ಕಂಬನಿ
ಆರನಕಟ್ಟೆ ರಂಗನಾಥ
ತಗ್ಗು ದಿನ್ನೆಗಳೆ ತುಂಬಿರುವ
ಹಳ್ಳಿಯ ರಸ್ತೆ ಡಾಂಬರು ಕಂಡಂತಾದೆ
ನಗರದ ಬೀದಿಯಲ್ಲಿ ನಿನ್ನನ್ನು ಕಂಡಾಗ.
ಬಾನ ತುಂಬಾ ಬಸಿರಾದ ಮೇಘ
ಮಗುವೆತ್ತಂತೆ ಹನಿ ಚೆಲ್ಲಿದಾಗ
ವಿಧಿಯಿಲ್ಲದೆ ಮನೆಯೊಳಗೆ ಸೇರಿಕೊಂಡೆ.

ನೀನು
ಮಾಡಿಕೊಟ್ಟ ಕಾಫಿಯ ನಡುವೆ
ಅದೆಷ್ಟೋ ಮಾತನಾಡಿದೆ
ಮುದ್ದು ಮಕ್ಕಳ ಓದು ಅಂಗಳದಲ್ಲಿ
ಅರಳಿರುವ ರಂಗವಲ್ಲಿ
ಸಾಕಿರುವ ವಿದೇಶಿ ನಾಯಿಮರಿ
ಕೊನೆಯದಾಗಿ ಮದುವೆಯ ಆಲ್ಬಂ
ಹೃದಯ ನೋವಿನಿಂದ ತಿಣುಕಾಡಿತು
ನನ್ನ ಬಗೆಗೆ ಮಾತಾನಾಡಲು ಒಂದಿನಿತು
ಮಾತು ಇಲ್ಲವಾದಾಗ.
ಮಳೆ ಹನಿ ನಿಂತಂತಿತ್ತು ನಿನ್ನ
ಮನೆಯಿಂದ ಹೊರಬಿದ್ದೆ
ಕಣ್ಣ ಹನಿ ಜಾರಿದಾಗಲೆ ನೆನಪಾಯಿತು
ಕನ್ನಡಕವ ನಿನ್ನಲ್ಲೇ ಬಿಟ್ಟು ಬಂದಿರುವುದು.
ಪುನಃ ಮನೆಯೊಳಗೆ ಅಡಿಯಿಟ್ಟಾಗ
ಆಳೆತ್ತರದ ಕನ್ನಡಿಯ ಮುಂದೆ
ನಿಂತಿದ್ದೆ ನೀನು ನನ್ನ ಕನ್ನಡಕವ ಧರಿಸಿ.
ಬಂದ ಕ್ಷಣದ ನೆರಳಿನಾಟವ ಕಂಡು
ತಟ್ಟನೆ ಕನ್ನಡಕವ ನನ್ನೆಡೆಗೆ ಚಾಚಿದೆ
ಕನ್ನಡಕವ ಒರಸಲೆಂದು ನಿಂತೆ
ಮುತ್ತಿನಂತೆ ನಿಂತಿದ್ದವು ಘನವಾಗಿ
ನಿನ್ನ ಕಣ್ಣ ಹನಿಗಳು.
ತಮಿಳು ಮೂಲ: ಉಮಾಸಂಪತ್
ಕನ್ನಡಕ್ಕೆ : ಆರನಕಟ್ಟೆ ರಂಗನಾಥ






ಒಳ್ಳೆಯ ಪದ್ಯ
thank sir
very nice….
ನಿಮ್ಮ ಕವನ ತುಂಬಾ ಚನ್ನಾಗಿ ಮೂಡಿ ಬಂದಿದೆ.
ಅದ್ಬುತವಾಗಿದೆ
Adbhutha