ವೆಂಕಟೇಶ್ ಪಿ ಮರಂಕದಿನ್ನಿ
**
ಪ್ರಶ್ನೆಗಳು!
1
ಹಾರಿಹೋದವು ಬಗಲಲಿದ್ದ ಹಕ್ಕಿಗಳೆಲ್ಲ
ಒಂಟಿ ಗೂಬೆಯೊಂದೇ
ಉಳಿದದ್ದು ಕೊನೆಗೆ
ಈಗ ನೀವೇ ಹೇಳಿ
ಈ ಸಂಗಾತನನ್ನು ಶಕುನಿ ಅಂತ ಹೇಗೆ ಕರೆಯಲಿ?
ನಾನು ವಿಕ್ರಮನಲ್ಲದಿದ್ದರೂ
ಹಿಂಬರುವ ಬೇತಾಳನ
ಹೇಗೆ ಕಳಿಸಲಿ ಹೊರಗೆ?
ಸತ್ತುಹೋದವು ಕನಸುಗಳೆಲ್ಲ
ಕಟ್ಟಿಗೆಗಳಿಲ್ಲ ಸುಡುವುದಕ್ಕೆ
ಹೂಳುವ ಪದ್ಧತಿ ಇಲ್ಲಿ ನಡೆಯಬಹುದೇ?
ಒತ್ತೆ ಇಟ್ಟು ಬಂದೆ ನನ್ನದಲ್ಲದ ನಲಿವುಗಳನ್ನು
ಬಿಡಿಸಿಕೊಂಡು ಬರಲಿ ಹೇಗೆ
ನೋವುಗಳ ವಿನಿಮಯ ಪದ್ಧತಿ
ಎಂದೋ ನಿಂತುಹೋಗಿರುವಾಗ?
**
2
ನನ್ನೂರಿನ ಜಾಲಿಮರ ಅಳುತ್ತದೆ
ಜೂಯ್ ಜರಕ್ ಗರಕ್ ಮಾಡಿಕೊಂಡು
ಗಾಳಿಯ ಗಾಮಾ ಕಿರಣಗಳಿಗೆ
ಕಪ್ಪು ಅಂಟಿನ ಕಣ್ಣೀರು
ಬಿಗಿದ ಜಾಲೀಹೂ ಬಾಸಿಂಗ
ಎಂತೆಂಥ ವಸ್ತ್ರ ಒಡವೆ
ಜೀಕಾರದ ಜೀವಗಳು
ಜೀಯೆನುತ ಸಂಗಡ ಸೋಬಾನೆ
ನಡೆಸಿರಲು
ಮದುವೆಯಾದ ಹೊಸತರ ಕಳೆಯಲ್ಲಿ
ಇಡಿ ಅಡವಿಗೇ ಅಡವೆ
ಹಳದಿ ಪರಾಗದ ಪುಡಿ
ಕೈಯ ಕ್ಯಾನ್ವಾಸಿಗೆ ಮೆತ್ತಿ
ಮೈಯ ಮೂತಿಗೂ ಹತ್ತಿ
ಓಕುಳಿಯೀಗ ಊರತುಂಬ
ಕೈ ಅಲುಗಿಸಿ ನಡೆವ ಕಾಗೆ
ಮುತ್ತಿಕ್ಕುವುದು ಟೂಬಿನ ಎಲೆಗಳಿಗೆ
ಆಹಾ ನೆರಳು
ಟವೆಲು ಹಾಸಿ ಒಂದು ಜೋಂಪು
ನಿದ್ದೆ ನಿದ್ದೆ ಎನುವ ಸ್ಟಾಪು
ಬಂದ ಒಡನೆ ಇಳಿದುಕೊಂಡೆವು
ಬದುಕ ಬಸ್ಸನರೆಗಳಿಗೆ
ಓಂ ಶಾಂತಿ
ಒಂದು ವಿಶ್ರಾಂತಿ!






0 Comments