ಮಲಯಾಳ ಮೂಲ: ಪಿ ಕೆ ಗೋಪಿ

ಕನ್ನಡಕ್ಕೆ: ಪಾರ್ವತಿ ಜಿ ಐತಾಳ
ಗಿರಿ ಶಿಖರದಲಿ ನಿತ್ಯ ಮೌನವು ಘನೀಭವಿಸಿ
ಅಳಲ ಕಂಬಳಿಯನ್ನು ಹೊದ್ದು
ಆಗಸದ ಅಂಚಿನಲಿ ಆತ್ಮೋತ್ಕರ್ಷದಲ್ಲಿ
ತೇಲಿಸುವ ಹಿಮಗೀತೆ ಹಾಡಿ
ಓಂಕಾರನಾದಕ್ಕೆ ಪಂಚೇಂದ್ರಿಯಗಳಲ್ಲಿ
ಪ್ರವಹಿಸಲು ಜಲಶ್ರುತಿಯ ಮೀಟಿ
ಋತುಭೇದ ನವಭಾವ ನಟನಾಂಗಣಗಳಲ್ಲಿ
ಜನನ ಮರಣಗಳ ಗತಿ ಮೆಟ್ಟಿ
ತಿರಯಾಡು೧ ಜ್ಞಾತ ಮೂರ್ತಿಯ ಬೆಳಕಿನಲಿ
ಆಸುರೀ ವಾದ್ಯಗಳು ಮೊಳಗಿ
ಮಕುಟ ಜಟೆ ಕಂಪನ ಮಹಾಶೈಲ ಸಂಗೀತ
ಗಗನದಲಿ ಬಿರುಗಾಳಿ ಬೀಸಿ.
ಇತಿಹಾಸ ದುರಿತಗಳು ಕರಗಿ ಕಟ್ಟೆಯ ಕಟ್ಟಿ
ಕಣಿವೆಯಲಿ ಬುಗ್ಗೆಗಳು ಚಿಮ್ಮಿ
ಟಪಟಪನೆ ಉದುರುವ ಕಣ್ಣೀರ ಧಾರೆಗೆ
ಮಳೆಯೆಂದು ಹೇಳುವರು ಯಾರು?
ಜೀವ ರಾಶಿಯ ಹೃದಯಗರ್ಭಗಳ ನೆನೆಸುವ
ಕುಳಿರೆಂದು ಹೇಳುವರು ಯಾರು?
ಮುಗಿಲಮರ ಸುರಿಸುವ ಕಾರುಣ್ಯ ವರ್ಷವದು
ಭಿತ್ತಿಯಂಚಲಿ ಬಂದು ನಿಂತು
ತೋಟಗಳ ಪುಟ್ಟ ಎಲೆ ಮಡಿಕೆಯಲಿ ಮನೆ ಕಟ್ಟಿ
ಶಲಭ ಸ್ವಪ್ನಗಳನ್ನು ಕಂಡು
ಬಯಲ ಎಳೆ ಹಸಿರು ಹಾಸಿಗೆಯಲ್ಲಿ ನೂರಾರು
ಹವಳದ ಕದಿರ್ ವಸ್ತ್ರ ಹೆಣೆದು
ತುಳಸಿಯ ಕದಿರ್ ತುದಿಗೆ ಮುತ್ತಿಟ್ಟ ತಾಯಾಗಿ
ಪ್ರಕೃತೀಶ ಮಂತ್ರವನು ಜಪಿಸಿ.
ಚದುರಿ ಚೆಲ್ಲಾಪಿಲ್ಲಿ ನೆನಪುಗಳ ಕೆರೆಮೀನ
ಪ್ರಣಯದಾಟಕೆ ಕೊಳವ ಮಾಡಿ
ನಡುಹಾದಿ ಹಾಡು ಕಾಲ್ಗೆಜ್ಜೆಗಳ ಕಟ್ಟಿಟ್ಟು
ಉದಯಚಿತ್ರಗಳನ್ನು ಬಿಡಿಸಿ.
ವೃಷಭ ತುಲಾವರ್ಷ೨ ಮೇಘ ಕಾವ್ಯವ ಬರೆಸಿ
ಹಳೆ ಗಾದೆ ಮಾತುಗಳ ಹಾಡಿ
ನಿಟ್ಟುಸಿರನಡಗಿಸಿ ಬಡ ಮಣ್ಣ ಮನೆಗಳಿಗೆ
ಕರಿನೀರ ಲೇಪವ ಹಾಕಿ
ಬೀದಿಬದಿ ನರಕ ಗೋಣಿಯಲಿದ್ದ ಹುಚ್ಚನ
ಸುಖನಿದ್ರೆಯ ಬಡಿದು ಕೆಡಿಸಿ
ಹುಲುಸಾಗಿ ಹರಿದ ಕೊಳೆ ದುರ್ವಾಸನೆಗಳ ಹೊಡೆದು
ಗಂಧ ಕತ್ತುರಿ ತುಂಬಿ ಸೊಗಸಿ.
ಮುಡಿಬಿಚ್ಚಿ ನರ್ತಿಸುವ ನಗುವ ಜಲಧಾರೆಗೆ
ಮಳೆಯ ಹೆಸರಿಟ್ಟವರು ಯಾರು?

ದೂರವೆಲ್ಲೋ ಇರುವ ವಿಪಿನ ದುಃಖವ ತಾನು
ಬಿರುಗಾಳಿಯೊಡನೆ ಭಾರೈಸಿ
ಬಿರುನೋಟ ಬೀರಿ ಕೆಂಡದ ಮಾಲೆ ಧರಿಸಿದ
ಹನೆಮರದ ಯಕ್ಷಿ೩ಯೊಡಗೂಡಿ.
ಗಿರಿ ಕುಸಿದು ಸಿಡಿಲ್ಮಿಂಚು ಅಟ್ಟಹಾಸಗಳಿಂದ
ಚಡಪಡಿಪ ಇಳೆಯ ಮೈ ಸುತ್ತಿ
ರುಧಿರ ತೆರೆ ಹೊಮ್ಮಿಸುವ ಆರ್ತನಾದಗಳ
ತೊಳೆದು ಕಡಲ್ ಹೂವಾಗಿಸಿ
ಖಡ್ಗದಾವೇಶದ ಅಗ್ನಿಜ್ವಾಲೆಗಳಾಗಿ
ರೆಕ್ಕೆ ಬಡಿಯುವ ಹಕ್ಕಿಯಾಗಿ
ಗಾಯಗೊಂಡೆದೆಯ ಮೃಣ್ಮಯಗಾನ ಸುಧೆಯಲಿ
ಉರಿವ ಬೆರಳ್ ತುದಿಯಾಗಿಸಿ.
ಎಲೆಗಳ ಮರ್ಮರವ ಸುತ್ತೆಲ್ಲ ಹಬ್ಬಿಸುತ
ಗಂಧರ್ವ ರಥ ವೇಗದಲ್ಲಿ
ಕೋಟಿ ಅಶ್ವಗಳನ್ನು ಏಕ ಕಾಲದಿ ಬಿಚ್ಚಿ
ಓಡಿಸುವ ಇರುಳ ಧ್ವನಿಯಾಗಿ.
ನಗರಗಳ ಪುಡಿಗೈದು ನಿರ್ನಾಮವಾಗಿಸುತ
ರುದ್ರನರ್ತನದಲ್ಲಿ ಮುಳುಗಿ
ಮರಳ ದಿನ್ನೆಗಳ ನುಂಗುವಗಾಧ ಹೊಂಡಗಳ
ಸೃಷ್ಟಿಸುವ ಚಕ್ರಸುಳಿಯಾಗಿ.
ಪ್ರಳಯವಾಗುವ ಹುಚ್ಚು ಕುಣಿತದ ಧಾರೆಗೆ
ಮಳೆಯ ಹೆಸರಿಟ್ಟವರು ಯಾರು?
ಕೊನೆಯಿಲ್ಲದ ಸೇಡ ಸಾವಿನ ತಾಂಡವಕೆ
ಮಳೆಯೆಂದು ಹೇಳುವರು ಯಾರು?

ಹೊಳೆ ತನ್ನ ದೇಹವನು ಬಚ್ಚಿಡುವ ಮರಳಿಗೆ
ನಮಿಸಿ ಕಣ್ಣೀರ್ಗರೆದು ಅತ್ತು
ಸಕಲ ಕಾಲಂಗಳ ದೇಶಂಗಳ ಒಂದೇ
ಜಲದಾರದಲ್ಲಿ ಪೋಣಿಸಲು
ಮಳೆಯೆಂಬುದಾವುದೋ ಕಡಲಲ್ಲಿ ನಿನ್ನೆ
ತೆರೆಯಾಗಿತ್ತೆಂಬುದನು ತಿಳಿದು
ಮಳೆ ನನ್ನಲಿದೆಯೆಂಬುದರಿತು ಚರಾಚರ
ಚಿರಬಂಧವೇನೆಂದು ತಿಳಿದೆ
ನೆನೆಯುವೆನು ನಾನು ಈ ಸುಡುಬಿಸಿಲ ಬೀದಿಯಲಿ
ಆಡುವೆನು ಕಣ್ಣುಮುಚ್ಚಾಲೆ
ನೆನೆಯುವೆನು ನಾನು ಈ ಮನುಜ ಜೀವನ ಪಥದ
ಮೆಟ್ಟಲಲಿ ಹಿಂಡಿ ಕೊಡವಿಕೊಳುತ
ಆತ್ಮಕ್ಕೆ ಕೊಡೆ ಹಿಡಿದ ನನ್ನೊಳಗಿನಜ್ಞಾನ
ಮುಖವಾಡವನು ಕಳಚಿ ಕರಗಿ
ನಡೆಯುವೆನು ನಾನು ಈ ಹಾದಿಯಲಿ ನಲ್ಮಾತು
ಬೀಜಗಳ ಬಿತ್ತಿ ಮುನ್ನಡೆದು
ಏಕಸಮಾಧಿಯ ತೆರದಿ ಶಾಂತವಾಗುವೆ ಕೊನೆಗೆ
ಮಳೆಯೆಂಬ ನಾನು ಮರೆಯಾಗಿ
ಕೊನೆಯಲಿ ಚಿದಾಕಾಶ ಶೂನ್ಯತೆಯ ಒಳಗೆ
ನಾನೆಂಬ ಮಳೆಯೂ ಕರಗಿ ಬಿಡುವೆ.
ನೀನೆಂಬ ಮಳೆಯೂ.. ನಾನೆಂಬ ಮಳೆಯೂ..
—–
೧ ತಲೆಯ ಮೇಲೆ ಅಲಂಕರಿಸಿದ ಒಂದು ಮರದ ಹಲಗೆಯನ್ನಿಟ್ಟುಕೊಂಡು ಮಾಡುವ ಒಂದು ರೀತಿಯ ನೃತ್ಯ
೨ ಹಿಂಗಾರು ಮಳೆ
೩ ಮೋಹಿನಿ
ಮಲಯಾಳದ ಪ್ರಸಿದ್ಧ ಕವಿ ಪಿ. ಕೆ. ಗೋಪಿಯವರ ‘ಒಂದು ಹನಿ’ ಎಂಬ ಹನಿಗವನಗಳ ಸಂಕಲನ ನವಕರ್ನಾಟಕ ಪ್ರಕಾಶನದಿಂದ ೨೦೧೬ರಲ್ಲಿ ಪ್ರಕಟವಾಗಿದೆ






ಲೌಕಿಕ ಜಗತ್ತಿನ ವಾಸ್ತವದ ಮಳೆ, ಹೀಗೆ ಇಳೆಗೆ ಬಡಿದು, ಪ್ರಕೃತಿಯ ಬಂಜೆತನವ ಕಳೆದುಕ್ಕುವ ಜೀವಸೆಲೆಯ ಒರತೆಯನ್ನು ಸ್ರವಿಸುತ್ತಲೇ ಪ್ರಳಯದೋಕುಳಿಯ ಮುಸಲಧಾರೆಯಾಗಿ ಸುರಿದು ಕೊನೆಗೆ ಆಧ್ಯಾತ್ಮದೌನ್ನತ್ಯಕ್ಕೇರಿ “ನಾನೆಂಬ ಮಳೆಯೂ, ನೀನೆಂಬ ಮಳೆಯೂ” ಅವಿನಾಭಾವದಲ್ಲಿ ಐಕ್ಯವಾಗುವ ಈ ನೀಳ್ಗವನ ಒಂದು ಅದ್ಭುತ ಪ್ರತಿಮಾ ಶಕ್ತಿಯನ್ನು ಹೊಂದಿದೆ ಎಂದು ನನಗನಿಸುತ್ತದೆ. ಇಂತಹ ಒಂದು ಸಾರ್ಥಕ ಕವನವನ್ನು ಮೂಲದ ಸೊಗಡು ಮಾಸದಂತೆ ಅನುವಾದ ಮಾಡಿದ್ದಕ್ಕೆ ಹಾರ್ದಿಕ ಅಭಿನಂದನೆಗಳು. ಮೂಲ ಕವಿ ಪಿ.ಕೆ. ಗೋಪಿ ಅವರಿಗೂ ಮೆಚ್ಚುಗೆಯ ಅಭಿನಂದನೆಗಳು.
ಆಹಾ ‘ಮಳೆ ನೋಟ’ ದ ಅಗಾಧ ಸಾಧ್ಯತೆಯೋ..! ಮಳೆಯ ಇಳೆಯ ಬದುಕು ಬವಣೆಯ ಪೂರ್ಣ ನೋಟ. ಮೂಲ ಕವಿ ಗೋಪಿಯವರಿಗೂ, ತಾದಾತ್ಮ್ಯದಿಂದ ಕನ್ನಡಕ್ಕೆ ಸಾಕ್ಷಾತ್ಕರಿಸಿ ಇದೇ ಮೂಲ ಕವಿತೆ ಎಂಬಂತೆ ಭಾಸವಾಗಿಸಿದ ಪಾರ್ವತಿ ಮೇಡಮ್ ಅವರಿಗೂ ತುಂಬು ಮನದ ಅಭಿನಂದನೆಗಳು ಮತ್ತು ಇಂತಹ ಓದಿಗೆ ಕಾರಣರಾದುದಕೆ ಇಬ್ಬರಿಗೂ ದನ್ಯವಾದಗಳೂ ಸಹ