ತಾಯೆ ಮಹಾತಾಯೇ..
-ಆರ್ ಎನ್ ದರ್ಗಾದವರ
ತಂಗಳು ಅನ್ನ ತಿನ್ನುವ ಮುನ್ನ
ತಿಂಗಳ ಬೆಳದಿಂಗಳಿಗೆ ಅದ್ಯಾರೋ
ಬೆಂಕಿ ಇಟ್ಟರು
ಈಗ ಜಗವೆಲ್ಲ ಮದ್ದುಗುಂಡುಗಳ
ಇಷ್ಟೇ ಇಷ್ಟು ತುತ್ತು ಮಾಡಿ ನುಂಗುತ್ತಿದೆ
ಬೆಂಕಿ ಇಟ್ಟವರ ಕೈಗಳು ಬೆಚ್ಚಗಾದವು
ಬೆಂಕಿ ಮಹಾಬೆಂಕಿ
ಒಡಲು ಉರಿದು ಹೋಗುವ
ಚಂಡಮಾರುತ ಬೆಂಕಿ
ಜಗವೆಲ್ಲ ಅರೆಗಣ್ಣ ಅಮಲು ತೊರೆಯುವ ಹೊತ್ತಿಗೆ
ಮನೆ ಅಂಗಳವೆಲ್ಲ ಈಗ ಬೂದಿ
ಬರೀ ಬೂದಿ ಅಲ್ಲಿ ಯಾರದೋ ತಲೆ,ಕೈ ಕಾಲು
ಇನ್ಯಾರದೋ ಹಾಲು ತುಂಬಿದ ಮೊಲೆಗಳೀಗ
ಹೆಪ್ಪುಗಟ್ಟಿದ ರಕ್ತ ಬಟ್ಟಿಲು
ಸ್ವಲ್ಪವೇ ದೂರದಲ್ಲಿ ಹಸಿ ಹಾಲು ಆಸೆ –
ಕಂಗಳ ಬಿರುಕು ಬಿಟ್ಟ ಒಣ ತುಟಿಗಳ ಕೆಂಡ
ತಾಯೆ ಮಹಾಮಾಯೆ
ಈ ಲೋಕವೇ ಈಗ ಕೆಂಡ ತುಳಿದು
ಜೋಗುಳ ಹಾಡುತ್ತಿದೆ
ನಿದ್ದೆ ಕಿತ್ತು ಸುಡುವ ಚಂದ್ರನ ಕಡೆ
ಕೈ ಬೆರಳು ತೋರುತ್ತಿದೆ
ಬತ್ತಿದ ಎದೆಗಳ ಅಂತರಂಗದಲ್ಲಿ
ಪ್ರೀತಿ ಕಾರ್ಮೋಡ ಸೃಷ್ಟಿಸಿ
ಭಯವೆಲ್ಲ ಬೆತ್ತಲೆಯಾಗುವಂತೆ
ಜಡ ಮಳೆಯ ಸುರಿಸು
ಸಾಕು ತಾಯೇ
ಈ ಲೋಕವನ್ನು ತಣ್ಣಗಾಗಿಸು
ನಿನ್ನ ಸೆರಗು ತಗೆದು ಅಳುವ ಜಗಕ್ಕೆ ಹಾಲನಿಕ್ಕು
ಅಂಗಳದಲ್ಲಿದ್ದ ಬಿಳಿ ಗುಲಾಬಿಗೆ ಕಣ್ಣೀರ ಕಾಪಿಟ್ಟು
ನೀರು ಗೊಬ್ಬರ ನೀಡು
ಮುಟ್ಟುವ ಮಣ್ಣೆಲ್ಲ ಅನ್ನವಾಗಲಿ
ತಬ್ಬುವ ಎದೆಗಳಲ್ಲೇ ಹಾಲು ಹೊನ್ನು ಹರಿಯಲಿ






0 Comments