ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮರಣಾಮರಣ!

 

ಮೂಲ : ಅಯಿನಂಪೂಡಿ ಶ್ರೀಲಕ್ಷ್ಮಿ
ಅನುವಾದ : ರೋಹಿಣಿ ಸತ್ಯ

 

I was dead- I came alive
I was tears- I became laughter
RUMI

೧. ಬಿಸಿಲು ಬೆಳದಿಂಗಳು – ಬೆಳದಿಂಗಳ ಕತ್ತಲೆಗಳು
ಮಳೆ ಶೀತ – ಚಳಿ ಬಿಸಿಲು
ರಾತ್ರಿಯ ಬೆಳಕು – ಬೆಳದಿಂಗಳ ರಾತ್ರಿ
ಶಿಶಿರ ವಸಂತಗಳು – ಹೇಮಂತ ಗ್ರೀಷ್ಮಗಳು
ಈ ಕಾಲ ಚಕ್ರಕ್ಕೆ ಯಾವ ಪ್ರಯೋಜನವೂ ಇಲ್ಲ
ಈ ಕ್ಷಣಕ್ಕೆ ಯಾವ ಬೆಲೆಯೂ ಇಲ್ಲ!

೨. ಜ್ಞಾನ ಶಿಖರಗಳು – ಇಂದ್ರಿಯ ಪ್ರವಾಹಗಳು
ಚಿತ್ತ ಚಾಂಚಲ್ಯಗಳು – ಮಿಡಿಯುವ ಹೃದಯವು
ಕೈ ನಡಿಗೆಗಳು – ಪಾದಗಳ ಬಿಗಿಸಡಿಲ ಹಿಡಿತಗಳು
ಕಂಗಳ ಸ್ಪರ್ಶವು- ಚರ್ಮ ದೃಷ್ಟಿಗಳು
ಧ್ವನಿ ಚಿತ್ರಗಳು- ತುಟಿಯ ಶಿಲ್ಪಗಳು
ಈ ಬಾಯಾರಿಕೆಗೆ ಕಾರ್ಯಕಾರಣವಿಲ್ಲ
ಈ ದೇಹಕ್ಕೆ ಅಸ್ಮಿತೆಯಿಲ್ಲ!

೩. ವಿಶ್ವಾಣುಗಳು- ಅಣು ಗೆಲಾಕ್ಸಿಗಳು
ಪದಾರ್ಥ ಶೂನ್ಯಗಳು- ಅಂತರಿಕ್ಷ ಶರೀರಗಳು
ಖಂಡ ಗಮನಗಳು- ಮರಳ ಬನಗಳು
ಹಕ್ಕಿಗಳ ಸರಿದಾಟ- ಸರೀಸೃಪಗಳ ಗಗನ ವಿಹಾರ
ಮೃಗಗಳ ಈಜಾಟ- ಮೀನುಗಳ ಭೂಸಂಚಾರ
ಬೆಂಕಿಯ ಮಳೆ- ಆಕಾಶ ಪವನಗಳು
ಈ ಪ್ರಪಂಚಕ್ಕೆ ಯಾವ ಅರ್ಥವೂ ಇಲ್ಲ ಈ ಲೋಕಕ್ಕೆ ಪರಮಾರ್ಥವೂ ಇಲ್ಲ!

೪. ಅಯಿಷ್ಠತೆಯ ಪರದೆಯ ಹಿಂದೆ ಜೀಕುತ್ತಿರುವ ಇಷ್ಟಗಳು
ದ್ವೇಷ ಸಂಗೀತದಲ್ಲಿ ನುಡಿಯುವ ಮೋಹನ ರಾಗಗಳು
ಅಸೂಯಾ ಗೀತೆಯಲ್ಲಿ ಪ್ರೇಮಪಲ್ಲವಿಗಳು
ನಂಬಿಕೆಯ ಮುಸುಕ ಹೊದ್ದ ಸಂದೇಹಗಳು
ಅನುಮಾನದ ಉಡುಪುಗಳು ಧರಿಸಿದ ನಂಬಿಕೆಗಳು
ಒಳನೋಟ ಕಂಡುಹಿಡಿದ ಸತ್ಯಗಳು
ಹೊರನೋಟದ ಕಣ್ಕಟ್ಟಿನ ಅಸತ್ಯಗಳು
ಈ ಹುಟ್ಟಿಗೆ ಆಂತರ್ಯವೇನೂ ಇಲ್ಲ
ಈ ಜೀವನಕ್ಕೆ ನಿರ್ದಿಷ್ಟತೆ ಇಲ್ಲ!

೫. ಕಾಲ ನಿಶ್ಚಲತೆ- ಸ್ಥಳ ಚಲನಶೀಲತೆ
ಓಡುವ ನದಿಯೊಳಗಿನ ನೆರಳುಗಳು- ಕಲ್ಲ ಗುಡ್ಡದ ಮೇಲೆ ಪ್ರತಿಬಿಂಬಗಳು
ಕಣಿವೆಯಲ್ಲಿ ಉರುಳುತ್ತಿರುವ ಬಣ್ಣಗಳು- ಸುರಂಗದ ಗೋಡೆಗೆ ಅಂಟಿದ ಪ್ರತಿಧ್ವನಿಗಳು
ಸಮುದ್ರದಲ್ಲಿ ಮುಳುಗಿದ ಮೋಡಗಳು- ಮೇಘಗಳಲ್ಲಿ ತೇಲುತ್ತಿರುವ ಸಾಗರಗಳು
ಮಹಾವೃಕ್ಷವು ವಿಸರ್ಜಿಸಿದ ಬೀಜಗಳು- ಬೀಜಗಳಲ್ಲಿ ಇಣುಕುತ್ತಿರುವ ಮಹಾರಣ್ಯಗಳು
ಈ ನೆಲಕ್ಕೆ ಆದಿ ಮಧ್ಯ ಅಂತಗಳಿಲ್ಲ- ಈ ಪ್ರದೇಶಕ್ಕೆ ಅಮರತ್ವವಿಲ್ಲ!

೬. ಯಾವುದೂ ಇಲ್ಲ- ಯಾವುದೂ ಬರಲ್ಲ- ಯಾರೂ ಅಲ್ಲ
ಇಲ್ಲದ, ಬಾರದ, ಆಗದ ಕಾಲ ತೀರಗಳ ಜೊತೆಯಲ್ಲಿ
ಓಟ, ಹುಡುಕಾಟ, ಕೂಡಾಟ, ಒದ್ದಾಟ ಇದು
ದಿಗಿಲಿನ ಆಕಾಶವನ್ನು ಹೊದಿಕೆಯಂತೆ ಹೊದ್ದು ದಿಕ್ಕೆಟ್ಟ ಭೂಮಿ
ಶೂನ್ಯ ಭೂಮಿಯನ್ನು ಹಬ್ಬಿ ಅದೃಶ್ಯವಾದ ಆಕಾಶ
ದೇಹ ಹೆದ್ದಾರಿಯಮೇಲೆ ಹಾದಿ ತಪ್ಪಿದ ಮನ
ಮನದ ಕುಲುಮೆಯಲ್ಲಿ ಆವಿಯಾದ ದೇಹವು!

೭. ಉಳಿದಿರುವುದೆಲ್ಲಾ ಜೀವಂತಿಕೆಯಷ್ಟೇ- ಮೊಳಕೆ ಮೂಡುವುದಷ್ಟೇ
ಹರಿಯುವುದಷ್ಟೇ- ಬೆಳಗುವುದಷ್ಟೇ
ಜನ್ಮವೊಂದು- ಹುಟ್ಟುಗಳೇ ಸಾವಿರಾರು ಪ್ರತಿದಿನವೂ
ಮರಣವೊಂದೇ- ಸಾವುಗಳೇ ಲಕ್ಷಗಟ್ಟಲೆ ಪ್ರತಿಕ್ಷಣವೂ!

೮. ಇದು ಮರಣಾಮರಣ- ಆಮರಣ ಮರಣ!
ಅಮರ ಮರಣ- ಮರಣ ಜನನ!!

 

‍ಲೇಖಕರು admin

20 June, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading