ಮಹಿಪಾಲರೆಡ್ಡಿ ಮುನ್ನೂರ್
ನೀ ನಕ್ಕಾಗ ನಾನೂ ನಗಬೇಕೆಂದು ಹೇಳಿದ್ದು ಯಾರು ದೊರೆಸಾನಿ
ನೀ ಮೌನವಾದಾಗ ನಾನೂ ಮೌನವಾಗಬೇಕೆಂದು ಹೇಳಿದ್ದು ಯಾರು ದೊರೆಸಾನಿ
ನಿನ್ನ ಗುಂಗಿನಲ್ಲಿಯೇ ಮುಳುಗಿಹೋದವನ ಹೃದಯದ ಚಲನ ನಿಂತುಹೋಗಿತ್ತು
ಇರುಳ ಅಪ್ಪುಗೆಯನು ಹಗಲಿಗೂ ವರ್ಗಾಯಿಸೆಂದು ಹೇಳಿದ್ದು ಯಾರು ದೊರೆಸಾನಿ
ಉಸಿರು ಉಸಿರಲಿ ಜೊತೆ ಹೆಜ್ಜೆ ಹಾಕಿದ್ದು ಸಾಕೆನಗೆಂದು ನಿನಗೆ ಹೇಳಬೇಕಿತ್ತು
ಬಯಕೆಗಳ ಬೆಸುಗೆಯನು ದೂರಸರಿಸೆಂದು ಹೇಳಿದ್ದು ಯಾರು ದೊರೆಸಾನಿ

ಗಮ್ಯ ರಮ್ಯ ದಿವ್ಯ ಅರಿಯದಾಗಿ ಅಕಾರಣ ಬದುಕು ಬೇಡವಾಗಿತ್ತು
ನಶೆ ಕರಗದಂತೆ ಸ್ವಪ್ನದಲ್ಲೂ ಬೆಳಕ ದೀಪ ಮಂದವಾಗಿಸೆಂದು ಹೇಳಿದ್ದು ಯಾರು ದೊರೆಸಾನಿ
ಎದೆಯೊಳಗೆ ಮುಖವಾನಿಸಿ ಕಂಬನಿಗರೆದು ಬಾಳು ಉಜ್ವಲವಾಗಿಸಬೇಕಿತ್ತು
ಈ ರಾತ್ರಿಯಲಿ ಮುಳುಗಿದ ಚಂದ್ರ ಮತ್ತೆ ಬಾರನೆಂದು ಹೇಳಿದ್ದು ಯಾರು ದೊರೆಸಾನಿ
ಮನದ ಮಿಲನಕೆ ಹೃದಯವೂ ಆತುರಪಟ್ಟಿದ್ದು ನಿನಗೆ ತಿಳಿಬೇಕಿತ್ತು
ತುಟಿಯ ನಿಶ್ಯಬ್ದಗಳೇ ‘ಮೈನಾ’ ಚಹರೆಯ ಕಣ್ಣಲ್ಲಿ ವಿಶ್ವಾಸವಿರಲೆಂದು ಹೇಳಿದ್ದು ಯಾರು ದೊರೆಸಾನಿ






0 Comments