ಕೃಪೆ : ಕವನ ಸ೦ಗ್ರಹ

ಮನೆಯಿಂದ ಮನೆಗೆ
– ಕೆ.ಎಸ್. ನರಸಿ೦ಹ ಸ್ವಾಮಿ
ವರುಷ ತುಂಬಿದರೆ ಹೊರಮನೆಯಿಂದ ಹೊರಮನೆಗೆ
ವರ್ಗ. ವರ್ಗವೆಂದರೆ ಮತ್ತೆ
ಗಂಟು ಮೂಟೆಯ ಬಿಗಿತ, ಇನ್ನಷ್ಟು ಆಯಾಸ.
ತಿರುಪಿರದ ಲಾಂದ್ರಗಳು, ತಳವಿರದ ಗೂಡೆಗಳು,
ಜರಡಿ, ತೊಟ್ಟಿಲು, ಒನಕೆ – ಇವುಗಳದೆ ಮೆರವಣಿಗೆ!
ಸರಕು ಸುಮ್ಮನೆ ಭಾರ, ಎಸೆಯಬಾರದೆ ಹೇಳು.
’ಎಸೆದರಾಯಿತೆ, ಹೇಳಿ ? – ಮೊದಲು ಹೊಸತನು ತನ್ನಿ’
ಸ್ಥಳವಿಲ್ಲ ಬಂಡಿಯಲಿ, ’ಹೊತ್ತು ಸಾಗಿಸಬೇಕು’ ;
ಹೊತ್ತು ಸಾಗಿಸಬೇಕು ? ಅದಕೆ ಕತ್ತಲೆ ಬೇಕು !
’ಕತ್ತಲೆಗೆ ಕಾಯೋಣ!’
(ಏಳು ಮಕ್ಕಳ ತಾಯಿ, ಸ್ನೇಹಮಯಿ, ನಕ್ಕಳು)
ನಗೆ ಕೊಲ್ಲುವಂತೆ ಅಗೆ ಕೊಲ್ಲಲಾರದು; ಏಳು,
ಹೊಸಮನೆಗೆ ಹೋಗೋಣ ಮೊದಲು ; ಸಂಜೆಗೆ ಬಂದು
ಸಾಗಿಸುವ ಕೆಲಸ ನನಗಿರಲಿ.
ಕಂಬನಿಗೊಳವ
ಕೆಂಗರಿಯ ಮೀನು ಕಲಕಿತ್ತು. ಗೆದ್ದಳು ಹೆಣ್ಣು !
ನಗಬಹುದು ಹೀಗೆ ಒಂದೊಂದು ಸಲ ಬದುಕಿನಲಿ.
ಒಂದೊಂದು ಮನೆಯ ಬಿಡಲೊಂದೊಂದು ಕಾರಣ.
ಈ ಸಲದ ಅನುಭವ : ಮನೆವಂತ ಒಳ್ಳೆಯವ ;
ಅವನ ಹೆಂಡತಿ, ಮಗಳು ? – ಒಳ್ಳೆಯವರಿರಬೇಕು !
“ಮನೆಯ ಬಿಡಿ” ಎಂದವರು ನಮಗೆ ಹೇಳಿರಲಿಲ್ಲ,
ಅವರು ಮಾಡಿದ ಕೆಲಸ ಬೇರೆ!
ಓದು ಹತ್ತದ ಮಗಳ ದನಿಯಾದರು ಕುದುರಿ
ಮದುವೆ ಹತ್ತಿರವಾಗಲೆನುವ ಹಂಬಲಿನಿಂದ
ಸಂಗೀತ ಪಾಠವನು ಗೋತ್ತುಮಾಡಿದರಷ್ಟೆ !
ಆ ಎಂಟು ತಿಂಗಳೂ ಮಳೆಗಾಲ, ಕಪ್ಪೆಗಳು.
ಮೊದಲು, ಕೊನೆ – ಆ ಹುಡುಗಿ ಕಲಿತ ಒಂದೇ ಚರಣ :-
“ಕೆರೆಯ ನೀರನು ಕೆರೆಗೆ ಚೆಲ್ಲಿ,”
ಎಲ್ಲ ಮಾಡುವ ಕೆಲಸವಿಷ್ಟೆ ಇಲ್ಲಿ !
ಕೆರೆಯ ನೀನು ಕೆರೆಗೆ ಚೆಲ್ಲಿ
ಬೆಳಗಿನಲ್ಲಿ, ಮಧ್ಯಾಹ್ನದಲ್ಲಿ, ಸಂಜೆಯಲ್ಲಿ
ನೀರ ತುಂಬಲು ಇನ್ನು ಸ್ಥಳವಿರದೆ ಮನೆಯಲ್ಲಿ
ಬಂದು ನಿಂತರೆ ನಾವು ನಡುಬೀದಿಯಲ್ಲಿ
’ನೀರ ಚೆಲ್ಲಿದ ಮಂದಿ ನೀವೆಂದು’ ಮನೆವಂತ
ಒಟ್ಟು ತೆರಿಗೆಯ ಬಿಗಿದ ನನ್ನ ತಲೆಗೆ !
ನೀರಳೆಯುವ ಯಂತ್ರ ನಿಜವನ್ನೆ ನುಡಿದಿತ್ತು ;
ಇನ್ನೊಂದು ಮನೆಯ ಕದ ನಮಗಾಗಿ ತೆರೆದಿತ್ತು.
ಇದ್ದವರಿಗೊಂದು ಮನೆ, ಇಲ್ಲದವರಿಗೆ ನೂರು.
ಇಲ್ಲಿ ಹಿಂದಿದ್ದವರಿಗೆಷ್ಟು ಮಕ್ಕಳೊ ಕಾಣೆ!
ಎಲ್ಲೆಲ್ಲು ನೆಲವ ಕೆತ್ತಿವೆ ;
ನಲ್ಲಿಗಳ ಮುರಿದಿವೆ ;
ದೀಪಗಳ ಕೆಡಿಸಿವೆ ;
ಹೂಗಿಡಗಳ ಕಿತ್ತೆಸೆದಿವೆ ;
ಎಲ್ಲ ಬಾಗಿಲಮೇಲೆ ಸೊನ್ನೆಗಳ ಬರೆದಿವೆ.
ನಾಳೆ ಈ ಹುಡುಗರಿನ್ನೇನು !
ಇಲ್ಲಿ ಹೊಸತನವೆಲ್ಲಿ? ಯಾರೋ ಇದ್ದ ಮನೆಗೆ
ನಾವು ಬಂದಿದ್ದೇವೆ. ನಾವು ಹೊಸಬರೆ ? ಅಲ್ಲ.
ಕಂದು ಗೋಡೆಯ ಮೇಲೆ ಇಲ್ಲಣದ ತೆರೆಬಿದ್ದು
ಕಾದಿರುವ ನಾಟಕದ ಹೆಸರು ’ಹೊಸತು’.
ಈ ಮನೆಗೆ ಬಂದೆವೀ ದಿನ –
ಗಾಜೊಡೆದ ಪಠಗಳ ರಿಪೇರಿಗವಸರವಿಲ್ಲ ;
ಪಾತ್ರೆಗಳಿಗಾಗಬೇಕಾದರೆ ಕಲಾಯ
ತಳ್ಳಬಹುದಿನ್ನೊಂದು ವಾರ.
ಹೊಸಚಾಪೆ, ಕಾಲೊರಸಿ – ನಾಳೆ ತರಬಹುದಲ್ಲ ?
“ಈಗೇನು ಮಾಡೋಣ ? ” ಮತ್ತೆ ಕೇಳುವೆಯಲ್ಲ !
ಹೊಕ್ಕ ಮನೆಯೆಲ್ಲ ಹೊಸಮನೆಯೆಂದೆ ಕರೆಯೋಣ ;
ಹಳೆಯ ಬಾಗಿಲಿಗೆ ಹೊಸತೋರಣ ಕಟ್ಟೋಣ ;
ಶಾಲೆಮಕ್ಕಳ ಹಾಗೆ ಹೊಸತನವ ಕಲಿಯುತ್ತ
ಇನ್ನೊಂದು ವರುಷ ಕಳೆಯೋಣ !
ಒಂದೊಂದು ಮನೆಗೆ ಒಂದೊಂದು ವರುಷದ ಸರದಿ ;
ಅಷ್ಟು ಹೊಸತೇನಲ್ಲ ನಾಳೆಯೋದುವ ವರದಿ.
ಸ್ಮೃತಿಪಥದ ಬೆಳ್ಳಿದಾರದ ಸುರುಳಿ ಬಿಚ್ಚುತಿದೆ ;
ಬೆಲೆಯಿರದ ಸರಕ ಸಾಗಿಸಿದೆ ಬಾಗಿದೆ ಬೆನ್ನು ;
ಕೆರೆಯ ನೀರನು ಕೆರೆಗೆ ಚೆಲ್ಲಿ ಬಿಳಿಚಿದೆ ಕಣ್ಣು ;
ಮಗು ಬರೆದ ಸೊನ್ನೆ ; ಮನೆವಂತರ್ಆಡಿದ ಮಾತು ;
ನಕ್ಕನಗೆ ; ಕಣ್ಣೀರು –
ಒಂದಲ್ಲ, ಎರಡಲ್ಲ, ನಮ್ಮ ಪಾಲಿನ ಪುಣ್ಯ !
ಬಂಡಿಯಲಿ ಸ್ಥಳವಿಲ್ಲ, ಹೊತ್ತು ಸಾಗಿಸಬೇಕು ;
ಅದಕೆ ಕತ್ತಲೆ ಬೇಕು.
ಕತ್ತಲೆಗೆ ಕಾಯೋಣ !
ಮನೆಯಿಂದ ಮನೆಗೆ, ಹೊರಮನೆಯಿಂದ ಹೊರಮನೆಗೆ
ಮೊದಲ ಮನೆಯಿಂದ
ಆದರವಿರದ, ಕದವಿರದ, ಹೆಸರಿರದ ಇನ್ನೊಂದು ಮನೆಗೆ
ಹೊಸತು ಹಳೆಯದು ಎಲ್ಲ ಯಾತ್ರೆಗೆ ಹೊರಟಿದ್ದೇವೆ.
ಅಲ್ಲಿ ತಡೆಯುವರಿಲ್ಲ ;
ಒಳಗೆ ಕರೆಯುವರಿಲ್ಲ ;
ಇನ್ನೊಂದು ಮನೆಯಿಲ್ಲ ;
ಹೊರಮನೆಯ ನೆರಳಿಲ್ಲ ;
ಹೊದವರು ಹಿಂದಿರುಗಿ ಬರಲು ಹಾದಿಗಳಿಲ್ಲ ;
ಅದೇ ಕಡೆಯ ಮನೆ !
ಬಾಂದಳದ ತಾರೆಗಳ ಓರೆಗಣ್ಣಿನ ಕೆಳಗೆ ಆಗಾಗ ಬೀಸುವುದು ಬಯಲ ಗಾಳಿ.]]>
Like this:
Like Loading...
Related
0 Comments