ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಾಲಾ ಮ ಅಕ್ಕಿಶೆಟ್ಟಿ ಹೊಸ ಕವಿತೆ – ಬರಲಿಲ್ಲ ಬಸ್…

ಮಾಲಾ ಮ ಅಕ್ಕಿಶೆಟ್ಟಿ

ಜನರಿಂದ ತುಂಬಿದ ರಂಗ ‌ನಾಟಕ ಬಸ್ ‌ನಿಲುಗಡೆ
‌ಸ್ಥಳ, ಗುಂಪು ಗುಂಪು ವಿಭಿನ್ನ ಗುಣ ‌ಪಾತ್ರಧಾರಿಗಳು
ನನಗಿಂತ ಮೊದಲು ಧಡಪಡಿಸಿ ಬಂದವರಷ್ಟು
ನಂತರ ತೇಕುತ್ತ ಆಗಮಿಸಿದವರು ಒಂದಿಷ್ಟು

ಗುಜು ಗುಜು ಗೌಜು, ನಿನ್ನೆ ನಡೆದ ಘಟನೆಗಳು,
ಇಂದು ‌ನಡೆಯುವ,‌ ಸಂಭಾವ್ಯ ನಾಳೆ ಘಟಿಸುವ
ಸಂದರ್ಭಗಳ, ನಗೆ, ಸಿಟ್ಟು, ಅಪಹಾಸ್ಯ,
ಬೇಸರ, ಉಪದೇಶ ಇಂದಿನದು ಗಿರಕಿ ಹೊಡೆದು

ಹಲೋ, ಹಾಯ್, ಶುಭೋದಯಗಳ ತೋರಣ
ಕುಶಾಲಿಗೊಂದು ನೀರಿಲ್ಲದ ಮಂದನಗೆ ಧಾರೆ
ವಿನಿಮಯ ಸುಖ ದುಃಖಗಳು, ಗೊತ್ತು
ಅವರವರ ಪರಿಹಾರಗಳು, ವ್ಯರ್ಥ ಸಂಭಾಷಣೆ

ಒಂದರ ಮೇಲೊಂದರಂತೆ ಬಸ್ಗಳಾಗಮನ
ಬಾಯ್, ಟೇಕ್ ಕೇರ್ ಅಂದ ಹೆಜ್ಜೆಗಳು ಬ‌ಸ್
ಒಳಗೆ ಹೋದರು ನನಗಿಂತ ಮೊದಲು ಹಿಂದೆ
ಬಂದವರು, ಕಾಯುತ್ತಲೇ ಇದ್ದೇನೆ ನನ್ನ ಬಸ್

ಕಣ್ಮರೆಯಾಗಿದ್ದ ನಿಶ್ಯಬ್ದ ಈಗ ಹಾಜರ್
ಖಾಲಿಯಾದ ನಿಲುಗಡೆ ಸ್ಥಳ, ಇಗ ಸ್ಮಶಾನ
ಆಶ್ಚರ್ಯ ಗಿಜಿಗಿಡುವ ಸ್ಥಳವೇ ಇದು!!
ಕಾಯುತ್ತಲೇ ಇದ್ದೇನೆ ನನ್ನ ಬಸ್

ನಿಂತು ಕಳಿಸುವುದಷ್ಟೇ ಹೋಗುವವರ
ತಿರುವಿ ಕತ್ತು ಪ್ರತಿ ‌ಬಸ್ ‌ಹೋಗುವದ ‌ನೋಡಿ
ಕಣ್ಣು, ಬಾಯಿ, ಕಿವಿ, ಮೆದುಳು ಅಗಲಿಸಿಕೊಂಡು
ಕಾಯುತ್ತಲೇ ಇದ್ದೇನೆ ನನ್ನ ಮಾರ್ಗದ ಬಸ್

‍ಲೇಖಕರು Admin

12 August, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading