ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಮುಂಗಾರಿಗೆ ಮೈಯೊಡ್ಡಿ…' –

ಕಾವೇರಿ ಎಸ್ ಎಸ್

ಭುವಿಯೊಡಲ ಒಳಗೆ ಅನಾಮಿಕ ಬೀಜ ಮೊಳೆದಂತೆ ಯಾಕೋ ಇಂದು ನನ್ನಲ್ಲೂ ನನಗರಿವಿಲ್ಲದೆಯೇ ನಿನ್ನೊಲವು ಚಿಗುರುತ್ತಿದೆ. ದೈನಂದಿನ ಬದುಕಿನ ಜಂಜಾಟದಲ್ಲಿ ಮುಳುಗಿದ್ದ ನಾನು, ನನ್ನತನವನ್ನೇ ಮರೆತಿದ್ದೆ. ಪ್ರತಿದಿನ ಮರುಕಳಿಸುವ ಒಡನಾಟಗಳು ನನ್ನ ಮನವನ್ನು ಬರಡಾಗಿಸಿದ್ದವು. ನಿನ್ನೊಲವಿಗೆ ನೀರುಣಿಸುವ ಸಲುವಾಗಿ ಏಕಾಂತಕ್ಕೆ ಅಂಟದ ನಾನಿಂದು ಏಕಾಂತ ಸವಿಯುತ್ತ ಮುಂಗಾರಿನ ತುಂತುರು ಹನಿಗೆ ಮೈಯೊಡ್ಡಿದ್ದೇನೆ. ಮಳೆಯ ತುಂತುರು ಹನಿ, ಹಿತವಾದ ತಂಗಾಳಿ, ಚುಮು ಚುಮು ಚಳಿ ಒಂಥರ ಸುಖದ ಸ್ಪರ್ಶ ದಯಪಾಲಿಸುತ್ತಿವೆ.

ತಮ್ಮದೇ ಆದ ಚೌಕಟ್ಟು ನಿರ್ಮಿಸಿಕೊಂಡು ಅದನ್ನು ಮೀರದ ಜನ, ಓಡಾಡುತ್ತಿರುವ ವಾಹನಗಳ ಸದ್ದು, ರಸ್ತೆಯ ಇಕ್ಕೆಲಗಳಲ್ಲಿ ಕಾಲೇಜು ಸ್ಕೂಲಿಗೆ ಹೋಗುವ ತವಕದಲ್ಲೂ ತಮ್ಮ ತಮ್ಮಲ್ಲೇ ನಸುನಗುತ್ತಾ ಅವರದೇ ಆದ ಲೋಕದಲ್ಲಿ ಮಿಂದು ನಲಿಯುತ್ತಾ ಸಾಗುವ ಹುಡುಗ-ಹುಡುಗಿಯರು, ಮಳೆಯ ಆರ್ಭಟಕ್ಕೆ ಹಿಡಿಶಾಪ ಹಾಕುತ್ತಾ ತನ್ನ ದಿನನಿತ್ಯದ ಕಾಯಕಕ್ಕೆ ಒಲ್ಲದ ಮನಸ್ಸಿನಿಂದ ಹೊರಟು ಸಪ್ಪೆ ಮೋರೆ ಹಾಕಿ ಕುಳಿತ ನನ್ನ ಸ್ನೇಹಿತೆ, ಈ ಮಳೆಯಿಂದಾದ ಕೊಚ್ಚೆಯಲ್ಲಿಯೇ ಆಹಾರ ಹುಡುಕುತ್ತಾ ಸಾಗುತ್ತಿರುವ ದನ ಕರುಗಳು, ಮೈ ಒಡ್ಡಲು ಎಲ್ಲಾದರೂ ಸ್ಥಳ ಸಿಗುವುದೋ ಎಂದು ಅತ್ತಿಂದಿತ್ತ ಬಾಲ ಅಲ್ಲಾಡಿಸಿ ಕುಯ್ಗುಡುತ್ತ ಹುಡುಕುತ್ತಿರುವ ನಾಯಿ ಇವೆಲ್ಲವನ್ನು ಮನಸ್ಸಿಟ್ಟು ನೋಡುವಾಗ ನೆನಪುಗಳು ನನ್ನೊಳಗೆ ತೂರಿ ಬಂದವು.
ಹೇಳಲಾಗದ ಕಲ್ಪನೆಗಳ ಕೊಳದಲ್ಲಿ ಮಿಂದು ನಿನ್ನೊಲವಿನ ಸುಂದರ ಒಡನಾಟಗಳನ್ನು ಮೆಲುಕು ಹಾಕುತ್ತಾ ಕುಳಿತಿದ್ದೇನೆ. ಆದರೆ ನಿನ್ನೊಲವಿನ ನೆನಪಿನ ಸುಳಿಯಲ್ಲಿ ಸಿಕ್ಕ ನನ್ನ ಮನಕ್ಕೆ, ನನ್ನೆದುರಿಗಿರುವ ಪುಟ್ಟ ಮಗು ನಗೆ ಚೆಲ್ಲಿ ನನ್ನಲ್ಲೂ ಒಂದು ನಿಸ್ವಾರ್ಥ ಒಲವಿದೆ ಎಂದು ಸಾರಿ ಸಾರಿ ಹೇಳುತ್ತಿದೆ. ಅದರ ತುಂಟಾಟ, ವಯ್ಯಾರ, ತುಂಟ ನಗೆ ನನ್ನನ್ನು ಆವರಿಸುತ್ತಿದೆ.
ತನ್ನ ತಾಯಿಯ ಮಡಿಲಲ್ಲಿ ಅವಿತು ಕುಳಿತ ಆ ಮಗು, ಅಮ್ಮನ ಸೆರಗನ್ನು ಮರೆಮಾಚಿ ತನ್ನ ತಿಳಿ ನೀಲಿ ಕಣ್ಣನ್ನು ಪಿಳಿ ಪಿಳಿ ಬಿಡುತ್ತ ನನ್ನತ್ತ ನಗೆ ಚೆಲ್ಲಿತು. ಮತ್ತೊಮ್ಮೆ ತಾಯಿಯ ಮಮತೆಯ ಸ್ಪರ್ಶಕ್ಕೆ ಶರಣಾಗಿ, ತನ್ನ ಚೇಷ್ಟೆಗಳಿಂದ ಅಮ್ಮನನ್ನು ರೇಗಿಸುವ ನಾಟಕವಾಡುತ್ತಿತ್ತು. ಆ ತಾಯಿ ಅದರ ಕೆಂಪಾದ ಕೆನ್ನೆಗೆ ಮೆಲ್ಲನೆ ಒಂದು ಪೆಟ್ಟು ಕೊಟ್ಟರೆ, ಆ ಮಗು ಪ್ರೀತಿ ತುಂಬಿದ ಕೋಪದ ನೋಟದ ಜೊತೆಗೆ ಮುಗುಳ್ನಗೆ ಬೀರುತ್ತಿತ್ತು. ಆ ಮಗು ಯಾರಿಗೂ ಯಾವುದೇ ರೀತಿಯ ಭೇದ ಭಾವ ತೋರದೆ ತನ್ನೆಲ್ಲ ಮುದ್ದು ಮನಸ್ಸಿನ ಪ್ರೀತಿಯನ್ನು ಧಾರೆ ಎರೆಯುತ್ತಿದ್ದ ದೃಶ್ಯ ನೋಡಿ ನನ್ನೊಳಗೆ ನಿನ್ನ ಸವಿನೆನಪುಗಳು ನುಸುಳಿದವು.
ನಿನ್ನ ಮುದ್ದು ಮನಸು, ನನಗಾಗಿ ನಿನ್ನ ಕನಸು ಎಲ್ಲವನ್ನೂ ಅರಿತ ನನ್ನ ಕಣ್ಣಲ್ಲಿ ನಿನ್ನೊಲವಿಗೆ ನೀರುಣಿಸುವ ಸಲುವಾಗಿ ನನಗರಿವಿಲ್ಲದಂತೆಯೇ ನೀರು ಜಿನುಗಿತು.
ಇಂದು ನನಗೆ ಅರಿವಿಲ್ಲದಂತೆ ನನ್ನೊಡಲು ಭಾವುಕತೆಯ ಕಡಲಾಗಿ, ನಿನಗಾಗಿ ಅದು ಎಲ್ಲೆ ಮೀರಿ ಹರಿಯುತ್ತಿದೆ. ನಿನ್ನೊಲವಿನ ನೆನಪಿನ ಬಾಹುಬಂಧನದಲ್ಲಿ ಸುಖಿಸುತ್ತಿದ್ದ ನನಗೆ ಸಂಜೆ ತೆರೆಮರೆಗೆ ಸರಿದದ್ದೇ ತಿಳಿಯಲಿಲ್ಲ. ಸಂಜೆಯ ಸೂರ್ಯನ ಕಿರಣಗಳು ನನ್ನಲ್ಲಿ ಹೊಸ ಬಗೆಯ ಚೈತನ್ಯ ಮೂಡಿಸಿವೆ. ಸೂರ್ಯನ ಕಿರಣಗಳಿಗೆ ಮುದಗೊಂಡ ಮರದ ಎಲೆಗಳು, ನಸುನಾಚಿ ಒಂದಕ್ಕೊಂದು ಜೊತೆಯಾಗಿ ಮುಸಿ ಮುಸಿ ನಗುತ್ತಿವೆ. ತಂಗಾಳಿಯು ಹೂಗಳ ಕಂಪನ್ನು ಎಲ್ಲೆಡೆ ಹರಡಿ ತನ್ನ ಕಾಯಕದ ನಿಷ್ಠೆ ತೋರುತ್ತಿದೆ. ಹಕ್ಕಿಗಳು ತಮ್ಮ ದಿನನಿತ್ಯದ ಕಾರ್ಯ ಮುಗಿಸಿ ಚಿಲಿಪಿಲಿಗುಡುತ್ತ ಎಲ್ಲಿ ಕತ್ತಲಾಗುವುದೋ ಎಂದು ತಮ್ಮ ಗೂಡಿಗೆ ಮರಳುವ ತವಕದಲ್ಲಿವೆ. ಇವೆಲ್ಲದರ ನಡುವೆ ಏಕಾಂತಕ್ಕೆ ಮನ ಒಡ್ಡಿ ಕುಳಿತ ನನ್ನನ್ನು ಮುಂಗಾರಿನ ತುಂತುರು ಹನಿ ಎಚ್ಚರಿಸುತ್ತಿದೆ.
 

‍ಲೇಖಕರು G

24 July, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading