ಮಲ್ಲಿಕಾರ್ಜುನಗೌಡ ತೂಲಹಳ್ಳಿ
ಒಂದು ರಾತ್ರಿ
ಮರ ಗಿಡ ಹುಲ್ಲು ಹುಪ್ಪಟೆಯಿಲ್ಲದ
ಎರೆ ಬಯಲಿನಲ್ಲಿ ಬೆತ್ತಲಾದೆ
ಕತ್ತಲಿನೊಂದಿಗೆ ಮಾತಾಡಲು
ಕೈ ಕಾಲು ಮೈ
ಒಂದೊಂದೇ ನೋಡಿಕೊಂಡೆ
ಕಾಣಲಿಲ್ಲ
ನಾನೆಂಬ ನಾನೀಗ
ಕೇವಲ
ಸ್ಪರ್ಶ
ಅಂಗಾತವಾದೆ
ಎಣಿಸಿದಷ್ಟೂ ನಕ್ಷತ್ರ
ಕೂಡಿಸಿದಷ್ಟು ರಂಗೋಲಿ

ಮಾತಾಡಬೇಕೆನಿಸಿತು
ಧ್ವನಿಗಳ ರೂಢಿಗತದಿ ಕೂಡಿಸಿ
ಹಳಸಲು ಪದ ವಾಕ್ಯವಾಡುವುದು
ಸಲ್ಲದೆನಿಸಿತು
ಎಷ್ಟೆಲ್ಲ ಧ್ವನಿ ಸಾಧ್ಯವೋ
ಅಷ್ಟು
ನನಗೆ ನಾ ಬೆರಗುವಷ್ಟು ಬೆಚ್ಚುವಷ್ಟು
ಕೊರಳು ಬಾಯಿ ಕೂಡಿ
ಆಡಿದವು ದಣಿಯದಂತೆ
ಕುಣಿದುಕ್ಕಿತು ಉಸಿರು
ಕತ್ತಲೆ ಧ್ವನಿ ಬಸಿರು
ಹಗೂರೆಂದರೆ ಹಗೂರಾದೆ
ಶಬ್ದ ರೆಕ್ಕೆಯ ಬಡಿದು
ಬಾನಾಡಿದೆ
ಅಂದಿನಿಂದ
ಬೆಳಕಿನೊಂದಿಗೆ ಮಾತು ಬಿಟ್ಟಿದ್ದೇನೆ






0 Comments