ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮನೆಗೆ ಬಂದ ಮೇಲೆ ನೋಡಿದರೆ..

SharadaMurthy (1)

ಶಾರದಾ ಮೂರ್ತಿ

ಚಪ್ಪಲಿ  ಬಗ್ಗೆ  ಎಲ್ಲರದ್ದೂ ಒಂದೊಂದು  ಕತೆ  ಇರುತ್ತದೆ ಎಂದು ನನ್ನ ಅನಿಸಿಕೆ. ಮೊದಮೊದಲು ಐಷಾರಾಮಿ ವಸ್ತುವಾಗಿದ್ದ ಚಪ್ಪಲಿ ಈಗ ಅನಿವಾರ್ಯವಾಗಿದೆ.  40 – 45  ವರ್ಷದ ಕೆಳಗೆ ಕಾಲು ಚಪ್ಪಲಿ ಕಾಣುವುದು ಯಾವ ಕಾಲಕ್ಕೋ ಎನ್ನುವಂತಿದ್ದು, ಈಗ ಹುಟ್ಟಿದ ಮಕ್ಕಳು ತಮ್ಮ ಕಾಲು ಕಂಡೇ ಇರುವುದಿಲ್ಲ  ಎನ್ನುವಂತೆ ಹುಟ್ಟಿದ ಕೂಡಲೇ ಚಪ್ಪಲಿ ಬಂದಿರುತ್ತದೆ.

ಚಪ್ಪಲಿ ಎಂದ ಕೂಡಲೇ ನನಗೊಂದು ಹಾಸ್ಯದ ಸಂಗತಿ ನೆನಪಾಗಿ ಈಗಲೂ ನಗು ಉಕ್ಕಿ ಬರುತ್ತದೆ. ಹಲವು ವರ್ಷಗಳ ಹಿಂದೆ ನನ್ನ ತಮ್ಮ ಅವನ ಸ್ನೇಹಿತ ಬೆಂಗಳೂರಿನ ನಮ್ಮನೆಗೆ ಬಂದಿದ್ದರು.

chappal safetyಅವರಿಗೆ ಊರು ತೋರಿಸಲು ನಾನು ಮಾರ್ಗದರ್ಶಿ. ಬೆಂಗಳೂರಿಗೆ ಬಂದು ಅವೆನ್ಯೂ ರಸ್ತೆ, ಚಿಕ್ಕಪೇಟೆ ನೋಡದಿದ್ದರೆ ಹೇಗೆ ಎಂದು ಅಲ್ಲಿಗೂ ಸವಾರಿ ಹೊರಟಿತು. ಚಿಕ್ಕಪೇಟೆಯ ಗಲ್ಲಿ – ಗಲ್ಲಿಗಳಲ್ಲಿ ಅಂಗಡಿಗಳು ಇರುವುದು ಗೊತ್ತಲ್ಲ. ಪರಿಚಯದ ಅಂಗಡಿಯಲ್ಲಿ ಶರ್ಟ್ – ಪ್ಯಾಂಟ್ ಬಟ್ಟೆ ವ್ಯಾಪಾರ ಮುಗಿಸಿ ಮನೆಗೆ ಬಂದೆವು.

ಮನೆಗೆ ಬಂದ ಮೇಲೆ ನೋಡಿದರೆ, ತಮ್ಮನ ಸ್ನೇಹಿತ ಅಂಗಡಿಯಲ್ಲಿ  ಚಪ್ಪಲಿ ಬಿಚ್ಚಿಟ್ಟು, ನಂತರ ಗೊತ್ತಾಗದೆ ಒಂದು  ಕಾಲಿಗೆ  ತನ್ನದೊಂದು  ಚಪ್ಪಲಿ, ಇನ್ನೊಂದು  ಕಾಲಿಗೆ ಅಂಗಡಿಯವನ ಚಪ್ಪಲಿ ಹಾಕಿಕೊಂಡು ಬಂದಿದ್ದಾನೆ. ನನಗೆ ಒಂದೆಡೆ ನಗು, ಮತ್ತೊಂದೆಡೆ ಪರಿಚಯದ ಅಂಗಡಿ ಅವರಿಗೆ ಗೊತ್ತಾಗಿದೆಯೋ ಎನ್ನುವ ದುಗುಡ, ಅಳುಕು. ಮನೆಯಲ್ಲಿ  ನಗುವಿನ ಹೊಳೆ.

ಎರಡು ದಿನ ಬಿಟ್ಟು ನಾನು ಒಬ್ಬಳೇ ಚಿಕ್ಕಪೇಟೆಯ ಅದೇ ಅಂಗಡಿಗೆ ಹೋದಾಗ ಒಳಗೇ ಕಸಿವಿಸಿ, ‘ಕಳ್ಳನ  ಮನಸ್ಸು ಹುಳ್ಳಗೆ’ ಎನ್ನೋ ಹಾಗೆ. ಆದರೆ ಅಂಗಡಿಯವ ಬನ್ನೀಮ್ಮಾ, ಬನ್ನಿ ಚಪ್ಪಲಿ ಮಾತ್ರಾ ಸೈಡ್ ನಲ್ಲಿ ಬಿಡಿ. ಮೊನ್ನೆ ನನ್ನ ಒಂದು ಚಪ್ಪಲಿನೇ ಇಲ್ಲಾ.. ಯಾರೋ ಹಾಕಿಕೊಂಡು ಹೋಗಿದಾರೆ. ನಿಮ್ಮದೂ  ಹಾಗೆ ಹೋದರೆ ಕಷ್ಟ, ಎಂತೆಂತಾವ್ರಿರ್ತಾರೆ ನೋಡಿ ಅಂದ.

ಸದ್ಯ ನಾವೇ ಅಂತ ಗೊತ್ತಾಗ್ಲಿಲ್ಲ ಅಂದುಕೊಂಡು, ಬರುತ್ತಿದ್ದ ನಗು ತಡೆದುಕೊಂಡು ವ್ಯಾಪಾರ ಮುಗಿಸಿ ಮನೆಗೆ ಬಂದರೆ, ಊರಿಗೆ ವಾಪಸ್ ಹೋಗಿದ್ದ ತಮ್ಮನ ಸ್ನೇಹಿತ ಬಿಟ್ಟುಹೋದ ಅವನದೊಂದು ಅಂಗಡಿಯವನದ್ದೊಂದು ಚಪ್ಪಲಿ ನೋಡಿ ನಗು  ತಡೆಯಲಾಗಲಿಲ್ಲ.

‍ಲೇಖಕರು Admin

30 June, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading