ತಿರುಪತಿ ಭಂಗಿ ಬರೆದ ಸಣ್ಣ ಕಥೆ

ತಿರುಪತಿ ಭಂಗಿ

ಮುಂಜಾನೆ ಹೋದ ಅವ್ನು ಇನ್ನೂ ಬರಲಿಲ್ಲ, ಎಲ್ಲಿಗೆ ಹೋದ್ನೋ,ಯಾವ ಕೆಲಸದ ಮ್ಯಾಲ ಹೋದ್ನೋ, ಯಾರಜೋಡಿ ವ್ಹಾದ್ನೋ, ಒಂದು ತಿಳಿಲಿಲ್ಲ ಅಂತ ರತ್ನಿಗೆ ಹಳಹಳಿ ಆತು. ಮುಗಲಾಗ ಕಪ್ಪಗ ಮೋಡಾಗಿತ್ತು, ಕಪ್ಪಿಗಳು ಒಂದಸವನ ವಟಗುಡ್ತಿದ್ದು. ‘ ಪಳಕ್ನ ಮಿಂಚಿದಾಗ ಭೂಮಿತುಂಬ ದೀಪಾ ಹಚ್ಚಿದಂಗಾತು, ಅದರ ಹಿಂದ ಗುಡುಗುಡು ಅಂತ ಶಬ್ಧ ಬಂದಾಗ ರತ್ನಿ ಮನಿಮುಂದಿರು ಆಡಮರಿ ಬ್ಯಾ.. ಬ್ಯಾ.. ಅಂತ ವದರತಿತ್ತು.
ಸಣ್ಣ ಹುಡುಗುರು ಕುಣಿದಾಡಕೊಂತ ಗುಡುಗುಡು ಮುತ್ಯಾ ಬಂದೋ ಗುಡಗುಡ ಮುತ್ಯಾ ಬಂದೋ ಅಂತಿದ್ದು, ಹೆಣ್ಣ ಹುಡಗ್ಯಾರು ಕಳ್ಳೆಮುಳ್ಲೆ ಕಪಾಟಮಳ್ಳೆ ಅಂತ ಭೂಮಿ ತಿರಗಿದಂಗ ತಿರಗ್ತಿದ್ದು.ದೊಡ್ಡಾರು ಮಳಿ ಬಂತ ಬರೀ ಅಂತ ಹುಡುಗುರ್ನ ಕರಿತಿದ್ರು.
ಮಸುತಿ ಮುಂದ ಕುಂತ ಹಸನಪ್ಪ ಅಜ್ಜ ಗುಸು ಗುಸು ಕೆಮ್ಮಕೋತ ಕುಂತಿದ್ದ.
ಮಾದೇವಾ ನನ್ನ ಲಗೂನ ಮ್ಯಾಕ ಕರಕೋ ಅಂತ ಮುಗಲಕಡೆ ನೋಡತಿದ್ದ. ಹಸನಪ್ಪನ ಮಗಾ ಅಬ್ದುಲ್ ಹೆಂತಿ ಕೈಗೆ ಮೆಹಂದಿ ಹಚ್ಚತ್ತದ್ದ, ಆದ್ರ ತಂದಿ ಕಡಿ ತಿರುಗಿ ನೋಡಲಿಲ್ಲ.
ಯಲ್ಲವ್ನ ಮನುಮುಂದ ಮುರ್ನಾಲ್ಕ ಮಂದಿ ಗಂಡಸರ ಕುಂತ ಯಾವದೋ ಸುದ್ಧಿ ಮಾತಾಡಿ ನಗತಿದ್ರು, ಗಂಡ ಸತ್ತ ಸಂಭ್ರಮಾ ಯಲ್ಲವ್ವ ಬಾಳ ಎಂಜಾಯ್ ಮಾಡಾಕತ್ತಾಳ ಅಂತ ಕೆಲವಬ್ರು ಅಂದಕೊಡ್ರು.
ಕಡ್ಡಕಡಲ್ ಅಂತ ಗದ್ನಿ ಹೊಡತು, ಚಿಟಪಟ ಅಂತ ಹನಿ ಸಿಡ್ಯಾಕ ಹತ್ತಿದಾಗ, ಆಟಾ ಆಡು ಹುಡಗರು, ಯಲ್ಲವ್ವನ ಮನಿಮುಂದ ಇದ್ದ ಗಂಡಸ್ರು ಪಡಗುನಪಾಟ ಆಗಿ ಗೂಡ ಸೇರಿದ್ರು.ಮಳಿ ಧೋ..ಅಂತ ಸುರ್ಯಾಕ ಹತ್ತಿ. ರಾತ್ರಿ ಮಳಿ ಇದು ಲಗೂನ ಬಿಡುದಿಲ್ಲ ಪುನ್ಯಾತ್ಮ ಎಲ್ಲಿ ಹೋಗ್ಯಾನೋ, ಹೆಳ್ದ ಬ್ಯಾರೆ ಹೊಗ್ಯಾನ ಅಂತ ರತ್ನಿಗೆ ಗಂಡನ ಕಡಿ ಚಿಂತಿ ಹೆಚ್ಚಾತು.
ಜೋರಾಗಿ ಗಾಳಿ ಬಿಸಾಕ ಸುರು ಆತು, ಊರಾಗಿರೋ ಎಲ್ಲರ ಮನ್ಯಾಗ ಬೆಳಕ ಬೀರು ಲೈಟ ಪಟ್ಟಂತ ಹ್ವಾದು.ಪುಟ್ಟ ಚಿಮನಿ ದೀಪ ಹತ್ಗೊಂಡು. ಸಣ್ಣ ಹುಡಗ್ರು ಗುಡುಗು, ಮಿಂಚಿಗೆಅಂಜಿಹಸು ಇದ್ದಷ್ಟ ತಿಂದ ಹಾಸಗಿ ಸೇರಕೊಂಡ್ರು. ಕೂಲಿನಾಲಿ ಮಾಡಿ ಬಂದ ಮಂದಿಗೆ ದೌಡ ನಿದ್ದಿ ಹತ್ಗೊಂತು. ರತ್ನಿ ಮಕ್ಕಳಿಗೆ ಉಣಿಸಿ ತಾನು ಸ್ವಲ್ಪ ಕರಳ ಮುಸರಿ ಮಡಕೊಂಡ್ಳು.
ರತ್ನಿಗೆ ಕೋಳಿ ಕೂಗಿದ ಶಬ್ದ ಕೇಳಿ ಬೆಳಗಾಯಿತೆಂದು ಅರಿತಳು. ಗಂಡನ ನೆನಪು ಕೊಂಚ ಮನದಲ್ಲಿ ಸರಿದಾಡಿತು. ‘ಅಮರ ಮತ್ತು ಅಶ್ವಿನಿ’ ಇನ್ನೂ ನಿದ್ದೆಯ ಅಮಲಿನಲ್ಲಿದ್ದರು. ಹೊರಗಡೆ ಇನ್ನೂ ಮಳೆ ನಿಂತಿರಲಿಲ್ಲ. ಎಡಕ್ಕೆ ಅಮರ ಬಲಕ್ಕೆ ಅಶ್ವಿನಿ ಇಬ್ಬರು ಮಕ್ಕಳು ರತ್ನಿ ಪಕ್ಕದಲ್ಲಿಯೆ ಮಲಗಿದ್ದರು. ರತ್ನಿಗೆ ಉಚ್ಚಿ ಬಂದಿದ್ದರಿಂದ ನಿಧಾನವಾಗಿ ಇಬ್ಬರನೂ ಸರಿಸಿ ಒಂದು ಕಡ್ಡಿ ಗೀರಿ ಚಿಮನಿಯ ಮೋತಿಗೆ ಹಿಡಿದಳು.ಅದು ತಿನಕಾಡುತ್ತಾ ಬೆಳಗತೊಡಗಿತು.ಮೆಲ್ಲಗೆ ಕದ ತೆಗೆದು ಗೋಡೆಯ ಪಕ್ಕದಲ್ಲಿ ಉಚ್ಚಿ ಹೊಯ್ದು ಆಕಾಶದತ್ತ ಮುಖ ಚಲ್ಲಿದಳು. ಕಪ್ಪು ಮೋಡ ಹಾಗೆ ಇದ್ದವು. ಈ ಮಳೆ ಇಡೀ ದಿನ ಬಿಡುವ ಹಾಗೆ ಕಾಣುವುದಿಲ್ಲ ಅನ್ನುತ್ತ,ಬಾಗಿಲು ಮುಂದು ಮಾಡಿ ಮತ್ತೆ ಬಂದು ಮಕ್ಕಳ ಪಕ್ಕದಲ್ಲಿ ಮಲಗಿದಳು. ಪುಣ್ಯಾತ್ಮ ಎಲ್ಲಿಗೆ ಹೋದ್ನೊ ಒಂದು ಮಾತು ಹೇಳಿ ಹೋಗಿದ್ರೆ ಮನಸಿಗೆಷ್ಟು ಸಮಾಧಾನ ಇರ್ತಿತ್ತು, ಈ ಗಂಡು ಜಾತಿಯೇ ಇಷ್ಟೆ ಎಂದು ತನ್ನೋಡನೆ ತಾನೆ ಮಾತಾಡುತ್ತಾ ಗಂಡನನ್ನ ಬೈಯ್ಯ ತೊಡಗಿದಳು.
ಈಶ್ವರನಿಗೆ ಹೆಣ್ಣಿನ ಮೋಹ ಅತಿಯಾಗಿತ್ತು.ರತ್ನಿ ನೋಡಲು ಕೊಂಚ ರತಕಪ್ಪಗಿದ್ದಳು, ಆದ್ರೂ ತುಂಬಾ ಚಲುವೆ. ರತ್ನಿ ಮೇಲೆ ಈಶ್ವರನಿಗೆ ತುಂಬಾ ಪ್ರೀತಿ ಇತ್ತು. ಆದ್ರೂ ‘ಮಂಜಿ’ ಅನ್ನುವ ಹೆಂಗಸಿನ ಸಂಗಸುಖ ಅವನಿಗೆ ದೊರಕಿತ್ತು. ಹೀಗಾಗಿ ಈಶ್ವರ ಇತ್ತಿತ್ತಲಾಗಿ ಮನೆಯ ಕಡೆ, ಹೆಂಡತಿ ಮಕ್ಕಳ ಕಡೆ ಗಮನ ಹರಿಸುತ್ತಿರಲಿಲ್ಲ.
ತನ್ನ ಗಂಡ ದೇವರು, ಶ್ರೀರಾಮಚಂದ್ರ ಅಂತ ತಿಳಿದಿದ್ದಳು ರತ್ನಿ.ಇವನು ಇನ್ನೊಬ್ಬಳನ್ನ ಇಟ್ಟುಕೊಂಡಿದ್ದಾನೆ ಅಂತ ಅವಳಿಗೆ ಎಷ್ಟೋ ದಿನಗಳಾದರೂ ತಿಳಿದಿರಲಿಲ್ಲ.ಹೇಳದೆ ಕೇಳದೆ ಹೋದ ಗಂಡ ಹಿಂತಿರುಗಿ ಮನೆಗೆ ಬಂದದ್ದು ನಾಲ್ಕು ದಿನಗಳ ತರುವಾಯ. ಕುಪಿಳಾದ ರತ್ನಿ ‘ಹೇಳದೆ ಕೇಳದೆ ಎಲ್ಲಿಗೆ ಹೋಗಿದ್ರೀ’ ಮನೆ ಮಕ್ಕಳು ಹೆಂಡ್ತಿ ಕಬುರು ನಿಮಗಿಲ್ಲವೆ? ರತ್ನಿ ಗಂಡನನ್ನ ಬರೊಬ್ಬರಿ ಜಾಡಿಸಿದಳು.ತಪ್ಪು ಮಾಡಿದವ್ರು ಯಾವಾಗಲು ತಲೆ ತಗ್ಗಿಸುತ್ತಾರೆ. ಹಾಗೆ ಈಶ್ವರನು ಕೂಡಾ ರತ್ನಿ ಎದುರು ತಲೆ ತಗ್ಗಿಸಿ ನಿಂತ.
ರತ್ನಿ ಓದು-ಬರಹ ಗೊತ್ತಿರದ ಪೆದ್ದಿ ನಿಜ. ಆದ್ರೆ ಗಂಡನನ್ನು ಓದಿಕೊಳ್ಳದಷ್ಟು ದಡ್ಡಿಯಾಗಿರಲಿಲ್ಲ. ಮಂಗಳವಾರ ಮನೆಗೆ ಬಿಕ್ಷೆಗೆ ಬಂದಿದ್ದ ಸ್ವಾಮಿ ತಾಯಿ ನಿಮ್ಮ ಮನೆಯವರು ಆ ಊರಲ್ಲಿ’ ಮಂಜಿ’ ಅನ್ನವಳ ಮನೆಯಲ್ಲಿ ಒಂದು ಬೆಳಗಿನ ಜಾವ ಹಾಯಾಗಿ ಮಲಗಿದ್ದರು. ನನ್ನ ಕಂಡೊಡನೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ವಿಫಲರಾಗಿ ಹೀಗೆಂದರು,`ಸಾಮಿಜಿ ದಯಮಾಡಿ ಈ ವಿಷ್ಯಾ ನನ್ನಾಕಿ ಮುಂದ ಹೇಳಬ್ಯಾಡಪೋ ಸಾಯುತನಕ ನಿನ್ನ ಗುಲಾಮನಾಗಿರ್ತಿನಿ ಅಂದಿದ್ದ’.ಅದಕ್ಕೆ ಸ್ವಾಮಿಜಿ ತಲೆ ಅಲ್ಲಾಡಿಸಿ ಆಯ್ತು ಅನ್ನುವ ಭರವಸೆ ನೀಡಿ ಬಂದಿದ್ದರು.

ರತ್ನಿಗೆ ಅವರು ಎಲ್ಲಿಗೆ ಹೋಗಿದ್ದರು ಅನ್ನುವ ಸತ್ಯ ಗೊತ್ತಾಗಿರಬೇಕು.ಆ ಮುಟ್ಟಾಳ ಸಾಮಿ ಹೇಳಿರಬೇಕು.ಮನೆ ಹಾಳ ಸ್ವಾಮಿಗೆ ದಮ್ಮಯ್ಯ ಅಂದಿದ್ದೆ, ತಾನಂತು ಸನ್ಯಾಸಿ, ನಮ್ಮಂತವರ ಮನದ ಮಂಗತನ ಅವನಿಗೆನು ತಿಳಿಬೇಕು. ಅಂತ ಈಶ್ವರ ಮನದಲ್ಲಿ ಸ್ವಾಮಿಯನ್ನು ಬೈಯುತ್ತಾ ಕೊಳೆಯಾದ ಬಟ್ಟೆ ಕಳೆದು ಸ್ನಾನಕ್ಕೆ ಅನಿಯಾದ. 6 ವರ್ಷದ ಅಶ್ವಿನಿ ಅಪ್ಪಾ-ಅಪ್ಪಾ ಇಷ್ಟದಿನ ಎಲ್ಲಿಗೆ ಹೋಗಿದ್ದೆ ಅಂತ ಕೇಳಿದಾಗ ಈಸ್ವರನ ಮೊಗದಲ್ಲಿ ತಿಳಿಯಾದ ಕೋಪಾಗ್ನಿ ಹಾಯ್ದು ಹಾಗೆ ಮರೆಯಾಯ್ತು. ಮಗುವಿನ ಪ್ರಶ್ನೆಗೆ ತಿನಕಾಡಿ ಏನೋ ಒಂದು ಉತ್ತರ ಹೇಳಿ ಸ್ನಾನ ಮುಗಿಸಿದ.
ಅಂತೂ ಗಂಡ ಇನ್ನೊಬ್ಬಳನ್ನ ಇಟ್ಟುಕೊಂಡಿದ್ದಾನೆ.ಯಾವ ಸಮಯದಲ್ಲಿ ನಮ್ಮನ್ನ ಬೀದಿಗೆ ಬಿಟ್ಟು ಹೋಗುತ್ತಾನೋ ಅಂತ ಅಂಜಿಕೆ,ಆತಂಕ,ಭಯ, ರತ್ನಿಯ ಮನದಲ್ಲಿ ಮಡುಗಟ್ಟಿ ನಿಂತಿತು. ನನ್ನಲ್ಲಿಲ್ಲದ್ದು ಅವಳಲ್ಲಿ ಏನಿದೆಯೋ ಅಂತ ತನ್ನನ್ನ ತಾನೆ ಶಪಿಸುತ್ತಾ, ಅಮರನಿಗೆ ಶಾಲೆಗೆ ಹೋಗುವ ಹೊತ್ತಾಯ್ತು ನೆನಪಿಸಿ, ಅಶ್ವಿನಿಗೆ ಸ್ಕೂಲ ಇನ್ಫರ್ಮ ತೊಡಿಸಿ ಹನೆಗಗೊಂದು ಟಿಕಳೆ ಒತ್ತಿದಳು. ಅಶ್ವಿನಿ ಥೇಟ್ ಅವರ ಅಪ್ಪನ ಮೈ ಬಣ್ಣ ಹೊಂದಿದ್ದಳು.ಬೆಳ್ಳಗೆ ತೆಳ್ಳಗೆ ಇರುವ ಅವಳನ್ನು ಕಂಡು ರತ್ನಿ, ಮಗಳು ನನಗಿಂತ ಚಲ್ವಿ ಅಂತ ಹೆಮ್ಮೆ ಪಡುತ್ತಿದ್ದಳು.
ಮಕ್ಕಲು ಶಾಲೆಗೆ ಹೋದ ಒಂದು ಗಂಟೆ ನಂತರ ಪತಿದೇವರು, ರತ್ನಿ ಹತ್ತಿರ ಚಿಕ್ಕ ಮಗುವಿನಂತೆ ಬಂದು ಕುಳಿತನು. ರತ್ನಿ, `ನನ್ನನ್ನ ಕ್ಷಮಿಸು’ ನಾನು ತಪ್ಪು ಮಾಡಿಬಿಟ್ಟಿದ್ದೆನೆ. ಏನದು ತಪ್ಪು; ನಾನು ಕ್ಷಮಿಸುವಷ್ಟು ದೊಡ್ಡದಿದೆಯಾ ನಿಮ್ಮ ತಪ್ಪು? ರತ್ನಿ ಕೇಳಿದಳು.
ನೇರವಾಗಿ ಈಶ್ವರ ಹೇಳಿಯೆ ಬಿಟ್ಟ. ಮಂಜಿ ಅನ್ನವಳನ್ನ ನಾನು ಮದುವೆ ಆಗುವ ಮುಂಚೆನೆ ಪ್ರೀತಿಸುತ್ತಿದ್ದೆ.ಅವಳು ನನ್ನನ್ನ ಪ್ರೀತಿಸುತ್ತಿದ್ದಳು. ಆದ್ರೆ ಜಾತಿ ಅನ್ನುವದೊಂದಿದೆಯಲ್ಲಾ ಅದು ಅಡ್ಡ ಬಂದು ನಮ್ಮ ಮದುವೆ ಹಾಳಾಗಿ ಹೋಯ್ತು. ಅವಳಿಗೆ ತನ್ನ ತಾಯಿಯ ತಮ್ಮನಿಗೆ ಕೊಟ್ಟು ಮದುವೆ ಮಾಡಿದರು.ಅವನ ಹೆಸರು ಮಾರುತಿ ಸಿಕ್ಕಾಪಟ್ಟಿ ಕುಡಿಯುತ್ತಿದ್ದ.ಮಂಜಿಗೆ ರಾತ್ರಿ ತುಂಬಾ ಕಿರುಕುಳ ನೀಡತ್ತಿದ್ದಂತೆ. ಮೊದಲ ರಾತ್ರಿ ಅವಳ ಬಟ್ಟೆಯಲ್ಲಾ ಕಳಚಿತನ್ನ ಮೊಬೈಲ್ನಲ್ಲಿ ಫೋಟೊತಗೆದು ಸೇವಮಾಡಿ ಇಟ್ಟುಕೊಂಡು ತನ್ನ ಸ್ನೇಹಿತರಿಗೆ ತೋರಿಸುತ್ತಿದ್ದನಂತೆ, ಒಂದು ದಿನ ರಾತ್ರಿ ಅವಳ ಮೈ ಹನ್ನಾಗುವಂತೆ ಈಜಾಡಿದ್ದನಂತೆ.ಆ ಯಾತನೆ ತಾಳದೆ ಆತ್ಮಹತ್ಯ ಮಾಡಿಕೊಳ್ಳಲು ಮಂಜಿ ಯೋಚಿಸಿದ್ದಳಂತೆ. ಮದುವೆಯಾದ 6 ತಿಂಗಳ ನಂತರ ನಾನು ಪಟ್ಟಣದಲ್ಲಿ ಬಟ್ಟೆ ಅಂಗಡಿಯಲ್ಲಿ ಅವಳನ್ನ ಕಂಡದ್ದು.ಗಂಡನ ಸಾಹಸ ಬದುಕಿನ ಪಾಡು ಹೇಳಿ ಮಂಜಿ ಕಣ್ಣೀರಿಟ್ಟಳು. ನನಗೂ ಮಂಜಿ ಮೇಲಿನ ಪ್ರೀತಿ ಮರೆಯಾಗಿರಲಿಲ್ಲ.
ಒಂದು ದಿನ ಮಾರುತಿ ಸಾಕಷ್ಟು ಕುಡಿದು ಬೈಕ್ ಓಡಿಸುವಾಗಲಾರಿಗೆ ಗುದ್ದಿ ಹೆಣವಾಗಿ ಮಲಗಿದ್ದ. ಮಂಜಿಯ ಕಂಕುಮ ಅಳಕಿ ಹೋಗಿತ್ತು. ಗಂಡನ ಕಿರುಕುಳ, ಹೆಣ್ಣನ್ನ ನೀಚವಾಗಿ ಕಾಣುವ ಅವನ ಅವನ ಗುಣದ ದೌರ್ಭಲ್ಯ ನೆನೆದು ಮಂಜಿ ಕಣ್ಣು ಒದ್ದೆಮಾಡಿಕೊಂಡಳು. ಇಷ್ಟು ಚಿಕ್ಕ ವಯಸ್ಸಿನಲ್ಲಿಯೆ ಬದುಕು ನನ್ನ ಒಬ್ಬಂಟಿಯಾಗಿ ನಿಲ್ಲಿಸಿತಲ್ಲ ಅಂತ ಭಯಗೊಂಡು ಮಂಜಿ ಮಾರುತಿಯ ಹೆಣದ ಮುಂದೆ ಗೊಳೊ ಎಂದು ಬೋರಿಟ್ಟಳು. ಮಾರುತಿಯ ಅಕ್ಕ, ಅಂದ್ರ ಮಂಜಿಯ ತಾಯಿ ಮಗಳಿಗೆ ಸಮಾಧಾನ ಮಾಡ್ಕೊ ಎಂದು ಅವಳನ್ನ ತಬ್ಬಿಕೊಂಡು ಒಂದೆರಡು ಹಣಿ ಕಣ್ಣಿರು ನೆಲಕ್ಕೆ ಚಲ್ಲಿದಳು. ನೆಲ ಬೇಗನೆ ನುಂಗಿ ನಾನೆನು ನುಂಗಿಲ್ಲ ಅನ್ನುವ ರೀತಿ ಇತ್ತು.
ಮಾರುತಿ ಸತ್ತು ಒಂದುವರೆ ತಿಂಗಳ ನಂತರ ಮಂಜಿ ನನಗೆ ಸಿಕ್ಕಿದಳು. ನನ್ನ ನೋಡಿದ ಕೂಡಲೆ ನನ್ನ ತಬ್ಬಿಕೊಂಡು`ಈಶು’ ಅಂತ ಬಿಕ್ಕಿದಳು. ಅಷ್ಟೊತ್ತಿಗೆ ನಿನ್ನ ಹೊಟ್ಟೆಯಲ್ಲಿ ಅಮರ ಬೆಳೆಯುತ್ತಿದ್ದ, ಅಂತ ಈಶ್ವರ ಹೇಳುತ್ತಲೆ ಇದ್ದ. ರತ್ನಿ ಪ್ರಾಥಮಿಕ ಶಾಲೆಯ ವಿಧ್ಯಾಥರ್ಿಗಳಂತೆ ಗಂಡನ ಪ್ರೇಮ ಪ್ರಸಂಗ ಕೇಳುತ್ತಿದ್ದಳು. ಗಂಡ ತನ್ನೆಲ್ಲ ವಿಷಯವನ್ನ ಇಷ್ಟೊಂದು ಮೃದುವಾಗಿ ಮಗುವಿನಂತೆ ಹೇಳಿದ್ದು ಕಂಡು ರತ್ನಿಗೆ ಅವನ ಮೇಲೆ ಕೋಪವೇ ಬರಲಿಲ್ಲ. ಈಗ `ಮಂಜಿ’ ಎಲ್ಲಿದ್ದಾಳೆ, ಹೇಗಿದ್ದಾಳೆ, ಅವಳ ಜೊತೆಯಲ್ಲಿ ಯಾರೂ ಇಲ್ಲವೇ ಪಾಪ! ಅಂದಾಗ ಈಶ್ವರ ರತ್ನಿಯ ಕೈ ಹಿಡಿದು ತನ್ನ ಹಣೆಗೆ ಒತ್ತಿಕೊಂಡು, ನೀನೆಷ್ಟು ಒಳ್ಳೆಯವಳು ರತ್ನಾ,ಅಂದಾಗ ಅವನ ಕಣ್ಣಂಚಲ್ಲಿ ಒಂದು ಹಣಿ ಕಣ್ಣೀರು ಹೊರಗೆ ಬರಲು ಹವಣಿಸುತ್ತಿತ್ತು. ಆದರೆ ಅದನ್ನ ಹೊರಕ್ಕೆ ಕೆಡಿಯದೆ ಕೈಯಿಂದ ತೀಡಿ ಅಲ್ಲೆ ಹತ್ಯ ಮಾಡಿದ ಈಶ್ವರ.
ರತ್ನಿ ಅಂದು ಮುಂಜಾನೆ ಬೇಗನೆ ಸ್ನಾನ ಮಾಡಿ ಮನೆಯ ಪಕ್ಕದಲ್ಲಿರುವ ಹನುಮನ ಗುಡಿಗೆ ಹೋಗಿ ನಮಸ್ಕಾರ ಮಾಡಿ ಅಂಗಾರ ತಂದು ಅಮರ ಹಾಗು ಅಶ್ವಿನಿ ಹಣೆಗೆ ನಯವಾಗಿ ಹಚ್ಚಿದಳು, ಚಿಕ್ಕ ಪ್ಲೇಟಿನಲ್ಲಿ ಇಬ್ಬರಿಗು ಒಂದಿಷ್ಟು ಹಾಕಿ ತಾನೊಂದು ತಾಟಿಗೆ ಹಾಕಿಕೊಂಡು ಮಕ್ಕಳೊಂದಿಗೆ ತಿಂದು ಮುಗಿಸಿದಳು. ಈಶ್ವರ ತೋಟದ ಕಡೆ ಹೋಗಿದ್ದ. ಹುಲಸಾಗಿ ಬೆಳೆದಿದ್ದ ಕಬ್ಬಿನ ತೋಟಕ್ಕೆ ಕಾಡ ಹಂದಿ ಕಾಟ ಹೆಚ್ಚಾಗಿತ್ತು. ರಾತ್ರಿ ಕಬ್ಬಿಣ ತೋಟದ ಸುತ್ತಮುತ್ತ ಪಟಾಕಿ ಸಿಡಿಸಿ ಸದ್ದು ಮಾಡಿ ಹಂದಿಗಳನ್ನ ಓಡಿಸುವಲ್ಲಿ ನಿರತನಾಗುತ್ತಿದ್ದ. ಎಷ್ಟೆ ಪ್ರಾಯಸಪಟ್ಟರೂ ಹಂದಿಗಳು ಕಬ್ಬು ಕಡೆದು ಹಾಕಿ ಕಬ್ಬು ಹಾಳು ಮಾಡುತ್ತಿದ್ದವು. ಅದಕ್ಕೆ ಹಾಕಿದ ಖಚರ್ು, ದುಡಿಮೆ ಲೆಕ್ಕ ಹಾಕಿ, ಈಗ ಕೈಗೆ ಬಂದ ಬೆಳೆಯನ್ನ ನೆನೆದು ಕುಪಿತನಾಗುತ್ತಿದ್ದ.
ಆದದ್ದು ಆಯ್ತು ಬರುವಷ್ಟು ಬಂದೇ ಬರುತ್ತದೆ. ನಾವೆಷ್ಟೇ ತಿನಲಾಡಿದರೂ ನಮಗೆ ಸೇರದೆ ಇರುವದು ಸೇರುವದಿಲ್ಲ. ನಮಗೆ ಬರಬೇಕಾದದು ಯಾರು ತಡೆದೂ ತಪ್ಪುವದಿಲ್ಲ, ಎಂದು ತನಗೆ ತಾನೆ ಸಮಾಧಾನ ಮಾಡಕೊಂದು ಸುಮ್ಮನಗುತ್ತಿದ್ದ. ಮನ್ನೆ ಮಂಜಿಯ ಸುದ್ದಿಯನ್ನ ರತ್ನಿಗೆ ಹೇಳಿದ ಮೇಲೆ ಮನಸು ಸ್ವಲ್ಪ ಹಗುರಾಗಿತ್ತು. ನನ್ನ ಹೆಢತಿ ಎಷ್ಟು ಒಳ್ಳೆಯವಳು. ಅದ್ಕೆ ಹೆನ್ನು ಸಹನಶೀಲಳು, ಸಮಯಧರಿತ್ರಿ , ಪುಣ್ಯವತಿ, ದೇವತೆ ಅಂತ ಹೇಳ್ತಾರೆ, ಅದು ಸುಳ್ಲಲ್ಲ. ಆದ್ರೂ ರತ್ನಿಗೆ ನೋವಗಿರದೆ ಇದ್ದಿತೆ? ಅವಳಿಗು ಅವಳಿಗೆ ಆದ ಮನಸ್ಸು, ಆಸೆ, ಆಕಾಕ್ಷೆ, ಇರುತ್ತವೆ. ಗಂಡನಾದವನು ನಾನು ಮಾಡಿದ ಈ ತಪ್ಪು ಅವಳು ಯಾಕೆ ಸಹಿಸಿಕೊಂಡಳು? ಈಗಿನ ಹೆಂಗಸರು ಗಂಡ ಅಡ್ಡ ಹಾದಿ ಹಿಡಿದಿದ್ದಾನೆ ಅನ್ನುವ ಸಂಗತಿ ತಿಳಿದ ಕೂಡಲೇ ತವರ ಮನೆಗೆ ಹೋಗಿ ಗಂಟು ಮಟ್ಟೆ ಹೊತ್ತು ಅಣ್ಣ-ತಮ್ಮಂದಿರನ್ನು ಚೂಬಿಟ್ಟು ಕೈ-ಕಾಲು ಮುರಿಸುವವರೇ ಹೆಚ್ಚು. ಇಲ್ಲವೆ ವಿಚ್ಚೇದನ ಕೊಟ್ಟು ಎದ್ದು ಹೋಗುವವರಿದ್ದಾರೆ.ಆದ್ರೂ ಕೂಡಾ ರತ್ನಿ ಮೊದಲಿನಂತೆ ನನ್ನೊಂದಿಗೆ ಖುಷಿಯಾಗಿ ಇರ್ತಾಳೆ. ಅವಳಿಗೆ ನನ್ನ ಮೇಲಿನ ಪ್ರೀತಿ ಕೊಂಚ ಕೂಡಾ ಕಡಿಮೆಯಾಗಿಲ್ಲ. ಮಂಜಿ ಈಗ ಹೇಗಿದ್ದಾಳೆ, ಆರಾಮಿದ್ದಾಳಾ, ಬೆಟ್ಟಿಯಾಗಿಲ್ಲೇನ? ಅಂತ ಕೇಳ್ತಿರ್ತಾಳೆ. ಒಂದ ಸಲ ಮನೆಗೆ ಕರಕೊಂದು ಬಾ ಅವಳನ್ನ ನೋಡಬೇಕು ಅಂತ ಹೇಳ್ಯಾಳ. ಯಕಿರಬಹುದು? ನನಗೇನು ತಿಳಿಯದಾಗಿದೆ. ಯಾಕಾದ್ರು ರತ್ನಿ ಮುಂದ ಹೇಳಿದ್ಯ ನಾನು ಸುಮನೆ ಹ್ಯಾಗೋ ಮ್ಯಾನೇಜ ಮಾಡ್ತಾ ಇರ್ಬಹುದಾಗಿತ್ತು. ಇರ್ಲಿ ಈಗಾಗಲೇ ಹೇಳಿದಾಗಿದೆ ` ಮುತ್ತು ಒಡೆದರೆ ಆಯ್ತು, ಮಾತು ನುಡಿದರೆ ಆಯ್ತು. ಎರಡು ಒಂದೆ. ನಾನು ಮಂಜಿ ಕರೆದರೆ ನಮ್ಮನೆಗೆ ಬರಬಹುದಾ? ಅವಳನ್ನ ಕರೆತರುವಾಗ ಸುತ್ತಮುತ್ತಲಿನ ಜನ ಏನಂದಾರು? ಥೂ ಹಲಕಟ್ಟ ಜೀವನ ನಂದು ಅಂತ ಈಶ್ವರ ತನಗೆ ತಾನೆಹಳೆದುಕೊಂಡು , ಹಂದಿ ಹಾಳು ಗೆಡುವಿದ ಕಬ್ಬು ಹೆಗಲ ಮ್ಯಾಲ ಹೊತ್ತ ಮನೆ ಹಾದಿ ಹಿಡಿದ.
ಅಮರ ಮತ್ತು ಅಶ್ವಿನಿ ಶಾಲೆಗೆ ಹೋಗಿದ್ದರು. ರತ್ನಿ ಮನೆಯಲ್ಲಿ ಮನೆಯಲ್ಲಿರುವ ಒಂದು ಕಂಬಕ್ಕೆ ಬೆನ್ನು ಇಟ್ಟು, ಮುಂದೆ ಅಕ್ಕಿಯನ್ನು ಹರವಿಕೊಂದು ಅದರಲ್ಲಿರುವ ಹಳ್ಳ ಆರಿಸಿ ಒಂದು ಕಡೆ ಕೂಡಿಹಾಕುತ್ತಿದ್ದಳು. ಮೇಕೆ ಮರಿ ಆಗೊಮ್ಮೆಮ್ಮೆ ಅಕ್ಕಿಗೆ ಬಾಯಿ ಹಾಕಿ ಒಂದಿಷ್ಟು ಮುಕ್ಕುತಿತ್ತು.ಬಲಗೈಯಿಂದ ಮೇಕೆ ಮರಿಯ ಬೆನ್ನಿಗೆ ಬಾರಿಸಿ ರತ್ನಿ ಹಾಳಾದ ಮರಿ ಎಷ್ಟು ತಿಂದ್ರು ಸಾಕಿಲ್ಲ ಅನ್ನುತ್ತ ಹಳ್ಳ ಆರಿಸುತ್ತಿದ್ದಳು.
ಬಾಗಿಲಲ್ಲಿ ಹೆಜ್ಜೆ ಸಪ್ಪಳ ಆದಾಗ ಹಿಂತಿರುಗಿ ನೋಡಿದಾಗ ಈಶ್ವರ ಒಂದು ತೆಕ್ಕಿ ಕಬ್ಬು ಹೊತ್ತು ತಂದಿದ್ದ. ಇದೆಲ್ಲ ಆ ಹಂದಿಯದೆ ಕಿತಾಪತಿ ಅಂತ ರತ್ನಿ ಸೂಕ್ಷ್ಮವಾಗಿ ಅರಿತು ಗಂಡನಿಗೆ ಸ್ನಾನಕ್ಕೆ ನೀರು ಕಾಯ್ದಿವೆ ಬಚ್ಚಲಕ್ಕೆ ಇಟ್ಟಿದ್ದೀನಿ ಸ್ನಾನ ಮಾಡಿ, ತಿನ್ನಲು ಉಪ್ಪಿಟ್ಟು ಇದೆ.ಅಂತ ಹೇಳಿ ಅಕ್ಕಿಯನ್ನು ರತ್ನಿ ಕಳೆದುಹೋದಳು.
ಮಂಜಿ ಕೆಂಪಗೆ , ತೆಳ್ಳಗೆ ಬಲು ಸುಂದರಿಯಗಿದ್ದಳು. ಅವಳ ಬಟ್ಟಲುಗಣ್ಣುಗಳು ಅವಳ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿದ್ದವು. ರತ್ನಿ ನನಗಿಂತಲೂ `ಮಂಜಿ ಬಲು ಸುಂದರಿ ಅಂತ ಗೊತ್ತು ಮಾಡಿಕೊಂಡಳು.
`ಬನ್ನಿ ಮ್ಯಾಕೆ ಕೂತಕೊಳ್ಳಿ ಅಂತ ಕಟಗಿ ಕುಚರ್ಿ ತೋರಿಸಿದಳು ರತ್ನಿ. ಮಂಜಿ ಸಂಕೋಚದಿಮದ ಕುಚರ್ಿ ಏರಿದಳು. ಆರಾಮಿದ್ದೀರಾ? ನಿಮ್ಮ ಬಗ್ಗೆ ನಮ್ಮ ಪತಿದೇವರು ಎಲ್ಲಾ ಹೇಳಿದ್ದಾನೆ. ಪಾಪ! ಇಷ್ಟು ಚಿಕ್ಕವಯಸ್ಸಿನಲ್ಲಿ….ಆದೇವ್ರು ಹೀಗೆ ಮಾಡಬಾರದಿತ್ತು. ಬಂದದ್ದು ಅನಭವಿಸಲೇಬೇಕಲ್ಲ, ಅನ್ನುತ್ತ ರತ್ನಿ ಮಂಜಿಯ ಕುರಿತು ಸಾಂತ್ವನ ಹೇಳಿದಳು. ಮಂಜಿಯ ಕಣ್ಣು ಅಷ್ಟೊತ್ತಿಗೆ ತುಂಬಿದ್ದವು. ಕೊರಳು ಉಬ್ಬಿಕೊಂಡಿತ್ತು. ಈಶ್ವರಿ ಇನ್ನೊಂದು ಕುಚರ್ಿಯಲ್ಲಿ ಕುಳಿತು, ಇವನು ಹಿರೆಮಗ `ಅಮರ’ ಇವಳು ಚಿಕ್ಕವಳು `ಅಶ್ವಿನಿ’ ಅಂತ ಮಕ್ಕಳ ಪರಿಚಯ ಮಾಡಿದ. ರತ್ನಿ ಬಿಸಿ ಬಿಸಿ ಹಾಲು ತಂದು ಮಂಜಿಗೆ ಹಾಗೂ ಗಂಡನಿಗೊಂದು ಕೊಟ್ಟಳು. ಅಶ್ವಿನಿ ನನಗೂ ಹಾಲು ಅಂದಾಗ ಒಳಗಡೆ ಹಾಕಿಟ್ಟಿನಿ ಹೋಗಿ ಕುಡಿರಿ ಎಂದಳು.
ಈಶ್ವರನಿಗೆ ಒಂದು ರೀತಿ ಸಂಭ್ರಮವೊ ಸಂಭ್ರಮ, ಪ್ರೀತಿಸಿದವಳು ಮತ್ತು ಮದುವೆಯಾದವಳು ಇಬ್ಬರೂ ಇಷ್ಟೊಂದುಅನ್ಯೊನ್ಯವಾಗಿ ಕುಶಲ-ಕ್ಷೇಮ ಹಂಚಿಕೊಳ್ಳುತ್ತಿದ್ದರಲ್ಲ ಇದಕ್ಕಿಂತ ಒಳ್ಳೆಯದು ನನಗೆನು ಬೇಕು. ಹೀಗೆ ಇಬ್ಬರೂ ಅನ್ಯೊನ್ಯವಾಗಿದ್ದರೆ ನನ್ನಂತ ಪುಣ್ಯವಂತ ಈ ಭೂಮಿಯ ಮೇಲೆಯೆ ಇಲ್ಲ. ತನ್ನ ಮನದ ಹರ್ಷವನ್ನು ತನ್ನೊಳಗೆ ತಾನೆ ಸವಿಯುತ್ತ ಈಶ್ವರ ಕಲ್ಪನಾತೀತನಾದ.
ರಾತ್ರಿ ಸಿಹಿ ಊಟವಾಯಿತು. ಮಂಜಿಗೆ ರತ್ನಳ ಮೇಲೆ ಪ್ರೀತಿ ಹೆಚ್ಚಾತು. ನಾನು ನಿಜವಾಗ್ಲು ಇವಳಿಗೆ ಮೋಸ ಮಾಡ್ತಿದಿನಿ ಅಂತ ತನಗೆ ತಾನೆ ಪ್ರಶ್ನಿಸಿಕೊಂಡಳು ಮಂಜಿ. ಆದ್ರೆ ಮನಸು ಯಾವ ಉತ್ತರ ಹೇಳಲಿಲ್ಲ. ಹಿಂತ ಹಾಲಿನಂತ ಸಂಸಾರದಲ್ಲಿ ನಾನು ಬರಬಾರದು. ಈಶ್ವರನ ಆಶ್ರಯವನ್ನ ಆಶಿಸುವದು ನಾನು ಮಾಡುವ ದೊಡ್ಡ ತಪ್ಪು. ರತ್ನಿಯ ಪಾಪ ನನ್ನನ್ನ ಸುಮ್ನೆ ಬಿಟ್ಟಿತೆ? ಹಿಂಯ ಮುಗ್ಧ ಗೌರಿ. ನನ್ನ ಈಶ್ವರನಿಗೆ ಸಿಕ್ಕಿದ್ದು ಪುಣ್ಯ. ರತ್ನಿಯ ಪ್ರೀತಿ ಯಾವಾಗಲೂ ನನ್ನ ಮೇಲೆ ಹೀಗೆ ಇರಲಿ. ಆದ್ರೆ.. ನಾನು ಈ ಸಂಸಾರದಿಂದ ದೂರವಾಗಬೇಕೆಂದು ಮಂಜಿ ಹಾಸಿಗೆಯಲ್ಲಿ ಮಲಗಿದ್ದಾಗ ಚಿಂತೆಗಿಳಿದಿದ್ದಳು. ಅವಳ ಪಕ್ಕದಲ್ಲಿಯೇ ಮಲಗಿದ ರತ್ನಿ ನಿದ್ದೆ ಹೋಗಿದ್ದಳು. ಅಶ್ವಿನಿ ಮಂಜಿಯ ಎದೆಯ ಮೇಲೆ ಕೈ ಹಾಕಿ ಮಲಗಿದ್ದಳು. ಅಮರ ಈಶ್ವರನ ಹತ್ತಿರ ಹೊರಗಿನ ಇನ್ನೊಂದು ಕೋನೆಯಲ್ಲಿ ಮಲಗಿದ್ದ. ಮಂಜಿ ಇಡಿ ರಾತ್ರಿ ನಿದ್ದೆಯೇ ಬರದೆ ಹಾಸಿಗೆಯ ಮೇಲೆ ಹೊರಳಾಡಿ, ಮುಂಜಾನೆ ಎದ್ದು ನಾನು ಹೊರಡುತ್ತೇನೆ ರತ್ನಕ್ಕ ಅಂದಳು. ರತ್ನಿ ಇನ್ನೆರಡು ಇಲ್ಲೆ ಇರೀ ಅಂದಳು. ನಮ್ಮ ತೋಟ-ಕಬ್ಬು ನೋಡಿಕೊಂಡು ಹೋಗಿರಂತೆ,ಎಂದು ಬಲವಂತ ಮಾಡಿದಳು. ಆದರೂ ಮಂಜಿ ಹೊರಡಲು ಸಿದ್ದಳಾದಳು.
ನಿನಗೆ ತೊಂದರೆ-ತಾಪತ್ರೆಯಾದ್ರೆ ಸಂಕೋಚಿಲ್ದೆ ಬನ್ನಿ. ಬೇಕಾದಾಗ ಸಹಾಯ ಮಾಡ್ತಿನಿ `ಮಂಜುಳಾ’ ಅಂತ ರತ್ನಿ ಅನ್ನುವಾಗ ಮಂಜಿಯ ಕಣ್ಣು ಒದ್ದೆಯಾಗಿದ್ದವು. ಅಶವಿನಿ ಮತ್ತೆ ಬನ್ನಿ ಅಂಟಿ ಅಂದಾಗ ಈಶ್ವರನ ದು:ಖದ ಕಟ್ಟೆಯು ಸ್ವಲ್ಪ ನಡುಗಿತು. ಮಂಜಿ ಅಂದು ಮುಂಜಾನೆ ಹೊರಟು ಹೋದಳು. ಅವಳು ಮರೆಯಾಗುವರೆಗು ರತ್ನಿ ಕೈ ಬೀಸಿದಳು. ಈಶ್ವರ ಕಣ್ಣಿನಲ್ಲಿಯೆ ಹೋಗಿ ಬಾ ಅಂದಿದ್ದ. ಮಂಜಿಯನ್ನು ನೋಡಿ ಮನಸೂರಜ್ಜ ಇವಳಾರು ಹೊಸ ಹೆಂಗಸು ನಮ್ಮ ಓಣಿ ಹಾದಿ ಹಿಡಿದು ಬಂದಾಳೆ ಅಂತ ತುಸು ಕೆಮ್ಮುವುದು ನಿಲ್ಲಿಸಿ ವಿಚಾರಕ್ಕಿಳಿದ. ಅಷ್ಟೊತ್ತಿಗೆ ಮಂಜಿ ಮರೆಯಾದಳು. ಮತ್ತೆಂದೂ.. ಯಾರ ಕಣ್ಣಿಗೂ.. ಬೀಳದಂತೆ ದೂರ ನಡೆದು ಹೋದಳು.
 
 

‍ಲೇಖಕರು G

July 24, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: