ಹಿಂದೆ ಬಂದರೆ ಒದೆಯಬೇಡಿ

ಎರಡು ಕೋಟಿ ಮೀರಿದ ಜನಸಂಖ್ಯೆಯ ಈ ಮಹಾನಗರಿಯಲ್ಲಿ ಎದುರಾಗುವ ಅಸಂಖ್ಯಾತ ಅಪರಿಚಿತ ಮುಖಗಳನ್ನು ನೆನಪಿಟ್ಟುಕೊಳ್ಳುವುದು ಸಾಧ್ಯವೆ? ನಿತ್ಯ ತಿರುಗುವ ದಾರಿಯಲ್ಲಿಯ ಚಾಯ್ವಾಲಾ, ಸಬ್ಜಿವಾಲಾ, ವಡಾಪಾವ್- ಪಾನೀಪುರಿವಾಲಾಗಳು ತಮ್ಮ ಅನಾಮಧೇಯತೆಯಲ್ಲೂ ಪರಿಚಿತ ವಲಯದೊಳಗೆ ಬಂದಿರುತ್ತಾರಾದರೂ ಅವರ ಹೆಸರು-ಹಿನ್ನಲೆಗಳಾಗಲಿ, ಸುಖ-ದು:ಖಗಳಾಗಲಿ ನಮಗೆ ತಿಳಿದಿರುವುದಿಲ್ಲ; ಅದರ ಜರೂರತ್ತೂ ಇರುವುದಿಲ್ಲ.

ಚಿಕ್ಕವರಾಗಿದ್ದರೆ ಚೋಟು , ಬಾಳಾ ಅಂತಲೋ ಹಿರಿಯರಾಗಿದ್ದರೆ ಭಾಯಿಸಾಬ್, ಕಾಕಾ, ಮಾಂಶಿ ಅಂತಲೋ ಸಂಬಂಧವಲ್ಲದ ಸಂಬಂಧ ನಿತ್ಯದ ಜಿಂದಗಿಗೆ ಸಾಕಾಗುತ್ತದೆ. ನಗರದ ನಿಬಿಡತೆಯಲ್ಲಿ ಚೂರು ಅಡ್ರೆಸ್ ಕೇಳಿದವರಿಗೆ ದಾರಿ ತೋರಿಸಿ ತುಸು ಸಡಿಲುಗೊಳ್ಳುವ ಮನಸುಗಳಿರುತ್ತವೆ. ಇಷ್ಟಾಗಿಯೂ ನೆರವಾದ ನೆರವು ಪಡೆದವರ ಪರಸ್ಪರ ಚಹರೆಗಳು ರಿಜಿಸ್ಟರ್ ಆಗಬೇಕೆಂದಿಲ್ಲ.

ಒಂದೇ ಸಮಯದ ಲೋಕಲ್ ಟ್ರೇನಿನ ಒಂದೇ ಬೋಗಿಯಲ್ಲಿ ಹತ್ತುವ ನಿತ್ಯಪಯಣಿಗರು ಹೆಸರು ಹಿನ್ನಲೆ ಗೊತ್ತಿಲ್ಲದಿದ್ದರೂ ಬರೀ ಚಹರೆಗಳಿಂದಲೇ ಪರಸ್ಪರ ಭಿತ್ತಿಯಲ್ಲಿ ಅಚ್ಚಾಗಿರುತ್ತಾರೆ. ಕೆಲವೊಮ್ಮೆ ಕೆಲವರ ಗೈರು ಹಾಜರಿಯಲ್ಲೇ ಅವರ ಅಸ್ತಿತ್ವದ ಅರಿವಾಗುತ್ತದೆ. ಅವರ ಅನುಪಸ್ಥಿತಿ ಅಂಥ ಒಂದು ನಿರ್ವಾತವನ್ನು ಸೃಷ್ಟಿಸಿರುತ್ತದೆ. ಬೇರೆಬೇರೆ ಪ್ರದೇಶಗಳ ಹಲವು ಭಾಷೆಗಳ ಜನರಿರುವ ಮುಂಬಯಿಯು ಹಲವು ಚಹರೆಗಳಲ್ಲಿ, ವಿಶಿಷ್ಟ ಭಾಷಾ ಪ್ರಯೋಗಗಳಲ್ಲಿ ತನ್ನ ಅಸ್ಮಿತೆಯನ್ನು ಹೊಂದಿದೆ. ಗುಜ್ಜು, ಮಲ್ಲು, ಭೈಯ್ಯಾ, ಸಿಂಧಿ, ಬೆಂಗಾಲಿ, ಬಿಹಾರಿಗಳು-ಇವರೆಲ್ಲಾ ಲೋಕಲ್ ಟ್ರೆನುಗಳೆಂಬ ಕೆಲಿಡೋಸ್ಕೋಪಿನಲ್ಲಿ ಭಾರತ ದೇಶದ ಚಿತ್ತಾರ ರೂಪಿಸುತ್ತಾರೆ.

ನಿತ್ಯವೂ ಒಂದೆರಡು ತಾಸು ಲೋಕಲ್ ನಲ್ಲಿ ಪ್ರಯಾಣಿಸುವವರ ನಡುವೆ ಅಂಟಿಕೊಳ್ಳದ ಸಂಬಂಧವೊಂದು ಬೆಳೆದಿರುತ್ತದೆ. ಎಂಥ ಗರ್ದಿಯಿದ್ದರೂ ರಾಜಕೀಯ, ಸಿನಿಮಾ, ಸಂಗೀತ, ಕ್ರಿಕೆಟ್ಟು ಇತ್ಯಾದಿ ಚರ್ಚೆಗಳಿಗೆ ಜಾಗವಿದ್ದೇ ಇರುತ್ತದೆ. ಉಸಿರಷ್ಟೇ ಸಾಧ್ಯವಾಗುವ ಅಂಥ ಗಚ್ಚಾಗಿಚ್ಚಿಯಲ್ಲೂ ಬುಲ್ಲೆಟ್ ಟ್ರೇನಿನ ಬಗ್ಗೆ ಸೊಲ್ಲೆತ್ತುವ ಸಮಾಧನವೂ ಉಳಿದಿರುತ್ತದೆ! ಕಿಶೋರ್ ಕುಮಾರ ಅಥವಾ ಮೊಹಮ್ಮದ್ ರಫಿ ಹಾಡುಗಳ ಆರ್ದ್ರತೆಯಲ್ಲಿ ಭಾಷೆ ಧರ್ಮ ಪ್ರದೇಶಗಳು ವೇಷ ಕಳಚಿಕೊಳ್ಳುತ್ತವೆ.

ನೂಕಾಟ, ಬೈದಾಟ, ನಗು, ಹಾಡು, ಬೆವರು ಎಲ್ಲವನ್ನೂ ನಿರ್ವಿಕಾರವಾಗಿ ಹೊತ್ತು ಓಡುವ ಲೋಕಲ್ ಟ್ರೇನುಗಳು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ಸಿನಲ್ಲಿ ಖಾಲಿಯಾದಾಗ ಟ್ರೇನಿನಂಥ ಟ್ರೇನಿಗೂ ಶೂನ್ಯಭಾವ ಅಂಟಿಕೊಳ್ಳುತ್ತದೆ.

ಲೇಡೀಸ್ ಕಂಪಾರ್ಟಮೆಂಟಿನಿಂದ ಸುಂದರಿಯರೆಲ್ಲ ಕೆಳಗಿಳಿದು ಕ್ಯಾಟವಾಕ್ ಗತ್ತಿನಲ್ಲಿ ನಡೆವಾಗ ಸದಾ ತುಳಿಸಿಕೊಂಡು ಬಸವಳಿದ ಫ್ಲ್ಯಾಟಫಾರ್ಮಿಗೂ ಗ್ಲ್ಯಾಮರ್ ಬರುತ್ತದೆ. ಸಾಮಾನ್ಯವಾಗಿ ಲೇಡೀಸ್ ಕಂಪಾರ್ಟಮೆಂಟಿನ ಹಿಂದಿನ ಬೋಗಿಯಲ್ಲಿ ನಾನು ನಿತ್ಯದ ಸವಾರಿ ಮಾಡುತ್ತಿದ್ದುದರಿಂದ ಲಾಸ್ಟ್ ಸ್ಟೇಶನ್ನಿನಲ್ಲಿಳಿದಾಗ ಈ ಮಹಿಳಾಮಣಿಗಳ ಗುಂಪಿನ ಹಿಂದೆ ಹೋಗಬೇಕಾಗುತ್ತಿತ್ತು. ಧಾವಂತದಲ್ಲಿದ್ದ ಕೆಲವರು ಲಲನೆಯರ ನಡುವೆ ಲೀಲಾಜಾಲವಾಗಿ ನುಸುಳಿ ದಾಟಿಹೋಗುತ್ತಿದ್ದರೂ ಹತ್ತಿಪ್ಪತ್ತು ವರ್ಷಗಳ ಹಿಂದೆ ಮುಂಬಯಿಗೆ ಬಂದ ಹೊಸತರಲ್ಲಿ ನನಗದು ಸಾಧ್ಯವಾಗಿರಲಿಲ್ಲ.

ಅಂಕೋಲೆಯಂಥ ಪ್ರದೇಶದಲ್ಲಿ ಬೇಕಾಬಿಟ್ಟಿಯಾಗಿ ಬೀಸುವುದು ಅಭ್ಯಾಸವಾಗಿದ್ದ ನನ್ನ ಕೈಗಳನ್ನು ನಿಯಂತ್ರಣದಲ್ಲಿಡಲು ಕಷ್ಟವಾಗುತ್ತಿತ್ತು. ಚೂರು ಟಚ್ ಆದರೂ ಹೆಂಗಣ್ಣುಗಳು ಇರಿಯುವ ಕಲ್ಪಿತ ಭಯದಿಂದ ರಟ್ಟೆಗಳನ್ನು ಆದಷ್ಟೂ ಅದುಮಿಟ್ಟುಕೊಂಡು ನಡೆಯುವುದನ್ನು ಕಲಿಯಬೇಕಾಯಿತು.

ಅಕಸ್ಮಾತಾಗಿ ತಾಗಿದರೂ ಅದು ದುರುದ್ದೇಶಪೂರ್ವಕವಲ್ಲ ಎನ್ನುವುದು ಸಾಬೀತಾಗಲು ಪಾಪದವನಂತೆ ತಲೆ ತಗ್ಗಿಸಿ ನಡೆಯುವ ನಟನೆಯನ್ನೂ ಕಲಿತೆ. ಘಾತವಾದದ್ದು ಆಗಲೇ! ದೃಷ್ಟಿ ಸೊಂಟಭಾಗದಿಂದ ಕೆಳಗೇ ಉಳಿದು ಈ ವರೆಗೂ ನನ್ನಿಂದ ನಿರ್ಲಕ್ಷಿತ ಮಾನವ ದೇಹಭಾಗದತ್ತ ಗಮನ ಕೇಂದ್ರೀಕೃತವಾಯಿತು. ಪೃಷ್ಠಭಾಗ ಮತ್ತು ಬರೀ ಕಾಲುಗಳಂಥ ಕಾಲುಗಳಲ್ಲೂ ಕಲಾವಿದನ ಅದ್ಭುತ ಕೈಚಳಕವನ್ನು ಕಂಡೆ. ಸೌಂದರ್ಯವನ್ನು ನಾರಿಯರ ವದನ್ ಮತ್ತು ಬದನ್ ನೋಡಿ ವರ್ಣಿಸುವುದನ್ನು ಓದಿದ್ದ, ಕೇಳಿದ್ದ ನನಗೆ ಪ್ರಮಾಣಬದ್ಧ ನೀಳಕಾಲುಗಳು, ಅವುಗಳ ಚಲನೆಯ ಚಂದ ಕಾಣುವಂತಾಯಿತು.

ಕಾಲಳತೆಯ ಮೂಲಕವೂ ಸೌಂದರ್ಯಪ್ರಜ್ನೆಯನ್ನು ಜಾಗೃತಗೊಳಿಸಬಹುದು ಎಂಬ ಅರಿವಾದದ್ದು ಆಗಲೇ!
ಹೀಗೇ ನಿಮ್ನವದನನಾಗಿ ಚಲಿಸುತ್ತಿರಲು ಒಂದು ದಿನ ಕಚ್ಚೆಸೀರೆಯುಟ್ಟ ಮಹಿಳೆಯ ಹಿಂದಿನಿಂದ ನಡೆದು ಹೋಗುವ ಸಂದರ್ಭ ಬಂತು. ಚಂಚಲತೆಯ ಜೀನ್ಸುಗಳ ನಡುವೆ ಗಾಂಭೀರ್ಯದಲ್ಲಿ ಚಲಿಸುವ ನಡಿಗೆ ಆಕರ್ಷಕವಾಗಿ ಕಂಡಿತ್ತು. ತುಸು ಸ್ವಾತಂತ್ರ್ಯ ಕೊಟ್ಟು ನನ್ನ ದೃಷ್ಟಿಯನ್ನು ಮೇಲ್ದರ್ಜೆಗೇರಿಸಿ ಆ ಮಹಿಳೆಯನ್ನು ನಖಶಿಖಾಂತ ನೋಡಿದೆ. ನಡುವಯಸ್ಸನ್ನು ಸಮೀಪಿಸುತ್ತಿರುವ ಮಹಿಳೆ. ಎಣ್ಣೆಹಚ್ಚಿ ನೀಟಾಗಿ ಬಾಚಿದ ಮುಡಿಯಲ್ಲಿ ಶಿಸ್ತಾಗಿರುವ ಕಪ್ಪುಕೂದಲು. ಚಿಕ್ಕ ಹೂವೊಂದು ಮುಡಿಯಲ್ಲಿದ್ದಂತಿದೆ.

ಕುತ್ತಿಗೆ ಮತ್ತು ಸೊಂಟ ಭಾಗವನ್ನು ಕಲಾತ್ಮಕವಾಗಿ ತೆರೆದಿರಿಸಿದ ರವಿಕೆ. ಕುತ್ತಿಗೆಯಲ್ಲಿ ಒಂದೆಳೆ ಸರ. ಹೆಚ್ಚು ಉದ್ದ ಇರಲಾರದು. ಹೆಗಲಿಗೊಂದು ಲೆದರ್ ಚೀಲ. ಸಾಕಷ್ಟು ದೊಡ್ದದೇ. ಅಚ್ಚುಕಟ್ಟಾಗಿ ಉಟ್ಟ ನೌವಾರಿ ಸೀರೆ. ಚೂರು ಆಚೀಚೆಯಾಗದಂತೆ ನೀಟಾಗಿ ಮಡಚಿದ ಝರಿ ಅಂಚಿನ ಹಿಂಗಚ್ಚೆ. ಕೊಲ್ಲಾಪುರಿ ಚಪ್ಪಲಿ. ನೇರವಾಗಿ ನಡೆಯುವ ಸ್ಥಿರ ಹೆಜ್ಜೆಗಳು. ನೂರಾರು ಜೀನ್ಸ್ ಕಾಲುಗಳ ಕ್ಯಾನವಾಸಿನಲ್ಲಿ ಕಲಾಕೃತಿಯೊಂದು ನಡೆಯುತ್ತಿದ್ದಂತೆ ಕಾಣುತ್ತಿತ್ತು!

ನಿತ್ಯವೂ ಸೇಮ್ ಟೈಮ್ ಸೇಮ್ ಟ್ರೇನಿನಲ್ಲಿ ಪ್ರಯಾಣಿಸಿದರೆ ಸೇಮ್ ವ್ಯಕ್ತಿಗಳು ಸಿಗುವುದು ಮುಂಬೈನಂಥ ಮುಂಬೈನಲ್ಲೂ ಅಸಂಭವವಲ್ಲ. ಈ ನೌವಾರಿ ಸೀರೆಯ “ಮಾಂಶಿ” ಲೇಡೀಸ್ ಕಂಪಾರ್ಟಮೆಂಟಿನಿಂದ ಇಳಿಯುವುದು, ನಾನವಳನ್ನು ನಿತ್ಯವೂ ಸಿಗ್ಲಲ್ಲಿನ ವರೆಗೂ ಹಿಂಬಾಲಿಸಿ ನಡೆಯುವುದು ಕ್ರಮಬದ್ಧವಾಗಿ ನಡೆಯಿತು.

ಲಾಸ್ಟ್ ಸ್ಟೇಶನ್ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನಲ್ಲಿಳಿದ ಮೇಲೆ ಸ್ಟೇಶನ್ನಿನ ಆಚೆ ಸಿಗ್ನಲ್ ವರೆಗೂ ಆ ಮಾಂಶಿಯ ಹಿಂದೇ ಉಳಿಯುತ್ತಿದ್ದೆ. ಸಿಗ್ನಲ್ಲಿನಲ್ಲಿ ಸಾಗಬೇಕಾದ ದಾರಿ ಕವಲೊಡೆದು ಬೇರೆಯಾಗುತ್ತಿದ್ದೆವು.

ಯಾರೀಕೆ? ಧಾವಂತದ ಈ ಜನಜಂಗುಳಿಯಲ್ಲಿ ಉದ್ವಿಗ್ನ ಮನಸ್ಸುಗಳ ನಡುವೆ ತನ್ನ ಸರಳ ಉಡುಗೆಯಲ್ಲಿ ಅಪಾರ ಜೀವನಪ್ರೀತಿಯನ್ನು, ನಿಧಾನ ನಡಿಗೆಯಲ್ಲಿ ಅಖಂಡ ಪ್ರಸನ್ನತೆಯನ್ನು ಸೂಸುವ ಈಕೆಯ ಹೆಸರೇನಿರಬಹುದು? ಕಮಲಾಬಾಯಿ ರಾಧಾಮಾಂಶಿ ಅಥವಾ ಸಿಂಧುತಾಯಿ? ಅವಳಿಡುವ ಆ ಹೆಜ್ಜೆಗಳು ಈ ಭಾಗದೌಡ್ ಜಿಂದಗಿಗೆ ಇಡುತ್ತಿರುವ ಅಲ್ಪವಿರಾಮದಂತೆ ಕಾಣುತ್ತಿದೆಯಲ್ಲ.

ಇವಳಲ್ಲೇನೋ ಅಧ್ಬುತವಾದ ಕತೆಯಿದೆ ಅನಿಸುತ್ತಿತ್ತು. ನಾನು ಆ ಕತೆಯ ಹಿಂದೆ ಬಿದ್ದಿರುವೆನೆ? ಆದರೆ ಆ ಕತೆ ನನಗೆಂದೂ ದಕ್ಕಲಿಲ್ಲ. ಆಕೆ ಇದ್ದಕ್ಕಿದ್ದಂತೆ ಕಣ್ಮರೆಯಾದಳು. ಮೊದಲ ದಿನ ಆಕೆ ಲೋಕಲ್ಲಿನ್ನಿನಿಂದ ಇಳಿಯದಿದ್ದಾಗ ಟ್ರೇನ್ ಮಿಸ್ ಮಾಡಿಕೊಂಡಿರಬಹುದು ಎಂದುಕೊಂಡು ಸಮಾಧಾನ ಮಾಡಿಕೊಂಡೆ. ಎರಡನೇ ದಿನ ಕಾಣದಿದ್ದಾಗ ಕಾಯಿಲೆ ಬಿದ್ದಿರಬಹುದು ಅನಿಸಿತು.

ಮೂರನೆ ದಿನವೂ ಬರದಿದ್ದಾಗ ಬೇರೆ ಟೈಮಿಗೆ ಬೇರೆ ಟ್ರೇನಿಗೆ ಬರುತ್ತಿರಬಹುದು ಎಂದುಕೊಂಡು ಫ್ಲ್ಯಾಟಫಾರ್ಮಿನಲ್ಲಿ ನಿಂತು ಕಾದೆ. ವಾರಗಟ್ಟಲೆ ಬರದಿದ್ದಾಗ ಹುಚ್ಚನಂತಾದೆ. ಅನಾಮೇಧೇಯ ಅಪರಿಚಿತ ಸಹಪ್ರಯಾಣಿಕಳ ಅನುಪಸ್ಥಿತಿಯಿಂದ ನಾನು ಇಷ್ಟು ಬೇಚೈನುಗೊಂಡಿರುವುದು ಯಾಕೆಂದು ಯೋಚಿಸಿ ಬಳಲಿದೆ. ಬಾಲ್ಯದಲ್ಲಿ ಇಂಥದ್ದೇ ಸಂಕಟ ತಳಮಳವೊಂದನ್ನು ಅನುಭವಿಸಿದ್ದು ನೆನಪಾಯಿತು.

ಅದು ನಮ್ಮೂರಲ್ಲಿ ಭಜನೆಯಾಟದ ಸಂದರ್ಭ. ಬೆಳಿಗ್ಗೆ ಕಾರ್ಯನಿಮಿತ್ತ ಅಂಕೋಲಿಗೆ ಹೋಗುವ ಅವಸರದಲ್ಲಿದ್ದ ಭಾಗವತ ವೆಂಕಣ್ಣಜ್ಜ ಬೆಳ್ಳಿ ಮೂಡುವ ಮೊದಲೇ ಮಂಗಲ ಹಾಡಿ ಯಕ್ಷಗಾನ ಮುಗಿಸಿಬಿಟ್ಟಿದ್ದ. ಇನ್ನೂ ಉಳಿದಿರುವ ಆ ಕತ್ತಲಲ್ಲೇ ಎಲ್ಲರೂ ತಮ್ಮತಮ್ಮ ಮನೆಗೆ ವಾಪಾಸಾಗುತ್ತಿದ್ದರು. ಮೂರೋ ನಾಲ್ಕೋ ವರ್ಷದ ನಾನು ನಿದ್ದೆಗಣ್ಣಲ್ಲಿ ನನ್ನ ತಾಯಿಯನ್ನು ಹಿಂಬಾಲಿಸುತ್ತಿದ್ದೆ. ರಸ್ತೆಯ ಯಾವುದೋ ತಿರುವಿನಲ್ಲಿ ಅವಳನ್ನು ಬಿಟ್ಟು ಗುಂಪಿನಲ್ಲಿದ್ದ ಬೇರೊಬ್ಬ ತಾಯಿಯ ಬೆನ್ನು ಹತ್ತಿದ್ದು ಅವರ ಮನೆಯಂಗಳ ತಲುಪುವ ವರೆಗೂ ಗೊತ್ತಾಗಲಿಲ್ಲ.

ತಂಗಿಯನ್ನು ಕಂಕುಳಲಲ್ಲಿಟ್ಟು ತಮ್ಮನ ಕೈಹಿಡಿದು ಮುಂದೆ ನಡೆಯುತ್ತಿದ್ದ ನಿದ್ದೆಗಣ್ಣಲಿದ್ದ ಅವ್ವಿಗೂ ನಾನು ಬೇರೆಯಾದದ್ದು ತಿಳಿಯಲಿಲ್ಲ. ಆ ಅಪರಿಚಿತ ಅಂಗಳದಲ್ಲಿ ಒಂದು ಪ್ರಸಂಗವೇ ನಡೆದು, ಕೊನೆಗೆ ಮುಖದ ಹುಲುಬಿನ ಮೇಲೆ ನನ್ನನ್ನು ಇಂಥವರ ಮಗನೆಂದು ಯಾರೋ ಮನೆವರೆಗೂ ಬಿಟ್ಟು ಹೋದರು. ಆದರೆ ಆ ಅಪರಿಚಿತ ಅಂಗಳದಲ್ಲಿ ಹುಟ್ಟಿದ ಅಸುರಕ್ಷಿತ ಭಾವದ ಎಳೆಯೊಂದು ನನ್ನ ಕರುಳಲ್ಲಿ ಇನ್ನೂ ಸುತ್ತಿಕೊಂಡಿದೆ ಎನ್ನುವುದು ಈ ಮಾಂಶಿ ಗಾಯಬ್ ಆದಾಗ ಅರಿವಾಯಿತು.

ಮಾಂಶಿಯನ್ನು ಕಾಣದೇ ಅದೆಷ್ಟು ವಿಚಲಿತನಾಗಿದ್ದನೆಂದರೆ ಅವಳುಟ್ಟ ನೌವಾರಿ ಸೀರೆ, ಕೊಲ್ಲಾಪುರಿ ಚಪ್ಪಲಿ- ಇವೇ ಕಣ್ಣ ಮುಂದೆ ಕಾಣಿಸಿ ಒಂದು ರೀತಿಯ ಭ್ರಮೆಗೆ ಒಳಗಾಗಿದ್ದೆ. ನಾವಿಬ್ಬರೂ ಬೇರೆ ಬೇರೆ ದಿಕ್ಕಿಗೆ ಹೊರಳುತ್ತಿದ್ದ ಸಿಗ್ನಲ್ಲಿನಲ್ಲಿ ನಿಲ್ಲುವ ಟ್ರಾಫಿಕ್ ಹವಾಲ್ದಾರನಿಗೆ ಅವಳ ಬಗ್ಗೆ ತಿಳಿದಿರಬಹುದು ಅನಿಸಿತು. ರಸ್ತೆ ದಾಟುವಾಗ ಮಾಂಶಿಯನ್ನು ಕಂಡೆಯಾ, ಎಂದು ಎರಡು ಮೂರು ಬಾರಿ ಕೇಳಿದೆ. ಸಿಗ್ನಲ್ಲು ಬಿದ್ದರೂ ಅವನ ಉತ್ತರಕ್ಕಾಗಿ ರಸ್ತೆ ನಡುವೆ ಕಾದು ನಿಂತಿದ್ದರಿಂದ ಟ್ರಾಫಿಕ್ ಜ್ಯಾಮ್ ಉಂಟಾಯಿತು.

ಹವಾಲ್ದಾರನು ಆಚೆ ತೊಲಗುವಂತೆ ಕೈಬೀಸುತ್ತಾ “ತುಝಾ ಆಯಿಲಾ” ಎಂದು ಬೈದ. ಒಂದು ರೀತಿಯ ಗುಂಗಿನಲ್ಲಿದ್ದ ನನಗೆ ಆಯಿ ಎಂದದ್ದು ಮಾತ್ರ ಕೇಳಿಸಿ ಇವನಿಗೆ ಮಾಂಶಿ ಬಗ್ಗೆ ಗೊತ್ತಿದೆ ಎಂದು ಅಲ್ಲೇ ನಿಂತಿದ್ದೆ. ಎಲ್ಲ ದಿಕ್ಕುಗಳ ಟ್ರಾಫಿಕ್ ನಿಂತು ಅಲ್ಲೊಂದು ರಣಭೂಮಿಯೇ ತಯಾರಾಯಿತು.

ಕರ್ಕಶ ಹಾರ್ನುಗಳು ಅಲ್ಲಿ ರಣಕಹಳೆಗಳಂತೆ ಮೊಳಗಿದವು. ಹವಾಲ್ದಾರ ತನ್ನ ಸ್ಥಾನದಿಂದ ಕೆಳಗಿಳಿದು ಬಂದ. ಕೆನ್ನೆಗೆ ಬಾರಿಸುವವನಂತೆ ತುರುಸಿನಲ್ಲಿ ಬಂದವನು ಹತ್ತಿರವಾದಾಗ ” ಆಯಿ… ದಿನಾ ಇಲ್ಲಿಂದ ದಾಟುತ್ತಿದ್ದಳಲ್ಲ..” ಎಂದು ಆರ್ತತೆಯಿಂದ ದಿಟ್ಟಿಸಿದೆ. ಸಾಂಗ್ಲಿ ಸಾತಾರಾ ಕಡೆಯವನಾಗಿರಬಹುದಾದ ಬಿರುಸು ದೇಹದ ಆತ ಲಕ್ಷಾಂತರ ಜನ ಹಾದುಹೋದರೂ ಅಪರಿಚಿತತೆಯಲ್ಲಿ ತ್ರಸ್ತಗೊಂಡಿರುವಂತೆ ಕಂಡ. ನನ್ನ ಕೈಗಳನ್ನು ಹಿಡಿದು ಕಿರುಚುವ ಟ್ರಾಫಿಕ್ಕಿಗೆ ಸುಮ್ಮನಾಗಲು ಸಿಗ್ನಲ್ಲು ಕೊಟ್ಟು ಹಗುರ ರಸ್ತೆ ದಾಟಿಸಿದ. ಇಬ್ಬರೂ ಪರಸ್ಪರ ಆಸರೆಯಲ್ಲಿ ಆ ತುದಿಗೆ ತಲುಪುವ ವರೆಗೂ ಮುಂಬೈ ಟ್ರಾಫಿಕ್ ಸ್ತಬ್ಧಗೊಂಡಿತ್ತು!

‍ಲೇಖಕರು Avadhi GK

January 27, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Nagaveni Nayak

    Chennagide kathe,mumbai nagarada gadibidi jeevanada sogasada chitrana ,istu varsha da nantaravoo huttoorina mannina kampu ninnannu bittu hogilla,thumba santosha

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: