ಮಹಿಳಾ ದೃಷ್ಟಿಕೋನದಲ್ಲಿ ಗಾಂಧಿ ವಿಚಾರಗಳು…

ಸಾವಿತ್ರಿ ಮುಜುಮದಾರ

ಮಧ್ಯರಾತ್ರಿಯಲಿ ನಡುಬೀದಿಯಲಿ ಮಹಿಳೆಯೊಬ್ಬಳು ನಿರ್ಭಯವಾಗಿ ನಡೆದಾಡುವಂತಾದರೆ ಅದುವೇ ನಿಜವಾದ ಸ್ವಾತಂತ್ರ್ಯ ಎಂಬುದು ಗಾಂಧೀಜಿಯವರ ಹೇಳಿಕೆ. ಈ ಹೇಳಿಕೆಯ ಹಿಂದೆ ಗಾಂಧೀಜಿ ಮಹಿಳಾ ಲೋಕವನ್ನು ಅರಿತ, ಅರ್ಥೈಸಿದ, ನಿರ್ದೇಶಿಸಿದ ಬಗೆ ತಿಳಿಯುತ್ತದೆ. ರಾಷ್ಟ್ರೀಯ ಚಳುವಳಿಯಲ್ಲಿ ಮಹಿಳಾಚಳುವಳಿಯೊಂದಿಗೆ ಬೆಸೆದು ನೋಡುವ ಗಾಂಧಿಜಿಯವರ ಚಿಂತನೆಯೇ ಅನನ್ಯವಾದುದು. ಗಾಂಧೀವಾದದಲ್ಲಿ ಮಹಿಳಾವಾದದ ಸೆಲೆಗಳು ಕಾಣಸಿಗುತ್ತವೆ. 

ಗಾಂಧೀಜಿ ಸ್ವಭಾವತಃ ಮಾತೃಹೃದಯಿ. ಹೀಗಾಗಿ ಮಹಿಳೆಯರಲ್ಲಿರುವ ಪೋಷಣಾ ಶಕ್ತಿ ಗಾಂಧೀಜಿಯವರಿಗೂ ಇತ್ತು. ದೇಶವನ್ನು ಮತ್ತು ಸಮಾಜವನ್ನು ಅದರ ಎಲ್ಲಾ ಆಯಾಮಗಳೊಂದಿಗೆ ಪ್ರೀತಿಸಿ ಪೋಷಿಸಿದರು. ಬಹುತ್ವದ ಭಾರತದ ಬಿಡುಗಡೆ ಮತ್ತು ಸಮಾಜದ ಕಳಂಕಗಳನ್ನು ತೊಡೆಯುವ ಹಂಬಲ ಈ ಮಾತೃಹೃದಯಿಯಿಂದ ಸಾಧ್ಯವಾಯಿತು. ಸ್ತ್ರೀ ಸಹಜವಾದ ಸತ್ಯ ಮತ್ತು ಅಹಿಂಸೆ ಗಾಂಧೀಜಿಯವರ ಮೂಲಮಂತ್ರವಾಯಿತು. ಒಬ್ಬ ತಾಯಿ ಮಗುವನ್ನು ಬೆಳೆಸಿ ಸಂಸ್ಕಾರವಂತನನ್ನಾಗಿ ಮಾಡುವಂತೆ ಸಮಾಜವನ್ನು ಮತ್ತು ದೇಶವನ್ನು ತಿದ್ದಿ ಬೆಳೆಸುವ ಕೈಂಕರ್ಯವನ್ನು ಕೈಗೊಂಡರು.

ಲೋಕಮಾನ್ಯ ತಿಲಕರ ವಿಚಾರಧಾರೆ ಕೇವಲ ವಸಾಹತುಶಾಹಿಯಿಂದ ರಾಷ್ಟ್ರದ ಬಿಡುಗಡೆಯನ್ನು ಕುರಿತಾಗಿದ್ದು, ಸಮಾಜದಲ್ಲಿನ ತಾರತಮ್ಯವನ್ನು ಅಷ್ಟಾಗಿ ಗಣನೆಗೆ ತೆಗೆದುಕೊಂಡಿರುವುದಿಲ್ಲ. ಡಾ. ಬಾಬಾಸಾಹೇಬ ಅಂಬೇಡ್ಕರ ಅವರಿಗೆ ತಾರತಮ್ಯವನ್ನು ಕಡೆಗಾಣಿಸಿ ಪಡೆಯುವ ಸ್ವಾತಂತ್ರ್ಯ ಮುಖ್ಯವೆನಿಸುತ್ತದೆ. ಆದರೆ ಗಾಂಧೀಜಿಯವರ ದೃಷ್ಟಿಯಲ್ಲಿ ಸಾಮಾಜಿಕ ತಾರತಮ್ಯ ಮತ್ತು ರಾಷ್ಟ್ರದ ಸ್ವಾತಂತ್ರ್ಯ ಒಟ್ಟಾಗಿ ಏಕಕಾಲಕ್ಕೆ ಪರಿಹರಿಸಿಕೊಳ್ಳಬೇಕಾದ ವಿಚಾರಗಳೆನಿಸುತ್ತವೆ. ಹೀಗಾಗಿ ಗಾಂಧೀಜಿ ಲಿಂಗತಾರತಮ್ಯವನ್ನು ವಿರೋಧಿಸುತ್ತಾ ರಾಷ್ಟ್ರೀಯ ಚಳುವಳಿಗೆ ಮಹಿಳೆಯರನ್ನು ಒಂದುಗೂಡಿಸುತ್ತಾ ಸಾಗುತ್ತಾರೆ.

ಗಾಂಧೀಜಿಯವರಿಗೆ ಪರಂಪರೆಯಲ್ಲಿ ನಂಬಿಕೆ ಇತ್ತು. ಹಿಂದೂ ಧರ್ಮದಲ್ಲಿ ಶ್ರದ್ಧೆ ಇತ್ತು. ಆದರೆ ಪರಂಪರೆಯಲ್ಲಿ ಮಹಿಳೆ ನಿರ್ಲಕ್ಷಕ್ಕೆ ಮತ್ತು ತುಳಿತಕ್ಕೆ ಒಳಗಾಗಿದ್ದಳು. ಈ ವಿಪರ್ಯಾಸವನ್ನು ಗಾಂಧೀಜಿ ಗಮನಿಸಿ ಮಹಿಳಾ ದೌರ್ಜನ್ಯವನ್ನು ಖಂಡಿಸುತ್ತಾ ಪರಂಪರೆಯ ಅಡಿಯಲ್ಲಿ ಸಿಕ್ಕ ಮಹಿಳೆಯರನ್ನು ಮೇಲೆತ್ತಿ ಮುಖ್ಯವಾಹಿನಿಯೊಂದಿಗೆ ಸಾಗಬೇಕೆಂದು ಆಗ್ರಹಿಸಿದರು. ಸ್ತ್ರೀಯರಿಗೆ ನ್ಯಾಯ ದೊರಕಬೇಕಾದರೆ ಶಾಸ್ತ್ರ ಗ್ರಂಥಗಳನ್ನು ಪರಿಷ್ಕರಿಸಬೇಕು. ಮಹಿಳೆಯರ ಘನತೆಗೆ ಚ್ಯುತಿ ತರುವ ಧರ್ಮಗ್ರಂಥಗಳನ್ನು ನಿಷೇಧಿಸಬೇಕು ಎಂದು ಕರೆಕೊಟ್ಟರು.

ವರದಕ್ಷಿಣೆ ಪದ್ಧತಿಯನ್ನು ಗಾಂಧೀಜಿ ಬಲವಾಗಿ ವಿರೋಧಿಸಿದರು. ವರದಕ್ಷಿಣೆ ತೆಗೆದುಕೊಂಡವರನ್ನು ಹೃದಯವಿಲ್ಲದವರು ಎಂದು ಹೇಳುತ್ತಿದ್ದರು. ಗಂಡು ಹೆಣ್ಣುಗಳು ಪರಸ್ಪರ ಒಪ್ಪಿಗೆ ಪಡೆದು ಮದುವೆಯಾಗುವುದು ಒಳ್ಳೆಯದು ಎಂದರು. ವೇಶ್ಯಾವೃತ್ತಿಯನ್ನು ಗಂಡಸರು ಮಾಡುವ ಅಪರಾಧವೆಂದು ವ್ಯಾಖ್ಯಾನಿಸಿದರು. ಬಾಲ್ಯವಿವಾಹವನ್ನು ವಿರೋಧಿಸಿದರು. ವಿಧವಾ ವಿವಾಹವನ್ನು ಬೆಂಬಲಿಸಿದರು. ಮಹಿಳೆಯರು ತಮ್ಮ ಸಂಗಾತಿಯನ್ನು ತಾವೇ ಆಯ್ಕೆಮಾಡಿಕೊಳ್ಳಬೇಕು. ಪುರುಷಾಧಿಕಾರದ ವಿರುದ್ಧ ಮಹಿಳೆ ಸಿಡಿದೇಳಬೇಕು. ತನ್ನ ದೇಹ, ತನ್ನ ಹಕ್ಕು ಎಂಬುದು ಮಹಿಳೆಯರ ಹಕ್ಕಾಗಬೇಕೆಂದರು. ಹೀಗೆ ಮಹಿಳಾ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಪರಿಹರಿಸಲೇಬೇಕು ಎಂದು ಒತ್ತಾಯಿಸಿದರು. ಮಹಿಳೆಗೆ ಮದುವೆ ಹಾಗೂ ತಾಯ್ತನ ಎಷ್ಟು ಮುಖ್ಯವೋ ಅಷ್ಟೇ ಸಮಾಜಮುಖಿ ಚಿಂತನೆಯೂ ಮುಖ್ಯ ಎಂದು ಪ್ರತಿಪಾದಿಸಿದರು.

ದಮನಕ್ಕೆ ಒಳಗಾದ ಮಹಿಳೆಯರು ಸಾಮಾಜಿಕ ಶೃಂಖಲೆಗಳನ್ನು ಕಡಿದುಕೊಂಡು ಧೈರ್ಯದಿಂದ ಮುನ್ನುಗ್ಗಬೇಕು. ಕೇವಲ ಗೃಹಕೃತ್ಯಕ್ಕೆ ಮಹಿಳೆಯನ್ನು ಸೀಮಿತಗೊಳಿಸಬಾರದು. ಹೆಣ್ಣುಮಕ್ಕಳು ಸಾರ್ವಜನಿಕ ಜೀವನದಲ್ಲಿ ಕಣ್ಮರೆಯಾಗಬಾರದು ಎಂದು ಭಾವಿಸಿದ ಗಾಂಧೀಜಿಯವರು ರಾಷ್ಟ್ರೀಯ ಚಳುವಳಿಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಿದರು. ಹೀಗಾಗಿ ಲಕ್ಷಾಂತರ ಮಹಿಳೆಯರು ರಾಷ್ಟ್ರೀಯ ಚಳುವಳಿಯಲ್ಲಿ ಭಾವಹಿಸಲು ಸಾಧ್ಯವಾಯಿತು. ಸರೋಜಿನಿ ನಾಯ್ಡು, ಕಮಲಾದೇವಿ ಚಟೋಪಾಧ್ಯಾಯ ಮುಂತಾದ ಸಾವಿರಾರು ಮಹಿಳೆಯರು ಸತ್ಯಾಗ್ರಹದಲ್ಲಿ ಪಾಲ್ಗೊಂಡರು. ಕಸ್ತೂರಬಾ ಸತ್ಯಾಗ್ರಹದ ಮುಂಚೂಣಿಯಲ್ಲಿದ್ದರು. ಮಧ್ಯಪಾನ ವಿರೋಧ, ಸ್ವದೇಶ ಚಳುವಳಿ, ಕರ ನಿರಾಕರಣೆ ಮುಂತಾದ ಚಳುವಳಿಗಳಲ್ಲಿ ಅನೇಕ ಮಹಿಳೆಯರು ಮುನ್ನುಗ್ಗಿದರು. 

ಅನುಸೂಯ ಸಾರಾಭಾಯಿ ನೇತೃತ್ವದಲ್ಲಿ ನಡೆದ ಕಾನೂನು ಅಸಹಕಾರ ಚಳುವಳಿಯಲ್ಲಿ ಮಹಿಳೆಯರು ಅತಿ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕಮಲಾದೇವಿ ಚಟೋಪಾಧ್ಯಾಯರು-ವಾಡ್ಲಾ ಸಾಲ್ಟ್ ವರ್ಕ್ಸ್ ವಿರುದ್ಧ ಹದಿನೈದು ಸಾವಿರ ಮಹಿಳೆಯರನ್ನು ಸೇರಿಸಿ ಜಾಥಾ ನಡೆಸಿದರು. ಉಪ್ಪಿನ ಸತ್ಯಾಗ್ರಹದಲ್ಲಿ ಅತಿಹೆಚ್ಚು ಮಹಿಳೆಯರು ಭಾವಹಿಸಿದ್ದರು. ಕಸ್ತೂರಬಾ ಅವರು ೩೩ ಮಹಿಳಾ ಸ್ವಯಂ ಸೇವಕರೊಂದಿಗೆ ಉಪ್ಪಿನಸತ್ಯಾಗ್ರಹ ಮಾಡಿದರು. ದಂಡಿ ಉಪ್ಪಿನ ಸತ್ಯಾಗ್ರಹದಲ್ಲಿ ಅತಿ ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದು ವಿಶೇಷ. 

ಕೈಯಿಂದಲೇ ನೂಲುವ – ನೇಯ್ದ ಧೋತಿಯನ್ನು ಗಾಂಧಿಯವರು ಉಡುತ್ತಿದ್ದರು. ಕಾರಣ ಭಾರತದ ಗ್ರಾಮೀಣ ಬಡವರ ಜೊತೆ ಗುರುತಿಸಿಕೊಳ್ಳುವುದಕ್ಕಾಗಿ ಖಾದಿಯನ್ನು ಇಷ್ಟಪಟ್ಟರು. ಅಬಲೆಯರು ಸಬಲರಾಗಬೇಕು. ಚರಕದ ಮೂಲಕ ನೇಯ್ಗೆ ಮಾಡುವ ಕಾಯಕದಲ್ಲಿ ಮಹಿಳೆಯರು ತೊಡಿಸಿಕೊಂಡರೆ ಅವರು ಆರ್ಥಿಕವಾಗಿಯೂ ಸಮರ್ಥರಾಗಲು ಸಾಧ್ಯ ಎಂದು ಬಾಪು ಹೇಳುತ್ತಿದ್ದರು. 

ಖಿಲಾಫತ್ ಚಳುವಳಿಯಲ್ಲಿ ಮುಸ್ಲಿಂ ಮಹಿಳೆಯರು ಬಹುಸಂಖ್ಯೆಯಲ್ಲಿ ಭಾಗವಹಿಸಿದ್ದರು. ದಕ್ಷಿಣ ಆಫ್ರಿಕಾ ಹಾಗೂ ಭಾರತದಲ್ಲಿ ಅಹಿಂಸಾ ಸತ್ಯಾಗ್ರಹದ ಕಾರ್ಯಕರ್ತರಾಗಿ ಹಲವಾರು ಮಹಿಳೆಯರನ್ನು ಗಾಂಧೀಜಿಯವರು ನೇಮಿಸಿಕೊಂಡಿದ್ದರು. ಕಾರಣ ಗಾಂಧೀಜಿಯವರ ಅಹಿಂಸಾ ಸತ್ಯಾಗ್ರಹದ ಪ್ರೇರಕ ಶಕ್ತಿಗಳೆಂದರೆ ತಾಯಿ ಪುತಲಿಬಾಯಿ ಹಾಗೂ ಕಸ್ತೂರ ಬಾ. ಗಾಂಧೀಜಿ ’ಕ್ವಿಟ್ ಇಂಡಿಯಾ’ ಆಂದೋಲನಕ್ಕೆ ಕರೆಕೊಟ್ಟಾಗಲೂ ಮಹಿಳೆಯರು ಹಿಮ್ಮೆಟ್ಟಲಿಲ್ಲ. ಅರುಣಾ ಅಸಫಅಲಿ ಹಾಗೂ ಉಷಾ ಮೆಹ್ತಾ ಈ ಆಂದೋಲನದಲ್ಲಿ ಸಕ್ರೀಯ ಪಾತ್ರ ವಹಿಸಿದರು. ರಷ್ಯಾ ಹಾಗೂ ಚೀನಾ ಕ್ರಾಂತಿಯಲ್ಲಿ ಭಾಗಿಯಾದ ಮಹಿಳೆಯರಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಿಳೆಯರು ಭಾಗವಹಿಸಿದ್ದರು ಎಂದು ಇತಿಹಾಸ ತಿಳಿಸುತ್ತದೆ. ಇದಕ್ಕೆಲ್ಲಾ ಗಾಂಧೀಜಿಯವರೇ ಸ್ಫೂರ್ತಿಯಾಗಿದ್ದಾರೆ. ಸಾರ್ವಜನಿಕ ಜೀವನಕ್ಕೆ ಮಹಿಳೆಯರು ಬಂದರೆ ಎರಡು ಮಹತ್ವದ ಬದಲಾವಣೆಗಳಾಗುತ್ತವೆ ಎಂದು ನಂಬಿದ್ದರು. ಮೊದಲನೆಯದಾಗಿ ಮಹಿಳೆಯರು ಸಮಾಜದಲ್ಲಿ ಸಕ್ರಿಯರಾದಂತೆ, ಎರಡನೆಯದಾಗಿ ಮಹಿಳಾ ಕಾರ್ಯಕರ್ತರೊಂದಿಗೆ ಕೆಲಸ ಮಾಡುವುದರಿಂದ ಪುರುಷರ ಆಲೋಚನಾ ಪ್ರಕ್ರಿಯೆಯಲ್ಲಿಯೂ ಬದಲಾವಣೆಗಳು ಕಂಡುಬರುತ್ತವೆ. ಇದರಿಂದ ಪುರುಷರು ಮಹಿಳೆಯರನ್ನು ಸಮಾನವಾಗಿ ಗೌರವಿಸಲು ಪ್ರಾರಂಭಿಸುತ್ತಾರೆ ಆಗ ಮಹಿಳೆಗೆ ಸಮಾನತೆ ಬರಲು ಸಾಧ್ಯ ಎಂದರು. ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಲು ಮಹಿಳೆಯರಿಂದಲೇ ಸಾಧ್ಯ ಎಂದು ಗಾಂಧೀಜಿ ಮನಗಂಡಿದ್ದರು. ಹೀಗಾಗಿ ಮಧ್ಯಪಾನ ವಿರೋಧಿ ಚಳುವಳಿಯಲ್ಲಿ ಹಲವಾರು ಮಹಿಳೆಯರನ್ನು ಪಾಲ್ಗೊಳ್ಳುವಂತೆ ಮಾಡಿದ್ದರು. ಹೆಂಡದ ಅಂಗಡಿಗಳ ಪಿಕೆಟಿಂಗ್ ಮಾಡಲು ಸಾವಿರಾರು ಮಹಿಳೆಯರು ತೊಡಗಿಸಿಕೊಂಡಿರುವುದು ವಿಶೇಷ. 

ಹರಿಜನ ಉದ್ಧಾರಕ್ಕಾಗಿ – ’ಹರಿಜನ ಅಭಿವೃದ್ಧಿ ಯಾತ್ರೆ’ ಪ್ರಾರಂಭಿಸಿದರು. ದಲಿತರಿಗೆ ಸಮಾನ ಹಕ್ಕುಗಳನ್ನು ನೀಡುವುದು ಈ ಯಾತ್ರೆಯ ಉದ್ದೇಶವಾಗಿತ್ತು. ನಿಧಿ ಸಂಗ್ರಹಣೆ ಮಾಡುವ ಸಂದರ್ಭದಲ್ಲಿ ಅನೇಕ ಮಹಿಳೆಯರು ತಮ್ಮ ಆಭರಣಗಳನ್ನು ಹರಿಜನ ನಿಧಿಗಾಗಿ ನೀಡಿದರು. ಈ ಸಂದರ್ಭದಲ್ಲಿ ವರ್ಧಾ ಹತ್ತಿರವಿರುವ ಸೆಲು ಎಂಬ ಪುಟ್ಟ ಹಳ್ಳಿಯಲ್ಲಿ ಹರಿಜನರಿಗೆ ದೇವಾಲಯ ಪ್ರವೇಶವನ್ನು ಮಾಡುವ ಮೂಲಕ ಈ ಪ್ರವಾಸವನ್ನು ಮುಂದುವರೆಸಿದರು. ಗಾಂಧಿಯವರ ಸಹಾಯಕಿ ಮೀರಾಬೆನ್ ಸಹ ಸಹಕರಿಸುತ್ತಿದ್ದರು. ಕಸ್ತೂರ ಬಾ ಅವರು ಈ ಪ್ರವಾಸದಲ್ಲಿ ಪಾಲ್ಗೊಂಡಿದ್ದರೂ ದೀರ್ಘ ಪ್ರವಾಸ ಕಷ್ಟವಾಗುತ್ತದೆ ಎಂದು ಅವರನ್ನು ಅಹಮದಾಬಾದಗೆ ಕಳಿಸಿಕೊಡಲಾಯಿತು. ಕಸ್ತೂರ ಬಾ ಅಹಮದಾಬಾದ್ ತಲುಪಿದ ನಂತರ ಗಾಂಧಿ ಅಪೂರ್ಣ ಮಾಡಿದ – ’ರಾಸ್’ ನ ರೈತರ ಸಮಸ್ಯೆಯನ್ನು ಆಲಿಸಿ ನ್ಯಾಯಕೊಡಿಸಬೇಕೆಂದು ಹೋದಾಗ ಸರ್ಕಾರ ಮತ್ತೆ ಅವರನ್ನು ಬಂಧಿಸಿತು. ಯರವಾಡ ಸೆರೆಮನೆಗೆ ಕಳಿಸಿತು. ಇತ್ತ ಗಾಂಧಿ ಈ ಪ್ರವಾಸದ ಸಭೆಗಳಲ್ಲಿ ಅಸ್ಪೃಶ್ಯತೆಯ ಬಗ್ಗೆ ಮಾತನಾಡುತ್ತಾ ಜನರಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತುತ್ತಾ ಹೋಗುತ್ತಿದ್ದರು. ಇವರ ಹಿಂದೆ ಅನೇಕ ಮಹಿಳೆಯರೂ ಸಹ ಸಹಕಾರ ನೀಡಿದರು. ಈ ಪ್ರವಾಸ ಕರ್ನಾಟಕಕ್ಕೆ ಬಂತು. ಗಾಂಧೀಜಿ ಹರಿಜನರೋದ್ಧಾರಕ್ಕಾಗಿ ಕರ್ನಾಟಕದಲ್ಲಿ ಯಾತ್ರೆ ಮಾಡುತ್ತಿದ್ದರು. ಒಮ್ಮೆ ಕೊಡಗಿಗೂ ಬಂದಿದ್ದರು. ಕೊಡಗಿನ ಮಹಿಳೆಯೊಬ್ಬರು ಗಾಂಧೀಜಿ ತಮ್ಮ ಮನೆಗೆ ಬರಬೇಕೆಂದು ಆಗ್ರಹಿಸಿದರು. ಆದರೆ ಗಾಂಧೀಜಿಯವರಿಗೆ ಆ ಮಹಿಳೆಯ ಮನೆಗೆ ಹೋಗಲು ಸಾಧ್ಯವಾಗಿರಲಿಲ್ಲ. ಆ ಮಹಿಳೆ ಗಾಂಧೀಜಿ ಬಾರದಿದ್ದದ್ದಕ್ಕೆ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ್ದಳು. ಇದನ್ನು ಅರಿತ ಗಾಂಧೀಜಿ ಆ ಮಹಿಳೆಯ ಮನೆಗೆ ಹೋಗಿ ಹಣ್ಣನ್ನು ಕೊಟ್ಟು ಅವಳ ಉಪವಾಸವನ್ನು ಕೊನೆಗಾಣಿಸಿದರು. ಗಾಂಧಿ ಆಗಮನದಿಂದ ಸಂಪ್ರೀತಳಾದ ಆ ಮಹಿಳೆ ತನ್ನ ಒಡವೆಗಳನ್ನು ಹರಿಜನರೋದ್ಧರಕ್ಕಾಗಿ ಕೊಟ್ಟು ಆನಂದಪಟ್ಟಳು. ಎರಡು ಮಾತೃ ಹೃದಯಗಳು ಒಂದಾಗಿ ಸ್ವಾತಂತ್ರ್ಯ ಭಾರತದ ಸಂಗ್ರಾಮಕ್ಕಾಗಿ ಹೋರಾಡಿದ್ದು ದಾಖಲಾರ್ಹ. ಆ ಮಹಿಳೆಯೇ ನಮ್ಮ ಕನ್ನಡದ ಆದ್ಯ ಬರಹಗಾರ್ತಿ ಕೊಡಗಿನ ಗೌರಮ್ಮ. 

ಕಾರವಾರದ ಮಹಾದೇವಿ ಎಂಬ ಮಹಿಳೆ ಗಾಂಧೀಜಿಯವರ ಅಸಹಕಾರ ಸತ್ಯಾಗ್ರಹದಲ್ಲಿ ಭಾಗಿಯಾಗಿ ಸೆರೆಮನೆ ವಾಸ ಅನುಭವಿಸಿ ಬಿಡುಗಡೆಯಾಗಿದ್ದರು. ಅದೇ ಮಹಿಳೆ ಗಂಡ ಸತ್ತ ನಂತರ ಕುಟುಂಬದ ಒತ್ತಾಯಕ್ಕೆ ಮಣಿದು ತಲೆಬೋಳಿಸಿಕೊಂಡಿರುತ್ತಾಳೆ. ಇದನ್ನು ಗಮನಿಸಿದ ಗಾಂಧೀಜಿಯವರು ಆ ಕುಟುಂಬಸ್ಥರಿಂದ ಮಹಿಳೆಯನ್ನು ಬೇರ್ಪಡಿಸಿ ವಾರ್ಧಕ್ಕೆ ಕರೆದುಕೊಂಡು ಹೋಗಿ ಅವಳಿಗೆ ವಾಸಿಸಲು ಅನುವು ಮಾಡಿಕೊಟ್ಟರು. ಅಲ್ಲದೆ ಅವಳಿಗೆ ಸ್ತ್ರೀ ಸಹಜವಾದ ಕೂದಲನ್ನು ಬೆಳೆಸಿಕೊಂಡು ಎಲ್ಲರಂತೆ ಬದುಕಲು ಅವಕಾಶ ಮಾಡಿಕೊಟ್ಟರು. ಈ ಸಂದರ್ಭದಲ್ಲಿ – ಲಕ್ಷ್ಮೀ ಎಂಬ ದಲಿತ ಬಾಲಕಿಯನ್ನು ಗಾಂಧಿ ದತ್ತು ತೆಗೆದುಕೊಂಡಿದ್ದರು. ಅವಳ ಮೇಲೆ ಎಲ್ಲಿಲ್ಲದ ಅಕ್ಕರೆ. ಅವಳು ಉಂಡು ಬಿಟ್ಟ ಊಟವನ್ನು ಗಾಂಧೀಜಿ ಉಣ್ಣುತ್ತಿದ್ದರು.

ಮಹಿಳೆಯರು ಚಳುವಳಿಗಳಲ್ಲಿ ಭಾಗವಹಿಸುವುದಲ್ಲದೇ ’ನಾಯಕಿ’ ಯರಾಗಿಯೂ ಬೆಳೆಯಬೇಕೆಂದು ಗಾಂಧೀಜಿ ಬಯಸಿದ್ದರು. ಗಾಂಧೀಜಿಯವರ ಮುಂದಾಳತ್ವದಲ್ಲಿ ಸರೋಜಿನಿ ನಾಯ್ಡು, ವಿಜಯಲಕ್ಷ್ಮಿ ಪಂಡಿತ್, ಕಮಲಾದೇವಿ ಚಟೋಪಾಧ್ಯಾಯ, ಮೀರಾಬೆನ್, ಅನುಸೂಯಬೆನ್, ಆನಿಬೆಸೆಂಟ್ ಮುಂತಾದ ಅನೇಕ ಮಹಿಳೆಯರು ರಾಷ್ಟ್ರೀಯ ನಾಯಕಿಯರಾಗಿ ರೂಪಗೊಂಡರು. ೧೯೨೫ರಲ್ಲಿ ಕಾಂಗ್ರೇಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸರೋಜಿನಿ ನಾಯ್ಡು ಅವರನ್ನು ಸೂಚಿಸಲಾಯಿತು. ಗಾಂಧೀಜಿಯವರ ಇನ್ನೋರ್ವ ಪರಮಾಪ್ತರಾದ ಅಮೃತಾಕೌರ್ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿದರು. 

ಆದರೂ ಗಾಂಧೀಜಿಯವರ ಮಹಿಳಾಪರತೆಗೂ ಮಿತಿಗಳಿರುವುದನ್ನು ಕಾಣಬಹುದು. ಮಹಿಳೆಯನ್ನು ಪೂಜ್ಯಭಾವದಿಂದ ನೋಡುವ ಗಾಂಧೀಜಿಯವರ ನಿಲುವುಗಳು ಮಹಿಳೆಯರನ್ನು ಸಾಂಪ್ರದಾಯಕ ಚೌಕಟ್ಟಿನಿಂದ ಹೊರಬರಲು ಅಷ್ಟೇನೂ ಸಹಕರಿಸಲಿಲ್ಲ. ಪುರಾಣಗ್ರಂಥಗಳ ಸ್ತ್ರೀ ಮಾದರಿಗಳನ್ನು ವಾಸ್ತವದಲ್ಲಿಯೂ ಬಯಸುತ್ತಿರುವುದು ಗಾಂಧೀಜಿಯವರ ಒಂದು ಮಿತಿಯಾಗಿತ್ತು.

ಮಹಿಳೆಯರು ಗಂಡಾಳ್ವಿಕೆಯಿಂದ ಸಂಪೂರ್ಣ ಹೊರಬರುವ ಯಾವ ಕ್ರಾಂತಿಕಾರಕ ಬದಲಾವಣೆಗಳು ಗಾಂಧೀಜಿಯವರ ನಡೆನುಡಿಗಳಲ್ಲಿ ಅಷ್ಟೇನೂ ಕಂಡು ಬರಲಿಲ್ಲ. ಗಂಡು ಹೆಣ್ಣನ್ನು ಯಜಮಾನ ಅಧೀನ ನೆಲೆಯಲ್ಲಿಯೇ ಗಾಂಧೀಜಿ ನೋಡುತ್ತಿದ್ದರು ಎನಿಸುತ್ತದೆ. ಈ ಎಲ್ಲ ಮಿತಿಗಳನ್ನೂ ಮೀರಿದ ಮಹಿಳಾಪರ ಅಂತಃಕರಣ ಗಾಂಧೀಜಿಯವರಿಗೆ ಇದ್ದದ್ದಂತೂ ನಿಜ. ಆದ್ದರಿಂದಲೇ ಗಾಂಧೀಜಿ ಇಂದಿಗೂ ಭಾರತೀಯ ಸ್ತ್ರೀಪರ ಆಲೋಚನೆಯಲ್ಲಿ ವಿಶಿಷ್ಟವಾದ ಸ್ಥಾನವನ್ನು ಪಡೆದಿದ್ದಾರೆ. 

‍ಲೇಖಕರು Admin

October 2, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: