ಮಾಲತಿ ಗೋರೆಬೈಲ್
1
ಗೋಡೆಗಳ ಪಿಸುಮಾತಿಗೆ
ಬೇಸೆತ್ತ ಕವಿತೆ
ಬಯಲಿಗೆ ಬಿದ್ದಿದೆ
2
ಮಣ್ಣು ಬಗೆದುದರ
ಪರಿಣಾಮ?
ನೆಲದೆದೆಗೆ
ಘನಘೋರ ಗಾಯ!
3
ಯಂತ್ರ ತಂತ್ರಗಳ
ಭರಾಟೆಯಲ್ಲಿ
ಜೀವಮಿಡಿತದ ಸದ್ದು
ಮಟಾಮಾಯ…
4
ನೀರವ ಮೌನದಲ್ಲೊಂದು
ಪ್ರೇಮ ಕಾವ್ಯ!!
5
ಕುಡಿಯೊಡೆಯದ ಓಡಲಲ್ಲಿ
ಮಮತೆಯ ಕಡಲು…
6
ಇಬ್ಬನಿಯ ತಬ್ಬುವಿಕೆಗೆ
ನೇಸರನ ನಾಚಿಕೆ!!
7
ಒಣ ಹುಲ್ಲಿನ ಮೆದೆಯೊಳಗೆ
ಹಸಿರು ಚಿತ್ರ!
8
ಒಲವೆಂದರೆ
ಮುಗಿಯದ
ಹಾದಿ…
9
ಕೂಗಾಡುವುದೆಂದರೆ?
ಎಲ್ಲ- ಅಲ್ಲವನ್ನೂ
ಕಕ್ಕಿಬಿಡುವುದು..
10
ಮೌನದ ಗೂಡಿನಲ್ಲಿ
ಮಾತಿನ ಪ್ರವಾಹ!!
11
ಮರೆತೇನೆಂದರೆ
ಮನಸ್ಸಿನ ಕಾಟ!!
2
ಪ್ರೀತಿ ಉಕ್ಕಿದ
ಮರುಕ್ಷಣ?
ಕೋಪದ ತಾಪ
3
ಶುಭ್ರ ಆಗಸದಲ್ಲಿ
ನಿಶ್ಯಬ್ಧ
ಉಲ್ಕಾಪಾತ!
4
ಉರಿದುರಿದು
ತಣ್ಣಗೆ ಬಿದ್ದ
ಬೂದಿಯ ಗುಡ್ಡೆಯಲ್ಲಿ
ದ್ವೇಷದ ಕಿಡಿ
5
ಬೋರಲು ಬಿದ್ದ
ಮೌಲ್ಯಗಳ ಎದುರು
ಮನುಷ್ಯತ್ವದ ಪಾಠ!!
0 ಪ್ರತಿಕ್ರಿಯೆಗಳು