ಅಲಕಾ ಜಿತೇಂದ್ರ
ಕಳೆದ ವರ್ಷ ಬೇಸಿಗೆ ರಜೆ ಮುಗಿಸಿ ’Oman Airways’ ನಲ್ಲಿ ಮರಳನಾಡಿಗೆ ಹಿಂತಿರುಗುತ್ತಿದ್ದೆ. ಪ್ರಯಾಣದ ಬೇಸರ ಕಳೆಯಲು ಮುಂದಿನ ಸೀಟಿಗಂಟಿದ್ದ ಪುಟ್ಟ ಟಿ.ವಿ. ಪರದೆಯಲ್ಲಿ ನನಗಿಷ್ಟವಾಗುವಂಥದ್ದು ಏನಾದರೂ ಸಿಗಬಹುದೇನೋ ಎಂದು ಹುಡುಕುತ್ತಿದ್ದೆ.
ಮಕ್ಕಳು ಅದಾಗಲೇ ತಮಗೆ ಬೇಕಾದ ಕಾರ್ಟೂನುಗಳನ್ನು ಹಾಕಿಕೊಂಡು ಹೆಡ್ ಫೋನುಗಳನ್ನು ಕಿವಿಗಂಟಿಸಿಕೊಂಡಿದ್ದರು. ನಾನು ಪರದೆಯನ್ನು ಆಚೀಚೆ ಎಳೆಯುತ್ತಾ ಹುಡುಕಿದೆ, ಯಾವುದೂ ಇಷ್ಟವಾಗಲಿಲ್ಲ. ಕೊನೆಗೆ ನನ್ನ ಕಣ್ಣಿಗೆ ಬಿದ್ದದ್ದು Asian cinema/drama ಗಳ ವಿಭಾಗ. ಇತ್ತೀಚೆಗೆ ಕೊರಿಯನ್ ಧಾರಾವಾಹಿಗಳ ಹುಚ್ಚು ಹಿಡಿಸಿಕೊಂಡಿದ್ದ ನನಗೆ ಇದುವೇ ಸರಿಯಾದ ಆಯ್ಕೆ ಎನಿಸಿತು.
ನನ್ನ ಪ್ರಯಾಣ ಹೆಚ್ಚು ಸಮಯದ್ದಾಗಿರಲಿಲ್ಲವಾದ್ದರಿಂದ ಕೇವಲ ೧ ಗಂಟೆ ೪೦ ನಿಮಿಷಗಳ ’ ಲಿಟ್ಲ್ ಫಾರೆಸ್ಟ್’ ಎಂಬ ಸಿನಿಮಾವನ್ನು ಪೂರ್ತಿ ನೋಡಬಹುದೆಂಬ ಆಸೆಯಿಂದ ಆರಿಸಿಕೊಂಡೆ. ಸಿನಿಮಾ ಮುಗಿದಾಗ ನನ್ನ ಮನಸ್ಸು ಅದೆಷ್ಟು ಪ್ರಫುಲ್ಲಗೊಂಡಿತೆಂದರೆ ಎರಡೆರಡು ವಿಮಾನ ಪ್ರಯಾಣ ಹಾಗೂ ನಿಲ್ದಾಣಗಳಲ್ಲಿನ ಕಾಯುವಿಕೆಯ ಆಯಾಸ, ಪ್ರಯಾಣದುದ್ದಕ್ಕೂ ಇದ್ದ ಮಕ್ಕಳ ಕಿರಿಕಿರಿಗಳೆಲ್ಲಾ ಮರೆತೇ ಹೋಯಿತು.
೨೦೧೮ರಲ್ಲಿ ತೆರೆಕಂಡ ದಕ್ಷಿಣ ಕೊರಿಯಾದ ಚಿತ್ರ ’ಲಿಟ್ಲ್ ಫಾರೆಸ್ಟ್’. ಜಪಾನೀ ಕಾಮಿಕ್ ಒಂದನ್ನು ಆಧರಿಸಿ ನಿರ್ಮಿಸಲಾದ ಈ ಚಿತ್ರವನ್ನು ಹೊಸ ತಲೆಮಾರಿನ ಖ್ಯಾತ ನಿರ್ದೇಶಕಿ ಯಿಮ್ ಸೂನ್ ರೇ ನಿರ್ದೇಶಿಸಿದ್ದಾರೆ. ಪಟ್ಟಣ ಜೀವನದಿಂದ ಬೇಸತ್ತು ಕೆಲ ದಿನಗಳ ಮಟ್ಟಿಗೆಂದು ತನ್ನ ಹಳ್ಳಿಗೆ ಹಿಂತಿರುಗುವ ಯುವತಿಯೊಬ್ಬಳು ಪ್ರಕೃತಿಯ ಮಡಿಲಲ್ಲಿ ನೆಮ್ಮದಿ ಕಾಣುತ್ತಾ, ಹಳ್ಳಿಯಲ್ಲೇ ಬದುಕು ಕಟ್ಟಿಕೊಳ್ಳಲು ನಿರ್ಧರಿಸುವುದೇ ’ಲಿಟ್ಲ್ ಫಾರೆಸ್ಟ್’ ನ ಕಥಾಸಾರಾಂಶ.
ಕಥಾನಾಯಕಿ ಹೇವಾನ್ (ಕಿಮ್ ತಾಯ್ ರೀ) ತನ್ನ ತಂದೆಯ ಹಳ್ಳಿಯಲ್ಲಿ ವಿಧವೆ ತಾಯಿಯೊಂದಿಗೆ ಬೆಳೆಯುತ್ತಾಳೆ. ಹಲವು ವರ್ಷ ಮಗಳಿಗಾಗಿ ಹಳ್ಳಿಯಲ್ಲೇ ಇದ್ದ ತಾಯಿ ಒಮ್ಮೆ ಹೇಳದೇ ಕೇಳದೇ ಮಗಳನ್ನು ಬಿಟ್ಟು ಹೋಗುತ್ತಾಳೆ. ಹಳ್ಳಿ ಎಂದರೆ ಮೊದಲಿನಿಂದಲೂ ತಾತ್ಸಾರವಿದ್ದ ಹೇವಾನ್ ಅಲ್ಲಿ ಒಂಟಿಯಾಗಿರಲು ಸಾಧ್ಯವಾಗದೇ ಸಿಯೋಲ್ ಗೆ ತೆರಳುತ್ತಾಳೆ. ಅಧ್ಯಾಪಕಿಯಾಗುವ ಕನಸು ಹೊತ್ತು ಕಲಿಯುವುದರೊಂದಿಗೆ ಹೊಟ್ಟೆಪಾಡಿಗಾಗಿ ಕೆಲಸವನ್ನೂ ಮಾಡುತ್ತಾ ಬದುಕುತ್ತಾಳೆ.
ಆದರೆ ಪರೀಕ್ಷೆಯಲ್ಲಿ ಉತ್ತೀರ್ಣಗೊಳ್ಳಲು ಸಾಧ್ಯವಾಗದೇ, ಜೊತೆಗೆ ಕೆಲಸದ ಒತ್ತಡ, ಕಡಿಮೆ ಸಂಬಳ, ಕೈಕೊಟ್ಟ ಗೆಳೆಯ ಇವೆಲ್ಲವುಗಳಿಂದ ಹತಾಶೆಗೊಂಡು ತಾನು ಬೆಳೆದ ಹಳ್ಳಿ ಮನೆಗೆ ಹಿಂತಿರುಗುತ್ತಾಳೆ. ಹಳ್ಳಿಯಲ್ಲಿ ಅಮ್ಮನಿಂದ ಕಲಿತ ಬೇಸಾಯ, ಅಡುಗೆಗಳನ್ನು ಮಾಡುತ್ತಾ, ಬಾಲ್ಯದ ಸ್ನೇಹಿತರೊಂದಿಗೆ ಬೆರೆಯುತ್ತಾ, ಪುಟ್ಟ ನಾಯಿಮರಿಯೊಂದಿಗೆ ಆಡುತ್ತಾ ತನ್ನ ನೋವುಗಳನ್ನು ಮರೆಯಲು ಪ್ರಯತ್ನಿಸುತ್ತಾಳೆ.
ಸಿನಿಮಾದುದ್ದಕ್ಕೂ ಹೈಲೈಟ್ ಆಗುವುದು ಹೇವಾನ್ ಮಾಡುವ ಅಡುಗೆಗಳು. ಪ್ರತಿಯೊಂದು ಪಾಕವಿಧಾನವೂ ಅದರ ರುಚಿ, ತಾಜಾತನ, ಪೌಷ್ಠಿಕತೆಗಳ ಜೊತೆಗೆ ತಾಯಿ-ಮಗಳ ಬಾಂಧವ್ಯದ ಸೇತುವಾಗಿ ಬಿಂಬಿತವಾಗಿದೆ.’ನಾನು ಹಸಿವು ತಾಳಲಾರದೆ ಹಳ್ಳಿಗೆ ಹಿಂತಿರುಗಿದೆ’ ಎನ್ನುವ ಹೇವಾನ್ ಳ ಮನಸ್ಸು ಒಂದು ಒಳ್ಳೆಯ ಊಟಕ್ಕಾಗಿ ಚಡಪಡಿಸುತ್ತಿತ್ತು. ಮನಸ್ಸಿನ ಗಾಯವನ್ನು ಶಮನಗೊಳಿಸಿ ಹೊಟ್ಟೆತುಂಬಾ ತೃಪ್ತಿಯನ್ನು ನೀಡಬಲ್ಲ ಆಹಾರಕ್ಕಾಗಿ ಕಾತರಿಸುತ್ತಿತ್ತು.
ಪ್ರಾದೇಶಿಕವಾದ, ಋತುವಿಗೆ ಹೊಂದುವ ತರಕಾರಿ, ಹಣ್ಣುಹಂಪಲುಗಳನ್ನು ತಮ್ಮದೇ ತೋಟದಲ್ಲಿ ಕೈಯಾರೆ ನೆಟ್ಟು ಬೆಳೆಸಿ ತಮಗಿಷ್ಟವಾದ ಅಡುಗೆ ಮಾಡಿ ತಿನ್ನುವಾಗ ಸಿಗುವ ಸುಖ, ಸಂತೃಪ್ತಿ ಚಿತ್ರದುದ್ದಕ್ಕೂ ಹೇವಾನ್ ಳ ಜೊತೆ ನಾವೂ ಅನುಭವಿಸುತ್ತಾ ಸಾಗುತ್ತೇವೆ. (ಅಲ್ಲಿಯ ಆಹಾರದ ರುಚಿಯ ಅನುಭವವಿಲ್ಲದಿದ್ದರೂ!)
ಚಿತ್ರದಲ್ಲಿ ಅಡುಗೆಯಷ್ಟೇ ಇಷ್ಟವಾಗುವುದು ಹೇವಾನ್ ಳ ಬೇಸಾಯದ ಸೂಕ್ಷ್ಮತೆಗಳು, ಋತುವಿಗೆ ಹೊಂದುವ ಬೆಳೆಯನ್ನು ಆರಿಸಿ ಬಿತ್ತುವ ವಿಧಾನ, ಒಂದೊಂದು ತರಕಾರಿಯ, ಹಣ್ಣಿನ ಗುಣಸ್ವಭಾವವನ್ನು ವಿವರಿಸುವ ರೀತಿ, ಪ್ರಕೃತಿಯ ಮುನಿಸಿಗೆ ಸೋಲುವ ಬೆಳೆ ಎಲ್ಲವೂ ಕೃಷಿಕನ ಬದುಕಿನ ಚಿತ್ರಣವನ್ನು ನೀಡುತ್ತವೆ.
ಚಿತ್ರವೊಂದರ ಮುಖ್ಯಭಾಗ ಅದರ ಛಾಯಾಗ್ರಹಣ. ಹಳ್ಳಿಯ ಮನಮೋಹಕ ಸೌಂದರ್ಯ, ಬದಲಾಗುವ ಋತುಗಳು, ಹಿಮಾಚ್ಛಾದಿತ ಚಳಿಗಾಲ, ಹಸಿರಾಗಿಸುವ ಮಳೆಗಾಲ, ಬೇಸಿಗೆಯ ಬಿಸಿ, ವಸಂತದ ಆಹ್ಲಾದತೆ, ಶರತ್ಕಾಲದ ಮೋಹಕತೆ ಇವೆಲ್ಲಾ ಛಾಯಾಗ್ರಾಹಕನ ಕೈಚಳಕದಿಂದ ತೆರೆಯ ಮೇಲೆ ಅದ್ಭುತ ದೃಶ್ಯಕಾವ್ಯವಾಗಿ ಮೂಡುತ್ತವೆ.
ಹಳ್ಳಿಗೆ ಹಿಂತಿರುಗಿದ ಹೇವಾನ್ ಳಿಗೆ ಹರಟೆ, ನಗು, ಅಡುಗೆ, ಊಟ, ಕೃಷಿ ಎಲ್ಲದರಲ್ಲೂ ಜೊತೆಯಾಗುವವರು ಅವಳ ಬಾಲ್ಯದ ಇಬ್ಬರು ಸ್ನೇಹಿತರು. ಪಟ್ಟಣದ ಕನಸು ಕಾಣುತ್ತಾ, ಹಳ್ಳಿಯ ಬ್ಯಾಂಕೊಂದರಲ್ಲಿ ಮನಸ್ಸಿಲ್ಲದೆ ಕೆಲಸ ಮಾಡುವ ಗೆಳತಿ ಯೂನ್ ಸೂಕ್ ಹಾಗೂ ಪಟ್ಟಣವನ್ನು ತ್ಯಜಿಸಿ ಹಳ್ಳಿಯಲ್ಲಿ ವ್ಯವಸಾಯವನ್ನೇ ನೆಚ್ಚಿಕೊಂಡು ನೆಮ್ಮದಿಯಿಂದ ಬದುಕುತ್ತಿರುವ ಗೆಳೆಯ ಜೀ ಹಾ – ಇವರಿಬ್ಬರೂ ಅವಳದೇ ಮನಸ್ಸಿನ ಎರಡು ವೈರುಧ್ಯಗಳಂತೆ ಕಾಣುತ್ತಾರೆ.
ಕೇವಲ ೪-೫ ಪಾತ್ರಗಳಷ್ಟೇ ಮುಖ್ಯಭೂಮಿಕೆಯಲ್ಲಿರುವ ’ಲಿಟ್ಲ್ ಫಾರೆಸ್ಟ್’ ಸಿನಿಮಾ ಕಥಾನಾಯಕಿಯ ಮನಸ್ಸಿನ ಗೋಜಲುಗಳು, ತೊಳಲಾಟಗಳಿಗೆ ಸಾಂತ್ವನ ನೀಡುತ್ತಾ ನಿಧಾನಗತಿಯಲ್ಲಿ ಸಾಗುತ್ತದೆ. ಬದುಕಿನ ಗೊಂದಲಗಳಿಗೆ ಉತ್ತರ ಹುಡುಕುತ್ತಾ ಬಂದ ಆಕೆಯನ್ನು ಅವಳ ಅಮ್ಮ ತೋರಿಸಿಕೊಟ್ಟ ಪುಟ್ಟ ಕಾಡು ಆಲಂಗಿಸಿಕೊಳ್ಳುತ್ತದೆ . ಬಿಟ್ಟುಹೋದ ತಾಯಿಯ ಮೇಲೆ ಮುನಿಸಿಕೊಂಡಿದ್ದ ಅವಳಿಗೆ ಪ್ರಕೃತಿ ಹತ್ತಿರವಾದಂತೆಲ್ಲಾ ಅವಳ ’ಒಮ್ಮ’ನೂ ಅರ್ಥವಾಗುತ್ತಾಳೆ. ಹೇವಾನ್ ತನ್ನ ಸಂಕೀರ್ಣ ಬದುಕಿನ ಒಂದೊಂದೇ ಗಂಟುಗಳನ್ನು ಬಿಡಿಸಿ ತನ್ನದೇ ಪುಟ್ಟ ಕಾಡಿನಲ್ಲಿ ಸರಳವಾದ ಹೊಸ ಬದುಕೊಂದನ್ನು ರೂಪಿಸಿಕೊಳ್ಳುವ ತೀರ್ಮಾನಕ್ಕೆ ಬರುತ್ತಾಳೆ.
ಹೇವಾನ್ ಳ ’ಲಿಟ್ಲ್ ಫಾರೆಸ್ಟ್’ ಎಲ್ಲಿಯೂ ಪ್ರೇಕ್ಷಕನನ್ನು ಅಳಿಸುವುದಿಲ್ಲ, ಬಿದ್ದು ಬಿದ್ದು ನಗಿಸುವುದೂ ಇಲ್ಲ. ಯಾವುದೇ ಅತಿಯಾದ ಭಾವೋನ್ಮಾದವಿಲ್ಲ. ಆದರೆ ಆರಂಭದಿಂದ ಕೊನೆಯವರೆಗೂ ಒಂದು ಪುಟ್ಟ ಮಂದಹಾಸವನ್ನು ನೋಡುಗ ಕಾಯ್ದುಕೊಳ್ಳುವಂತೆ ಮಾಡುತ್ತದೆ.
ಕೊನೆಗೆ ಕಥಾನಾಯಕಿಯ ಜೊತೆ ನಾವೂ ನಿರಾಳವಾಗುತ್ತೇವೆ. ಆಗಷ್ಟೇ ಧ್ಯಾನದಿಂದ ಎದ್ದು ಬಂದಂತೆ ಪರಿಶುದ್ಧವಾದ ಆನಂದವೊಂದು ನಮ್ಮನ್ನು ಆವರಿಸಿಕೊಳ್ಳುತ್ತದೆ. ಪುರುಷ-ಪ್ರಕೃತಿ ಬಾಂಧವ್ಯದಿಂದ ದೂರವಾಗಿ ಆಧುನಿಕತೆಯ ಆಡಂಬರದ ಬದುಕಿನಲ್ಲಿ ಕಳೆದುಹೋಗುತ್ತಿರುವ ಮನುಷ್ಯ, ಕೊನೆಗೆ ಪ್ರಕೃತಿಯ ಮಡಿಲಿನಲ್ಲೇ ನೆಮ್ಮದಿ ಅರಸುವುದು ದೇಶ, ಕಾಲ, ಸಂಸ್ಕೃತಿಗಳನ್ನೂ ಮೀರಿದ ಸತ್ಯ.
'ಮರಳಿ ಬಾ ಮಣ್ಣಿಗೆ ’ ಎಂದ ’ಲಿಟ್ಲ್ ಫ಼ಾರೆಸ್ಟ್’
ನಿಮಗೆ ಇವೂ ಇಷ್ಟವಾಗಬಹುದು…





ಒಳ್ಳೆಯ ವಿಮರ್ಶೆ. ನನಗೂ ಆ ಚಿತ್ರವನ್ನು ನೋಡಬೇಕು ಅನ್ನಿಸ್ತಿದೆ
ಧನ್ಯವಾದಗಳು ಮೇಡಂ..YouTube ನಲ್ಲಿ ಲಭ್ಯವಿಲ್ಲ. ಬೇರೆ websiteಗಳಲ್ಲಿ ಇದೆ.
Waw….I must watch…
ಧನ್ಯವಾದಗಳು ಮೇಡಂ
Thanks for the review. It’s very good. Will try to watch the movie.
ಈ ಲೇಖನ ಓದಿದ ಕೂಡಲೇ ಯೂಟ್ಯೂಬಿನಲ್ಲಿ ಸಿನಿಮಾ ನೋಡಿಯೇ ಬಿಟ್ಟೆ. ಇಂಗ್ಳಿಷ್ ಸಬ್ ಟೈಟಲ್ ಇಲ್ಲದಿದ್ದರೂ ಸಿನಿಮಾ ಸೆಳೆಯಿತು. ಕೊರಿಯನ್ ಭಾಷೆ ಕೇಳಲು ಖುಷಿಯಾಗುತ್ತದೆ. ಅಚ್ಚರಿಯೆಂದರೆ ನಾವು ಅಮ್ಮಾ ಎಂದರೆ ಅವರು ಉಮ್ಮಾ ಎನ್ನುವುದು. ಪಾರಂಪರಿಕ ಕೃಷಿಯ ಬಗ್ಗೆ ನಾನು ಇಷ್ಟು ವರ್ಷ ಮಾಡುತ್ತಿರುವ ಕೆಲಸದ ಬಗ್ಗೆಯೇ ಇಡೀ ಸಿನಿಮಾ ಹೇಳುತ್ತದೆ.
ಧನ್ಯವಾದಗಳು ಸರ್..ಇಂಗ್ಲಿಷ್ subtitle ಇರುವ videoವನ್ನುYouTube ನಿಂದ ತೆಗೆದು ಹಾಕಿದ್ದಾರೆ. ಬೇರೆ websiteಗಳಲ್ಲಿ ಲಭ್ಯವಿದೆ. ಹೌದು..ಕೊರಿಯನ್ ಭಾಷೆ ಕೇಳಲು ತುಂಬಾ ಖುಷಿಯಾಗುತ್ತದೆ.