ಆದರೆ ಶಿಶರ್ ಶೆಟ್ಟಿ ನಾನು ವಿಷಯ ಹೇಳಿದ ಮರುದಿನವೇ ನಮ್ಮೂರಿಗೆ ಬಂದರು. ತೋಮಣ್ಣನ ಬಳಿ ಮಾತನಾಡಿದರು. ರಾಜಕಾರಣಿ, ಅಧಿಕಾರಿಗಳ ಬಳಿ ಮುಳಿ ಮಾಡಿನ ಅಂಗಳದಲ್ಲಿ ನಿಂತುಕೊಂಡೇ ಕರೆ ಮಾಡಿದರು.
“ಮನೆ ಕಟ್ಟೋಕೆ ಒಂದು ತೊಡಕಿದೆ. ಆ ತೊಡಕನ್ನು ಶೀಘ್ರವೇ ಪರಿಹರಿಸಲು ಪ್ರಯತ್ನಿಸೋಣ. ಬೆಳಕಿಗೆ ಏನಾದರೂ ಮಾಡೋಣ” ಎಂದರು. ಆಶ್ಚರ್ಯವೆಂದರೆ ಮರುದಿನವೇ ಅಂದರೆ ನಿನ್ನೆ, ಸೆಲ್ಕೋ ಸೋಲಾರ್ ಕಡೆಯವರಾದ ಗುರು ಪ್ರಕಾಶ್ ಸರ್ “ಮುಳಿಮಾಡಿನ ಮನೆ ಎಲ್ಲಿ ಬರುತ್ತೆ?” ಎಂದು ಹುಡುಕಿ ಕೊಂಡು ಬಂದಿದ್ದರು. ಇವತ್ತು ಬೆಳಿಗ್ಗೆ ಅವರ ಹುಡುಗರು ಬಂದು ಬೆಳಕನ್ನು ಬಿತ್ತಿ ಹೋದರು.
ಇದೆಲ್ಲವೂ ಆರಂಭವಾಗಿದ್ದು ಆ ಒಂದು ಕೋಳಿಯಿಂದ ಹಾಗೂ ಗಂಡು ಮೊಲದ ದೆಸೆಯಿಂದ…. Kallur Nagesh Kallur, Focus raghu, Shishir Shetty, ಸೆಲ್ಕೋದ ಗುರು ಪ್ರಕಾಶ್ ಸರ್ ಹಾಗೂ ನಿಮಗೆಲ್ಲರಿಗೂ ಧನ್ಯವಾದಗಳು… ಇನ್ನು ಅವರಿಗೊಂದು ಶಾಶ್ವತ ಮನೆಯಾಗುವ ಕನಸನ್ನು ನಾವೆಲ್ಲರೂ ಒಟ್ಟಿಗೆ ಕಾಣೋಣ.






0 Comments