ಮಮತಾ ರಾವ್ ನೋಡಿದ- ಸಂಗೀತ ದೇವಬಾಭಳಿ

ಮಮತ ರಾವ್

ನೂರೈವತ್ತು ವರ್ಷಗಳ ಸುದೀರ್ಘವಾದ ಇತಿಹಾಸವಿರುವ ಮರಾಠಿ ಸಂಗೀತನಾಟಕ ಪರಂಪರೆಯಲ್ಲಿ ಮಾನಪಮಾನ, ಸಂಗೀತ ಸೌಭದ್ರ, ಮತ್ಸ್ಯಗಂಧ, ಕಟಾರ್ ಕಾಳಜ್ಯಾತ್ ಘುಸಲಿ, ಮೃಚ್ಛಕಟಿಕಾ ಮುಂತಾದವು ಅಜರಾಮರ. ಇವುಗಳಲ್ಲಿ ಕೆಲವನ್ನು ಮರುರಂಗಪ್ರಯೋಗ ಮಾಡುವ ಪ್ರಯತ್ನವೂ ಸತತವಾಗಿ ನಡೆಯುತ್ತಿದೆ. ಅಂತಿರುವಾಗ ಪ್ರತಿಭಾವಂತ ಯುವಲೇಖಕ-ನಿರ್ದೇಶಕರು, ಕಲಾವಿದೆಯರು, ಸಂಗೀತನಿರ್ದೇಶಕರು ಒಟ್ಟುಗೂಡಿ ವಿನೂತನ ಶೈಲಿಯ ಒಂದು ಹೊಚ್ಚಹೊಸತಾದ ಸಂಗೀತ ನಾಟಕವನ್ನು ಪ್ರದರ್ಶಿಸುವ ಮೂಲಕ ಮರಾಠಿ ರಂಗಭೂಮಿಯ ಇತಿಹಾಸಕ್ಕೆ ಹೊಸ ಅಧ್ಯಾಯವನ್ನು ಸೇರಿಸಿರುವರು. ಭದ್ರಕಾಳಿ ಪ್ರೊಡಕ್ಶನ್ ಇವರ ೫೫ನೇ ನಾಟಕವಾಗಿ ’ಸಂಗೀತ ದೇವಬಾಭಳಿ’ ನಾಟಕವು ವಸ್ತು ನಾವಿನ್ಯತೆ ಹಾಗೂ ನೂತನ ತಂತ್ರದಿಂದಾಗಿ ಪ್ರಸ್ತುತ ಮರಾಠಿ ರಂಗಭೂಮಿಯಲ್ಲಿ ಹೊಸ ಅಲೆಯನ್ನು ನಿರ್ಮಿಸಿದೆ.

ವಿಠ್ಠಲನ ಪರಮಭಕ್ತ ಸಂತ ತುಕಾರಾಮ, ವಿಠ್ಠಲನ ನಾಮಕೀರ್ತನೆಯನ್ನು ಮಾಡುತ್ತಾ ತನ್ನ ಮನೆ-ಸಂಸಾರ, ಸುತ್ತುಮುತ್ತಲಿನ ಜಗತ್ತನ್ನೆಲ್ಲಾ ಮರೆತು ಎಲ್ಲೆಂದರಲ್ಲಿ ತನ್ಮಯನಾಗಿರುತ್ತಿದ್ದ. ಈ ಕಾರಣದಿಂದಾಗಿಯೇ ಸದಾ ಸಿಡಿಮಿಡಿಗುಟ್ಟುವ ಆತನ ಪತ್ನಿ ಅವಲಿ ಗರ್ಭಿಣಿ. ದಿನಾ ಮನೆಕೆಲಸ ಮುಗಿಸಿ ತನ್ನ ಹೊಟ್ಟೆ ತಾಳಹಾಕುತ್ತಿದ್ದರೂ ಅದನ್ನು ಪರಿಗಣಿಸದೆ ಊಟಕ್ಕಾಗಿ ಗಂಡನ ಹಾದಿಯನ್ನು ಕಾದು ಸೋತು ಬಡಕಲಾಗುತ್ತಿತ್ತು ಆ ಹೆಣ್ಣು ಜೀವ. ಕೊನೆಗೆ ತಡೆಯಲಾರದೆ ಆತನ ಊಟದ  ಬುತ್ತಿಯನ್ನು ಕಟ್ಟಿಕೊಂಡು  ದೇಹೂ ಗ್ರಾಮದ ಇಂದ್ರಾಯಣಿ ನದಿತೀರದಲ್ಲಿ, ಸುತ್ತಮುತ್ತಲಿನ ಕಾಡು-ಮೇಡುಗಳಲ್ಲಿ, ಗಿಡ-ಗಂಟಿಗಳ ಸುತ್ತಮುತ್ತ ಹುಡುಕುತ್ತಾ ’ಅಹೋ. . ಅಹೋ. .’(ರೀ ರೀ) ಎಂದು ಕೂಗುತ್ತಾ ತಿರುಗುವುದು ಅವಳ ದಿನನಿತ್ಯದ ಪರಿಪಾಠ.

ಹೀಗೆಯೇ ಒಂದು ದಿನ ಮಧ್ಯಾಹ್ನದ ವೇಳೆ ಊಟದ ಬುತ್ತಿಯನ್ನು ಎತ್ತಿಕೊಂಡು ಗಂಡನನ್ನು ಹುಡುಕುತ್ತಾ ಅಲೆದಾಡುತ್ತಿದ್ದಾಗ ಅವಲಿಯ ಕಾಲಿಗೆ ದೇವಬಾಭಳಿಯ ಮುಳ್ಳು ಆಳವಾಗಿ ಚುಚ್ಚುತ್ತದೆ.  ಬಳಬಳನೆ ರಕ್ತಸ್ರಾವವಾಗಿ ನೋವಿನಿಂದ ವಿಹ್ವಲಳಾದ ಆಕೆಗೆ ಸ್ಮೃತಿ ತಪ್ಪುತ್ತದೆ. ಆಗ ಸಾಕ್ಷಾತ್ ವಿಠ್ಠಲನೇ ಬಂದು ಆಕೆಯ ಪಾದದಿಂದ ಕೈಯಾರೆ ಆ ಮುಳ್ಳನ್ನು ತೆಗೆದ ಎನ್ನುವ ವದಂತಿ ಇದೆ. ವಿಠ್ಠಲನು ಅವಲಿಯ ಕಾಲಿನಿಂದ ಆ ಮುಳ್ಳನ್ನು ತೆಗೆದ ನಂತರ ಎನಾಗಿರಬಹುದು ಎನ್ನುವ ಅದ್ಭುತ ಕಲ್ಪನೆಯೇ ದೇವಬಾಭಳಿ ಮುಳ್ಳಿನ ಶೀರ್ಷಿಕೆಯಲ್ಲಿ ಪ್ರಸ್ತುತ ಪಡಿಸಿರುವ ಮರಾಠಿ ಸಂಗೀತ ನಾಟಕವಿದು.

ಭಕ್ತ ವತ್ಸಲನೆಂದೇ ಕೊಂಡಾಡಲ್ಪಡುವ ವಿಠ್ಠಲನು ಪತ್ನಿ ರುಕುಮಾಯಿಯನ್ನು ತನ್ನ ಭಕ್ತ ತುಕ್ಯಾನ ಗರ್ಭಿಣಿ ಪತ್ನಿ ಅವಲಿಯ ಸೇವೆಗಾಗಿ ಕಳುಹಿಸುತ್ತಾನೆ. ಮನಸ್ಸಿಲ್ಲದ ಮನಸ್ಸಿನಿಂದ ಗಂಡನ ಒತ್ತಾಯಕ್ಕೆ ಮಣಿದು ಲಖುಬಾಯಿಯಾಗಿ ಅವತಾರ ಎತ್ತುವ ರುಕುಮಾಯಿ ಅವಲಿಯ ಮನೆಕೆಲಸಗಳನ್ನೆಲ್ಲಾ ನಿರ್ವಾಹವಿಲ್ಲದೆ ಮಾಡಬೇಕಾಗುತ್ತದೆ. ಮದ್ದು ಅರೆದು ಆಕೆಯ ಗಾಯಕ್ಕೆ ಪಟ್ಟಿ ಕಟ್ಟಿ ಆರೈಕೆಯನ್ನೂ ಮಾಡುತ್ತಾಳೆ. ಅವಲಿಗೆ ಅರಿವು ಬಂದಾಗ  ತನ್ನದೇ ಮನೆಯಲ್ಲಿ ಮಲಗಿದ್ದು, ಓರ್ವ ಅಪರಿಚಿತ ಮಹಿಳೆ ತನ್ನ ಮನೆಕೆಲಸಗಳನ್ನು ಮಾಡುತ್ತಾ ತನ್ನ ಆರೈಕೆಯಲ್ಲಿ ತೊಡಗಿರುವುದನ್ನು ಕಂಡು ಆಶ್ಚರ್ಯವಾಗುತ್ತದೆ.

ತನ್ನ ಕಾಲಿಗೆ ತಾಗಿದ್ದ ಆ ಭಯಂಕರ ಮುಳ್ಳನ್ನು ತೆಗೆದವರು ಯಾರು? ಹಾಗು ಜ್ಞಾನ ತಪ್ಪಿ ಬಿದ್ದ ತಾನು ಮನೆತನಕ ಬಂದು ತಲುಪಿದ್ದಾದರೂ ಹೇಗೆ ಎಂದು ತನ್ನನ್ನು ತಾನು ಲಖುಬಾಯಿ ಎಂದು ಪರಿಚಯಿಸುವ ಆ ಅಪರಿಚಿತೆಯನ್ನು ಪ್ರಶ್ನಿಸುತ್ತಾಳೆ. ಅವಳ ಪ್ರಶ್ನೆಗಳಿಗೆ ಹಾರಿಕೆಯ ಉತ್ತರಗಳನ್ನು ನೀಡಿದರೂ ಲಖುಬಾಯಿಯ ರೂಪದಲ್ಲಿರುವ ರುಕುಮಾಯಿಯನ್ನು ಕೂಡ ಅವೇ ಪ್ರಶ್ನೆಗಳು ಕಾಡುತ್ತಿವೆ. ಮೂರು ಲೋಕದ ಸ್ವಾಮಿಯಾದ ತನ್ನ ಗಂಡ ಕೈಯಾರೆ ಈ ಸಾಧಾರಣ ಸ್ತ್ರೀಯ ಕಾಲನ್ನು ಮುಟ್ಟಿ ಮುಳ್ಳನ್ನು ತೆಗೆದದ್ದು ಮಾತ್ರವಲ್ಲ, ಅವಳನ್ನು ಮನೆಗೆ ತಲುಪಿಸಿ ಆಕೆಯ ಆರೈಕೆಗಾಗಿ ತನ್ನನ್ನು ಬಲವಂತವಾಗಿ ನೇಮಿಸಿದ್ದಾದರೂ ಯಾಕೆ? ಎನ್ನುವ ಪ್ರಶ್ನೆ ಅವಳನ್ನು ಬಹಳ ಕಾಡುತ್ತದೆ. ತುಕಾರಾಮನಾದರೆ ವಿಠ್ಠಲನ ಭಕ್ತ. ಆದರೆ ಈಕೆ?? ವಿಠ್ಠಲನ ಭಕ್ತಿಯಲ್ಲಿ ತನ್ಮಯನಾದ ತುಕಾರಾಮನಿಂದ ಅಲಕ್ಷಿತಳಾದ ಅವಲಿ ಅಸಹನೆಯಿಂದ ಆ ಕಪ್ಪುಕಲ್ಲಿನ ರೂಪದಲ್ಲಿರುವ ನಿಷ್ಪ್ರಯೋಜಕ ವಿಠೋಬಾನಿಗೆ ಮಾತುಮಾತಿಗೆ ಬಯ್ಯುತ್ತಲೇ ಇರುತ್ತಾಳೆ. ಅಂತಿರುವ ಈಕೆಯ ಕುರಿತು ದೇವನಿಗ್ಯಾಕೆ ಇಷ್ಟು ಅಕ್ಕರೆ? ಕಾಳಜಿ? ಎನ್ನುವ ಪ್ರಶ್ನೆಗೆ ಉತ್ತರವನ್ನು ಶೋಧಿಸುವ ಪ್ರಯತ್ನ ರುಕುಮಾಯಿಯದು.

ತನ್ನ ಸಂಸಾರದ ಬವಣೆಗಳಿಗೆ ಕಾರಣಿಭೂತನಾದ ವಿಠ್ಠಲನನ್ನು ಹೆಜ್ಜೆಹೆಜ್ಜೆಗೂ ಜರಿಯುತ್ತಿರುವ ಅವಲಿಯ ದಾರ್ಷ್ಟ್ಯವನ್ನು ಸಹಿಸಲಾಗದೆ ರುಕುಮಾಯಿ ಅಲ್ಲಿಂದ ಹೊರಟುಹೋಗಲು ಬಯಸಿದರೂ ಹೋಗಲಾರದ ಅಸಹಾಯಕತೆ; ತಳಮಳ. ವಿಠ್ಠಲನೆಂದರೆ ತುಕ್ಯಾನನ್ನು ಬಾಧಿಸುವ ವಾಸಿಯಾಗದ ಕೊಳೆತು ನಾರುವ ಗಾಯವೆಂದು ಮೂದಲಿಸುವ ಅವಲಿಯನ್ನು ಹೇಗೆ ಸಹಿಸುವುದೆಂದು ತಿಳಿಯದೆ ಆಕೆಯ ಗಾಯ ಬೇಗ ವಾಸಿಯಾದರೆ ತನಗೂ ಮುಕ್ತಿ ಸಿಗುವ ಆಶಯದಲ್ಲಿರುತ್ತಾಳೆ. ಲಖುಬಾಯಿಯಾದ ರುಕುಮಾಯಿ ಹಾಗೂ ಅವಲಿ ಇವರಿಬ್ಬರ ಸಂವಾದಗಳ ಮೂಲಕ ಹೆಣ್ಣಿನ ಒಳಬೇಗುದಿಗಳನ್ನು ಅನಾವರಣಗೊಳಿಸುತ್ತಾ , ಸಾಮಾನ್ಯ ಪತ್ನಿಯಾದ ಅವಲಿಯ ಸ್ತ್ರೀತ್ವ ಹಾಗೂ ಲಕುಬಾಯಿಯ ದೈವತ್ವವು ಒರೆಗೆ ಹಚ್ಚಲ್ಪಡುವ ಪರಿ ಸುಂದರವಾದುದು.

ಹೆಣ್ಣಿನ ಸ್ಥಿತಿಗತಿ ಏನಿದ್ದರೂ ಅವರ ದುಗುಡಗಳು, ಕಷ್ಟ ಕಾರ್ಪಣ್ಯಗಳು ಮಾತ್ರ ಸರ್ವೇಸಾಮಾನ್ಯ. ಭಕ್ತರ ಕರೆಗೆ ಸದಾ ಓಗೊಡುವ ವಿಠ್ಠಲನನ್ನು ಶೋಧಿಸುತ್ತಾ ಪಂಢರಪುರಕ್ಕೆ ಬಂದರೂ ರುಕುಮಾಯಿಗೆ ಆತನ ಪಕ್ಕದಲ್ಲಿ ಸ್ಥಾನವಿಲ್ಲ; ಪ್ರತ್ಯೇಕ ಗುಡಿಯಲ್ಲಿ ಆಕೆಗೆ ವಾಸ. ಯುದ್ಧಮಾಡಿ ಗೆದ್ದು ತನ್ನನ್ನು ವರಿಸಿದರೂ ಗಂಡನ ಹೃದಯದಲ್ಲಿ ರಾಧೆ ಮೊದಲೇ ನೆಲೆಸಿದ್ದು ಅವಳಿಗೆ ತಿಳಿಯದೇ?.  ಗಂಡನ ಉಪೇಕ್ಷೆಯ ದುಃಖ ಅವಲಿಗೆಷ್ಟೊ ಅಷ್ಟೆ ರುಕುಮಾಯಿಗೂ ಇದ್ದದ್ದೆ. ತನ್ನ ಅಮಾಯಕತೆಯಲ್ಲಿ ಅವಲಿಯು ದೈವತ್ವವನ್ನು ತಲುಪುವ ಹಾಗೂ ಅವಲಿಯನ್ನು ಗೌರವಿಸಿ ನಮಿಸುವ ಮೂಲಕ ಸಾಮಾನ್ಯ ಸ್ತ್ರೀಯಾಗುವ ರುಕುಮಾಯಿ ನಮ್ಮ ನೆನಪಿನ ಪಟಲದಲ್ಲಿ ಸ್ಥಾಯಿಯಾಗುತ್ತಾರೆ. 

ವಿಠೋಬಾ ಹಾಗೂ ತುಕಾರಾಮನ ನಡುವಿನ ಅವಿನಾಭಾವ ಸಂಬಂಧವನ್ನು ದರ್ಶಿಸುವಂತಿದ್ದರೂ, ಕೇವಲ ಭಕ್ತಿ ಪ್ರಧಾನ ನಾಟಕವಾಗದೆ ಭಿನ್ನ ಸ್ಥರದ ಮಹಿಳೆಯರಿಬ್ಬರ ಮನಸ್ಥಿತಿಯನ್ನು ಶೋಧಿಸುವ ಪರಿಣಾಮಕಾರಿ ನಾಟಕವಾಗಿ ಮೂಡಿಬಂದಿರುವುದೇ ಈ ನಾಟಕದ ಮೂಲ ಸತ್ವ. ರಂಗಸ್ಥಳದಲ್ಲಿ ಕೇವಲ ಅವಲಿ ಮತ್ತು ಲಖುಬಾಯಿ ಇದ್ದರೂ ಅಲ್ಲಿ ವಿಠೋಬಾ ಹಾಗೂ ತುಕಾರಾಮನೂ ಇದ್ದಾನೆ ಎನ್ನುವ ಭಾಸ ಮೂಡಿಸುವ ಸನ್ನಿವೇಶಗಳು ಅತ್ಯಂತ ಪರಿಣಾಮಕಾರಿ. ಭಕ್ತ ಹಾಗೂ ಭಕ್ತವತ್ಸಲನ ನಡುವಿನ ಸಂಬಂಧವನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ಭಕ್ತನ ಪತ್ನಿ ಹಾಗೂ ದೇವಪತ್ನಿಯ ಸಂವಾದದೊಂದಿಗೆ ಬಳಸಲ್ಪಟ್ಟ ಸಂಗೀತವು  ನಾಟಕದ ಸಂಭಾಷಣೆಗೆ ಧಕ್ಕೆ ಬಾರದಂತೆ ಕಥೆಯ ಬೆಳವಣಿಗೆಗೆ ಪೂರಕವಾಗಿರುವುದು ನಾಟಕದ ಶ್ರೇಯಸ್ಸಿನ ಪ್ರಮುಖ ಕಾರಣ. ಅವಲಿಯಾಗಿ-ಶುಭಾಂಗಿ ಸದಾವರ್ತೆ ಹಾಗೂ  ರುಕುಮಾಯಿ(ಲಖುಬಾಯಿ)ಯಾಗಿ ಮಾನಸಿ ಜೋಶಿಯವರ ಉತ್ಕೃಷ್ಟ ಅಭಿನಯ ಹಾಗೂ ಸುಶ್ರಾವ್ಯ ಹಾಡುಗಾರಿಕೆ ನಾಟಕದ ಪ್ರಮುಖ ಆಕರ್ಷಣೆ.

ಉತ್ತಮ ರಂಗವಿನ್ಯಾಸ ಹಾಗೂ ಬೆಳಕಿನ ಪ್ರಯೋಗಗಳಲ್ಲಿ ಮುಖ್ಯವಾಗಿ ಇಂದ್ರಾಯಣಿ ನದಿಯನ್ನು ಅತ್ಯಂತ ಸುಂದರವಾಗಿ ರಂಗದ ಮೇಲೆ ಮೂಡಿಸಿದ್ದು, ಅವಲಿಯ ಮನದಲ್ಲಿ ಇಂದ್ರಾಯಣಿ ನದಿಯ ಕುರಿತಾದ ಆಳವಾಗಿ ನೆಲೆಸಿರುವ ಭೀತಿ, ಅವಳಿಗೆ ಬೀಳುವ ಸ್ವಪ್ನವನ್ನು ಅತ್ಯಂತ ಪ್ರಭಾವಶಾಲಿಯಾಗಿ ಪ್ರಸ್ತುತ ಪಡಿಸಲಾಗಿದೆ. ಸಂದರ್ಭಕ್ಕನುಗುಣವಾಗಿ ವಿಠೋಬಾ ಹಾಗೂ ತುಕಾರಾಮನ ಅಸ್ತಿತ್ವವನ್ನು ಸೂಚಿಸುವ ಬೆಳಕಿನ ತಂತ್ರ ಅಮೋಘವಾಗಿದೆ.

ಓವಿ, ತುಕಾರಾಮನ ಅಭಂಗ ಹಾಗೂ ಸ್ವತಃ ನಿರ್ದೇಶಕಿ ಪ್ರಾಜಕ್ತ ದೇಶಮುಖ ಇವರು ಬರೆದ ಭಾವಗೀತೆಗಳು ಹೀಗೆ ವಿಭಿನ್ನ ಪ್ರಕಾರದ ಹಾಡುಗಳ ಹಾಡುಗಾರಿಕೆಯಿಂದಾಗಿ ಪ್ರಸ್ತುತ ನಾಟಕವು ಹೊಸತನದ ಅನುಭವವನ್ನು ನೀಡುತ್ತದೆ. ಹಿನ್ನೆಲೆಯಲ್ಲಿ ತುಕಾರಾಮನ ಅಭಂಗದ ಧ್ವನಿಮುದ್ರಿಕೆಯು ಆನಂದ ಭಾಟೆಯವರ ಧ್ವನಿಯಲ್ಲಿದ್ದರೂ ಅವಲಿ ಮತ್ತು ಲಖುಬಾಯಿಯ ಪಾತ್ರಧಾರಿಗಳು ಮಾತ್ರ ತಮ್ಮತಮ್ಮ ಹಾಡುಗಳನ್ನು ಸುಶ್ರಾವ್ಯದನಿಯಲ್ಲಿ ಸ್ವತಃ ಹಾಡಿರುವುದೇ ಈ ನಾಟಕದ ಆಕರ್ಷಣೆಯ ಭಾಗವೆಂದು ಹೇಳಲಡ್ಡಿಯಲ್ಲ.

ಝೀ ನಾಟ್ಯಗೌರವ ಪುರಸ್ಕಾರ-೨೦೧೮ರ ಸಾಲಿನ ಸರ್ವೋತ್ಕೃಷ್ಟ ನಾಟಕ-ಲೇಖಕ-ಸಂಗೀತ, ಹಾಗೂ ಉತ್ತಮ ಅಭಿನಯಕ್ಕಾಗಿ ನಾಯಕಿಯರಿಬ್ಬರಿಗೂ ಪ್ರಶಸ್ತಿ ದೊರಕಿಸಿಕೊಟ್ಟು ಮರಾಠಿ ರಂಗಭೂಮಿಗೆ ಹೊಸನೀರನ್ನು ಹಾಯಿಸಿದ ನಾಟಕವೆಂದು ಭಾರತೀಯ ರಂಗಭೂಮಿಯ ದಿಗ್ಗಜರೆಲ್ಲರೂ ಮುಕ್ತವಾಗಿ ಹೊಗಳುತ್ತಿರುವ ನಾಟಕ ಕಳೆದ ಆರು ವರ್ಷಗಳಿಂದ ಜನಪ್ರಿಯತೆಯನ್ನು ಕಾಪಿಟ್ಟುಕೊಂಡಿದೆ. ಮೊನ್ನೆ ೯, ಮಾರ್ಚನಂದು ನಾಗಪುರದಿಂದ ಪ್ರಾರಂಭಗೊಂಡ ಈ ನಾಟಕದ ದಿಂಡಿ ಮಹಾರಾಷ್ಟ್ರದ ಮೂಲೆಮೂಲೆಗಳಲ್ಲಿ ತಿರುಗಿ, ಇದೇ ಕಾರ್ತೀಕ ಏಕಾದಶಿಯಂದು(೨೨-೧೧-೨೦೨೩) ಮುಂಬಯಿಯ ಷಣ್ಮುಖಾನಂದ ಸಭಾಗೃಹದಲ್ಲಿ  ಕೊನೆಯದಾಗಿ ಪ್ರದರ್ಶನಗೊಳ್ಳಲಿದೆ.

‍ಲೇಖಕರು admin j

July 18, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: