ಶೋಭಾ ಹಿರೇಕೈ ಕಂಡ್ರಾಜಿ
ಈ ಮಳೆಗಾಲದಲ್ಲೊಮ್ಮೆ ತೊಯ್ದು ತೊಪ್ಪೆಯಾಗಿ
ಆ ಬಚ್ಚಲು ಮನೆಯಲ್ಲೇ…
ಮಿಂದು ಬರಬೇಕು.
ನಿಗಿ ನಿಗಿ ಕೆಂಡ ದೂಡುತ್ತ
ಮೈ ಕೈ ಕಾಯಿಸಿ ಬೆಚ್ಚಗಾಗುತ್ತಾ
ಕೈಯದ್ದಿ ನೀರ ಹದನೋಡಿ ಮುದವಾಗಿ ಬಚ್ಚಲ ಕಟ್ಟೆಗೆ ಕಾಲಿಡಬೇಕು , ಮುದವುಕ್ಕಲು
ಕಾಲಿನ ಗೆಜ್ಜೆಯೂ ಹೊಸದಿರಬೇಕು.
ಒಲೆಯೇ.. ಇಲ್ಲದ ಬಚ್ಚಲಲ್ಲಿಲ್ಲಿ
ಬಿಸಿಲಿದ್ದರೆ ಮಾತ್ರ
ಬಿಸಿನೀರ ಭಾಗ್ಯ
ಅರೆ ಜೆಪ್ಪೆಗೆ ಮೇಲಿನ “ಶವರ್ ಹನಿಗಳು” ಮತ್ತೂ ತಣ್ಣಗೆನಿಸಿ
ಜೋಮಿಡಿಸಿ ಮೀಯುವುದೆಂದರೆ….
ಅನಿವಾರ್ಯ ಕರ್ಮವೆನಿಸಿ
ಮತ್ತೂ.. ಮತ್ತೂ.. ಆ ಬಚ್ಚಲೇ
ಬೇಕೆನಿಸಿ ಬಿಡುತ್ತದೆ.

ಮೀಯುವುದೆಂದರೇ.. ಬುರುಗು ನೊರೆಯಲ್ಲಿ ನೆಂದು
ಮೈಯುಜ್ಜಿ ಈಚೆ ಬರುವುದಲ್ಲ ನನಗೆ, ಬದಲು ಹರಯವನ್ನೇ..
ಚಂಬು ಚಂಬಾಗಿ ಮೊಗೆದು
ಮೈ ಮನಕ್ಕೆರೆದು ಕೊಳ್ಳುವುದು
ಥೇಟ್ ಇವನ ಪ್ರೀತಿಯಂತೆ
ಮತ್ತೂ.. ಮೀಯುವಾಗ
ಹುರುಪು ಕನಸುಗಳೆಲ್ಲ ಹನಿಯಾಗಿ ಇಡಿಯಾಗಿ
ಮುಡಿಯಿಂದ ಅಡಿವರೆಗೂ..
ಕಚಗುಳಿಯಿಡುವ ಆ ಅಮೋಘ ರಸ ಗಳಿಗೆಗೆ
ಆ ಬಚ್ಚಲೇ ಆಪ್ತ
ಮತ್ತೆಲ್ಲವೂ ಅಲ್ಲಿ ಗುಪ್ತ ಗುಪ್ತ.






ಮೀಯುವುದೆಂದರೆ …..ಕವಿತೆಯಲ್ಲಿ ಅಮೂರ್ತವೊಂದನ್ನು ಧ್ವನಿಪೂರ್ಣವಾಗಿ ಕಟ್ಟಿಕೊಡಲಾಗಿದೆ. ಗ್ರಾಮ ಮತ್ತು ನಗರದ ಪ್ರತಿಮೆಯ ಜೊತೆ , ಹರೆಯ ಮತ್ತು ಕನಸನ್ನು ಸಹ ಏಕಕಾಲಕ್ಕೆ ಬೆಸೆಯುವ ಕ್ರಿಯೆ ಅದ್ಭುತವಾಗಿ ಬಂದಿದೆ.
ಕವಿತೆ ಧ್ವನಿಪೂರ್ಣವಾಗಿ ಹೆಣ್ಣಿನ ಆಂತರ್ಯವನ್ನು ಹಿಡಿದಿದೆ.
ಕನ್ನಡ ಕಾವ್ಯಲೋಕಕ್ಕೆ ಒಂದು ಹೊಸ ಎಂಟ್ರಿ. ಶೋಭಾ ಹಿರೇಕೈ ಬಹುದಿನಗಳಿಂದ ಕವಿತೆ ಬರೆದು ಬಚ್ಚಿಟ್ಟು ಕೊಂಡಿದ್ದರು. ಇದೀಗ ಅವಧಿ ಮೂಲಕ ಕವಿತೆಯನ್ನು ಪ್ರಕಟಿಸಿದ್ದಾರೆ.
Chendada kavithe
ಬಚ್ಚಲು ಮನೆಯ ಆಪ್ತತೆ, ಗೌಪ್ಯತೆ ಎಲ್ಲವನ್ನೂ ಕವಿತೆ ಇಂಚಿಂಚಾಗಿ ತೆರೆದುಕೊಳ್ಳುತ್ತಲೇ ಹೋಗಿ” ಮತ್ತೆಲ್ಲವೂ ಗುಪ್ತ ಗುಪ್ತ” ವಾಗುವ ಸೊಬಗು ಬಣ್ಣಿಸಲಸದಳ. ಒಂದು ಒಳ್ಳೆಯ ಕವಿತೆ ನೀಡಿದ ಶೋಭಾ ಅವರಿಗೆ ಶುಭಹಾರೈಸುತ್ತೇನೆ.
ತೊಯ್ದು ತೊಪ್ಪೆಯಾಗುವುದು,ನಿಗಿ ನಿಗಿ ಕೆಂಡ,ಕೈ ಅದ್ದಿ ನೀರ ಹದ ನೋಡುವುದು ಎಲ್ಲ ಸಹಜ ಚಿತ್ರವಾಗಿ ಮುಂದಿಡುತ್ತ ಹಳ್ಳಿಯ ಬದುಕಿನ ಆಪ್ತತೆಯನ್ನು ವಿಸ್ತರಿಸುತ್ತ ಹೋಗುವ ಕವನ ಎಲ್ಲರಿಗೂ ಆಪ್ತವಾಗುತ್ತದೆ.ಹಳ್ಳಿಯ ಬದುಕಿನ ಚಿತ್ರವೇ ಹಾಗೆ ಚಿಗುರು ಮರದೊಳಗಿಂದಲೇ ಒಡೆದು ಬಂದ ಹಾಗೆ. ಒಳ್ಳೆಯ ಕವನ ನೀಡಿದ ಶೋಭಾ ಅವರಿಗೆ ಶುಭಾಶಯಗಳು.
ಚೆಂದದ ಕವಿತೆ ಶೋಭಾ ಅವರೇ.. ಬದುಕಿನ ಚಿತ್ರವನ್ನು ಸರಳ ಸುಂದರ ಪದಗಳಲ್ಲಿ ಕಟ್ಟಿಕೊಟ್ಟು ಓದಿದವರೆಲ್ಲರ ಮನಸಿಗೆ ಹಾಯ್ ಎನಿಸುವ ಕವಿತೆ ಕೊಟ್ಟ ನಿಮಗೆ ಶುಭಾಶಯಗಳು.
*ಗಂಗಾಧರ್ ನಾಯ್ಕ, ಭಟ್ಕಳ*.
ಚಂದ ಕವನ .ಸರಳ ಪದಗಳ ಧ್ವನಿಪೂರ್ಣ ಕವಿತೆ.
ಮುದ ಕೊಡುವ ನವಿರಾದ ಅಭಿವ್ಯಕ್ತಿ