ಧಿನ್‌ಚಕ್ ಧಿನ್‌ಚಕ್ ಮುಂಬೈ!!

ಥ್ಯಾಂಕ್ಸ್ ರಾಜೀವ್ ನಾಯಕ್
‘ಅವಧಿ’ ಓದುತ್ತಾ ನಮ್ಮೊಳಗೇ ಒಬ್ಬರಾದವರು ರಾಜೀವ್. ಉತ್ತರ ಕನ್ನಡವನ್ನು ಉಸಿರಾಡುತ್ತಲೇ ಮುಂಬೈ ಜಗತ್ತಿನಲ್ಲಿ ಓಡಾಡುತ್ತಾ ಇರುವವರು.
‘ನಿಮ್ಮೊಡನಿದ್ದೂ ನಿಮ್ಮಂತಾಗದೆ’  ಎನ್ನುವುದು ಗೊತ್ತಿದ್ದ ಕಾರಣಕ್ಕೆ’ ಅವಧಿ’ ಅವರನ್ನು ನೀವು ಕಂಡ ಮುಂಬೈ ಬಗ್ಗೆ ಬರೆದುಕೊಡಿ ಎಂದು ಕೇಳಿತು. ಆ ವೇಳೆಗಾಗಲೇ ರಾಜೀವ್ ಅವಧಿಯಲ್ಲಿನ ತಮ್ಮ ಹಲವು ಬರಹಗಳ ಮೂಲಕ ಹೆಸರಾಗಿದ್ದರು
ಅವರು ಅವಧಿ ಓದುಗರನ್ನು ಪ್ರೀತಿಯಿಂದ ಕೈ ಹಿಡಿದುಕೊಂಡು ೧೦ ವಾರಗಳ ಕಾಲ ಮುಂಬೈ ಸುತ್ತಾಡಿಸಿದ್ದಾರೆ ಆ ನೆಪದಲ್ಲಿ ಉತ್ತರ ಕನ್ನಡದಲ್ಲೂ..
ರಾಜೀವ್ ನಾಯಕ್ ವಂದನೆಗಳು


ಮುಂಬೈ ಎಷ್ಟೇ ಧಾವಂತದಲ್ಲಿರುವಂತೆ ಕಂಡರೂ ಸಂಭ್ರಮಾಚರಣೆಗಳಿಗೆ ಇಲ್ಲಿ ಸವುಡು ಇದ್ದೇ ಇದೆ! ಧಾರ್ಮಿಕ ಹಬ್ಬಗಳು, ರಾಷ್ಟ್ರೀಯ ಆಚರಣೆಗಳು, ಸಾಂಪ್ರದಾಯಿಕ ಸಮಾರಂಭಗಳು ಮತ್ತು ಉತ್ಸವಗಳಿಗೇನೂ ಮುಂಬೈನಲ್ಲಿ ಕೊರತೆಯಿಲ್ಲ. ಹೀಗಾಗಿ ವರ್ಷವಿಡೀ ಮುಂಬೈಕರರು ಹರ್ಷದಲ್ಲಿರುತ್ತಾರೆ. ಸ್ಥಳೀಯ ವಿಶಿಷ್ಟ ಉತ್ಸವಗಳೊಂದಿಗೆ ದೇಶದ ವಲಸಿಗರು ತಮ್ಮ ನಾಡಿನ ಸಾಂಪ್ರದಾಯಿಕ ಆಚರಣೆಗಳನ್ನೂ ತಂದಿರುವುದರಿಂದ ಮುಂಬೈನ ಸಾಂಸ್ಕೃತಿಕ ವೈವಿಧ್ಯತೆ ಶ್ರೀಮಂತಗೊಂಡಿದೆ!
ಗುಡಿಪಾಡ್ವಾ(ಯುಗಾದಿ), ನವರಾತ್ರಿ, ಗಣೇಶ ಚೌತಿ, ದೀಪಾವಳಿ, ಕ್ರಿಸಮಸ್, ಈದ್, ಪಾರ್ಸಿ ನ್ಯೂಇಯರ್  ಮುಂಬೈನ ಮುಖ್ಯ ಧಾರ್ಮಿಕ ಹಬ್ಬಗಳಾದರೆ ಸಂಕ್ರಾಂತಿಗೆ ಗಾಳಿಪಟ ಹಾರಿಸುವುದು, ಕೋಳಿಜನರ(ಮೀನುಗಾರರು) ನಾರಿಯಲ್ ಪೋಡ್ ಮತ್ತು ಸೀ ಫುಡ್ ಫೆಸ್ಟಿವಲ್ ಇವೆಲ್ಲ ಧಾರ್ಮಿಕ ಆಯಾಮಗಳನ್ನು ಮೀರಿದ ಉತ್ಸವಗಳಾಗಿವೆ. ಮುಂಬೈನ ಹೆಚ್ಚಿನ ಹಬ್ಬಗಳು ಹಾಗೂ ಉತ್ಸವಗಳಲ್ಲಿ, ಮದುವೆ ಮುಂಜಿಗಳಲ್ಲಿ ಹಾಡು ಕುಣಿತಗಳು ಅವಿಭಾಜ್ಯ ಅಂಗವಾಗಿರುತ್ತವೆ. ಒಟ್ಟಾರೆ ಮುಂಬಯಿಗರಿಗೆ ವರ್ಷವಿಡೀ ಒಂದಲ್ಲಾ ಒಂದು ಧಮಾಕಾ ಕಾದಿರುತ್ತದೆ.
ಗುಡಿಪಾಡ್ವಾ ಮತ್ತು ನವರಾತ್ರಿ ಪ್ರಮಿಳೆಯರಿಗೆ ಪ್ರಾಧಾನ್ಯತೆಯಿರುವ ಹಬ್ಬಗಳು. ಗಡಿಪಾಡ್ವಾ ಸಂದರ್ಭದಲ್ಲಿ ನಡೆಯುವ ಶೋಭಾಯಾತ್ರೆಯಲ್ಲಿ ಸ್ತ್ರೀಯರು ನೌವಾರಿ ಸೀರೆಯುಟ್ಟು ಪೇಠಾ, ಪಗಡಿ ಮುಡಿಗೇರಿಸಿ, ಸಾಂಪ್ರದಾಯಿಕ ಆಭರಣಗಳಾದ ಸೊಂಟಪಟ್ಟಿ, ಕಂಠಹಾರ ಮತ್ತು ವಿಶಿಷ್ಟ ಮಹಾರಾಷ್ಟ್ರಿಯನ್ ಮೂಗುತಿ ಧರಿಸಿ ಮೆರವಣಿಗೆ ಹೊರಡುವ ದೃಶ್ಯ ಅದ್ಭುತವಾಗಿರುತ್ತದೆ. ಅಂದು ಹೆಣ್ಣುಮಕ್ಕಳು ಕೂಡ ಡೋಲ್ ಮತ್ತು ತಾಶಾ ಬಡಿಯುತ್ತ, ತಾಳಕ್ಕೆ ತಕ್ಕಂತೆ ವೀರಾವೇಶದ ಹೆಜ್ಜೆ ಹಾಕುತ್ತಾ ಮೈ ನವಿರೇಳುವಂತೆ ಮಾಡುತ್ತಾರೆ.
ಅಂದು ಮುಂಬೈನ ಗಿರ್ಗಾಂವ್ ಮತ್ತು ಡೊಂಬಿವಲಿ, ಕಲ್ಯಾಣ ಉಪನಗರಗಳಲ್ಲಿ ಲೇಡೀಸ್ ಬುಲ್ಲೆಟ್ ಸವಾರಿ ಮಾಡುವ ರೋಮಾಂಚಕ ದೃಶ್ಯ ನೋಡಲು ಸಾವಿರಾರು ಜನ ಸೇರುತ್ತಾರೆ. ಹೊಸ ವರ್ಷದ ಶುರುವಾತಿನಲ್ಲೇ ಇಂಥ ಮಹಿಳಾ ಶಕ್ತಿಯ ಪ್ರದರ್ಶನದ ಮೂಲಕ ಗಂಡುಗಳಿಗೆಲ್ಲ ಒಂದು ವರ್ಷಕ್ಕೆ ನೆನಪುಳಿಯುವಂತ ಎಚ್ಚರಿಕೆಯ ಸಂದೇಶವೊಂದು ರವಾನೆಯಾಗುತ್ತದೆ!!
ಹೆಂಗಳೆಯರೆಲ್ಲ ಅತ್ಯಂತ ಖುಶಿಯಿಂದ ಪಾಲ್ಗೊಳ್ಳುವ ಇನ್ನೊಂದು ಹಬ್ಬವೆಂದರೆ ನವರಾತ್ರಿ. ದಸರಾಕ್ಕಿಂತ ಮೊದಲು ಪ್ರಾರಂಭವಾಗುವ ಒಂಬತ್ತು ದಿನಗಳ ದೇವಿಯ ಆರಾಧನೆಯಲ್ಲಿ ಹೆಣ್ಣುಮಕ್ಕಳದೇ ದರಬಾರು. ಆ ಒಂಬತ್ತೂ ದಿನಗಳೂ ದಿನಕ್ಕೊಂದು ಬಣ್ಣದ ಸೀರೆ! ಸಾರ್ವತ್ರಿಕವಾಗಿ ಮಹಿಳೆಯರೆಲ್ಲ ಪೂರ್ವನಿರ್ಧಾರಿತ ವರ್ಣದ ಉಡುಪಿನಲ್ಲಿ ಮಿಂಚುತ್ತಾರೆ! ಆ ಸಂದರ್ಭದಲ್ಲಿ ಲೇಡೀಸ್ ಸ್ಪೆಷಲ್ ಲೋಕಲ್ ಟ್ರೇನುಗಳು ಏಕವರ್ಣದ ಯುನಿಫಾರ್ಮು ಧರಿಸಿಕೊಳ್ಳುವವು!
ನವರಾತ್ರಿಯಲ್ಲಿ ಗರ್ಬಾ ಮತ್ತು ದಾಂಡಿಯಾ ಪಂಡಾಲುಗಳು ವರ್ಣರಂಜಿತವಾಗಿರುತ್ತವೆ.  ದೀಪಾಲಂಕಾರದ ಭವ್ಯ ಹಿನ್ನಲೆಯಲ್ಲಿ ಸಾಂಪ್ರದಾಯಿಕ ಉಡುಗೆಯೊಂದಿಗೆ ವಿಶಿಷ್ಟ ಶೈಲಿಯ ಹಾಡು ಮತ್ತು ನೃತ್ಯದಲ್ಲಿ ಮುಂಬೈವಾಲೇ ಮೈಮರೆಯುತ್ತಾರೆ. ಸ್ಲಮ್ಮುಗಳಲ್ಲಿ, ಗಲ್ಲಿಗಲ್ಲಿಗಳಲ್ಲಿ, ರೆಸಿಡೆನ್ಶಿಯಲ್ ಕಾಂಪ್ಲೆಕ್ಸುಗಳಲ್ಲಿ,  ಮೈದಾನಗಳಲ್ಲಿ  ಮುಂಬೈ ಏಕಪ್ರಕಾರವಾಗಿ ಸಂಭ್ರಮಿಸುವ ಸಮಯವಿದು!
ಮುಂಬೈನ ಗಣೇಶೋತ್ಸವವಂತೂ ಜಗತ್ಪ್ರಸಿದ್ಧ. ಶ್ರಾವಣ ಕಳೆದು ಭಾದ್ರಪದ ಬಂತೆಂದರೆ ಎಲ್ಲೆಲ್ಲೂ ಗಜಮುಖನ ಆರಾಧನೆಯೇ! ಮನೆಮನೆಯಲ್ಲೂ, ಸಾರ್ವಜನಿಕವಾಗಿಯೂ ಸಡಗರದಿಂದ ಆಚರಿಸುವ ಹಬ್ಬವಿದು. ಸಹಸ್ರಾರು ಸಾರ್ವಜನಿಕ ಪೆಂಡಾಲುಗಳಲ್ಲಿ ವಿಘ್ನನಿವಾರಕನು ವಿವಿಧ ರೂಪ ಆಕಾರ ಅಲಂಕಾರಗಳಲ್ಲಿ ಪ್ರಕಟವಾಗುತ್ತಾನೆ.
ಪ್ರತಿಯೊಂದು ಏರಿಯಾಕ್ಕೂ ಒಬ್ಬೊಬ್ಬ ರಾಜಾ! ಲಾಲಭಾಗ್‌ಚಾ ರಾಜಾ, ಸೇವಾ ಮಂಡಲದವರ ಕಿಂಗ್ ಸರ್ಕಲ್‌ಚಾ ರಾಜಾ- ಮುಂತಾದ ಶ್ರೀಮಂತ ಮತ್ತು ವೈಭವೀ ಗಣೇಶನ ದರ್ಶನಕ್ಕೆ ಜನ ದಿನಗಟ್ಟಲೆ ಸಾಲಿನಲ್ಲಿ ನಿಂತಿರುತ್ತಾರೆ. ಮನೆಗಣಪತಿಯ ಮೋದಕ ಪ್ರಸಾದವು ಲೋಕಲ್ ಟ್ರೇನಿನಲ್ಲೂ ಹಂಚಲ್ಪಡುತ್ತದೆ. ಒಟ್ಟಾರೆ ಆ ಎರಡು ವಾರ ವಕ್ರತುಂಡನು ಮುಂಬೈನಲ್ಲೇ ಠಿಕಾಣಿ ಹೂಡುತ್ತಾನೆ! ಮುಂಬೈಕರರಿಗೆ ಗಣಪತಿ ಬಾಪ್ಪಾಗಿಂತ ಆತ್ಮೀಯ ದೇವರು ಬೇರಿಲ್ಲ. ಮನೆಯಲ್ಲಿದ್ದಷ್ಟು ದಿನ ಮನೆಯವನೇ ಆಗಿರುತ್ತಾನೆ. ಗಣಪತಿ ವಿಸರ್ಜನೆಯಂದು ಮುಂಬೈನ ರಸ್ತೆ ಮತ್ತು ಕಡಲ ತೀರಗಳು ಭವ್ಯವೂ ದಿವ್ಯವೂ ಆಗಿರುತ್ತವೆ!
ಬೆಳಕಿನ ಹಬ್ಬವಾದ ದೀಪಾವಳಿ ಮತ್ತು ಕ್ರಿಸಮಸ್ ಸಮಯದಲ್ಲಿ ಮುಂಬೈ ದೀಪಗಳಿಂದ ಶೃಂಗರಿಸಿಕೊಳ್ಳುತ್ತದೆ. ಮುಂಬೈನ ಪ್ರಸಿದ್ಧ ಮೌಂಟ್ ಮೇರಿ ಚರ್ಚ್‌ನಲ್ಲಿ ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯಲ್ಲಿ ಇತರ ಧರ್ಮದವರೂ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ಸಮುದ್ರದ ಅಂಚಿಗೆ ಗುಡ್ಡದ ಮೇಲಿರುವ ತಾಯಿಮೇರಿಯ ಚರ್ಚ್ ನಿಸರ್ಗ ಸೌಂದರ್ಯದ ಆರಾಧಕರಿಗೂ ಮೇರಿ ಭಕ್ತರಿಗೂ ಮೆಚ್ಚಿನ ತಾಣವಾಗಿದೆ.
ಚರ್ಚಿಗೆ ಹತ್ತುವ ದಾರಿಯಲ್ಲಿಯ ಅಂಗಡಿಗಳಲ್ಲಿ ವೈವಿಧ್ಯಮಯ ಕ್ಯಾಂಡಲ್ಲುಗಳು ಮಾರಾಟಕ್ಕಿಟ್ಟಿರುತ್ತಾರೆ. ದೇಹದ ಎಲ್ಲಾ ಭಾಗಗಳ ಆಕಾರದಲ್ಲಿ ಕ್ಯಾಂಡಲ್ಲುಗಳು ಲಭ್ಯವಿರುತ್ತವೆ. ತಮ್ಮ ದೇಹದ ಯಾವ ಭಾಗಕ್ಕೆ ಕಾಯಿಲೆಯೋ ಆ ಆಕಾರದ ಕ್ಯಾಂಡಲ್ಲನ್ನು ತಾಯಿ ಮೇರಿಯೆದುರು ಬೆಳಗಿಸಿದರೆ ಕಾಯಿಲೆ ವಾಸಿಯಾಗುತ್ತದೆ ಎಂಬ ನಂಬಿಕೆಯಿದೆ.
ಮುಂಬೈನಲ್ಲಿ ಈದ್ ಹಬ್ಬ ಕೂಡ ಜಬರದಸ್ತ್ ಆಗಿರುತ್ತದೆ. ಮೊಹಮ್ಮದ್ ಅಲಿ ರೋಡ್, ಮಾಹೀಮ್ ದರ್ಗಾ, ಜಮಾ ಮಸ್ಜಿದ್ ಮುಂತಾದ ಕಡೆ ಈದ್‌ನ ಜೋಶ್ ಜೋರಾಗಿರುತ್ತದಾದರೂ ಹಾಜಿಅಲಿ ದರ್ಗಾದಲ್ಲಿ ಅದರ ಖದರೇ ಬೇರೆ! ಸುತ್ತಲೂ ಸಮುದ್ರ ನೀರಿನಿಂದ ಆವೃತ್ತವಾಗಿರುವ ಸುಂದರ ಹಾಜಿಅಲಿ ದರ್ಗಾವು ಈದ್ ಸಂದರ್ಭದಲ್ಲಿ ದೀಪಮಾಲೆಗಳಿಂದ ಅಲಂಕೃತಗೊಳ್ಳುತ್ತದೆ. ದರ್ಗಾದ ಮೆಟ್ಟಿಲುಗಳಿಗೆ ತುಳುಕುವ ತೆರೆಗಳು, ಸಮುದ್ರದ ಕಡೆಯಿಂದ ಬೀಸುವ ತಂಗಾಳಿ ತಂಪು, ದರ್ಗಾದೊಳಗಿನ ಕವ್ವಾಲಿ ಕಲರವ, ದರ್ಗಾದ ಆವರಣದಲ್ಲಿ ನಲಿಯುವ ಮುಸ್ಲಿಂ ಮಹಿಳೆಯರು- ಇವೆಲ್ಲವೂ ಹಾಜಿಅಲಿ ದರ್ಗಾವನ್ನು ಅನನ್ಯಗೊಳಿಸುತ್ತವೆ. ರಾತ್ರಿ ಸಮಯದಲ್ಲಿ ದಡದಿಂದ ನೋಡಿದರೆ ದರ್ಗಾ ತೇಲುವ ಹಡಗಿನಂತೆ ಕಂಗೊಳಿಸುತ್ತದೆ.
ವಿಶಿಷ್ಟ ತಿನಿಸುಗಳು ಭೋಜನಗಳೂ ಹಬ್ಬಗಳು ಮತ್ತು ಉತ್ಸವಗಳನ್ನು ಸ್ವಾದಿಷ್ಟಗೊಳಿಸುತ್ತವೆ. ಪುರನ್ ಪೋಳಿ, ಆಮೃಖಂಡ, ಖೀರ್, ಕರಂಜಿ, ಮೋದಕ ಇತ್ಯಾದಿ ತಿನಿಸುಗಳ ಸೇವನೆಯಿಂದ  ಮುಂಬೈಕರ್  ಸಂತೃಪ್ತಗೊಂಡು ಹಬ್ಬದ ಆನಂದವನ್ನು ಪಡೆಯುತ್ತಾನೆ.
ಮುಂಬೈನಲ್ಲಿ ಹೆಚ್ಚಿನ ಹಬ್ಬಹುಣ್ಣಿಮೆಗಳಿಗೆ, ಮದುವೆಮುಂಜಿ ಸಮಾರಂಭಗಳಿಗೆ ಅರೆಖಾಸಗಿ ಮತ್ತು ಅರೆಸಾರ್ವಜನಿಕ ಆಯಾಮಗಳಿರುತ್ತವೆ. ಈ ಮಹಾನಗರದಲ್ಲಿ ಹೌಸಿಂಗ್ ಕಾಂಪ್ಲೆಕ್ಸುಗಳು ಒತ್ತೊತ್ತಾಗಿ ಇರುತ್ತವೆ. ಒಂದು ಸೊಸೈಟಿ ಸಮುಚ್ಛಯದಲ್ಲಿ ಹಲವಾರು ಬಿಲ್ಡಿಂಗುಗಳು. ಎರಡು ಬಿಲ್ಡಿಂಗುಗಳ ನಡುವಿನ ಜಾಗದಲ್ಲಿ ಪೆಂಡಾಲ್ ಹಾಕಿ ಶಾದಿ, ಸಾಕರ್ ಪುಡಾ, ಹಳದಿ ಕಾರ್ಯಕ್ರಮಗಳನ್ನು ಜರುಗಿಸುವುದು ಇಲ್ಲಿ ಸಾಮಾನ್ಯ. ಅಂಥ ಸಂದರ್ಭಗಳಲ್ಲಿ ಮದುವೆ ಪಾರ್ಟಿಯವರು ವಾಸಿಸುವ ಬಿಲ್ಡಿಂಗನ್ನು ಮಾತ್ರ ದೀಪಮಾಲೆಗಳಿಂದ ಅಲಂಕರಿಸಲಾಗುತ್ತದೆ ಮತ್ತು ಅದರಲ್ಲಿಯ ಅಪಾರ್ಟುಮೆಂಟುವಾಸಿಗಳಿಗಷ್ಟೇ ಸಾರ್ವತ್ರಿಕ ಆಮಂತ್ರಣವಿರುತ್ತದೆ.
ಮುಂಬೈನ ಬಹಳಷ್ಟು ಹಬ್ಬ ಉತ್ಸವ ಸಭೆ ಸಮಾರಂಭಗಳಿಗೆ ಡೋಲ್ ವಾದ್ಯ ಬೇಕೆ ಬೇಕು.  ಮದುವೆ ಸಮಾರಂಭಗಳಲ್ಲೂ ಬ್ಯಾಂಡ್ ಬಾಜಾ ಹಾಡು ಕುಣಿತಗಳು ಅವಿಭಾಜ್ಯ ಅಂಗವಾಗಿರುತ್ತವೆ. ಡೋಲ್, ತಾಶಾ, ತಾಳಗಳ ಕಂಪನಗಳ ಸ್ಪರ್ಷಕ್ಕೆ ಮುಂಬೈಕರ್ ಮೈಮನಸ್ಸುಗಳು ಓಲಾಡಲು ಶುರುವಾಗುತ್ತದೆ. ಡೋಲಿನ ಧ್ವನಿ ಕಂಪನಗಳು ಕಣಕಣಗಳಲ್ಲೂ ನವಿರೇಳಿಸುತ್ತವೆ. ಜನಪ್ರಿಯ ಟ್ಯೂನ್ ಗಳು ನುಡಿಸಲ್ಪಟ್ಟಾಗಂತೂ ಮೈ ಮನಸ್ಸುಗಳು ಹುಚ್ಚೆದ್ದುಹೋಗುತ್ತದೆ. ವಿಂಚು ಚಾವ್ಲಾ, ಜಿಂಗ್ ಜಿಂಗ್ ಜಿಂಗಟ್ ನಂತಹ ಹಾಡುಗಳನ್ನು ಸಾವಿರ ಬಾರಿ ಕೇಳಿದರೂ ಅವರಿಗೆ ದಣಿವಿಲ್ಲ.
ಡೋಲ್ ಬಾರಿಸುವ ತರಬೇತಿ ಕೇಂದ್ರಗಳೂ ಇವೆ. ಇಂಥ ತರಬೇತಿ ಪಡೆಯಲಾಗದವರು ಉಪನಗರಗಳ  ಯಾವುದೋ ಜನವಸತಿ ಕಡಿಮೆಯಿರುವ ತಾಣಗಳಲ್ಲಿ ಅಭ್ಯಾಸ ಮಾಡಿಕೊಳ್ಳುತ್ತಾರೆ. ಮೀಸೆ ಮೂಡುತ್ತಿರುವ ಎಳೆಯ ಹುಡುಗರಿಗೇ ಡೋಲ್ ಬಾರಿಸುವ ಉಮೇದು ಹೆಚ್ಚು.  ಮದುವೆ ಸಮಾರಂಭಗಳಲ್ಲಿ ಗಣಪತಿ ಹಬ್ಬದಲ್ಲಿ ಇವರಿಗೆ ತುಂಬಾ ಬೇಡಿಕೆಯಿರುತ್ತದೆ. ಜನರನ್ನು ನವಿರೇಳಿಸಿ ಡೋಲ್ ಬಾರಿಸಿದಷ್ಟೂ ಇವರ ಕಿಸೆ ತುಂಬುತ್ತದೆ.
ಡೋಲ್ ಬಡಿತವಿರುವ ಮೆರವಣಿಗೆಯಲ್ಲಿ ಪೂರ್ತಿಯಾಗಿ ತಲ್ಲೀನಗೊಂಡರೆ ಆ ಕಂಪನವು ಕಣಕಣಗಳಲ್ಲಿ ಹೊಮ್ಮಿಸುವ ಚೈತನ್ಯವು ಅಲೌಕಿಕವಾಗಿರುತ್ತದೆ ಎಂಬುದು ಸುಳ್ಳಲ್ಲ. ಆದರೆ ಅಪವೇಳೆಯಲ್ಲಿ ಇದು ಕರ್ಕಶ ಸದ್ದು ಅನಿಸುವುದೂ ಅಷ್ಟೇ ಸತ್ಯ. ಹಿರಿಯ ನಾಗರಿಕರಿಗೆ ರೋಗಿಗಳಿಗೆ ಶಿಶುಗಳಿಗೆ ಕಿರಿಕಿರಿಯನ್ನೇ ಉಂಟುಮಾಡುತ್ತದೆ.
ಸಾರ್ವಜನಿಕ ಹಿತಾಸಕ್ತಿ ದಾವೆಯಲ್ಲಿ ಕೋರ್ಟು ಆದೇಶಿಸಿದ ಪ್ರಕಾರ  ಕಳೆದ ಕೆಲವು ವರ್ಷಗಳಿಂದ ಶಬ್ದ ಮಾಲಿನ್ಯ ತಡೆ ಕಾನೂನು ಅಸ್ತಿತ್ವಕ್ಕೆ ಬಂದಿದೆ. ಈಗ ವಿಶೇಷ ಸಂದರ್ಭಗಳನ್ನು ಬಿಟ್ಟರೆ ರಾತ್ರಿ ಹತ್ತರ ನಂತರ ಮತ್ತು ಬೆಳಗ್ಗೆ ಆರರ ಮೊದಲು ಮನಸು ಬಂದಂತೆ ಬಾರಿಸುವಂತಿಲ್ಲ. ಉಳಿದ ಸಮಯದಲ್ಲೂ ಶಬ್ದದ ತೀವ್ರತೆಯನ್ನು ನಿರ್ದಿಷ್ಟ ಡೆಸಿಬಲ್ಲುಗಳಲ್ಲಿ ನಿಯಂತ್ರಿಸಬೇಕಾಗುತ್ತದೆ.  ಇದು ಮುಂಬೈಕರರಿಗೆ ಕೊಂಚ ನಿರಾಸೆಯಾದರೂ ಪರಿಮಿತ ಸಮಯದಲ್ಲಿಯೇ  ಡೋಲ್ ನಾದಕ್ಕೆ ಸಂಪೂರ್ಣವಾಗಿ ಪರವಶಗೊಂಡು ಕುಣಿದು ಚೈತನ್ಯಶೀಲರಾಗುತ್ತಾರೆ!

‍ಲೇಖಕರು avadhi

April 7, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: