
ಮಲ್ಲಿಕಾರ್ಜುನಗೌಡ ತೂಲಹಳ್ಳಿ

ಒಂದು ತಾಜಾ ಬೆಳಗಿಗೆ ಹಾತೊರೆದು
ಇರುಳು ಮುಡಿ ಬಿಚ್ಚಿ ಹಾಸಿದೆ
ಅರಳಿದ ಉದ್ಯಾನ
ಸುರೆತಾಣದ ಮಂದ ಬೆಳಕಲಿ
ಗರಿಬಿಚ್ಚಿ ಕುಣಿವ ನವಿಲು
ಕುಂಚ ಕುಚ ಚಿತ್ರ ವಿಚಿತ್ರ
ಮಳೆ ಆಲಾಪ ಪಲ್ಲವಿ ಮುಗಿಸಿ
ಚರಣ ದಾಟಿ
ಆರೋಹಣದ ಉತ್ತುಂಗದಲಿ
ಘನವಾಗುತ್ತಿವೆ ಭಾವ.
ಜಾತ್ರೆಯ ರಂಗಿನ ಗಲಗು ತಿಳಿಯಾಗಿದೆ
ಏಕಾಂತ ಸಾಧಿಸಿದ ಕ್ಷಣ
ಒಳಗಿಗೆ ದಾರಿ ತೆರೆದು
ಕಟ್ಟೆ ಒಡೆದು
ಕೇಕೆ ಹಾಕಿದೆ ತೊರೆ.
ಹಗಲು ಹಾಕಿದ ರೇಖೆ ಅಳಿಸಿ
ದೂರ ತೀರಗಳ ಧಗೆ ತಣಿಸಿ
ಧರೆಯೆಂಬ ಧರೆಯೇ
ಒಂದು ತಾಜಾ ಬೆಳಗಿಗೆ
ಹಾತೊರೆದು ಅಣಿಯಾಗಲು
ಇಂಬಾಗಿದೆ ಕತ್ತಲು.

ಮೊದಲು ನೀನು ಸಿಕ್ಕ ಜಾಗದಲ್ಲೇ
ಮೊದಲು ನೀನು ಸಿಕ್ಕ ಜಾಗದಲ್ಲೇ
ಮರವೊಂದು ಬೆಳೆದಿದೆ ಚೆಲುವೆ
ಅದರ ನೆರಳು ನನ್ನ ಕಂಡಿತೇನೋ
ತೋಳ ಚಾಚಿ ಕರೆಯುತಿದೆ ಒಲವೇ
ನನ್ನ ಹಾಗೆ ಒಂಟಿ ಚಂದ್ರ
ಬಾನಿನಲ್ಲಿ ಬಂದನು
ಕೊಂಬೆ ತುದಿಯ ಹಿಡಿದು ಇಳಿದು
ನನ್ನ ಬಳಿಯೇ ನಿಂತನು
ನೀನಿಲ್ಲದ ಈ ಮೌನವು
ಬೆಳದಿಂಗಳ ಏಕಾಂತವು
ಮತ್ತೇರಿದೆ ನೆನಪಾಗಿದೆ
ನನ್ನೆದೆಯ ದುಗುಡ ಚಂದ್ರನಲ್ಲಿ ಮೂಡಿದೆ
ಕಡಿದು ಹೋದ ನಂಟಿನ ಕತೆ
ಚಂದ್ರನಿಗೆ ಹೇಳಲೇ?
ಅವನು ಅತ್ತು
ಕೆನ್ನೆ ಕೆಂಪಗಾದರೇನು ಮಾಡಲಿ?
ಒಣಹವೆಯೂ ಒದ್ದೆಯಾಗಿ
ಇಬ್ಬನಿಯೂ ಅಳುತಿದೆ
ಸಾಕ್ಷಿಯಾಗಿ ನಿಂತ ಮರದ
ಅಳಲು ಮೀರಿದೆ





0 Comments