ಮಾಲತಿ ಗೋರೆಬೈಲ್
**
ಬೆಳ್ಳಂಬೆಳಗ್ಗೆ ಜೂಲಿಯ ಜೊತೆಯಾಟ
ಸಂತಸದಿಂದಲೆ ಆಟ – ಪಾಠ
ದೂರದ ದಾರಿಲಿ ಭೂತದ ಚೇಷ್ಟೆ!
ಕದ್ದು- ಮುಚ್ಚಿ ಪಾರಾಗುವುದೇ ಪರೀಕ್ಷೆ..
ಕಾಡಿನ ಹುಳಿಹಣ್ಣು, ಕಲ್ಲುಪ್ಪು
ಮೆದ್ದದ್ದೇ ಗೊತ್ತು;
ಗೆಳೆಯರ ಸಂಗವು ಇರದೇ ಇದ್ದರೂ
ಸೋಮಿ, ಟಾಮಿ ನಂಟಲಿ
ಕಾನನವನು ಸುತ್ತುವುದೊಂದೇ
ಆ ಗಳಿಗೆಯ ಸ್ವತ್ತು..
ಮಳೆ, ಹೊಳೆ-ನೆರೆಗೂ ಬಗ್ಗದ
ಧೈರ್ಯದ ಗತ್ತು
ಛಳಿ, ಬಿಸಿಲೆನ್ನದೆ ಮಣ್ಣು – ಹುಲ್ಲು
ತಲೆಯಲಿ ಹೊತ್ತು
ಕಳೆಯುತ್ತಿತ್ತು ಬಾಲ್ಯದ ಗಮ್ಮತ್ತು!
ಮೃಷ್ಟಾನ್ನವೂ ಇಲ್ಲ,
ಕಾಸಿನ ಕನಸೂ ಇಲ್ಲ
ಹಾಗೂ ಹೀಗೂ ಹೇಗೇಗೋ
ತಿಂದುಂಡು ಬದುಕುತ್ತಿತ್ತು ಕಾಯ
ವಿದ್ಯೆಗೆ ಎಡತಾಕುತ್ತ,
ಮನಸಿನ ಮೂಲೆಲಿ ಕನಸನು ಬಿತ್ತಿ
ಮೆರೆಯುತ್ತಿತ್ತು ಜೀವ…
ನೋವಿನ ಎಳೆಯಲ್ಲೂ
ನಗುವನು ಹೊಸೆದು,
ಹಸಿ ಹಸಿಯಾಗಿಯೇ
ಉಸಿರಾಡುತಲಿತ್ತು
ಬಾಲ್ಯವೆನ್ನುವ ಸಿಹಿಮುತ್ತು,
ನೆನಪಿನ ಓಟಕೂ ಜಗ್ಗದೆ, ಬಗ್ಗದೆ
ಕಳೆದೇ ಹೋಗಿದೆ ಆ ಹೊತ್ತು…
0 ಪ್ರತಿಕ್ರಿಯೆಗಳು