ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಾಧ್ಯಮ ರಂಗ ತಾನೂ ಕೊಳೆಯ ಒಂದು ಭಾಗ

‘ಮಾಧ್ಯಮ ರಂಗಕ್ಕೆ ನುಸಿಪೀಡೆ’ ಲೇಖನಕ್ಕೆ ಬಂದ ಪ್ರತಿಕ್ರಿಯೆ

discussion

ಆನಂದ ಪ್ರಸಾದ್ 

‘ಮಾಧ್ಯಮ ರಂಗಕ್ಕೆ ನುಸಿಪೀಡೆ’ ಎಂಬ ಲೇಖನ ಬರೆದ ಸಮಯಕ್ಕಿಂತಲೂ ಇಂದಿನ ಪರಿಸ್ಥಿತಿ ಮತ್ತಷ್ಟು ಕೆಟ್ಟಿದೆ. ಸಮಾಜದ ಹಾಗೂ ಆಡಳಿತ ವ್ಯವಸ್ಥೆಯ ಲೋಪದೋಷಗಳನ್ನು ಎತ್ತಿ ತೋರಿಸಬೇಕಾಗಿದ್ದ ಮಾಧ್ಯಮ ರಂಗ ತಾನೂ ಕೊಳೆಯ ಒಂದು ಭಾಗವಾಗಿ ಇಡೀ ವ್ಯವಸ್ಥೆಯೇ ಕೊಳೆಯುತ್ತಾ ಹೋಗುತ್ತಿದೆ. ಇದಕ್ಕೆ ಎರಡು ಇತ್ತೀಚಿನ ಉದಾಹರಣೆಗಳನ್ನು ಕೊಡಬಹುದು:

media೧. ಕರ್ನಾಟಕದಲ್ಲಿ ಲೋಕಾಯುಕ್ತ ವ್ಯವಸ್ಥೆಯನ್ನು ಸಮಾಧಿ ಮಾಡಿ ಎಸಿಬಿ ರಚನೆ ಮಾಡುವ ತೀರ್ಮಾನವನ್ನು ಸಿದ್ಧರಾಮಯ್ಯನವರ ಸರ್ಕಾರ ಮಾಡಿದಾಗ ಇದನ್ನು ವಿರೋಧಿಸಿ ಆಮ್ ಆದ್ಮಿ ಪಕ್ಷ ಕರ್ನಾಟಕ ಘಟಕದವರು ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡರು. ಬೇರೆ ಯಾರೂ ಈ ವಿಚಾರದಲ್ಲಿ ಹೋರಾಟದ ಆರಂಭ ಮಾಡಲು ಮುಂದೆ ಬರದೇ ಇದ್ದ ಸಮಯದಲ್ಲಿ ಇವರು ಹೋರಾಟವನ್ನು ಕೈಗೊಂಡರೂ ಅದಕ್ಕೆ ಕರ್ನಾಟಕದ ಎಲೆಕ್ಟ್ರಾನಿಕ್ ಮಾಧ್ಯಮಗಳು ಯಾವುದೇ ಮಹತ್ವವನ್ನು ಕೊಡಲಿಲ್ಲ.

ಕರ್ನಾಟಕದ ಎಲ್ಲಾ ಎಲೆಕ್ಟ್ರಾನಿಕ್ (ಅಂದರೆ ಟಿವಿ) ಮಾಧ್ಯಮಗಳೂ ಈ ವಿಚಾರವನ್ನು ಒಂದು ಪ್ರಧಾನ ವಿಷಯವನ್ನಾಗಿ ತೆಗೆದುಕೊಂಡು ಇದರ ಬಗ್ಗೆ ದಿನವಿಡೀ ನೇರ ಪ್ರಸಾರದ ಚರ್ಚೆ, ಜನಜಾಗೃತಿ ಅಭಿಯಾನ ಕೈಗೊಂಡಿದ್ದರೆ ಇಡೀ ರಾಜ್ಯಾದ್ಯಂತ ಹೋರಾಟದ ಕಿಚ್ಚು ಏಳುತ್ತಿತ್ತು ಹಾಗೂ ಸರ್ಕಾರ ತನ್ನ ಕೆಟ್ಟ ನಿರ್ಧಾರದಿಂದ ಹಿಂದೆ ಸರಿಯಲೆಬೇಕಾದ ಪರಿಸ್ಥಿತಿ ರೂಪುಗೊಳ್ಳುತ್ತಿತ್ತು. ಇಂಥ ಸುವರ್ಣಾವಕಾಶವನ್ನು ಕರ್ನಾಟಕದ ಟಿವಿ ಮಾಧ್ಯಮಗಳು ವ್ಯರ್ಥವಾಗಿಸಿ ಬಿಟ್ಟವು.

ಕರ್ನಾಟಕದ ಟಿವಿ ಮಾಧ್ಯಮಗಳು ವಿದೇಶಿ ಬಂಡವಾಳದ ಮೇಲೆ ನಡೆಯುತ್ತಿಲ್ಲವಾದರೂ ಮಾಧ್ಯಮ ಧರ್ಮವನ್ನು ಕಾಯ್ದುಕೊಳ್ಳುವಲ್ಲಿ ಸಂಪೂರ್ಣ ವಿಫಲವಾದವು.

೨. ಮಂಗಳೂರಿನಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಬಾಳಿಗಾರ ಬರ್ಬರ ಕೊಲೆ ನಡೆದು ಒಂದೂವರೆ ತಿಂಗಳು ಕಳೆದರೂ ಕೊಲೆಯ ಸೂತ್ರಧಾರಿಗಳನ್ನು ಬಂಧಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಈ ಕುರಿತು ಪ್ರಬಲವಾದ ಕ್ರಮ ಕೈಗೊಳ್ಳುವುದು ಬೇಡ ಎಂದು ಗೃಹ ಸಚಿವರ ಮೌಕಿಕ ಆದೇಶ ಆಗಿದೆ ಎಂಬ ಅಭಿಪ್ರಾಯ ಪ್ರಜ್ಞಾವಂತರ ವಲಯದಲ್ಲಿ ಇದೆ.

media2ವಿನಾಯಕ ಬಾಳಿಗರ ಕೊಲೆಯನ್ನು ವಿರೋಧಿಸಿ ವಿಚಾರಣೆಯನ್ನು ತೀವ್ರಗೊಳಿಸುವಂತೆ ಒತ್ತಾಯಿಸಿ ಮಂಗಳೂರಿನ ವಿಚಾರವಾದಿ ನರೇಂದ್ರ ನಾಯಕರುಹಾಗೂ ಸಂಗಡಿಗರು ಹೋರಾಟ ಕೈಗೊಂಡರೂ ಇದನ್ನು ರಾಜ್ಯದ ಟಿವಿ ಮಾಧ್ಯಮಗಳು ಬೆಂಬಲಿಸಿ ಹೋರಾಟ ತೀವ್ರವಾಗುವಂತೆ ಹಾಗೂ ಸರ್ಕಾರ ಬಿಗಿ ಕ್ರಮ ಕೈಗೊಳ್ಳಲೇಬೇಕಾದಂತಹ ಒತ್ತಡ ರೂಪಿಸಲಿಲ್ಲ.

ಕೇವಲ ಉತ್ತರ ಭಾರತದಲ್ಲಿ ಕಂಡುಬರುತ್ತಿದ್ದ ಮಾಹಿತಿ ಹಕ್ಕು ಕಾರ್ಯಕರ್ತರ ಕಗ್ಗೊಲೆಯಂಥ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಭೀಕರ ಹತ್ಯೆಗಳು ಕರ್ನಾಟಕದಲ್ಲಿ ನಡೆಸಲು ಪಾತಕಿಗಳು ಆರಂಭಿಸಿದರೂ ಕರ್ನಾಟಕದ ಜನತೆಯಿಂದ ಪ್ರಬಲ ಪ್ರತಿರೋಧ ರೂಪುಗೊಳ್ಳಲಿಲ್ಲ ಎಂದರೆ ಅದಕ್ಕೆ ಬೇಕಾದ ವಾತಾವರಣವನ್ನು ರಾಜ್ಯದ ಟಿವಿ ಮಾಧ್ಯಮಗಳು ರೂಪಿಸಲಿಲ್ಲ ಎಂದೇ ಅರ್ಥ.

ಸ್ವದೇಶೀ ಟಿವಿ ಮಾಧ್ಯಮಗಳ ಈ ವಿಫಲತೆಗೆ ಕಾರಣ ಬಂಡವಾಳಶಾಹಿ ಮನೋಧರ್ಮದ ಟಿವಿ ಮಾಲಕರ ಧೋರಣೆಯೇ ಆಗಿದೆ.

ಈಗ ರಾಜ್ಯದಲ್ಲಿ ಆಡಳಿತ ನಡೆಸುವ ಆಡಳಿತ ಪಕ್ಷಕ್ಕೂ, ಆಡಳಿತದ ವೈಫಲ್ಯಗಳನ್ನು ವಿರೋಧಿಸಬೇಕಾದ ವಿರೋಧ ಪಕ್ಷಕ್ಕೂ ಇಬ್ಬರಿಗೂ ಜವಾಬ್ದಾರಿ ಎಂಬುದೇ ಇಲ್ಲವಾಗಿ ರಾಜ್ಯ ಅರಾಜಕತೆಯತ್ತ ದಾಪುಗಾಲಿಡುತ್ತಿದೆ. ಇಂಥ ಸ್ಥಿತಿಯಲ್ಲಿ ರಾಜ್ಯದ ಜನತೆ ಅನಾಥಪ್ರಜ್ಞೆ ಅನುಭವಿಸುತ್ತಿದ್ದಾರೆ.

ಜನರ ಧ್ವನಿ ಆಗಬೇಕಾಗಿದ್ದ ಟಿವಿ ಮಾಧ್ಯಮಗಳು ತಮ್ಮ ಜವಾಬ್ದಾರಿಯ ನೂರನೇ ಒಂದಂಶವನ್ನೂ ನಿಭಾಯಿಸುತ್ತಿಲ್ಲ ಎಂಬ ಕಾರಣದಿಂದಲೇ ಸಮಾಜದಲ್ಲಿ ಅನ್ಯಾಯ, ಅಧರ್ಮ ಮೇಲುಗೈ ಸಾಧಿಸುತ್ತಿದೆ. ರಾಜ್ಯದ ಬುದ್ಧಿಜೀವಿಗಳು, ಸಾಹಿತಿಗಳು, ಗಣ್ಯ ವ್ಯಕ್ತಿಗಳು ಇದನ್ನು ಕಂಡೂ ಕಾಣದಂತೆ ಸಹಿಸುತ್ತಿದ್ದಾರೆ. ಹೀಗಾಗಿಯೇ ಅನ್ಯಾಯ ಅಧರ್ಮಗಳು ದಿನೇದಿನೇ ಹೆಚ್ಚುತ್ತಿವೆ.

‍ಲೇಖಕರು Admin

11 May, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading