ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಮಳೆಯೆಂಬ ಮಂತ್ರದಂಡ' – ಜಿ ಪಿ ಬಸವರಾಜು ಬರೀತಾರೆ

ಜಿ ಪಿ ಬಸವರಾಜು

ಮಳೆಯೆಂಬುದು ನಿಜಕ್ಕೂ ಒಂದು ಮಂತ್ರದಂಡವೇ. ಬಾನತುಂಬ ಮೋಡಗಳು ಸಂತೆನೆರೆದು ನಾಲ್ಕು ಹನಿ ನೆಲಕ್ಕೆ ಬಿದ್ದರೆ ಎಂಥ ಪವಾಡ ನಡೆದುಹೋಗುತ್ತದೆ. ಕಾದ ನೆಲ ತಂಪಾಗಿ, ಬೀಸುವ ಗಾಳಿ ಹಿತವಾಗಿ ಜೀವ ಸಂಕುಲವೇ ಸಂಭ್ರಮಿಸುತ್ತದೆ. ಸಹಿಸಲಾಗದ ಬೇಸಿಗೆ ಎಂಬುದು ಮಾಯವಾಗಿ ಗುಡುಗು, ಮಿಂಚು, ಸಿಡಿಲು, ಧಾರೆಧಾರೆ ಮಳೆ; ಹೊಸ ಲೋಕವೇ ಹುಟ್ಟಿಕೊಳ್ಳುತ್ತದೆ. ನೀರು ಕುಡಿದು ಕುಡಿದು ಸಂತೃಪ್ತಿಗೊಂಡ ಭೂಮಿ ಅರಳುತ್ತದೆ; ಜೀವ ಕುಡಿಯೊಡೆಯುತ್ತದೆ; ಹಸಿರು ಎಲ್ಲೆಲ್ಲೂ ಲಕಲಕಿಸುತ್ತದೆ. ಅಬ್ಬರದ ಮುಂಗಾರಿನ ನಡುವೆಯೇ ಜೀವನೋಲ್ಲಾಸ ಸಂಭ್ರಮಿಸುತ್ತದೆ.
ಇದು ಋತುಚಕ್ರ. ಒಂದು ಕೊನೆಗೊಂಡು, ಮತ್ತೊಂದು ಆರಂಭ. ಹೊಸತು ಉದ್ದಕ್ಕೆ ಚಾಚಿ ಹಳೆಯದಾಗಿ ಅದೂ ಕೊನೆಗೊಳ್ಳುತ್ತದೆ. ಆರಂಭ, ಬೆಳವಣಿಗೆ, ಅಂತ್ಯ. ಇದು ಪ್ರಕೃತಿ ಧರ್ಮ. ಜೀವ ಸಂಕುಲದ ಚಕ್ರವೂ ಹೀಗೆಯೇ.
ಈ ಬಾರಿಯ ಮುಂಗಾರಿನ ಸಂಭ್ರಮ ಆರಂಭವಾಯಿತು ಎನ್ನುವಾಗಲೇ ಅದರ ನಿಧಾನ ಗತಿ ಆತಂಕ ಹುಟ್ಟಿಸುತ್ತಿದೆ. ಕೇರಳದಲ್ಲಿ ಕಾಣಿಸಿಕೊಂಡ ಮುಂಗಾರು ಕರ್ನಾಟಕಕ್ಕೆ ಕಾಲಿರಿಸಲಿಲ್ಲ. ಅದರ ದಿಕ್ಕು ಬದಲಾಯಿತು. ಮಳೆ ಮಾರುತಗಳ ಚಲನೆ, ದಿಕ್ಕು ಎಲ್ಲವೂ ಹೀಗೆಯೇ ಇರಬೇಕೆಂದು ನಿರ್ಧರಿಸುವವರು ಯಾರು? ಅದು ಹೇಗೇ ಚಲಿಸಲಿ, ಎಂಥ ಆವಾಂತರಗಳನ್ನೇ ಹುಟ್ಟಿಸಲಿ, ಜೀವ ಸಂಕುಲವಂತೂ ಅದನ್ನೇ ನಂಬಿರುತ್ತದೆ; ಅದರ ಮೇಲೆಯೇ ಅವಲಂಬಿಸಿರುತ್ತದೆ. ಋತುಚಕ್ರದ ಸುತ್ತ ಪ್ರತಿಯೊಂದು ಜೀವಿಯೂ ಸುತ್ತಲೇ ಬೇಕು.
ಮೊನ್ನೆ ಮೈಸೂರಿನಿಂದ ಶಿವಮೊಗ್ಗಕ್ಕೆ ಹೋಗುವ ದಾರಿಯಲ್ಲಿ ಕಂಡ ಚಿತ್ರ ಆತಂಕ ಹುಟ್ಟಿಸುವಂತಿತ್ತು. ನೀರಿನ ಆಸರೆ ಇರುವ ಕಡೆಗಳಲ್ಲಿ ಅಂಥ ಆತಂಕ ಸದ್ಯಕ್ಕಂತೂ ಇಲ್ಲ. ಹಸಿರು ನಳನಳಿಸುತ್ತಿದೆ; ಲೆಕ್ಕಾಚಾರದ ಪ್ರಕಾರ ಬೆಳೆ ಬಂದರೆ, ರೈತರ ಮುಖದಲ್ಲಿ ನಗೆ ಮೂಡಬಹುದು. ಆದರೆ ನೀರಿಗಾಗಿ ಮಳೆಯನ್ನೇ ನಂಬಿರುವ ರೈತರು? ಅವರು ಮುಗಿಲನ್ನೇ ನೋಡುತ್ತ ಕೂಡಬೇಕಾಗಿದೆ. ಮಳೆನೀರನ್ನೇ ನಂಬಿರುವ ಕೃಷಿ ಭೂಮಿಯಲ್ಲಿ ಕೆಲವು ಕಡೆ ಬಿತ್ತನೆ ನಡೆದಿದೆ; ಮತ್ತೆ ಕೆಲವೆಡೆ ಭೂಮಿಯನ್ನು ಹಸನುಗೊಳಿಸಿಕೊಂಡು ಮಳೆಯ ಬರವಿಗಾಗಿ ದಾರಿ ಕಾಯುತ್ತಿದ್ದಾರೆ. ಇನ್ನೆಷ್ಟು ಕಾಲ ಕಾಯಬೇಕು. ಈಗಾಗಲೇ ಬಿತ್ತನೆ ಮುಗಿದು ಪೈರು ಹುಟ್ಟಿರುವ ಹೊಲಗಳಲ್ಲಿ ಬೆಳೆಯೇನೋ ಚೆನ್ನಾಗಿರುವಂತಿದೆ. ಆದರೆ ಎರಡು ಮೂರು ವಾರಗಳಲ್ಲಿ ಮಳೆಬರದಿದ್ದರೆ ಅದು ಒಣಗುವುದು ಖಾತ್ರಿ. ಒಂದೆರಡು ಮಳೆ ಬಂದರೂ ಸಾಕು, ಬಿತ್ತಿದ್ದಕ್ಕೆ ಮೋಸವಾಗುವುದಿಲ್ಲ. ಆದರೆ ಸಕಾಲದಲ್ಲಿ ಮಳೆಯೇ ಬಾರದಿದ್ದರೆ?


ಚಿತ್ರಕೃಪೆ : ಜಿ ಎನ್ ಮೋಹನ್

ಮಳೆ ಎಂಬುದು ಬಹುದೊಡ್ಡ ವರವೂ ಹೌದು; ಶಾಪವೂ ಹೌದು. ಸಕಾಲದಲ್ಲಿ, ಸರಿಯಾದ ಪ್ರಮಾಣದಲ್ಲಿ ಮಳೆಬಿದ್ದರೆ ರೈತರು ನೆಮ್ಮದಿಯಿಂದ ಜೀವಿಸುತ್ತಾರೆ. ಮಳೆ, ಬೆಳೆ, ಬದುಕು ಒಂದರೊಳಗೊಂದು ಬೆಸೆದು ಕಾಲಚಕ್ರ ನೆಮ್ಮದಿಯಲ್ಲಿ ತಿರುಗುತ್ತದೆ. ಅದು ಏರುಪೇರಾದರೆ ರೈತರ ಬದುಕು ಮಾತ್ರವಲ್ಲ, ಇಡೀ ರಾಷ್ಟ್ರದ ಬದುಕೇ ಅತಂತ್ರ ಸ್ಥಿತಿಯಲ್ಲಿರುತ್ತದೆ.
ನಮ್ಮದು ಬೃಹತ್ ರಾಷ್ಟ್ರ. ಕೇವಲ ಮಳೆನೀರಿನ ಮೇಲೆಯೇ ಕೃಷಿ ಚಟುವಟಿಕೆ ನಡೆಯುತ್ತಿಲ್ಲ. ಕೆರೆ, ಕಾಲುವೆ, ಹಳ್ಳ ಕೊಳ್ಳ, ಬಾವಿ, ಅಣೆಕಟ್ಟು, ನದಿ, ಕೊಳ ಹೀಗೆ ನೀರಿಗಾಗಿ ಅನೇಕ ಮೂಲಗಳನ್ನು ಮತ್ತು ಮಾರ್ಗಗಳನ್ನು ನಾವೆಲ್ಲ ಅನುಸರಿಸುತ್ತಲೇ ಬಂದಿದ್ದೇವೆ. ನಮ್ಮ ರಾಜ್ಯದಲ್ಲಿಯೂ ನೀರಿಗಾಗಿ ಅನೇಕ ಮೂಲಗಳಿವೆ. ಇಷ್ಟೆಲ್ಲ ಇದ್ದರೂ, ರಾಜ್ಯದಲ್ಲಿರುವ ನೀರಾವರಿ ಪ್ರದೇಶ ಇರುವುದು ಶೇ 26.5 ಮಾತ್ರ. ಉಳಿದದ್ದೆಲ್ಲ ಒಣ ಭೂಮಿ; ಅಂದರೆ ಮಳೆಯನ್ನೇ ಆಧರಿಸಿದ್ದು.
ಅತ್ಯಂತ ಹೆಚ್ಚಿನ ಮಳೆಬೀಳುವ ಮಲೆನಾಡು, ಕರಾವಳಿ ಪ್ರದೇಶಗಳೂ ನಮ್ಮಲ್ಲಿವೆ. ಕಡಿಮೆ ಪ್ರಮಾಣದಲ್ಲಿ ಮಳೆಯನ್ನು ಕಾಣುವ ಬಯಲು ಪ್ರದೇಶಗಳೂ ಇವೆ. ತೀರ ಕಡಿಮೆ ಮಳೆಬೀಳುವ ಬಾಗಲಕೋಟೆ, ಚಿತ್ರದುರ್ಗ, ಕೊಪ್ಪಳ, ಕೋಲಾರ, ಬಳ್ಳಾರಿ ಜಿಲ್ಲೆಗಳು ಸದಾ ಮಳೆಯೊಂದಿಗೆ ಜೂಜು ಆಡುತ್ತಲೇ ಇರಬೇಕು. ಇಂಥ ಪರಿಸ್ಥಿತಿಯಲ್ಲಿ ಮುಂಗಾರು ಕೈಕೊಟ್ಟರೆ ರೈತರ ಸ್ಥಿತಿ ಏನಾಗಬೇಕು? ಉತ್ತರ ಕರ್ನಾಟಕದಲ್ಲಂತೂ ಮಳೆಬರದಿದ್ದರೆ ಗುಳೆ ಎನ್ನುವ ಪರಿಸ್ಥಿತಿ ಉಂಟಾಗುತ್ತದೆ. ಜನ ಜಾನುವಾರುಗಳು ಕರುಣಾಜನಕ ಸ್ಥಿತಿಯಲ್ಲಿ ಮುಗಿಲುನೋಡುವ ನೋಟ ಅಪರೂಪವೇನಲ್ಲ.
ನಮ್ಮ ಬದುಕಿಗೆ ಮಳೆ ಬಹಳ ಮುಖ್ಯ. ನದಿಗಳು ತಂಬಿ ಹರಿಯುವುದು ಮಳೆಯಿಂದಲೇ. ಅಣೆಕಟ್ಟುಗಳು, ಬಾವಿಗಳು, ಕೆರೆ ಹಳ್ಳಕೊಳ್ಳಗಳು ಎಲ್ಲ ಮಳೆನೀರನ್ನೇ ನೆಚ್ಚಿಕೊಂಡಿರುತ್ತವೆ. ಭೂಮಿಯೊಳಗಡೆ ಇರುವ ಅಂತರ್ಜಲವೂ ಮಳೆ ನೀರಿನ ಮೇಲೆ ಅವಲಂಬಿತವಾಗಿರುತ್ತದೆ. ನೀರನ್ನು ನಾವು ಸಾಕಷ್ಟು ಪ್ರಮಾಣದಲ್ಲಿ ಬಳಸುತ್ತಿದ್ದೇವೆ. ಕೊಳವೆ ಬಾವಿಗಳಂತೂ ಅಂತರ್ಜಲವನ್ನು ಬರಿದುಮಾಡುವಷ್ಟು ಹೆಚ್ಚಿವೆ. ನಮ್ಮ ಅಂತರ್ಜಲದ ಮಟ್ಟ ವರ್ಷದಿಂದ ವರ್ಷಕ್ಕೆ ಕುಸಿಯುತ್ತಲೇ ಇದೆ. ಮಳೆಯ ಪ್ರಮಾಣವೂ ಕಡಿಮೆಯಾಗುತ್ತಲೇ ಸಾಗುತ್ತಿದೆ. ನಮ್ಮ ಜಲವಿದ್ಯುತ್ ಯೋಜನೆಗಳು ಸರಿಯಾದ ರೀತಿಯಲ್ಲಿ ಫಲಿತಾಂಶ ನೀಡಬೇಕಾದರೆ ಮಳೆ ಬೇಕೇಬೇಕು. ಇಡೀ ಪ್ರಪಂಚದಲ್ಲಿಯೇ ಜಲವಿದ್ಯುತ್ ಉತ್ಪಾದನೆ ಬಹುಪಾಲು ಮಳೆಯನ್ನೇ ಅವಲಂಬಿಸಿದೆ. ಒಟ್ಟು ವಿದ್ಯುತ್ ಉತ್ಪಾದನೆಯ ಶೇ 16ರಷ್ಟು ವಿದ್ಯುತ್ ನಮಗೆ ದೊರೆಯುವುದು ಜಲವಿದ್ಯುತ್ ಮೂಲಕವೇ(2010 ರ ಅಂಕಿಅಂಶ).
ನಿಸರ್ಗದತ್ತವಾದ ಮಳೆಯ ನೀರಿನ ಮೇಲೆ ನಾವೆಲ್ಲ ಅವಲಂಬಿಸುವುದನ್ನು ಕಡಿಮೆಮಾಡಲು ಸಾಧ್ಯವಿಲ್ಲ. ಮಳೆಬರಿಸುವ ಕೃತಕ ವಿಧಾನಗಳು-ಮೋಡಬಿತ್ತನೆ ಇತ್ಯಾದಿ ಕೆಲವೆಡೆ ಜಾರಿಯಲ್ಲಿವೆ. ಆದರೆ ಮೋಡಬಿತ್ತನೆ ಬಹಳ ದುಬಾರಿಯಾದದ್ದು. ಹೀಗಾಗಿ ಇದನ್ನು ಎಲ್ಲ ಸಂದರ್ಭಗಳಲ್ಲಿ ಎಲ್ಲ ರಾಷ್ಟ್ರಗಳೂ ಮಾಡಲಾರವು. ಮಳೆಯೇ ನಮಗೆ ಗತಿ ಮತ್ತು ಗುರಿ ಎಂಬಂತಾಗಿದೆ.
ಮಳೆ ಆಗಾಗ ಕೈಕೊಟ್ಟರೂ ಬದುಕು ದುಸ್ತರವಾಗದಂತೆ ಮಾಡುವುದು ಹೇಗೆ? ಇದಕ್ಕಾಗಿ ಹಲವಾರು ಪ್ರಯತ್ನಗಳು ಜಗತ್ತಿನಾದ್ಯಂತ ನಡೆಯುತ್ತ ಇವೆ. ಮುಖ್ಯವಾದ ವಿಧಾನವೆಂದರೆ ಇರುವ ನೀರನ್ನು ಸಮರ್ಪಕವಾಗಿ ಬಳಸುವುದು ಮತ್ತು ಅಂತರ್ಜಲ ಮಟ್ಟವನ್ನು ತೀರ ಕಡಿಮೆಯಾಗದಂತೆ ಕಾಯ್ದುಕೊಳ್ಳುವುದು. ಮಳೆನೀರನ್ನು ಸಂಗ್ರಹವಾಗಿಟ್ಟುಕೊಂಡು ಮಳೆ ಇಲ್ಲದ ದಿನಗಳಲ್ಲಿ ಅದನ್ನು ಬಳಸುವ ಪ್ರಯತ್ನ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ರಾಜಸ್ತಾನದಲ್ಲಂತೂ ಈ ನೀರು ಸಂಗ್ರಹಣೆಗಾಗಿ ಹಲವಾರು ಪಾರಂಪರಿಕ ವಿಧಾನಗಳಿವೆ. ಈಗಲೂ ಅವನ್ನು ಸಮರ್ಪಕವಾಗಿ ಬಳಸುವುದು ಅಲ್ಲಿನ ಜನರಿಗೆ ಅನಿವಾರ್ಯವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯವಾಗುತ್ತಿರುವ ಮಳೆಕೊಯ್ಲು ವಿಧಾನವೂ ರಾಜಸ್ತಾನದಲ್ಲಿ ಯಶಸ್ವಿಯಾಗಿ ಜಾರಿಯಾಗುತ್ತಿದೆ.
ಕೇರಳದಲ್ಲಿ ಮಳೆಯ ಪ್ರಮಾಣ ಅಧಿಕ. ಭಾರತದಲ್ಲಿ ಬೀಳುವ ಸರಾಸರಿ ಮಳೆಯ ಪ್ರಮಾಣಕ್ಕಿಂತ ಮೂರು ಪಟ್ಟು ಹೆಚ್ಚು ಮಳೆ ಈ ರಾಜ್ಯಲದಲ್ಲಿ ಬೀಳುತ್ತದೆ. ಜೊತೆಗೆ 44 ನದಿಗಳು ಈ ರಾಜ್ಯದಲ್ಲಿ ಹರಿಯುತ್ತಿವೆ. ಇಷ್ಟಾದರೂ ಇಲ್ಲಿ ನೀರಿನ ಅಭಾವ ದೊಡ್ಡ ಪ್ರಮಾಣದಲ್ಲಿಯೇ ಇದೆ. ಇಲ್ಲಿಯೂ ಮಳೆನೀರು ಸಂಗ್ರಹಿಸಿ ಬಳಸುವ ವಿಧಾನ ಈಗ ಇಲ್ಲಿ ಚಾಲ್ತಿಯಲ್ಲಿದೆ.
ಮಳೆಕೊಯ್ಲು ಎಂಬ ವಿಧಾನ ಬಹಳ ಉಪಯುಕ್ತವಾಗಿರುವಂತೆ ಕಾಣುತ್ತಿದೆ. ಪ್ರತಿಯೊಂದು ಮನೆಯ ಮೇಲೆ ಬೀಳುವ ಮಳೆ ನೀರನ್ನು ಸಂಗ್ರಹಿಸಿಡುವುದು ಮತ್ತು ವರ್ಷದುದ್ದಕ್ಕೂ ಅದನ್ನು ಸರಿಯಾಗಿ ಬಳಸುವುದು. ಅಷ್ಟೊಂದು ನೀರು ನಮಗೆ ದೊರೆಯುತ್ತದೆಯೇ? ಹೌದು, ದೊರೆಯುತ್ತದೆ. ಚೈನಾ ಮತ್ತು ಬ್ರೆಸಿಲ್ಗಳಲ್ಲಿ ಈ ಪ್ರಯೋಗ ಬಹಳ ಪರಿಣಾಮಕಾರಿಯಾಗಿ ನಡೆಯುತ್ತಿದೆ. ಅಮೆರಿಕದ ವರ್ಜಿನ್ ಐಲ್ಯಾಂಡಿನಲ್ಲಿ, ಬರ್ಮುಡಾದಲ್ಲಿ ಮಳೆಕೊಯ್ಲನ್ನು ಕಾನೂನಿನ ಮೂಲಕ ಜಾರಿಮಾಡಲಾಗಿದೆ. ಇನ್ನೂ ಅನೇಕ ರಾಷ್ಟ್ರಗಳಲ್ಲಿ ಮಳೆನೀರಿನ ಬಳಕೆಗಾಗಿ ಈ ವಿಧಾನವನ್ನು ಜಾರಿಗೆ ತರಲು ಗಂಭೀರ ಪ್ರಯತ್ನಗಳು ನಡೆದಿವೆ.
ನಮ್ಮ ದೇಶದಲ್ಲೂ ಮಳೆಕೊಯ್ಲು ಪ್ರಯೋಗ ಆರಂಭವಾಗಿದೆ. ತಮಿಳುನಾಡು ಮತ್ತು ರಾಜಸ್ತಾನಗಳಂತೂ ಈ ಹಾದಿಯಲ್ಲಿ ಮುಂದಿವೆ. ತಮಿಳ್ನಾಡಿನಲ್ಲಿ ಹೊಸ ಕಟ್ಟಡ ಕಟ್ಟಬೇಕೆಂದರೆ ಮಳೆಕೊಯ್ಲು ಕಡ್ಡಾಯ. ಪುಣೆಯಲ್ಲಿ ಮನೆ ನಿಮರ್ಾಣ ಸಂಘಗಳು ದಾಖಲಾಗಬೇಕೆಂದರೆ ಅವು ಮಳೆಕೊಯ್ಲುವಿಧಾನವನ್ನು ಕಡ್ಡಾಯವಾಗಿ ಜಾರಿಗೆ ತರಲು ಒಪ್ಪಿಕೊಳ್ಳಬೇಕು. ತಮಿಳ್ನಾಡಿನಲ್ಲಿ ಕಳೆದ ಐದು ವರ್ಷಗಳ ಅವಧಿಯಲ್ಲಿ ಈ ವಿಧಾನ ಅತ್ಯುತ್ತಮ ಫಲಿತಾಂಶವನ್ನು ನೀಡಿದೆ. ತಮಿಳ್ನಾಡನ್ನು ಮಳೆಕೊಯ್ಲಿಗೆ ಒಂದು ಮಾದರಿ ರಾಜ್ಯವನ್ನಾಗಿಯೇ ಬಳಸಬಹುದು. ಅಷ್ಟೊಂದು ಮುಂದಿದೆ. ಚನ್ನೈನಲ್ಲಂತೂ ಮಳೆಕೊಯ್ಲು ಕಾರಣವಾಗಿ ಅಂತರ್ಜಲದ ಮಟ್ಟ ಶೇ 50 ರಷ್ಟು ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಈ ವಿಧಾನ ಒಂದು ಅದ್ಭುತದಂತೆಯೂ ಕಾಣಿಸುತ್ತಿದೆ. ನಮ್ಮ ರಾಜ್ಯದಲ್ಲೂ ಮಳೆಕೊಯ್ಲಿಗೆ ಅನೇಕರು ಸ್ವಪ್ರೇರಣೆಯಿಂದ ಮುಂದಾಗಿದ್ದಾರೆ. ಸಕರ್ಾರ ಇದನ್ನು ಕಾನೂನು ಮಾಡಿ ಕಡ್ಡಾಯಗೊಳಿಸುವ ಕೆಲಸ ಇನ್ನೂ ಆಗಬೇಕಾಗಿದೆ.
ಕುಡಿಯುವ ನೀರು, ಮನೆಬಳಕೆಯ ನೀರು, ಕೈತೋಟಗಳಿಗೆ ನೀರು, ದನಕರುಗಳಿಗೆ ನೀರು, ಸಣ್ಣ ಪ್ರಮಾಣದ ಕೃಷಿಗೆ ನೀರು ಹೀಗೆ ಮಳೆಕೊಯ್ಲು ಬಹಳ ಪ್ರಯೋಜನಕಾರಿಯಾಗಿ ಬಳಕೆಯಾಗುತ್ತಿದೆ. ಅಂತರ್ಜಲದ ಹೆಚ್ಚಳ ಮಾತ್ರವಲ್ಲ ನೀರಿನ ಗುಣಾತ್ಮಕ ಬದಲಾವಣೆಗೂ ಈ ವಿಧಾನ ಪರಿಣಾಮಕಾರಿಯಾಗಿದೆ ಎಂದು ಅಧ್ಯಯನಗಳು ತಿಳಿಸುತ್ತಿವೆ. ಮಳೆಯ ನೀರು ವ್ಯರ್ಥವಾಗಲು ಬಿಡಬಾರದು. ಯಾವು ಯಾವುದೋ ವಸ್ತುಗಳ ಮೇಲೆ ಹಕ್ಕು ಚಲಾಯಿಸಲು ಮುಂದಾಗುವ ನಾವು ಮಳೆಯ ನೀರಿನ ಮೇಲೂ ನಮ್ಮ ಹಕ್ಕನ್ನು ಯಾಕೆ ಚಲಾಯಿಸಬಾರದು? ಚಲಾಯಿಸಲೇ ಬೇಕು, ಇಲ್ಲವಾದರೆ ಜೀವ ಸಂಕುಲ ಬದುಕುವುದೇ ದುಸ್ತರವಾಗುವ ದಿನಗಳು ಹತ್ತಿರವಾಗುತ್ತಿವೆ. ಈ ಎಚ್ಚರವನ್ನು ನಾವು ಕಳೆದುಕೊಳ್ಳಬಾರದು.
ಸೌಜನ್ಯ: ಸಂಯುಕ್ತ ಕರ್ನಾಟಕ
 
 
 

‍ಲೇಖಕರು G

30 June, 2014

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading