ಮನೆ, ಕೋಣೆ ಮತ್ತು ಮೇಡಮ್ಮು…

ಶೀಲಾ ಪೈ 

ನಿತ್ಯದಂತೆ ಐದುಗಂಟೆಗೇ ಎಚ್ಚರವಾಗಿತ್ತು ಮುನ್ನಿದೇವಿಗೆ. ಅಬ್ಬಾ ಎಂಥಾ ಚಳಿ ಅಂದುಕೊಳ್ಳುತ್ತಲೇ ಕಿವಿ, ತಲೆ ಮುಚ್ಚುವಂತೆ ಬಟ್ಟೆಯನ್ನು ಬಿಗಿಯಾಗಿ ಕಟ್ಟಿಕೊಳ್ಳುತ್ತ ಹಳೆಯ ಮಾಸಲು ಶಾಲೊಂದನ್ನು ಹೊದ್ದುಕೊಂಡು ಕೋಣೆಯ ಪಕ್ಕಕ್ಕಿದ್ದ ಬಚ್ಚಲು ಮನೆಗೆ ಹೋದಳು. ಮುಖ ತೊಳೆದುಕೊಂಡು ಹೊರ ಬಂದು ವೆರಾಂಡದಲ್ಲಿ ನಿಂತು  ಕತ್ತೆತ್ತಿ ಮೇಲಿನ ಎರಡು ಫ್ಲೋರುಗಳತ್ತ ನೋಡಿದಳು. ಸಾಲಾಗಿ ಒಣಗಿಸಿದ ಸೀರೆ ಕುರ್ತಾಗಳು, ಮುರುಕು ಕಪಾಟುಗಳಲ್ಲಿ ಜೋಡಿಸಿಟ್ಟ ಡಬ್ಬಿಗಳು, ಟೇಬಲ್ ಫ್ಯಾನು. ಮಳೆ ನೀರು, ಬಿಸಿಲು ಬೀಳದಂತೆ ಹಾಕಿದ ದೊಡ್ಡ ಟಾರ್ಪಲಿನ್ ಶೀಟು. ಕೋಣೆಗಳಲ್ಲಾಗಲೀ, ಮನೆಗಳಲ್ಲಾಗಲೀ ಲೈಟು ಹತ್ತಿರಲಿಲ್ಲ. ಒಳ ಬಂದು ನೋಡಿದರೆ ಗಂಡ, ಮಗ, ಅತ್ತೆ ಬಿಗಿಯಾಗಿ ಮುಸುಕೆಳೆದುಕೊಂಡು ಮಲಗಿದ್ದರು. ಇನ್ನೊಂದರ್ಧ ಗಂಟೆಯಲ್ಲಿ ಶಂಕರ ಕೆಲಸಕ್ಕೆ ಹೋರಡಬೇಕೆನ್ನುವುದು ನೆನಪಾಗುತ್ತಲೇ ಗ್ಯಾಸ್ ಹೊತ್ತಿಸಿ   ಚಹಕ್ಕೆ ನೀರಿಟ್ಟಳು. ಶಂಕರ ಆಸ್ಪತ್ರೆಯೊಂದರಲ್ಲಿ ಅಡುಗೆ ಕೆಲಸಕ್ಕೆ ಹೋಗುತ್ತಾನೆ. ಅವನ  ದಿನದ ಮೂರೂ  ಹೊತ್ತಿನ ಊಟ ತಿಂಡಿ ಆಸ್ಪತ್ರೆಯಲ್ಲಿಯೇ ಆಗುತ್ತದೆ. ಬೆಳಗಿನ ಚಹಾ ಕುಡಿಯುತ್ತಲೇ ಹೊರಟುಬಿಡುತ್ತಾನೆ. ಶಂಕರ ಹೋದ ಮೇಲೆ ಚಪಾತಿ ಹಿಟ್ಟು ಕಲೆಸಿ ಚಪಾತಿ ಮಾಡಿಟ್ಟು ಮನೆಯ ಹಿಂದಣ ಹಿತ್ತಲಿಗೆ ಹೋಗುವಾಗ ಚೆನ್ನಾಗಿ ಬೆಳಕು ಮೂಡಿತ್ತು. ಇದು ಎರಡನೇ ನಂಬರಿನ ಮೇಡಂ ಮನೆಯ ಹಿತ್ತಲು, ತಾನೇ ಮೆಹನತ್ತು ಮಾಡಿ ಬೆಳೆಸಿದ ಹರಿವೆ, ಪಾಲಕ್ಕು, ನವಿಲುಕೋಸು, ಕರಿಬೇವು ಮುಂತಾದ ಗಿಡಗಳು ಸೊಂಪಾಗಿ ಬೆಳೆದು ನಳನಳಿಸುತ್ತಿರುವುದನ್ನು ನೋಡಿ ಮನಸ್ಸು ಪ್ರಸನ್ನವಾಯಿತು. ಶಂಕರನಿಗೂ ಗಿಡಗಳಿಗೆ ನೀರು  ಹಾಕುವುದೆಂದರೆ ಬಹಳ ಇಷ್ಟ. ಸಾಯಂಕಾಲ ಆಸ್ಪತ್ರೆಯಿಂದ ಬಂದ ಮೇಲೆ ನೀರು ಹಾಕುವ ಕೆಲಸವನ್ನು ಅಚ್ಛೆಯಿಂದ ಮಾಡುತ್ತಾನೆ. ಒಂದು ಕಟ್ಟಾಗುವಷ್ಟು ಹರಿವೆ ಸೊಪ್ಪು, ಒಂದು ನವಿಲುಕೋಸಿನ ಗಡ್ಡೆ ಕಿತ್ತುಕೊಂಡ ಮುನ್ನಿ ಅದರೊಂದಿಗೆ ನಾಲ್ಕು ನುಗ್ಗೆಕೋಡುಗಳನ್ನು ಸೇರಿಸುವ ಇರಾದೆಯಿಂದ ಮೂಲೆಯಲ್ಲಿದ್ದ ದೋಂಟಿಯನ್ನೆತ್ತಿಕೊಂಡು ಕಟ್ಟಡದ ಮುಖ್ಯ ಬಾಗಿಲಿನಿಂದ ಹೊರಬಂದಳು. ನುಗ್ಗೇ ಮರ ಯಾವ ಮನೆಯೊಡತಿಯ ಹಂಗಿಲ್ಲದೆ ರಸ್ತೆಯ ಬದಿಯಲ್ಲಿ ಬೆಳೆದು ಧಾರಾಳವಾಗಿ ಕಾಯಿಗಳನ್ನು ಹೊತ್ತುಕೊಂಡು ನಿಂತಿತ್ತು. ಒಂದ್ಹತ್ತು ಕೋಡುಗಳನ್ನು ಕೆಡವಿಕೊಂಡು ಎಲ್ಲವನ್ನೂ ಕೈಯಲ್ಲಿದ್ದ ಪ್ಲಾಸ್ಟಿಕ್ ಬ್ಯಾಗಿನೊಳಗೆ ಹಾಕಿಕೊಂಡಳು. ಮಗನಿಗೆ, ವಯಸ್ಸಾದ ಅತ್ತೆಗೆ ಚಹಾ ಮಾಡಿ ನಾಷ್ಟಾ ಕೊಟ್ಟು ಅಂಗೈಯಗಲದ ಕೋಣೆಯನ್ನು ಗುಡಿಸಿ ಒರೆಸಿ, ಕೈಯಲ್ಲಿ ತರಕಾರಿ ತುಂಬಿದ ಚೀಲ ಹಿಡಿದು ಧುಡು ಧುಡು ಓಡುನಡಿಗೆಯಲ್ಲಿ ಹದಿನಾರನೇ ನಂಬರಿನ ಮನೆಗೆ ಹೋಗುವಾಗ ಗಂಟೆ ಒಂಬತ್ತು.  

ಬೆಲ್ ಮಾಡಿದೊಡನೆ ಬಾಗಿಲು ತೆರೆಯಿತು. ಮೂರು ಬೆಡ್ರೂಮಿನ ಸುಸಜ್ಜಿತವಾದ ಸರಕಾರಿ ಫ್ಲ್ಯಾಟು. ಒಂದು ಕಟ್ಟಡದಲ್ಲಿ ಆರು ಮನೆಗಳಿವೆ, ಒಂದಾನೊಂದು ಕಾಲದಲ್ಲಿ ಕಟ್ಟಿಸಿದ್ದರಿಂದ ಲಿಫ್ಟ್ ಇಲ್ಲ. ಇದು ಮೊದಲನೇ ಫ್ಲೋರಿನಲ್ಲಿದೆ. ಒಂದು ಫ್ಲೋರಿನಲ್ಲಿ ಎರಡು ಮನೆಗಳು. ಮನೆಯ ಮುಂಬಾಗಿಲ ಎಡ  ಪಕ್ಕದಲ್ಲಿ ಇನ್ನೊಂದು ಬಾಗಿಲು, ಅದನ್ನು ತೆರೆದರೆ ಉದ್ದಾನುದ್ದ ಸಪೂರ ವೆರಾಂಡ, ವೆರಾಂಡಕ್ಕೆ ಗ್ರಿಲ್ ಬಿಟ್ಟರೆ ಗೋಡೆಗೀಡೆ ಇಲ್ಲ, ವೆರಾಂಡದ ತುದಿಯಲ್ಲಿ ಒಂದು ಸಣ್ಣ ಕೋಣೆ. ವೆರಾಂಡದಿಂದ ಫ್ಲ್ಯಾಟಿನ ಅಡಿಗೆ ಮನೆಗೆ ಹೋಗಲು ಇನ್ನೊಂದು ಬಾಗಿಲು. ಇನ್ನೊಂದು ಬದಿಯ ಮನೆಗೂ ಹೀಗೆಯೇ ವೆರಾಂಡಾ, ಕೋಣೆ. ಎರಡೂ ಕೋಣೆಗಳ ಮಧ್ಯದಲ್ಲೊಂದು ಕಾಮನ್ ಬಚ್ಚಲುಮನೆ. ಸರ್ವೆಂಟ್ ಕ್ವಾರ್ಟರ್ಸ್ ಎಂದು ಕರೆಯಲ್ಪಡುವ ಈ ಪುಟ್ಟ ಕೋಣೆಗಳಲ್ಲಿ ಮನೆಕೆಲಸದವರ ದೊಡ್ಡ ಸಂಸಾರಗಳು ತುಂಬಿ ತುಳುಕಿ ವೆರಾಂಡದಲ್ಲೂ ಹರಡಿಕೊಂಡಿರುತ್ತವೆ. ಮನೆಗಳು ಅಲಾಟ್ ಆಗುವುದು ಆಫೀಸರುಗಳಿಗೆ, ಅವರ ಮನೆಕೆಲಸಕ್ಕೋ, ಅಡುಗೆಗೋ, ಮಕ್ಕಳನ್ನು ನೋಡಿಕೊಳ್ಳಲೋ ಅನುಕೂಲವಾಗುವಂತೆ ಯಾವಾಗ ಕರೆದರೂ ಓಗೊಡುವಂತಹ ನೌಕರರಿರಬೇಕೆಂದು ಈ ಕೋಣೆಗಳನ್ನು ಕಟ್ಟಲಾಗಿತ್ತು. ಮುನ್ನಿ ವಾಸವಿರುವುದು ಎರಡನೇ ನಂಬರಿನ ಸರ್ವೆಂಟ್ ಕ್ವಾರ್ಟರ್ಸ್ ಎಂಬ ಕೋಣೆಯಲ್ಲಿ. ಇದು ಗ್ರೌಂಡ್ ಫ್ಲೋರಿನಲ್ಲಿರುವುದರಿಂದ ಮನೆಯ ಎದುರಿಗೆ ದೊಡ್ಡದಾದ ಅಂಗಳವಿದೆ, ಹಿಂದುಗಡೆ ಹಿತ್ತಲಿದೆ. ಹಿತ್ತಲಲ್ಲಿ ಯಥೇಚ್ಛ ತರಕಾರಿಗಳನ್ನು ಬೆಳೆದುಕೊಂಡಿದ್ದಾಳೆ. ಬೆಳೆದುದನ್ನು ಹಾಳುಮಾಡದೆ ಅವಾಗಾವಾಗ ಎಳತಿರುವಾಗಲೇ ಕಿತ್ತು ಬೇರೆ ಬೇರೆ ಮೇಡಮ್ಮುಗಳಿಗೆ ಕೊಂಡೊಯ್ದು ಕೊಡುತ್ತಾಳೆ. ಇವಳೇನೂ ಹಣ ಕೇಳುವುದಿಲ್ಲ. ಅವರಾಗಿಯೇ ಕೊಟ್ಟರೆ ಉಂಟು, ಇಲ್ಲದಿದ್ದರೆ ಇಲ್ಲ. ದೂರದ ಬೆಂಗಳೂರಿನಲ್ಲಿ ನರ್ಸಿಂಗ್ ಡಿಪ್ಲೋಮ ಓದುತ್ತಿರುವ ಮಗಳು ಬೈಯ್ಯುತ್ತಾಳೆ “ಅಮ್ಮ ನೀ ಕಷ್ಟಪಟ್ಟು ಬೆಳೆದದ್ದನ್ನು ಧರ್ಮಕ್ಕೆ ಯಾಕೆ ಕೊಡ್ತೀ? ಹೊರಗಿನಿಂದ ತರುವಾಗ ಅವ್ರು ದುಡ್ಡು ಕೊಡಲ್ವಾ, ಇಷ್ಟು ಚೆನ್ನಾಗಿರೋದು, ಪೆಸ್ಟಿಸೈಡ್ ಹಾಕ್ದೇ ಇರೋದು ಎಲ್ ಸಿಗತ್ತೆ ? ನಮ್ಮ ಕೋಣೆ  ಮೇಡಂ ಹತ್ರ ಬೇಡಾಂದ್ರೆ ಬಿಡು, ಬೇರೆಯವ್ರ ಹತ್ರ ತಗೋಬೋದಲ್ವಾ” ಎಂದೆಲ್ಲ ಸಿಟ್ಟು ಮಾಡುತ್ತಾಳೆ. ಆದರೆ ಕಳೆದ ಇಪ್ಪತ್ತು ವರ್ಷಗಳಿಂದ ಕೋಲ್ಕತ್ತದ ಅಲಿಪುರದ ಈ ಕಾಲನಿಯಲ್ಲಿನ ಕೋಣೆಗಳಲ್ಲಿಯೇ ಜೀವನ ಸವೆಸಿದ ಮುನ್ನಿಗೆ ಗೊತ್ತು ಇದೆಲ್ಲ ಬಾಯಲ್ಲಿ ಹೇಳಿದಷ್ಟು ಸುಲಭವಲ್ಲವೆನ್ನುವುದು. ಮಗಳು ಹೇಳುತ್ತಾಳೆಂದು ಹಾಗೆಲ್ಲ ಮುನ್ನಿ ತಾಳ್ಮೆ ಕಳೆದುಕೊಂಡು ಮಾತನಾಡುವುದಿಲ್ಲ. ಅವಳಿಗೆ ಚಿಕ್ಕ ಪ್ರಾಯದ ಹುರುಪು, ಹೇಳುತ್ತಾಳೆ. ತಾನು ಕೆಲಸ ಮಾಡುತ್ತಿದ್ದ ಮನೆಯ ವಕೀಲರ ಸಹಾಯದಿಂದಲೇ ಅಲ್ಲವೇ ಮಗಳನ್ನು ದೂರದ ಬೆಂಗಳೂರಿಗೆ ಓದಲು ಕಳಿಸಲು ಸಾಧ್ಯವಾಗಿದ್ದು ? ತನಗೆ, ಶಂಕರನಿಗೆ ಇದೆಲ್ಲ ಏನು ಗೊತ್ತು? ವೈಟ್ ಫೀಲ್ಡಿನ ನರ್ಸಿಂಗ್  ಕಾಲೇಜಿನಲ್ಲಿ ಮೂರು ವರ್ಷಗಳ ತರಬೇತಿಗೆ ಫ್ರೀ ಸೀಟು ಸಿಗುವಂತೆ ಅಪ್ಲಿಕೇಶನ್ ಹಾಕಿ ಎಲ್ಲ ತಯಾರಿ ಮಾಡಿ ಅನುಕೂಲ ಮಾಡಿಕೊಟ್ಟವರನ್ನು ಮರೆಯುವುದುಂಟೆ? ಓದಿ ಬಂದ ಮೇಲೆ ಶಂಕರ ಕೆಲಸ ಮಾಡುವ ಆಸ್ಪತ್ರೆಯಲ್ಲಿ ಕೆಲಸ ಸಿಕ್ಕರೆ ತಾನು ಗೆದ್ದಂತೆ. 

ಕೈಯಲ್ಲಿ ಫೋನು ಹಿಡಕೊಂಡು ಮಾತನಾಡುತ್ತಲೇ ಬಾಗಿಲು ತೆರೆದ ಹದಿನಾರನೇ ನಂಬರಿನ ಮೇಡಂ ಕೈಸನ್ನೆಯಿಂದಲೇ ತರಕಾರಿಗಳನ್ನು ಫ್ರಿಜ್ಜಿನಲ್ಲಿ ಇಡುವಂತೆ ಸೂಚಿಸಿ ಬಾಲ್ಕನಿಯಲ್ಲಿನ ಕುರ್ಚಿ ಮೇಲೆ ಕೂತರು.

“ಹಾಂ ಬಂದ್ಲು”

“ಪರ್ವಾಗಿಲ್ಲ ಮಾತಾಡಿ, ಫ್ರೀಯಾಗೇ ಇದ್ದೀನಿ , ಅವಳಷ್ಟಕ್ಕೆ ಮಾಡ್ಕೊಂಡು ಹೋಗ್ತಾಳೆ, ನಾನೇನೂ ನೋಡ್ಬೇಕಾಗಿಲ್ಲ”

ಆಮೇಲೆ ಹಿಂದಿ ಬಿಟ್ಟು ಇಂಗ್ಲಿಷ್ ನಲ್ಲಿ ಮಾತನಾಡಿದ್ದೊಂದೂ ಮುನ್ನಿಗೆ ಅರ್ಥವಾಗಲಿಲ್ಲ. ಹಾಲ್ ನ ಸೋಫಾ, ಕುರ್ಚಿ ಕಪಾಟುಗಳ ಧೂಳು ಹೊಡೆದು, ಕುಕ್ಕುರುಗಾಲಲ್ಲಿ ಕೂತು ನೆಲ ಒರೆಸುವ ಬಟ್ಟೆಯನ್ನು ಫಿನಾಯಿಲ್ ಸೇರಿಸಿದ ನೀರಿನಲ್ಲಿ ಅದ್ದಿ ತಿಕ್ಕಿ ತಿಕ್ಕಿ ನೆಲ ಒರೆಸುವಾಗ ಮುಂದಿನ ತಿಂಗಳಾದರೂ ನೆಲ ಒರೆಸುವ ಮೊಪ್ ಕೇಳಬೇಕು ಅಂದುಕೊಂಡಳು. ಬಟ್ಟೆಗಳನ್ನು ನೆನೆಸಿ ಕೈಯಲ್ಲಿ ಬ್ರಶ್ ಮಾಡಿ ಮಷೀನಿಗೆ ಹಾಕಿ ಹೊರಡಲನುವಾದರೂ ಮೇಡಂ ಇನ್ನೂ ಫೋನಿನಲ್ಲಿ ಮಾತನಾಡುತ್ತಲೇ ಇದ್ದರು. ಹೋಗಿ ಎದುರು ನಿಂತವಳಿಗೆ ಕೈಸನ್ನೆಯಿಂದಲೇ ಚಹಾ ಮಾಡುವಂತೆ ಹೇಳಿದರು. ಚಹ ಮಾಡಿ ಕಪ್ಪಿನಲ್ಲಿ ಹಾಕಿ ಟ್ರೇಯಲ್ಲಿಟ್ಟು ತರುವಾಗ ಮಾತು ಮುಗಿಸಿದ್ದವರು ಇವಳನ್ನೇ ನೋಡುತ್ತಾ “ನಿನ್ನ ಮೇಡಂ ಗೆ ಟ್ರಾನ್ಸ್ಫರ್ ಬಂತಲ್ಲ, ಹೇಳಿದ್ರಾ ?” ಅಂತ ಕೇಳಿದಾಗ ಅನಿರೀಕ್ಷಿತವಾಗಿ ಸುದ್ದಿ ಕೇಳಿ ಮುನ್ನಿಯ ಕೈಯಲ್ಲಿನ ಟ್ರೇ ಅಲುಗಾಡಿ ಕಪ್ಪಿನಲ್ಲಿನ ಚಹಾ ತುಳುಕಿತು, ಸಾವರಿಸಿಕೊಂಡು “ಇಲ್ಲ ಮೇಡಂ, ಇನ್ನೂ ಟೈಮಿರಬಹುದೇನೋ, ಹೇಳ್ತಾರೆ” ಎಂದು  ಸಾರಿಸಿದವಳು “ಆಸ್ಚೆ” (ಬರ್ತೀನಿ) ಅಂತ ಮೇಡಂ ಮುಖ ನೋಡ್ತಾ ನಿಂತುಕೊಂಡಳು. “ಹೂ ಸರಿ” ಎಂದು ಬಾಗಿಲು ಹಾಕಿಕೊಳ್ಳಲು ಬಂದವರು “ಪುಣೆಗೆ ಟ್ರಾನ್ಸ್ಫರ್ ಆಗಿದೆ, ನಾನು ಹೇಳ್ದೆ ಅಂತ ಹೇಳ್ಬೇಡಾ” ಅಂತ ಹೇಳಿ ಬಾಗಿಲು ಹಾಕಿಕೊಂಡರು. ಇವಳು ಬಲಬದಿಯ ವೆರಾಂಡಕ್ಕೆ ಹೋಗುವ ಬಾಗಿಲು ತೆರೆದು ಸಮೀನ ಕಾಣಿಸುತ್ತಾಳೋ ಎಂದು ನೋಡಿದಳು, ಅವಳೆಲ್ಲೂ ಕಾಣಲಿಲ್ಲ. ಅದೇನು ಕೆಟ್ಟ ಅದೃಷ್ಟವೋ ಕುಟುಂಬದ ಎಲ್ಲರೂ ಒಬ್ಬೊಬ್ಬರಾಗಿ ತೀರಿಕೊಂಡು ಈಗ ಸಮೀನ ಒಬ್ಬಳೇ ಆಗಿಬಿಟ್ಟಿದ್ದಾಳೆ, ವಾರದ ಹಿಂದೆ ಮಗ ಆಕ್ಸಿಡೆಂಟಾಗಿ ಸತ್ತುಹೋಗಿದ್ದ, ಹದಿನಾರನೇ ನಂಬರಿನ ಮೇಡಂ ಮನೇಲಿ ಅಡಿಗೆ ಮಾಡುವ ಸಮೀನ ಮುನ್ನಿಗೆ ಬಹಳ ವರ್ಷಗಳ ಗೆಳತಿ. ಮುನ್ನಿ ತನ್ನ ಮನೆಯಲ್ಲಿ ಮಾಡಿದ್ದು ಒಂದಿಷ್ಟು ಸಣ್ಣ ಡಬ್ಬಿಯಲ್ಲಿ ಹಾಕಿ ತಂದು ಕೊಡುತ್ತಲೇ ಇರುತ್ತಾಳೆ. ಬೇರೆಯವರ ಮನೆಯಲ್ಲಿ ಭರಪೂರ ಅಡಿಗೆ ಮಾಡುವ ಸಮೀನಳಿಗೆ ತನಗಾಗಿ ಬೇಯಿಸಿಕೊಳ್ಳುವುದೆಂದರೆ ಆಲಸ್ಯ.

ಮೆಟ್ಟಲಿಳಿದು ಬರುವಾಗ ಒಂದೇ ಚಿಂತೆ, ಇನ್ನು ಯಾವ ಕೋಣೆ ಹುಡುಕುವುದು ? ಪ್ರತೀ ಸಲ ಆಫೀಸರುಗಳಿಗೆ ವರ್ಗವಾದಾಗ ಕೆಲಸದವರಿಗೆ ಇದೊಂದು ದೂಡ್ಡ  ಕಷ್ಟ, ಚಿಂತೆ. ಆಫೀಸರ್ ತನ್ನ ಮನೆ ಖಾಲಿ ಮಾಡಿ ಬೀಗದ ಕೈಯನ್ನು ಒಪ್ಪಿಸಿದೊಡನೆ ಆಫೀಸಿನಿಂದ ಜನ ಬಂದು ಕೆಲಸದವರ ಕೋಣೆಗೆ ಬೀಗ ಹಾಕಿಬಿಡುತ್ತಾರೆ. ವರ್ಗವಾದ ಆಫೀಸರ್ ಇನ್ನೊಂದು ಊರಿಗೆ ಹೋಗಿ ಜಾಯಿನ್ ಆಗಿ ಅಲ್ಲಿ ಮನೆ ಅಲಾಟ್ ಆಗಿ ತನ್ನ ಕುಟುಂಬದವರನ್ನು ಕರಕೊಂಡು ಹೋಗಲು ಎರಡು ತಿಂಗಳಾದರೂ ಬೇಕು, ಅಷ್ಟರೊಳಗೆ ಬೇರೆ ಕೋಣೆ  ಸಿಕ್ಕಿದರೆ ಪುಣ್ಯ. ಇಲ್ಲದಿದ್ದರೆ ಇವರಿಗೆ ನಿಲ್ಲಲು ಠಿಕಾಣಿ ಇಲ್ಲ. ಕಾಡಿ  ಬೇಡಿದರೆ ಒಂದು ಹತ್ತೋ ಹನ್ನೆರಡೋ ದಿನ ಹೆಚ್ಚುವರಿ ನಿಲ್ಲಲು ಪರವಾನಿಗಿ ಸಿಗುತ್ತದೆ, ಆಮೇಲೆ ಖಾಲಿ ಮಾಡಲೇಬೇಕು. ಹೊರಗೆ ಇಂತಹ ಲೊಕ್ಯಾಲಿಟಿ ಯಲ್ಲಿ  ಬಾಡಿಗೆ ಕೊಟ್ಟು ನಿಲ್ಲುವುದು ಸಾಧ್ಯವೇ ? ಇಲ್ಲಿ ಕೋಣೆ, ನೀರು, ವಿದ್ಯುತ್ ಎಲ್ಲವೂ ಫ್ರೀ. ಮನೆಕೆಲಸ ಮಾಡಿಕೊಟ್ಟರೆ ಸಾಕು, ಅದೂ ಎರಡು ಕೆಲಸ ಮಾತ್ರ, ಉಳಿದದ್ದಕ್ಕೆ  ಸಂಬಳ ಕೊಡಬೇಕು. ಕೋಣೆ ಸಣ್ಣದಾದರೂ ವಿಶಾಲವಾದ ಕಾಲನಿಯಲ್ಲಿ ಅಡ್ಡಾಡಿಕೊಂಡು ಮಕ್ಕಳು ಆರಾಮಾಗಿ ಬೆಳೆಯುತ್ತಿದ್ದರು. ವರ್ಗಾವಣೆ ಅಂದ ಕೂಡಲೇ ಮಾತ್ರ ಎದೆ ಝಲ್ ಅನ್ನುತ್ತಿತ್ತು. ಹೊಸ ಕೋಣೆ ಹುಡುಕಿಕೊಳ್ಳುವ ಕಷ್ಟ ಯಾರಿಗೂ ಬೇಡದ್ದು. ಕಾಲನಿಯಲ್ಲಿ ಯಾವ ಹೊಸ ಆಫೀಸರ್ ಗಾಡಿಯಿಂದ ಇಳಿದು ಮನೆ ನೋಡಲು ಬಂದರೂ “ಘರ್ ದೀಜಿಯೇ ಸಾಬ್, ಘರ್ ಮೇ ಬಹುತ್ ಮುಷ್ಕಿಲ್ ಹೆ, ಬಚ್ಚೊಂ ಕೋ ಪಢಾಯಿ ಕರ್ನಿ ಹೆ” ಎಂದೆಲ್ಲ ಗೋಗರೆಯುತ್ತ ದುಂಬಾಲು ಬೀಳುವುದು ಇಲ್ಲಿ ಸಾಮಾನ್ಯವಾಗಿ ಕಾಣುವ ದೃಶ್ಯ. ಬಹುತೇಕ ಆಫೀಸರುಗಳು ಮಿಲಿಟ್ರಿಯಲ್ಲಿ ಇರುವವರು, ಒಂದೆರಡು ವರ್ಷಗಳಲ್ಲಿ ವರ್ಗಾವಣೆ ಮಾಮೂಲು. ಹೀಗಾಗಿ ಕೆಲಸದವರೂ ಆಗಿಂದಾಗ ಕೋಣೆ ಬದಲಾಯಿಸಬೇಕಾಗುತ್ತಿತ್ತು. ಮುನ್ನಿ ಹುಟ್ಟಿಬೆಳೆದ ಜಾರ್ ಖಲಿಯಲ್ಲೇನು ಅವಳು ರಾಣಿಯಾಗಿದ್ದವಳೇ? ಇಡೀ ಹಳ್ಳಿಯಲ್ಲಿ ಹುಡುಕಿದರೂ ಒಂದು ತಾರಸಿ ಮನೆಯಿಲ್ಲ. ಸಣ್ಣ ಸಣ್ಣ ಗೂಡಂಗಡಿಗಳ, ಮನೆಗಳ ಮೇಲೆ ಜಿಂಕ್ ಶೀಟು, ಹುಲ್ಲಿನ ಮಾಡು, ಅಲ್ಲೊಂದು ಇಲ್ಲೊಂದು ಹೆಂಚಿನ ಮನೆಗಳು. ಅಪ್ಪನೂ ಚಿಕ್ಕ ಚಾದಂಗಡಿ ಹಾಕಿಕೊಂಡಿದ್ದ. ಹಿತ್ತಲಲ್ಲಿ ಬೇಕಾದಷ್ಟು ತರಕಾರಿ ಅಲ್ಲಿಯೂ ಬೆಳೆಸಿಕೊಳ್ಳುತ್ತಿದ್ದರು. ಕೊಲ್ಕತ್ತದಲ್ಲಿ ಹುಡುಗನಿಗೆ ಇರಲು ಮುಫತ್ತಾಗಿ ಕೋಣೆ ಸಿಗುತ್ತದೆಂದು ಕೇಳಿ ಥಟ್ಟನೆ ಮದುವೆ ಮಾಡಿ ಕೊಟ್ಟಿದ್ದರು ಮುನ್ನಿಯ ಅಪ್ಪ. ಮುನ್ನಿ ಕಾಲನಿಯ ಜೀವನಕ್ಕೆ ಬಹುಬೇಗ ಹೊಂದಿಕೊಂಡಿದ್ದಳು. ದಿಲ್ಲಿ, ಬಿಹಾರ್, ಮದ್ರಾಸ್ ಎಂದೆಲ್ಲ ಬೇರೆ ಬೇರೆ ಊರುಗಳಿಂದ ಬರುವ ಮೇಡಮ್ಮುಗಳನ್ನು ನೋಡಿ ನೋಡಿ ಅವರ ಮರ್ಜಿ ಹಿಡಿದು ಕೆಲಸ ಮಾಡುವುದರಲ್ಲಿ, ನೂರಾ ಇಪ್ಪತ್ತು ಮನೆಗಳಿರುವ ಕಾಲನಿಯಲ್ಲಿ ಯಾವಾಗ ಯಾವ ಮನೆ ಖಾಲಿಯಾಗುತ್ತದೆ ಯಾರಿಗೆ ಕೋಣೆ ಸಿಗುತ್ತದೆ ಎಂದೆಲ್ಲ ಲೆಕ್ಕಾಚಾರ ಹಾಕುತ್ತ ಸಂಸಾರ ಇರಲೊಂದು ಕೋಣೆ ಹೇಗಾದರೂ ಸಿಗುವಂತೆ ನೋಡಿಕೊಳ್ಳುವುದರಲ್ಲಿ ಹುಷಾರಾಗಿಬಿಟ್ಟಿದ್ದಳು. 

ಯೋಚಿಸುತ್ತ ಮನೆ ಬಳಿ ಬಂದ ಮುನ್ನಿಗೆ ಥಟ್ಟನೆ ಇದಕ್ಕೆಲ್ಲಾ ಕಾರಣ ಲೊಕ್ಕಿ ಎಂಬುದು ನೆನಪಿಗೆ ಬಂದು ಅವಳ ಮೇಲೆ ಎಲ್ಲಿಲ್ಲದ ಸಿಟ್ಟು ಬಂತು. ಎಲ್ಲಿದ್ದಾಳೋ ದರಿದ್ರದವಳು. ಮೊದಲಿಂದಲೂ ಇದ್ದ ಪರಿಸ್ಥಿತಿಯೇನಲ್ಲ ಇದು. ಮನೆಕೆಲಸ ಮಾಡಿಕೊಟ್ಟು ಜೀವನ ಪರ್ಯಂತ ಒಂದೇ ಕೋಣೆಯಲ್ಲಿರಬಹುದಾದ ಕಾಲವಿತ್ತು. ಮುನ್ನಿ ಮದುವೆಯಾಗಿ ಬಂದಾಗ ಅತ್ತೆ, ಗಂಡನ ಜೊತೆ ಒಂದೇ ಕೋಣೆಯಲ್ಲಿ ಎಷ್ಟೋ ವರ್ಷಗಳಿಂದ ಇದ್ದದ್ದು ನೆನಪಿದೆ. ಲೊಕ್ಕಿ ಬಹಳ ದಾಷ್ಟೀಕದ ಹೆಂಗಸು. ಅರುವತ್ತೊಂದನೇ ಮನೆಯ ಕೋಣೆಯಲ್ಲಿದ್ದವಳು. ಆ ಮನೆಗೆ ಹೈದರಾಬಾದಿನಿಂದ ಆಫೀಸರು ಬಂದಿದ್ದರು. ಚಿಕ್ಕ ವಯಸ್ಸಿನ ಪಾಪದ ಮೇಡಂಗೆ ತೆಲುಗು ಭಾಷೆ ಬಿಟ್ಟರೆ ಬೇರೆ ಬರುತ್ತಿರಲಿಲ್ಲ. ಲೊಕ್ಕಿಯ ಮೇಲೆ ಪೂರ್ತಿ ಭರವಸೆ ಇಟ್ಟು ತನ್ನ ಬಳಿಯಿದ್ದ ರಾಶಿ ಬಂಗಾರ, ರೇಷ್ಮೆ ಸೀರೆಗಳನ್ನೆಲ್ಲ ತೋರಿಸುವುದು, ಮೈಮೇಲೆ ತೊಟ್ಟುಕೊಂಡು ಕನ್ನಡಿಯ ಮುಂದೆ ನಿಂತು ನೋಡುವುದು ಮಾಡುತ್ತಿದ್ದಳು. ಲೊಕ್ಕಿ ಅಡಿಗೆ ಮಾಡುತ್ತಿದ್ದರೆ ಎಷ್ಟೋ ಸಲ ಅವಳ ಮೇಲೆಯೇ ಮನೆ ಬಿಟ್ಟು ಗಂಡನೊಂದಿಗೆ ಕಾರಿನಲ್ಲಿ ಹೊರಗೆ ಹೋಗುತ್ತಿದ್ದ ದಿನಗಳೂ ಇದ್ದವು. ತಾನು ಇಪ್ಪತ್ತು ವರ್ಷಗಳಿಂದ ಇದೇ ಕೋಣೆಯಲ್ಲಿದ್ದುಕೊಂಡು ಎಲ್ಲ ಮೇಡಮ್ಮುಗಳನ್ನು ನೋಡಿಕೊಂಡವಳು ಎಂದೆಲ್ಲ ಕೊಚ್ಚಿಕೊಂಡ ಲೊಕ್ಕಿಯ ನೀಯತ್ತು ಒಂದು ದಿನ ಖರಾಬಾಯಿತು. ಬೀಗ ಹಾಕದೆ ಬಿಟ್ಟ ಬೀರುವಿನಿಂದ ಲಕ್ಷಗಟ್ಟಲೆ ಬೆಲೆಬಾಳುವ ಆಭರಣಗಳನ್ನು ಎತ್ತಿಕೊಂಡು ಹಾಡುಹಗಲೇ ಗಂಡ ದೇಬುವಿನೊಟ್ಟಿಗೆ ಪರಾರಿಯಾದಳು. ತೆಲುಗು ಮೇಡಮ್ಮಿನ ಎದೆಯೊಡೆಯಿತು. “ಲೊಕ್ಕಿ ನನ್ನ ಅಮ್ಮನಂತೆಯೇ ಎಂದು ತಿಳಿದುಕೊಂಡಿದ್ದೆ, ಹೀಗೆ ಮಾಡುವುದೇ” ಎಂದೆಲ್ಲ ಗೋಳಾಡಿ ಅತ್ತಳು. ಮೃದು ಮನಸ್ಸಿನ ಅವಳಿಗೆ ಬಂಗಾರ ಹೋದಷ್ಟೇ ವ್ಯಥೆ ತಾನು ನಂಬಿದ್ದ ಲೊಕ್ಕಿ ಹೀಗೆ ಮಾಡಿದ್ದಕ್ಕೂ ಆಗಿತ್ತು. ಆಫೀಸರುಗಳು ಮೀಟಿಂಗ್ ಮಾಡಿದರು. ಚಿಕ್ಕ ಪುಟ್ಟ ದೂರುಗಳು ಯಾವಾಗಲೂ ಇದ್ದವು. ಮೇಡಮ್ಮುಗಳು ಮುಂಜಾನೆ ಭಜನೆಯನ್ನೋ, ಕಿಶೋರಿ ಅಮೋನ್ಕರಳ ಸಂಗೀತವನ್ನೋ ಆಲಿಸಬೇಕೆಂದರೆ ವೆರಾಂಡದಿಂದ ಕಿವಿಗಡಚಿಕ್ಕುವಂತೆ “ಸರ್ದಿ ಖಾಸಿ ನ ಮಲೇರಿಯಾ ಹುವಾ, ಹೋಗಯಾ ಯಾರೋ ಮುಜಕೋ ಲವ್ ಲವ್ ಲವೇರಿಯ ಹುವಾ” ಅಂತ ಬಡಕೊಂಡರೆ ಏನು ಮಾಡುವುದು? ಒಂದೆಡೆ ಆಫೀಸರುಗಳ ನಾಜೂಕಿನ ಮೇಡಮ್ಮು, ಮಕ್ಕಳ ಸಂಸಾರ, ಇನ್ನೊಂದೆಡೆ ಕೋಣೆಗಳಲ್ಲಿ ಗದ್ದಲ ಮಾಡುತ್ತ ಬೆಫಿಕಿರ್ ಜೀವನ ಮಾಡುವ ಕೆಲಸದವರ ಸಂಸಾರ, ಕ್ರಾಸ್ಸಿಂಗ್ ನಲ್ಲಿ ಮಾತ್ರ ಭೇಟಿಯಾಗುವ ರೈಲ್ವೆ ಹಳಿಗಳಂತೆ ಹತ್ತಿರ ಹತ್ತಿರ ಆದರೂ ದೂರ. ಮನೆಗಳನ್ನು ಕಟ್ಟಿಸಿರುವುದು ಯಾರಿಗಾಗಿ? ಮಜಾ ಮಾಡುತ್ತಿರುವುದು ಯಾರು? ಅಧಿಕಾರಿಗಳು ಕೆಲವು ವರ್ಷಗಳಿಗಾಗಿ ಬಂದು ವಾಸಮಾಡಿ ವರ್ಗವಾಗಿ ಹೋಗುವವರು. ಕೆಲಸದವರು? ಖಾಯಂ ಆಗಿ ಇಲ್ಲೇ ನಿಲ್ಲುವವರು. ಉಲ್ಟಾ ಚೋರ್ ಕೊತ್ವಾಲ್ ಕೋ ಡಾಂಟೆ ಅನ್ನುವಂತೆ ಅಧಿಕಾರಿಗಳ ಕುಟುಂಬವನ್ನೇ ಲೂಟಿ ಮಾಡಿದರೆ? ಸಲ್ಲದು. ಇದಕ್ಕೆ ಉಪಾಯ ಮಾಡಲೇಬೇಕು. ಹೊಸದಾದ ಆರ್ಡರು ತಯಾರಾಯಿತು. ಒಂದೇ ಕೋಣೆಯಲ್ಲಿ ಖಾಯಂ ನಿಂತರೆ ಹೀಗೆ ಚರ್ಬಿ ಬರುವುದು. ಪ್ರತೀ ಸಲ ಆಫೀಸರು ವರ್ಗವಾದೊಡನೆ ಖಾಲಿ ಮಾಡಲಿ, ಬುದ್ದಿ ಬರುತ್ತದೆ, ಪುಕ್ಕಟೆ ನಿಂತು ಬಂದ ಸೊಕ್ಕು ಇಳೀತದೆ ಎಂದೆಲ್ಲ ತೀರ್ಮಾನವಾಯಿತು. 

ಒಂದಲ್ಲ ಎರಡಲ್ಲ ಭರ್ತಿ ಎಂಟು ಎ ಫೋರ್ ಸೈಜ್ ನ ಶೀಟುಗಳ ಕೈಪಿಡಿ ತಯಾರಾಯಿತು. ಹೊಸ ಆಫೀಸರ್ ಬಂದು ಮನೆ ಶಿಫ್ಟ್ ಮಾಡಿದ ದಿನವೇ ಸೆಕ್ಯುರಿಟಿಯ ಕೈಯಲ್ಲಿ ಈ ಕೈಪಿಡಿಯನ್ನು ಕಳುಹಿಸಿಕೊಡಲಾಗುತ್ತಿತ್ತು. ಲೊಕ್ಕಿಯಂತೆ ಬೇರೆ ಬೇರೆ ಕಾರಣಗಳಿಗಾಗಿ ಬ್ಲಾಕ್ ಲಿಸ್ಟ್ ಅದ ಕೆಲಸದವರ ಹೆಸರುಗಳ ಪಟ್ಟಿ, ಕೋಣೆಗಳಲ್ಲಿ ವಾಸ ಮಾಡುವವರ ನಡೆನುಡಿ ಹೇಗಿರಬೇಕು, ಅವರಿಗೆ ಯಾವ ಕೆಲಸಕ್ಕೆ ಎಷ್ಟು ಸಂಬಳ ಕೊಡಬೇಕು, ಯಾವ ಕೆಲಸಗಳನ್ನೆಲ್ಲ ಮಾಡಿಸಿಕೊಳ್ಳಬೇಕು, ಹಬ್ಬ ಹರಿದಿನಗಳಂದು  ಹೆಚ್ಚುವರಿ ಹಣ ಎಷ್ಟು ಕೊಡಬೇಕು ಎನ್ನುವ ಕೂಲಂಕುಶ  ವಿವರಗಳಿರುವ ಕೈಪಿಡಿಯನ್ನು ನೋಡಿದರೆ ಕೋಣೆಯಲ್ಲಿರುವವರು ಕೆಲಸದಾಳುಗಳೋ ಟೆರರಿಸ್ಟುಗಳೋ ಎನಿಸಬೇಕು. 

ಎರಡು ತಿಂಗಳ ನಂತರ ಎರಡು ನಂಬರಿನ ಮೇಡಂ ಮನೆ ಖಾಲಿ ಮಾಡಿದರು. ಮನೆಗೆ, ಕೋಣೆಗೆ ಬೀಗ ಬಿತ್ತು. ಮುನ್ನಿಗೆ ಅವತ್ತಿಡೀ ದಿನ ಹೊಟ್ಟೆಯಲ್ಲಿ ಸಂಕಟ, ಕೋಣೆ ಬಿಡುವ ಕಷ್ಟವೊಂದು, ಪ್ರೀತಿಯಿಂದ ಬೆಳಸಿದ ತರಕಾರಿ ತೋಟ ಇನ್ನೊಬ್ಬರ ಪಾಲಾಗುವುದು ಮತ್ತೊಂದು. ಬೇರೆ ಯಾವ ಕೋಣೆಯೂ ತಕ್ಷಣಕ್ಕೆ ಸಿಗಲಿಲ್ಲ. ಹದಿನಾರನೇ ನಂಬರಿನ ಮೇಡಂ ನ ಕೋಣೆಯಲ್ಲಿ ಸಮೀನ ಒಬ್ಬಳೇ ಇದ್ದುದರಿಂದ ಬೇರೆ ಕೋಣೆ  ಸಿಗುವವರೆಗೆ ಅಲ್ಲಿರುವುದೆಂದಾಯಿತು. ಎರಡನೇ ನಂಬರ್ ಮನೆಯ ಮೇಲೆ ಕಣ್ಣಿಟ್ಟೇ ಇರುತ್ತಿದ್ದಳು ಮುನ್ನಿ. ಯಾರಾದರೂ ನೋಡಲು ಬಂದರೆ ಹೇಗಾದರೂ ಮಾಡಿ ಮತ್ತೆ ಅಲ್ಲಿಗೇ ಹೋಗುವ ಅಸೆ ಮೂಗಿನ ತುದಿಯವರೆಗೂ. ತಿಂಗಳೊಪ್ಪತ್ತಿನಲ್ಲಿ ಹೊಸಬರೊಬ್ಬರು ಮನೆ ನೋಡಲು ಬಂದಾಗ ಹೋಗಿ ಮಾತನಾಡಿಸಿ ಕೋಣೆ ಗಿಟ್ಟಿಸಿಕೊಂಡೇ ಬಿಟ್ಟಳು. ದೊಡ್ಡ ಕುತ್ತಿನಿಂದ ಪಾರಾದ ಸಂಭ್ರಮ. ಅವರೂ ಇವಳ ಕೈಯಲ್ಲಿ ಐನೂರರ ನೋಟು ಹಾಕಿ ಮನೆ ಸ್ವಚ್ಛ ಮಾಡಿಡಲು ಹೇಳಿ ಹೋದರು. ಸಂಸಾರ ಮತ್ತೆ ಕೋಣೆಗೆ ವಾಪಾಸು ಬಂತು. ಕೆಲಸದವರಾದರೇನು? ಪಾತ್ರೆ ಪರಡಿ, ಫ್ರಿಜ್ಜು, ಮಂಚ ಎಲ್ಲವೂ ಇವೆ. ತನ್ನ ಕೋಣೆ  ಜೋಡಿಸುತ್ತಲೇ ಮನೆಯನ್ನೂ ಸ್ವಚ್ಛಗೊಳಿಸಿ ಇಟ್ಟಳು. 

ಒಂದು ಬೆಳಗು ಹೊಸ ಮೇಡಮ್ಮು ಮೊಣಕೈಯಲ್ಲಿ ಬ್ಯಾಗು ತೂಗಾಡಿಸುತ್ತ ಕಾರಿನಿಂದ ಇಳಿದು ಸುತ್ತೂ ನೋಡುವ ರೀತಿಯಲ್ಲಿಯೇ ಇದು ಸುಲಭಕ್ಕೆ ಹೊಂದಿಕೊಳ್ಳುವ ಪೈಕಿಯಲ್ಲ ಎಂದು ಮುನ್ನಿಗೆ ತಿಳಿದುಹೋಯಿತು. ತೆಳ್ಳಗೆ, ಬೆಳ್ಳಗೆ ನಾಜೂಕಾಗಿ ಕಾಲೇಜು ಹುಡುಗಿಯಂತೆ ಕಾಣುತ್ತಿದ್ದ ಮೇಡಮ್ಮು ಬೆಂಗಳೂರಿನವರಂತೆ. ಬಹಳ ಕಟ್ಟುನಿಟ್ಟು ,ನಸನಸಿ . ಮುನ್ನಿಯಂತಹ ಪಳಗಿದ ಕೆಲಸದವಳಿಗೂ ಉಸಿರುಕಟ್ಟುವಂತೆ ಮಾಡಿಬಿಡುತ್ತಿದ್ದಳು. ಬಟ್ಟೆ ಒಗೆಯುವಾಗ ಅಲ್ಲೇ ಕೂತು ಫೋನಿನಲ್ಲಿ ಮಾತನಾಡುತ್ತ ನಿಗರಾನಿ ಮಾಡುವುದು, ಗುಡಿಸುವಾಗ ಹಿಂದೆಯೇ ಓಡಾಡುವುದು. ಮನಸ್ಸು ಬಂದಾಗ ಕನ್ನಡಿಯೆದುರು ನಿಂತು ಬೇರೆ ಬೇರೆ ಬಟ್ಟೆಗಳನ್ನು ಹಾಕಿ ಯಾವುದು ಹೇಗೆ ಕಾಣುತ್ತದೆ ಅಂತ  ನೋಡುವ ತವಕದಲ್ಲಿ ಬೀರುವಿನ ಬಟ್ಟೆಗಳನ್ನೆಲ್ಲ ಗೂರಾಡಿ ಎಳೆದು ಮಂಚದ ಮೇಲೆ  ಹಾಕಿ ಆಮೇಲೆ ತಣ್ಣಗೆ ಮುನ್ನಿಗೆ “ಎಲ್ಲ ಸರಿಯಾಗಿ  ಮಡಿಸಿಡು” ಅಂತ ಹೇಳಿ ಬಿಡುತ್ತಿದ್ದಳು. ಅಡಿಗೆ ಮಾಡುವ ರಾಮಾಯಣವನ್ನಂತೂ ಹೇಳುವುದೇ ಬೇಡ. ಸಾಸಿವೆ ಎಣ್ಣೆ, ತೆಂಗಿನೆಣ್ಣೆ . ಆಲಿವ್ ಎಣ್ಣೆ, ಎಕ್ಸ್ಟ್ರಾವರ್ಜಿನ್ ಆಲಿವ್ ಎಣ್ಣೆ ಅಂತೆಲ್ಲ ಇಟ್ಟುಕೊಂಡು ಯಾವ ಪಲ್ಯಕ್ಕೆ ಯಾವುದನ್ನು ಎಷ್ಟು ಪ್ರಮಾಣದಲ್ಲಿ ಹಾಕಬೇಕು ಅಂತೆಲ್ಲ ಅವಳು ಟ್ರೇನಿಂಗ್ ಕೊಡುವಾಗ ಸರ ಸರ ಕೆಲಸ ಮಾಡಿಕೊಂಡು ಎಲ್ಲವನ್ನೂ ನಿಭಾಯಿಸುವ ತಾಕತ್ತಿದ್ದ ಮುನ್ನಿಯಂಥಾ ಮುನ್ನಿಯೂ  ಕಂಗಾಲಾದಳು. ಇರುವ ಮೂರು ಜನಕ್ಕೆ ಬಗೆ ಬಗೆಯ ಅಡಿಗೆ, ಅದನ್ನು ಟೇಬಲ್ ಮೇಲೆ ಗಾಜಿನ ಪಾತ್ರೆಗಳಲ್ಲಿ ಜೋಡಿಸು, ಆಮೇಲೆ ಅದನ್ನು ತೊಳೆದು, ಒರೆಸಿಡು ಎಂದೆಲ್ಲ ತಲೆ ಹಾಳಾಗುತ್ತಿತ್ತು. ಇಷ್ಟೆಲ್ಲ ಮಾಡಿಸಿದರೂ ಅವಳು ತಿನ್ನುವುದು ಮಾತ್ರ ಪುಟ್ಟ ಬೌಲಿನಲ್ಲಿ. ದಪ್ಪವಾಗಬಾರದೆಂದು ಅವಳು ಪಡುವ ಕಷ್ಟಗಳನ್ನು ನೋಡಿದರೆ ಮುನ್ನಿಗೆ ಅಚ್ಚರಿ, ಎಷ್ಟೆಲ್ಲಾ ಅನುಕೂಲಗಳಿದ್ದೂ ತಿನ್ನದೇ ಬದುಕುವವರಿದ್ದಾರೆಯೇ ಈ ಜಗತ್ತಿನಲ್ಲಿ ಎಂದು. 

ಒಂದು ಮಧ್ಯಾಹ್ನ ಅಡಿಗೆ ಊಟ ಎಲ್ಲ ಮುಗಿದ ನಂತರ ಅಡುಗೆ ಮನೆಯನ್ನು ಶುಚಿಗೊಳಿಸಿ ಸಾಮಾನು ತರಲೆಂದು ಕಿದ್ರಿಪುರಕ್ಕೆ ಹೊರಟಳು. ಹೋಗಿ ತಲುಪಿ ಹದಿನೈದು ನಿಮಿಷಗಳಾಗಿರಬಹುದು. ಫೋನು ರಿಂಗಾಯಿತು. ಎತ್ತಿದರೆ ಮೇಡಮ್ಮು ನೋವಿನಿಂದ ನರಳುತ್ತಾ ಅಳುತ್ತ ಹೇಳುತ್ತಿದ್ದುದನ್ನು ಅರ್ಥ ಮಾಡಿಕೊಳ್ಳಲೇ ಕಷ್ಟವಾಯಿತು. ಏನೋ ಮಾಡಲು ಹೋಗಿ ಕೆಳಗೆ ಬಿದ್ದಿದ್ದಾಳೆ, ಏಳಲು ಆಗುತ್ತಿಲ್ಲ, ಗಂಡ ಮೀಟಿಂಗಿನಲ್ಲಿದ್ದಾನೇನೋ ಫೋನು ಎತ್ತುತ್ತಿಲ್ಲ ಎಂದಷ್ಟು ಅರ್ಥವಾಯಿತು. ಒಮ್ಮೆ ಮನಸ್ಸಿಗೆ ತೋಚಿತು “ಬಿದ್ದಿರಲಿ ಹಾಗೆಯೇ, ಶನಿ. ಎಷ್ಟು ಕಾಟ ಕೊಡ್ತಾಳೆ” ಮರುಘಳಿಗೆ “ಪಾಪ, ಇಲ್ಲಿ ಯಾರೂ ಇಲ್ಲ, ಅಷ್ಟು ದೂರದೂರಿನಿಂದ ಬಂದಿದ್ದಾಳೆ, ಕೋಣೆ ತೆಗೆದುಕೊಂಡಿಲ್ಲವೇ ತಾನು” ಎಂದೆನಿಸಿದ್ದೇ ಎಂದೂ ಇಲ್ಲದೆ ತಕ್ಷಣ  ಆಟೋ ಹತ್ತಿ ಬೇಗ ಕಾಲನಿಗೆ ಬಂದಳು. ಮುಂಬಾಗಿಲು ಹಾಕಿತ್ತು, ವೆರಾಂಡದಿಂದ ಅಡಿಗೆ ಮನೆಗೆ ಹೋಗುವ ಬಾಗಿಲು ತೆಗೆದು ಒಳಹೋಗಿ ನೋಡಿದರೆ ಕಾಲು ಅಲ್ಲಾಡಿಸಲಾಗದೆ ಮುದುರಿ ಬಿದ್ದವಳನ್ನು ನೋಡಿ ಬೇಗ ಸೆಕ್ಯುರಿಟಿಯನ್ನು, ನೆರೆಮನೆಯವರನ್ನು ಕರೆದು, ಯಾರೋ ತಂದ  ಕಾರಿನಲ್ಲಿ ಮೆಹ್ತಾ ಆಸ್ಪತ್ರೆಗೆ ಕರಕೊಂಡು ಹೋದಳು. ಸ್ವಲ್ಪ ಹೊತ್ತಿನಲ್ಲಿ ಸಾರ್ ಬಂದರು. ಫ್ರಾಕ್ಚರ್ ಎಂದು ಸಣ್ಣ ಆಪರೇಷನ್ ಮಾಡಿದ ವೈದ್ಯರು ಬೇರೆ ಪರೀಕ್ಷೆಗಳನ್ನೂ ಮಾಡಿಸಿ ರಕ್ತಹೀನತೆ ಇದೆ ಆಹಾರ ಸರಿಯಾಗಿ ತೆಗೆದುಕೊಳ್ಳಬೇಕು ಎಂದೆಲ್ಲ ಹೇಳಿದರು. ಮುನ್ನಿ ಮೇಡಮ್ಮನ್ನು ಇನ್ನಿಲ್ಲದಂತೆ ಜತನದಿಂದ ನೋಡಿಕೊಂಡಳು. ತಾಜಾ ಸೊಪ್ಪು ತರಕಾರಿಗಳನ್ನು ಕೊಯ್ದು ಪಲ್ಯ, ಸೂಪುಗಳನ್ನು  ಮಾಡಿ ತರುತ್ತಿದ್ದವಳನ್ನು ನೋಡಿ ಮೇಡಮ್ಮಿನ ಕಣ್ಣುಗಳು ತುಂಬಿ ಬರುತ್ತಿದ್ದವು. ಇಡೀ ದಿನ ಫೋನಿನಲ್ಲಿ ಹರಟೆ ಹೊಡೆಯುತ್ತಿದ್ದ ಗೆಳತಿಯರು ನಾಪತ್ತೆ, ವಾಟ್ಸ್ಯಾಪ್ಪ್ ಗ್ರೂಪುಗಳಲ್ಲಿ ಗೆಟ್ ವೆಲ್ ಸೂನ್ ಎಂದು ಅಸಂಖ್ಯ ಹಾರ್ಟ್ ಇಮೋಜಿಗಳನ್ನು ಕಳಿಸುತ್ತ  ಶುಭ ಹಾರೈಸಿದ ಮೇಡಮ್ಮುಗಳ್ಯಾರೂ ಎರಡು ಕಿಲೋಮೀಟರು ಮಾತ್ರ ದೂರವಿದ್ದ ಆಸ್ಪತ್ರೆಯತ್ತ ತಪ್ಪಿಯೂ ಪಾದಬೆಳೆಸಲಿಲ್ಲ. 

‍ಲೇಖಕರು avadhi

May 15, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: