‘ಮರೆತ ಮಾತು, ಮರೆಯಾಗದ ನೆನಪು’

ಕೇಶವ ಮಳಗಿ

ಕಾರಡ್ಕದ ಮಣ್ಣ ಹಾದಿಯಿಂದ ‘ತಾರನಾಕಾ’ದವರೆಗೆ ಬರಿಗಾಲ ನಡಿಗೆಯ ದಾರಿಗನ ಪಯಣದ ಭೌತಿಕ ಮುಗಿತಾಯ!

ಕವಿ, ಕಥೆಗಾರ, ಕಾದಂಬರಿಕಾರ, ಅನುವಾದಕ, ಭಾಷಾಕೋವಿದರಾದ ಕೆ.ವಿ. ತಿರುಮಲೇಶ್ ನನ್ನ ಮೆಚ್ಚಿನ ಬರಹಗಾರರಲ್ಲಿ ಒಬ್ಬರು. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಪ್ರಯೋಗಶೀಲತೆ ಎಂದರೇನು? ಒಬ್ಬ ಲೇಖಕ ಕೇಳಿಕೊಳ್ಳಬೇಕಾದ ಒಳಗಿನ ಪ್ರಶ್ನೆಗಳು ಯಾವವು, ಮನುಷ್ಯ-ಭಾಷೆ-ಸಮಾಜಕ್ಕೆ ಇರುವ ಸಂಬಂಧದ ಸ್ವರೂಪವೇನು? ಒಂದು ನಿರುದ್ವಿಗ್ನ ಸ್ಥಿತಿಯಲ್ಲಿ ಸಾಹಿತ್ಯ-ಸಮಾಜ-ಸಂಸ್ಕೃತಿಗೆ ಸಂಬಂಧಿಸಿದ ಕೇಳಬಹುದಾದ ತಾತ್ತ್ವಿಕ ಪ್ರಶ್ನೆಗಳ ವಿಧಾನ ಯಾವುದಿರಬೇಕು? ಎಂಬಂಥ ಘನ ಗಂಭೀರ ಪ್ರಶ್ನೆ ಕೇಳಿಕೊಂಡು ಉತ್ತರ ಅರಿಯಬೇಕಿದ್ದರೆ ತಿರುಮಲೇಶರ ಒಟ್ಟಾರೆ ಸಾಹಿತ್ಯವನ್ನು ಅಧ್ಯಯನ ಮಾಡಿದರೆ ಒಂದಿಷ್ಟು ಬೆಳಕು, ಸಹಜ ಒಳದಾರಿ, ಹೊಸ ನೋಟ ಮತ್ತು ನಿಜವಾದ ಜ್ಞಾನದೇಹಿಗಳು ಹೇಗಿರುತ್ತಾರೆಂದು ಅರಿಯಬಹುದು.

ಗದ್ಯ ಸಾಹಿತ್ಯದಲ್ಲಿ ಸರಾಗತೆ ಸಾಧಿಸುವುದು ಹೇಗೆ, ಒಂದು ಮುಖ್ಯ ವಿಷಯಕ್ಕೆ ನಾನಾ ಅನುಭವಗಳನ್ನು ತಂದು ಜೋಡಿಸಿ ಆ ಬರಹವನ್ನು ಅರ್ಥಪೂರ್ಣ ಮಾಡುವುದು ಹೇಗೆ? ಎಂಬ ಕುತೂಹಲಕ್ಕೆ ತಿರುಮಲೇಶರ ಗದ್ಯ ಬರಹ ಸಮಾಧಾನ ಕೊಡಬಲ್ಲುದು. ಕಾವ್ಯದಲ್ಲಿ ಅವರು ನಡೆಸಿದ ಪ್ರಯೋಗಗಳು ಕೂಡ ಮಹತ್ವದ್ದವೆ. ಅವರ ‘ಅವಧ’, ಪಾಪಿಯೂ ‘ಅವ್ಯಯಕಾವ್ಯ’ ಇತ್ಯಾದಿಗಳಲ್ಲಿ ಅವರ ಕೈಗೊಂಡ ಪ್ರಯೋಗ ಎಲ್ಲ ಕಾಲಕ್ಕೂ ಮಾದರಿ. ಹಾಗೆಯೇ, ಇತರ ದೇಶಭಾಷೆಗಳ ಅಪರೂಪದ ಪುಸ್ತಕಗಳನ್ನು ಹುಡುಕಿ ಕನ್ನಡಕ್ಕೆ ಅನುವಾದಿಸುವಲ್ಲಿ ತಿರುಮಲೇಶರು ತೋರಿರುವ, ತೋರುತ್ತಿರುವ ಆಸ್ಥೆಯೂ ಅನುಕರಣೀಯ.

ಕಾಸರಕೋಡು ಪ್ರದೇಶದ ಜನವಿದೂರ ದಟ್ಟ ಕಾಡಿನ ನಡುವೆ ಹುಟ್ಟಿ, ಅಲ್ಲಿನ ಮಣ್ಣಹಾದಿಗಳನ್ನು ಬರಿಗಾಲಲಿ ಸವೆಸುತ್ತ ಹೈದರಾಬಾದಿನ ತಾರನಾಕಾದಲ್ಲಿದ್ದ ಸಿಫಿಲ್‌ (ಸೆಂಟರ್‌ ಫಾರ್‌ ಫಾರಿನ್‌ ಲ್ಯಾಂಗ್ವೇಜಸ್‌)ಗೆ ತಲುಪುವವರೆಗಿನ ಅವರ ಹೋರಾಟ ಸಾಮಾನ್ಯವಾದುದೇನಲ್ಲ. ಅವರು ಕನ್ನಡದ ಮಹತ್ವದ ಕವಿಯಾಗಿ ಹೊಮ್ಮಿದುದು ಕೂಡ ಅಸಾಮಾನ್ಯವೇ.

ಕೆ.ವಿ. ತಿರುಮಲೇಶರ ಪುಸ್ತಕ ‘ಅಕ್ಷರಲೋಕದ ಅಂಚಿನಲ್ಲಿ’ ಪುಸ್ತಕದ ಉಪಶೀರ್ಷಿಕೆ ಅಥವ ಇತ್ತೀಚೆಗೆ ಚಾಲತಿಗೆ ಬಂದ ನುಡಿಗಟ್ಟು ‘ಟ್ಯಾಗ್‌ಲೈನ್‌’-
‘ಮರೆತ ಮಾತು, ಮರೆಯಾಗದ ನೆನಪು’ ಎಂದು.

ಇವು ಬೇರೆ ಬೇರೆ ಕಡೆ ಅಂಕಣ ರೂಪದಲ್ಲಿ ಪ್ರಕಟವಾದಾಗ ಓದಿ ಆ ಗದ್ಯದ ಸೊಬಗಿಗೆ ನಾನು ಮೋಹಗೊಂಡಿದ್ದೇನೆ. ಇದು ಆತ್ಮಚರಿತ್ರೆಯಲ್ಲದ, ಸುಸಂಘಟಿತವಾಗಿ ಒಂದಾದ ಮೇಲೆ ಮತ್ತೊಂದು ಎಂಬಂತೆ ಜೋಡಿಸಿರದ, ಆದರೆ ಬದುಕಿನ ಸುಖದುಃಖಗಳನು ವೇದಿಕೆಯ ಪಾರದರ್ಶಕ ಪರದೆಯ ಹಿಂದೆ ನಿಲ್ಲಿಸಿ, ತಮ್ಮ ಸಂಭಾಷಣೆಗಳನ್ನು ನೆನಪಿಸಿಕೊಂಡು ತೊದಲು ನುಡಿಯಲ್ಲಿ ಹೇಳುವ ನಟರ ಸ್ವಗತದಂತಹ ಬರಹಗಳು. ಇದು ಅಂಕಣ ಬರಹಗಳ ಸಂಗ್ರಹವಾಗಿರುವುದರಿಂದ ಪ್ರಚಲಿತ ವಿದ್ಯಮಾನಗಳು, ಸಮಾಜವನ್ನು ಕಾಡುವ ಸಂಗತಿಗಳೂ ಇವೆ. ಈ ಬರಹಗಳನ್ನು ಓದಿದಾಗ ಆಗುವ ಅನುಭವವನ್ನು ಮಿಲನ್‌ ಕುಂದೇರನ ಕಾದಂಬರಿಯ ಶೀರ್ಷಿಕೆಗೆ ಹೋಲಿಸಿ ಹೇಳುವುದಾದರೆ, “ಅಸಹನೀಯ ಹಗುರ ಭಾರದ ಇರುವು” (ಅನ್‌ಬೇರಬಲ್‌ ಲೈಟ್‌ನೆಸ್‌ ಆಫ್‌ ಬೀಯಿಂಗ್‌).

ಸಹೃಯದಯರೂ, ವಲ್ನರ್‌ಬಲ್‌ ಎನ್ನುವಂತೆ ಆರ್ದ್ರರೂ ಆಗಿದ್ದ ತಿರುಮಲೇಶರು ತಮ್ಮ ಭೋಳೆತನದಿಂದ ಆಗಾಗ ತೆಗೆದುಕೊಳ್ಳುತ್ತಿದ್ದ ಸಾಹಿತ್ಯಕ-ಸಾಂಸ್ಕೃತಿಕ ನಿಲುವು; ‘ಋತುಮಾನದ ಸೊಗಸುಗಾರ ಲೇಖಕರ’ ಕುರಿತು ಅವರಿಗಿದ್ದ ಅತಿ ಒಲವು ಮತ್ತು ‘ಅಂದಿರಿಕಿ ಮಂಚಿವಾಡು’ ನಿಲುವು ಇಂಥವೇ ಕಾರಣ ಮುಂದಿಟ್ಟುಕೊಂಡು ಅವರೊಂದಿಗೆ ಆಡುವ ಜಗಳಗಳು ಬಹಳವಿದ್ದವು. ಆದರೆ, ಫೋನ್‌ ಮಾಡಿ ದನಿ ಮಿಲಾಯಿಸಬೇಕೆಂಬ ಉಮೇದು ಬಂದಾಗಲೆಲ್ಲ ಅವರ ಸೌಮ್ಯಮುಖ ನೆನಪಿಗೆ ಬಂದು ಮೌನವಾಗುತ್ತಿದ್ದೆ. ನನ್ನ ಉದ್ವೇಗಕ್ಕಿಂತ ಅವರ ಕಾವ್ಯ-ಸಾಹಿತ್ಯವೇ ನನಗೆ ಮುಖ್ಯ ಎಂಬ ಕಾರಣಕ್ಕೆ ಹೀಗೆ ಮಾಡುತ್ತಿದ್ದೆ. ವಯಸ್ಸಾದಂತೆ ಅವರೊಂದಿಗೆ ಆಡಬಹುದಾಗಿದ್ದ ಜಗಳದ ಬಿಸಿ ಕರಗಿದೆ. ಆದರೆ ಅವರ ಒಟ್ಟಾರೆ ಸಾಹಿತ್ಯ ಸೃಷ್ಟಿಸಬಹುದಾದ ಬೆಚ್ಚಗಿನ ಭಾವ ಹಾಗೆಯೇ ಉಳಿದಿದೆ.

ಇನ್ನುಮುಂದೆ ಚಾರ್ಮಿನಾರ್‌, ಹೈದರಗುಡ, ಮಿರಿಯಾಲ್‌ ಮಂಡಿ, ತಾರನಾಕಾ, ಹಿಮಾಯತ್‌ ನಗರಗಳು ಕಾರಡ್ಕದ ಈ ಚಿರತರುಣನ ಮೃದುವಾದ, ದಣಿದ ಕಾಲುಗಳು ಎಬ್ಬಿಸುವ ಧೂಳನ್ನು ತಪ್ಪಿಸಿಕೊಂಡು ಅನಾಥವಾಗಲಿವೆ. ಅಂತೆಯೇ, ಆ ಚೂರೇ ಧೂಳಿನಿಂದ ಏಳಬಹುದಾಗಿದ್ದ ಅಪರೂಪದ ಪದಗಳು ಕವಿತೆಗಳಾಗದೆ!

‍ಲೇಖಕರು Admin

January 30, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: