
ಎಚ್ ಎಸ್ ವೆಂಕಟೇಶ ಮೂರ್ತಿ ಅವರ ‘ಬಾರೋ ಬಾರೋ ಮಳೆರಾಯ’ ಕೃತಿಯಿಂದ
ಅವರೇ ಆಯ್ದ ಕೆಲ ಪದ್ಯಗಳು ಓದುವ ಖುಷಿಗಾಗಿ ನಿಮ್ಮ ಮುಂದೆ-

ಮಲ್ಲಿ ಮಲ್ಲಿ ಎಲ್ಲಿಗೆ?
ಮಲ್ಲಿ ಮಲ್ಲಿ ಎಲ್ಲಿಗೆ? ಮಲ್ಲೀಪಟ್ಣದ ಗಲ್ಲಿಗೆ!
ಯಾತಕ್ಕಮ್ಮ ಅಲ್ಲಿಗೆ? ಗೋಲೀ ಮಾಡೋ ಕಲ್ಲಿಗೆ!
ಗೋಲೀಮಾಡೋ ಕಲ್ಲನ್ ತಂದು ಯಾರಿಗೆ ಕೊಡ್ತೀ ಮಲ್ಲಿಗೆ?
ರಾತ್ರಿ ಎಲ್ಲಾ ಅಳ್ತಾ ಇರೋ ಅಡುಗೇಮನೆ ನಲ್ಲಿಗೆ!
ಪೋಲೀ ಗುಂಡ!
ಪೋಲೀ ಗುಂಡ ಬಂದ! ಕೋಳೀವಾಡದಿಂದ!
ಬಗಲಲ್ಲೊಂದು ಕೋಳಿ! ಬೆಳಗಾಯ್ತಣ್ಣ ಏಳೀ!
ಕೂಗ್ತಾ ಇತ್ತು ಕೊಕ್ಕೋ! ಉದ್ರೀಗಾದ್ರೂ ತಕ್ಕೋ!
ರಾಣೀ ಬೆಕ್ಕು-ರಾಜಾ ಬೆಕ್ಕು
ರಾಣೀ ಬೆಕ್ಕು, ರಾಜಾ ಬೆಕ್ಕು ಸಿಕ್ಕಿದ ಇಲಿಗಾಗಿ
ರೇಗಾಡುತ್ತಾ ಕೂಗಾಡುತ್ತಾ ಜಗಳಕ್ಕೇ ರೆಡಿಯಾಗಿ
ನಿಂತಿದ್ದಾಗ ಅಲ್ಲಿಗೆ ಬಂತು ನಾಯಿ-ತೆರೆದೇ ಬಾಯಿ!
ಜಗಳ ಇಲ್ಲ, ಪಗಳ ಇಲ್ಲ ಎರಡೂ ಬೆಕ್ಕು ಮಾಯ!
ಹಿರಿಯೂರಲ್ಲಿ
ಹಿರಿಯೂರಲ್ಲಿ ಕರಿಯಣ್ಣೋರು ಕುರೀ ಕಾಯ್ತಾ ಇದ್ರು!
ಕುರಿ ಕಾಯ್ತಾ ಕಾಯ್ತಾ ಒಮ್ಮೆ ಕರೀ ಬಾವೀಲಿ ಬಿದ್ರು!
ಕರೀಬಾವೀಲಿಲ್ಲ ನೀರು. ಬರೀಕತ್ತಲ ಜೋರು!
ಮೊದಲೇ ಬಿದ್ದೋರ್ ಕೇಳ್ತಾ ಇದ್ರು: “ಈಗ ಬಿದ್ದೋರ್ ಯಾರು?”
ಪಾಪನ ಚಡ್ಡಿ!
ಪುಟ್ಟ ಕಂದ ಹೈ!
ಪಾಪ! ಬರೀ ಮೈ!
ಚಡ್ಡಿ ಕೂಡ ನೈ!
ಥೈ! ಥೈ! ಥೈ!
ತಾತ ಎನ್ನುತ
ಕಣ್ಣ ತಿಕ್ಕುತ
ಅಳುತ ಇದ್ದ ತಾ
ಛೆ! ಛೆ! ಛೆ!
ತಾತ ಬಂದರು!
ಕೊಟ್ಟು ಒಂದು ರೂ
ಚಡ್ಡಿ ತಂದರು!!
ಹ! ಹ! ಹ!
ತೊಡಿಸಿ ನಿಕ್ಕರು
ತಾತ ನಕ್ಕರು
ಝಿಪ್ಪೆ ಚಕ್ಕರ್ರು!!
ಹೊ! ಹೊ! ಹೊ!
ಧೋ ಧೋ ಎಂದು!
ಧೊ! ಧೊ! ಎಂದು ಮಳೆ ಸುರಿವಂದು
ಅರಳಿದ ನಾಯಿಕೊಡೆ!
ಮುರಿಯದ ಹಾಗೆ ಬೀದಿಯ ನಾಯಿ
ನಿಂತಿದೆ ಮೇಲುಗಡೇ!
ಇಂದು ಚಿಕ್ಕ ಕೊಡೆ ಬೆಳೆದರೆ ಮುಂದೆ
ಆಗುವುದೂರಗಲ!
ಚೂರೂ ತೊಯ್ಯದೆ ನಿಲ್ಲುವೆ ಕೆಳಗೆ
ಮುಂದಿನ ಮಳೆಗಾಲ!
ಗಿಲ್! ಗಿಲ್! ಗಿಲ್!
ಗಿಲ್! ಗಿಲ್! ಗಿಲ್!
ಹೋಗ್ಬೇಡ ನಿಲ್!
ಹನಿ ಹನಿ ಮಳೆ ಜತೆ
ತಲೆ ಮೇಲೆ ಕಲ್!!
ನಮ್ಮ ಚೋಟು ನಾಯಿಗೆ
ನಮ್ಮ ಚೋಟು ನಾಯಿಗೆ
ನಾಕು ಫೀಟು ನಾಲಗೆ!
ಈಗ ಚೋಟು ಬೌ ಅಂದರೆ
ಕೇಳಿಸುವುದು ನಾಳೆಗೆ!
ಬಾವಿಯಾಮೆಚಿಪ್ಪಲಿ
ಬಾವಿಯಾಮೆಚಿಪ್ಪಲಿ
ಮಾಡಿಕೊಂಡು ಚಪ್ಪಲಿ
ಉರ್‍ಅ ತಿರುಗುತಿತ್ತು ಕತ್ತೆ
ವಾಕಿಂಗಿನ ನೆಪ್ಪಲಿ!
ಓಟೇ ರೇಟು!
ಒಂದು ಹಳೇ ಕೋಟೆ; ಕೋಟೆ ಒಳಗೊಂದು ಪೇಟೆ;
ಪೇಟೆ ಉದ್ದಕ್ಕು ಮಾರ್ತಾ ಇದ್ದಾರೆ ಒಣಾ ಮಾವಿನ ಓಟೆ!
ಓಟೇ ರೇಟು ಜಾಸ್ತಿ ಅಂದ್ರ ಶ್ರೀಮಾನ್ ಜೆಮ್ ಷೆಡ್ ತಾತ!
“ಓಟೇ ರೇಟೇ ಹಾಗೇ” ಅಂತು ಕುರುಚಲು ಗಡ್ಡದ ಹೋತ!





0 Comments