ಜಲಿಯನ್ ವಾಲಾಭಾಗ್ ನ ಗೋಡೆಯ ಸ್ವಗತದ ಭಾವಾನುವಾದ
ಮೂಲ: ನಿಶ್ತಾ ಛಾಬ್ರಾ
ಕನ್ನಡಕ್ಕೆ: ಸುಧಾ ಆಡುಕಳ
ಪುಟ್ಟ ಮಗುವಿನ ಕೈಯ್ಯೊಂದು
ಮೆಲ್ಲನೆ ನನ್ನನ್ನು ಸವರಿತು
ಚಿತ್ರದಂತಿರುವ ಕಲೆಯ ಬಣ್ಣಕ್ಕೆ ಬೆಚ್ಚಿತು
ರಕ್ತದ ಕಲೆಗಳೇಕೆ ಇಲ್ಲಿ ಮೆತ್ತಿವೆ?
ಅಚ್ಚರಿಯಿಂದ ಅಮ್ಮನನ್ನು ಕೇಳಿತು
ಅಮ್ಮ ಮಗುವಿಗೆ ಕಥೆಯೊಂದ ಹೇಳಿದಳು
ಶತಮಾನದ ಹಿಂದಿನ ಆ ದುರ್ದಿನವ ತೋರಿದಳು
ಮಗುವಿನ ಸುಂದರ ಮನದ ಕೊಳ ಕಲಕಿತು
ಎಲ್ಲೆಲ್ಲೂ ಗುಂಡಿನ ಸುರಿಮಳೆ!
ಜೀವವುಳಿಸಿಕೊಳ್ಳಲು ಓಡುವ ಜನರ ಚೀತ್ಕಾರ!
ಎದೆಯ ಗುಂಡಿಗೆಯಿಂದ ಚಿಮ್ಮಿದ ಬಿಸಿರಕ್ತ!
ಗೋಡೆಯ ತುಂಬೆಲ್ಲಾ ಕೆಂಪು ಚಿತ್ತಾರ
ಅಸಹಾಯಕ ದನಿಗಳೆಲ್ಲಾ ಉಡುಗಿಹೋದ ಮೇಲೆ
ಮತ್ತೆ ಅದೇ ನೀರವ ಮೌನ
ಗೋಡೆಯ ಮೇಲಿನ ಹಸಿರಕ್ತವೂ
ಕ್ರೌರ್ಯಕ್ಕೆ ಹೇಸಿ ಹೆಪ್ಪುಗಟ್ಟಿತ್ತು
ಕಲೆಯ ಸವರುತ್ತಿದ್ದ ಮಗುವಿನ ಕೈ ಮರಗೆಟ್ಟಿತ್ತು
ನಿಟ್ಟುಸಿರಿಟ್ಟ ಮಗು ನನ್ನ ಮೈಯ್ಯ ಸವರುತ್ತಾ ಕೇಳಿತು
” ಯಾಕೆ ನೀನು ಓಡಿಹೋಗುವವರಿಗೆ ದಾರಿಯಾಗಲಿಲ್ಲ?
ಅವರ ಹಸಿಯ ರಕ್ತ ನಿನ್ನನ್ನು ಕರಗಿಸಲಿಲ್ಲ?”
ನಿಜಕ್ಕೂ ನನ್ನೊಳಗು ಅದುರಿತು
ಅಸಹಾಯಕನಾಗಿ ಪಿಸುಗುಟ್ಟಿದೆ
“ಕ್ಷಮಿಸು ಮಗು, ನಾನೊಂದು ನತದೃಷ್ಟ ಗೋಡೆ
ಮನ ಬಂದಾಗ ನಾ ಬಯಲಾಗಲಾರೆ”
0 ಪ್ರತಿಕ್ರಿಯೆಗಳು