ಹೀಗೊಂದು ಮಹಿಳಾ ಮಾಗಧ ವಧೆ ಪ್ರಸಂಗ

`ಈ ಹೆಂಗ್ಸ್ರು ಎಂಥ ಮಾಡ್ತ ಅಂದ್ಕಂಡಿದ್ದೆ ಅಡ್ಡಿಯಿಲ್ಯೋ … ಪರವಾಗಿಲ್ಲೆ’ ಯಕ್ಷಸಿರಿ ಮಹಿಳಾ ಕಲಾವಿದೆಯರು ಅಭಿನಯಿಯಿಸಿದ `ಮಾಗಧ ವಧೆ’ ಯಕ್ಷಗಾನವನ್ನು ನೋಡಿ ಯಕ್ಷ ವಿದ್ವಾಂಸರೊಬ್ಬರು ತೆಗೆದ ಉದ್ಗಾರವಿದು. ನಮ್ಮ ನಾಡಿನ ಶ್ರೀಮಂತ ಕಲೆ ಯಕ್ಷಗಾನ ಗಂಡುಕಲೆಯೆಂದೇ ಪ್ರಸಿದ್ಧವಾದ ಈ ಕ್ಷೇತ್ರಕ್ಕೆ ಇತ್ತೀಚಿನ ದಶಕಗಳಲ್ಲಿ ಮಹಿಳೆಯರು ಲಗ್ಗೆ ಇಟ್ಟು ಸೈ ಎನಿಸಿಕೊಂಡಿದ್ದಾರೆ. ಇತ್ತೀಚೆಗೆ(17-2-2013ರಂದು) ಮಲ್ಲೇಶ್ವರದಲ್ಲಿರುವ ಹವ್ಯಕ ಸಭಾದಲ್ಲಿ ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ ದಕ್ಷಿಣ ಪ್ರಾದೇಶಿಕ ಕಛೆರಿ ಹಾಗು ಯಕ್ಷಸಿರಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಾಗಧ ವಧೆ ಎಂಬ ಪ್ರಸಂಗವನ್ನು ಪೂರ್ಣ ಪ್ರಮಾಣದಲ್ಲಿ ಮಹಿಳೆಯರೇ ಪ್ರಸ್ತುತಪಡಿಸಿದರು.
ಆರಂಭದಲ್ಲಿ ಕೃಷ್ಣನ ಪಾತ್ರ ವಹಿಸಿದ ಶ್ರೀಮತಿ ಗೀತಾ ಹೆಗಡೆ `ಬಂದನು ಬಂದನು ದೇವರ ದೇವ’ ಪದ್ಯದ ಮೂಲಕ ಪ್ರವೇಶಿಸಿ ಪ್ರೇಕ್ಷಕರಲ್ಲಿ ವಿದ್ಯುತ್ ಸಂಚಾರ ಉಂಟಗುವಂತೆ ಮಾಡಿದರು.ಕೃಷ್ಣನ ಲಾಲಿತ್ಯ, ಆಕರ್ಷಕ ಪ್ರೌಢ ಕುಣಿತ ಹಾಗು ಹಾವ ಭಾವಗಳಿಂದ ಪ್ರೇಕ್ಷಕರನ್ನು ಆಕರ್ಷಿಸಿದರು. ನಂತರ ಸತ್ಯಭಾಮೆಯ ಪಾತ್ರಧಾರಿ ಕುಮಾರಿ ನಾಗಶ್ರೀ ಗೀಜಗಾರ್ ತಮ್ಮ ಮಿಂಚಿನ ನಡೆ, ವಿಶೇಷ ಕುಣಿತ ಹಾಗು ಚುರುಕಿನ ಸಂಭಾಷಣೆಯಿಂದ ಇಡೀ ಪ್ರೇಕ್ಷಕ ವರ್ಗವನ್ನೇ ಮಂತ್ರಮುಗ್ಧಗೊಳಿಸಿದರು. ಕೃಷ್ಣ ಸತ್ಯಭಾಮೆಯರ ಸರಸ ಸಲ್ಲಾಪ ನೆರೆದವರನ್ನು ಆನಂದದ ಅಲೆಗಳಲ್ಲಿ ಮಿಂದೇಳುವಂತೆ ಮಾಡಿತು.
ಮಾಗಧನ ಪಾತ್ರಧಾರಿ ಮಯೂರಿ ಉಪಾಧ್ಯಾಯ `ನಡುಗಿತು ಲೋಕ ಮಾಗಧನಂತಃಕರಣ ಕಳವಳಿಸಿದುದುದು…’ ಎನ್ನುವ ಪದ್ಯದ ಆರ್ಭಟದೊಡನೆ ಪ್ರವೇಶಿಸಿ ಇಡೀ ಸಭಾಂಗಣವನ್ನೇ ನಡುಗಿಸಿದರು. `ಮಹಿಳೆಯರೇ ಇವರು?…’ ಎಂದು ನಿಬ್ಬೆರಗಾಗುವಂತೆ ಮಾಡಿದರು. ತಮ್ಮ ವಿಶೇಷ ಸ್ವರ, ಕುಣಿತ ಹಾಗು ಅಭಿನಯಗಳಿಂದ ಯಾವ ಗಂಡಸಿಗೂ ಕಡಿಮೆ ಇಲ್ಲದಂತೆ ಅಭಿನಯಿಸಿದರು. ಮಾಗಧ ಮತ್ತು ಕೃಷ್ಣರ ಹಾಸ್ಯ ಮಿಶ್ರಿತ ಮಾತುಗಾರಿಕೆ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿತು. ಇದರ ಜೊತೆಗೆ ಮಹಿಳೆಯರಲ್ಲಿ ಅಪರೂಪವೆನಿಸುವಂತೆ ಶ್ರೀಮತಿ ಮಮತಾ ಜೋಶಿಯವರ ಹಾಸ್ಯ, ಶ್ರೀಮತಿ ಕಾಂಚಿಕಾ ಭಟ್ ಅವರ ಅರ್ಜುನ ಗಂಭೀರತನ, ಶ್ರೀಮತಿ ವೀಣಾ ರಾವ್ ಅವರ ಭೀಮನ ಶೌರ್ಯ ಪ್ರದರ್ಶನಗಳು ಪ್ರಸಂಗಕ್ಕೆ ಕಳೆ ಕಟ್ಟುವಂತೆ ಮಾಡಿತು.
ತಮ್ಮ ಅತ್ಯದ್ಭುತ ಸಿರಿಕಂಠದಿಂದ ಹಿಮ್ಮೇಳ ಒದಗಿಸಿದವರು ಭಾಗವತರಾದ ಶ್ರೀ ರವೀಂದ್ರ ಭಟ್ ಅಚವೆ. ಮದ್ದಳೆಯ ಸಹಕಾರ ನೀಡಿದವರು ಶ್ರೀ ಅನಂತ ಪದ್ಮನಾಭ ಪಾಠಕ್. ಚಂಡೆ ವಾದನ – ಕುಮಾರ ಆದಿತ್ಯ ಮತ್ತು ಕಾರ್ತಿಕ್ ಅವರದಾಗಿತ್ತು. ವೇಷಭೂಷಣದ ಸಹಕಾರ ನೀಡಿದವರು ಶಿವಕುಮಾರ್ ಬೇಗಾರ್. ರಾಧಾ ಕೃಷ್ಣ ಬೆಳೆಯೂರು ಅವರ ರಂಗನಿರ್ವಹಣೆ ಅಚ್ಚುಕಟ್ಟುತನ ಎದ್ದು ಕಾಣುತ್ತಿತ್ತು. ಧ್ವನಿವರ್ಧಕ ವ್ಯವಸ್ಥೆ ಸರಿಯಿರದ ಕಾರಣ ಕೆಲವು ಮಾತುಗಳು ಸರಿಯಾಗಿ ಕೇಳುತ್ತಿರಲಿಲ್ಲ ಎಂಬುದನ್ನು ಬಿಟ್ಟರೆ ಬೇರೆ ನ್ಯೂನ್ಯತೆಗಳು ಕಾಣಲಿಲ್ಲ.
ಇದಕ್ಕೂ ಮುಂಚಿನ ಸಭಾ ಕಾರ್ಯಕ್ರಮದಲ್ಲಿ ಅಖಿಲ ಹವ್ಯಕ ಸಭಾದ ಅಧ್ಯಕ್ಷರಾದ ಶ್ರೀ ಎಸ್. ಜಿ. ಹೆಗಡೆಯವರು ಮಾತನಾಡಿ ಅಳಿದು ಹೋಗುತ್ತಿರುವ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಇಂದಿರಾಗಾಂಧಿ ಕಲಾಕೇಂದ್ರದ ಕೆಲಸವನ್ನು ಶ್ಲಾಘಿಸಿದರು. ಪ್ರಧಾನ ಕಾರ್ಯದರ್ಶಿಗಳಾದ ಡಿ. ವಿ. ಹೆಗಡೆ, ನ. ರವಿಕುಮಾರ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು. ಕಲಾವೇದಿಕೆಯ ಗಣಪತಿ ಹೆಗಡೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಅನಂತ ಹೆಗಡೆ ವಂದಿಸಿದರು.
ಸಮಾರಂಭದ ಕೆಲವು ದೃಶ್ಯಗಳು ಇಲ್ಲಿವೆ, ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :






0 Comments