ಮನುಷ್ಯ ಕೇಂದ್ರಿತ ಸಾಹಿತ್ಯ ರಚನೆಯಾಗಬೇಕು: ಪ್ರೊ. ಎಚ್.ಟಿ. ಪೋತೆ

ಸಂದರ್ಶನ: ಕಿರಣ ವಲ್ಲೇಪುರೆ

ವಿಜಯಪುರದಲ್ಲಿ ೨೯, ೩೦ ಜುಲೈ ೨೦೨೩ರಂದು ನಿಗದಿಯಾಗಿರುವ ೧೦ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಪ್ರೊ. ಎಚ್.ಟಿ. ಪೋತೆ ಅವರ ಸಂದರ್ಶನ

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಂಜಗಿ ಗ್ರಾಮದವರಾದ ಪ್ರೊ. ಎಚ್.ಟಿ. ಪೋತೆ ಅವರು ನಾಡಿನ ಸಂವೇದನಾಶೀಲ ಕಥೆಗಾರ, ಕಾದಂಬರಿಕಾರ, ವಿಮರ್ಶಕ, ಸಂಶೋಧಕ, ಅನುವಾದಕ ಹಾಗೂ ಜಾನಪದ ವಿದ್ವಾಂಸರಾಗಿದ್ದಾರೆ. ಇವರು ಗುಲಬರ್ಗಾ ವಿಶ್ವವಿದ್ಯಾಲಯದಿಂದ ಎಂ.ಎ., ಎಂ.ಫಿಲ್., ಪಿಎಚ್.ಡಿ. ಪದವಿ ಮತ್ತು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಡಿ.ಲಿಟ್. ಪದವಿ ಪಡೆದಿದ್ದಾರೆ. ಪ್ರಸ್ತುತ ಇವರು ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ, ಪ್ರಸಾರಾಂಗ ಮತ್ತು ಪಾಲಿ ಅಧ್ಯಯನ ಸಂಸ್ಥೆಯ ನಿರ್ದೆಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ʻಚಮ್ಮಾವುಗೆʼ, ʻಬೆತ್ತಲಾದ ಚಂದ್ರʼ, ʻಕರುಳರಿಯದ ಹೊತ್ತುʼ, ʻಮಾದನ ಕರೆಂಟ್ ಕತಂತ್ರʼ, ಮತ್ತು ʻಅನೇಕಲವ್ಯʼ ಹಾಗೂ ʻದೇವರ ಧರ್ಮʼ ಎಂಬ ಆರು ಕಥಾಸಂಕಲನಗಳನ್ನು ಮತ್ತು ʻರಮಾಬಾಯಿʼ, ʻಬಯಲೆಂಬೊ ಬಯಲುʼ, ʻಮಹಾಬಿಂದುʼ ಎಂಬ ಕಾದಂಬರಿಗಳನ್ನು ರಚಿಸಿದ್ದಾರೆ. ಅಲ್ಲದೇ ಜಾನಪದ ಸಿಂಗಾರ, ಜಾನಪದ ಆಯಾಮಗಳು, ಸಮಾಜೋ ಜಾನಪದ, ಜನಪದ ಕಲೆ ಸಂಸ್ಕೃತಿ, ಜನಪದ ಕಲೆ ಸಮಸ್ಯೆ ಸವಾಲುಗಳು, ದಲಿತ ಜಾನಪದ, ಕರ್ನಾಟಕದ ದಲಿತ ಜಾನಪದ ವಿದ್ವಾಂಸರು ಮುಂತಾದ ಜಾನಪದಕ್ಕೆ ಸಂಬಂಧಿಸಿದ ರಚನೆಗಳನ್ನು ಮಾಡಿದ್ದಾರೆ. ಕೃತಿಗಳನ್ನು ಅಂಬೇಡ್ಕರ್: ದಲಿತ ಚಳವಳಿ, ಬುದ್ಧನೆಡೆಗೆ, ದಲಿತಾಂತರಂಗ, ಜೀವಪರ ಚಿಂತನೆ, ಶರಣ ಸಂಸ್ಕೃತಿ ಸಂವಾದ, ಅಂಬೇಡ್ಕರ್ ಸಂವೇದನೆ, ಅಂಬೇಡ್ಕರ್ ವಾಚಿಕೆ, ಅಂಬೇಡ್ಕರ್ ಕಥನ, ಅಂಬೇಡ್ಕರ್ ಭಾರತ, ಅಂಬೇಡ್ಕರ್: ಪುಸ್ತಕ ಪ್ರೀತಿ ಅಂಬೇಡ್ಕರ್ ಮತ್ತು… ಎಲ್ಲರ ಅಂಬೇಡ್ಕರ್ ಮುಂತಾದ ದಲಿತ ಸಾಹಿತ್ಯ ಮತ್ತು ವೈಚಾರಿಕ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಇವರಿಗೆ ಕರ್ನಾಟಕ ಜಾನಪದ ಅಕಾಡೆಮಿ ರಾಜ್ಯಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ರಾಜ್ಯಪ್ರಶಸ್ತಿ, ಗೊರುಚ ಜಾನಪದ ಪ್ರಶಸ್ತಿ ಮತ್ತು ಜಯತೀರ್ಥ ರಾಜಪುರೋಹಿತ ಪ್ರಶಸ್ತಿಗಳು ಲಭಿಸಿವೆ. ಇವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ವಿಜಯಪುರದಲ್ಲಿ ೨೯, ೩೦ ಜುಲೈ ೨೦೨೩ರಂದು ನಿಗದಿಯಾಗಿರುವ ೧೦ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಇಲ್ಲಿಯವರೆಗಿನ ಅವರ ಸಾಹಿತ್ಯಿಕ ಸೇವೆ ಹಾಗೂ ಬದುಕಿನ ಪಯಣ ಕುರಿತ ಸಂವಾದದ ಮಾತುಕತೆಗಳು ಈ ಕೆಳಗಿನಂತಿವೆ.

ನೀವು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಂಜಗಿ ಗ್ರಾಮದ ಒಂದು ಬಡ ಕುಟುಂಬದಿಂದ ಬಂದು ಇವತ್ತು ಅಖಿಲ ಭಾರತ ಮಟ್ಟದ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿದ್ದಿರಿ ಏನನಿಸುತ್ತದೆ? ಅದರಲ್ಲೂ ನಿಮ್ಮ ತವರು ಜಿಲ್ಲೆಯಲ್ಲಿ ನಡೆಯುತ್ತಿರುವ ಸಮ್ಮೇಳನವಿದು. ಇಲ್ಲಿಯವರೆಗಿನ ನಿಮ್ಮ ಬದುಕಿನ ಪಯಣ ಹೇಗಿತ್ತು?

ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷನಾದುದು ಹೆಮ್ಮೆಯ ಸಂಗತಿ. ಬಯಸದೇ ಬಂದ ಗೌರವವೆಂದು ನಾನು ನಂಬಿದ್ದೇನೆ. ಹೌದು ನಮ್ಮದು ಬಡಕುಟುಂಬ. ಆದರೆ ಶಿಕ್ಷಣದ ಹಾದಿಯಲ್ಲಿ ನಮ್ಮದು ಶ್ರೀಮಂತ ಕುಟುಂಬ. ತಂದೆ ಸ್ವಾತಂತ್ರ್ಯಪೂರ್ವದಲ್ಲಿ ೬ನೇ ತರಗತಿವರೆಗೆ ಓದಿದ್ದರು. ಅಕ್ಷರದ ಹಂಬಲದಿಂದಾಗಿ ನಮಗೆಲ್ಲ ಶಿಕ್ಷಣ ಕೊಡಿಸಿದರು. ಶಿಕ್ಷಣದಿಂದ ಏನೆಲ್ಲ ಸಾಧಿಸಬಹುದು ಎನ್ನುವುದಕ್ಕೆ ನಮ್ಮ ಕುಟುಂಬವೇ ಉದಾಹರಣೆ ಎಂದರೆ ತಪ್ಪಾಗಲಿಕ್ಕಿಲ್ಲ. ನಾನು ಹುಟ್ಟಿ ಬೆಳೆದ ಜಿಲ್ಲೆ ವಿಜಯಪುರದಲ್ಲಿ ನನಗೆ ಗೌರವ ಸಿಗುತ್ತಿರುವುದು ನನ್ನ ಸಮುದಾಯಕ್ಕೆ ಸಿಕ್ಕ ಗೌರವವೆಂದೇ ನಾನು ಅಂದುಕೊಂಡಿದ್ದೆನೆ. ಅಕ್ಷರದೊಂದಿಗಿನ ಒಡನಾಟ ನಮಗಾಗುವ ಅವಮಾನಗಳನ್ನು ತಡೆದಿದೆ. ಆದಾಗ್ಯೂ ಜಾತಿ ಆಧಾರಿತ ಸಾಮಾಜಿಕ ಜೀವನದಲ್ಲಿ ದಲಿತ ಮಾಡಬೇಕಾಗಿರುವುದು ಸಂಘರ್ಷ. ಸಂಘರ್ಷವೇ ನನ್ನನ್ನು ಇಲ್ಲಿಯವರೆಗೆ ತಂದು ನಿಲ್ಲಿಸಿದೆ.

ನೀವು ಸಂಶೋಧನ ಹಂತದವರೆಗಿನ ಶಿಕ್ಷಣ ಪಡೆದು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ, ಮೌಲ್ಯಮಾಪನ ಕುಲಸಚಿವರಾಗಿ ಕೆಲಸ ಮಾಡಿದ್ದಿರಿ. ಇಂದು ಕನ್ನಡ ಅಧ್ಯಯನ ಸಂಸ್ಥೆ ಮತ್ತು ಪ್ರಸಾರಾಂಗದ ನಿರ್ದೆಶಕರಾಗಿ ಕಾರ್ಯನಿರ್ವಹಿಸುತ್ತಿದ್ದಿರಿ. ಯಾವ ಅರಿವು ನಿಮ್ಮನ್ನು ಇಷ್ಟು ಎತ್ತರಕ್ಕೆ ಕರೆದುಕೊಂಡು ಬಂತು?

ಶಿಕ್ಷಣದಿಂದಾಗಿ ಇಷ್ಟೆಲ್ಲ ಹುದ್ದೆಗಳು ದೊರಕಿವೆ. ಅಧ್ಯಯನ, ಅಧ್ಯಾಪನ, ಸಂಶೋಧನೆ ಮಾಡುವ ಹಂತ ತಲುಪಿದ್ದು ಮೀಸಲಾತಿ, ಸಂವಿಧಾನದಿಂದ ಎಂಬುದು ಹೆಮ್ಮೆ ಎನಿಸುತ್ತದೆ. ಒಂದು ಮಾತಂತು ನಿಜ ಹುದ್ದೆಗಳು ಸಿಕ್ಕಾಗ ಸುಮ್ಮನೇ ಕೂಡುವುದಲ್ಲ; ಹುದ್ದೆಗಳಿಗೆ ತಕ್ಕ ಕೆಲಸ ಮಾಡಿದಾಗ ಮನುಷ್ಯ ಎತ್ತರಕ್ಕೆ ಬೆಳೆಯಬಲ್ಲ ಎಂದು ನಂಬಿದ್ದೇನೆ.

ನಿಮ್ಮ ಆರಂಭಿಕ ಓದಿನ ಸಂದರ್ಭದಲ್ಲಿ ನಿಮಗೆ ಇಷ್ಟವಾದ ಮತ್ತು ನಿಮ್ಮನ್ನು ಪ್ರಭಾವಿಸಿದ ಕನ್ನಡ ಲೇಖಕ, ಕವಿ ಯಾರು? ಮತ್ತು ಯಾವ ಕೃತಿ ನಿಮ್ಮನ್ನು ಹೆಚ್ಚು ಕಾಡಿದೆ? ಏಕೆ?

ನನ್ನ ಆರಂಭಿಕ ಓದಿನ ಸಂದರ್ಭದಲ್ಲಿ ನನ್ನನ್ನು ಹೆಚ್ಚು ಪ್ರಭಾವಿಸಿದ ಲೇಖಕರಲ್ಲಿ ಕಕ್ಕಯ್ಯ ಪೋಳ. ಚೆನ್ನಣ್ಣ ವಾಲೀಕಾರ ಪ್ರಮುಖರು. ʻಬುದ್ಧ ಮತ್ತು ಆತನ ಧಮ್ಮʼ ಕೃತಿ ನನ್ನ ಮೇಲೆ ಹೆಚ್ಚು ಪ್ರಭಾವ ಬೀರಿದೆ. ಇದು ಬಾಬಾಸಾಹೇಬರು ರಚಿಸಿದ ಎರಡನೆಯ ಸಂವಿಧಾನವೆಂದೇ ಹೇಳಬಹುದು.

ನೀವು ಪಿಎಚ್.ಡಿ ಅವಧಿಯಲ್ಲಿ ʻಹೈದ್ರಾಬಾದ ಕರ್ನಾಟಕದ ಜನಪದ ಪ್ರದರ್ಶನ ಕಲೆಗಳುʼ ಎಂಬ ವಿಷಯ ಕುರಿತು ಸಂಶೋಧನಾ ಅಧ್ಯಯನ ಮಾಡಿದ್ದಿರಿ. ಈ ಅಧ್ಯಯನದಿಂದ ನಿಮಗೆ ಸಿಕ್ಕ ತಿಳುವಳಿಕೆ ಮುಂದೆ ನಿಮಗೆ ಅಧ್ಯಯನ, ಅಧ್ಯಾಪನ, ಬರವಣಿಗೆಗೆ ಹೇಗೆ ನೆರವಾಯಿತು?

ಜಾನಪದ ಕ್ಷೇತ್ರ ಅದು ದುಡಿಯುವ ವರ್ಗದ ಜ್ಞಾನ ಕ್ಷಿತಿಜ. ಅದು ಸಮಾಜವಿಜ್ಞಾನವೂ ಹೌದು, ದಲಿತ ಸಾಹಿತ್ಯವೂ ಹೌದು. ನನ್ನ ಅಧ್ಯಯನದ ಸಂದರ್ಭದಲ್ಲಿ ಅನಿಸಿದ್ದೇನೆಂದರೆ, ನಮ್ಮ ಪರಂಪರೆಯ ಪ್ರತೀಕವಾಗಿರುವ ಜನಪದ ಕಲೆಗಳಿಗೆ ಅಸ್ಪೃಶ್ಯತೆಯನ್ನು ಅಂಟಿಸಿದವರು ನಮ್ಮವರೇ. ಅದನ್ನೀಗ ಅವರು ಇದು ನಮ್ಮ ಸಂಸ್ಕೃತಿ, ಸಂಸ್ಕಾರವೆಂದೂ ಹೇಳುತ್ತಾರೆ. ಕಲೆ ಪ್ರೀತಿಸುವ ಮಡಿವಂತರು ಕಲಾವಿದನನ್ನು ಗೌರವಿಸುವುದಿಲ್ಲ. ಇಂಥ ಮಡಿ ಮೈಲಿಗೆಯಿಂದಲೇ ಕಲೆಗೆ ಬೆಲೆ ಇಲ್ಲದಂತಾಗಿದೆ. ಇದು ಶ್ರಮಿಕ ವರ್ಗವನ್ನು ವ್ಯವಸ್ಥೆ ಗೌರವಿಸುವ ಪರಿಯಾಗಿದೆ.

ನಿಮ್ಮ ಸಾಹಿತ್ಯ ಬರವಣಿಗೆಯ ಹೊತ್ತು ಮತ್ತು ಸ್ಥಳ ಯಾವುದು? ಯಾವ ಸಮಯದಲ್ಲಿ ನಿಮ್ಮ ಬರವಣಿಗೆ ಪರಿಣಾಮಕಾರಿಯಾಗಿ ಮೂಡಿಬರುತ್ತದೆ? ಯಾವ ಸ್ಥಳ ನಿಮ್ಮ ಬರವಣಿಗೆಗೆ ಹೆಚ್ಚು ಪೋಷಕವಾಗಿರುತ್ತದೆ?

ನಾನು ನಿತ್ಯ ಯೋಚಿಸುತ್ತೇನೆ. ಚಿಂತಿಸುತ್ತೇನೆ. ಅದಕ್ಕೆ ಸ್ಥಳ ಸಮಯವೆಂಬುದಿಲ್ಲ. ನನಗೆ ಸಮಾಜದಲ್ಲಾಗುವ ಕೆಟ್ಟ ಘಟನೆಗಳಿಂದ, ವಯಕ್ತಿಕ ಇಲ್ಲಾ ಸಾಮೂಹಿಕವಾಗಿ ದುರ್ಬಲರಿಗಾಗುವ ಅಪಮಾನಗಳಿಂದ ಬೇಸರ ಆದಾಗ ಪರಿಹಾರದ ಮಾತುಗಳು ಆಡುವ ಬದಲು ಬರೆಯಲು ಅಣಿಯಾಗುತ್ತೇನೆ. ಇಂಥ ಸಂದರ್ಭದಲ್ಲಿ ಬರಹ ಹೆಚ್ಚು ಫಲಪ್ರದವಾಗುತ್ತದೆ.

ನೀವು ಜನಪದ ಸಾಹಿತ್ಯ, ದಲಿತ ಸಾಹಿತ್ಯ, ವೈಚಾರಿಕ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಮಹತ್ವದ ಕೃತಿಗಳನ್ನು ರಚಿಸಿದ್ದಿರಿ. ಅವುಗಳಲ್ಲಿ ಇನ್ನು ಕೆಲವು ಕೃತಿಗಳಿಗೆ ರಾಜ್ಯಮಟ್ಟದ ಪ್ರಶಸ್ತಿಗಳು ಲಭಿಸಿವೆ. ಕೆಲವೊಂದು ಕೃತಿಗಳು ಅನೇಕ ಮುದ್ರಣಗಳು ಕಂಡಿವೆ. ಒಬ್ಬ ಲೇಖಕನಿಗೆ ತನ್ನ ಬರವಣಿಗೆಗಳು ಮರುಮುದ್ರಣಗೊಳ್ಳುವುದು, ತನ್ನ ಬರವಣಿಗೆಗೆ ಗೌರವ ಸಿಗುವುದು ತುಂಬಾ ಸಂತೋಷದಾಯಕವಾಗಿರುತ್ತದೆ. ನಿಮ್ಮ ಬರವಣಿಗೆಗೆ ಆ ರೀತಿಯ ಗೌರವ ಸಿಕ್ಕಾಗ ನಿಮಗೆನನ್ನಿಸುತ್ತದೆ. ಮತ್ತು ನಿಮ್ಮ ಬರವಣಿಗೆಯ ಆಶಯ ಏನು?

ಹೌದು. ನಾನು ಜಾನಪದ ಸಂಶೋಧನೆ, ವಿಮರ್ಶೆ, ಪ್ರಬಂಧ, ಕಥೆ, ಕಾದಂಬರಿಗಳನ್ನು ಬರೆದಿದ್ದೇನೆ. ನಿಜವಾಗಿ ಹೇಳಬೇಕಾದರೆ ನಾನೊಬ್ಬ ಗಾಂಧಿ ಕ್ಲಾಸಿನಲ್ಲಿ ಪಾಸಾದವನು. ಬರವಣಿಗೆ ಮಾಡಬೇಕೆಂದು ಓದಿದವನಲ್ಲ. ಉನ್ನತ ಶಿಕ್ಷಣಕ್ಕಾಗಿ ವಿಶ್ವವಿದ್ಯಾಲಯದ ತಟ್ಟಿದಾಗ ಚೆನ್ನಣ್ಣನವರಂತಹವರಿಂದ ಪ್ರಭಾವಿತನಾಗಿ ಬರೆದ. ನಾಲ್ಕು ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ದೊರೆತಿವೆ. ಗೊರುಚ ಅವರ ಹೆಸರಿನ ಪ್ರಶಸ್ತಿ, ನಾ. ಶ್ರೀ ರಾಜಪುರೋಹಿತ ಪ್ರಶಸ್ತಿಗಳು ಲಭಿಸಿದೆ. ಅವು ಬರೆಯಲು ಉತ್ತೇಜನ ನೀಡಿವೆ ಎನ್ನುವುದು ಸತ್ಯ. ಬರವಣಿಗೆಯಿಂದ ಸಮಾಜ ಬದಲಾಗುತ್ತದೆ ಎಂದು ಅಂದುಕೊಂಡರೂ ಅದುವೇ ಪೂರ್ಣ ಅಲ್ಲ. ಬರವಣಿಗೆಯಿಂದ ಅರಿವು ಬರಲು ಸಾಧ್ಯವಿದೆ.

ನೀವು ʻಚಮ್ಮಾವುಗೆʼ, ʻಬೆತ್ತಲಾದ ಚಂದ್ರʼ, ʻಕರುಳರಿಯದ ಹೊತ್ತುʼ, ʻಮಾದನ ಕರೆಂಟ್ ಕತಂತ್ರʼ, ಮತ್ತು ʻಅನೇಕಲವ್ಯʼ ಕಥಾಸಂಕಲನಗಳನ್ನು ರಚಿಸಿದ್ದೀರಿ. ಕಥೆಗಳೊಂದಿಗೆ ನಿಮ್ಮ ಪಯಣ ಎಲ್ಲಿಂದ ಶುರುವಾಯಿತು? ಅಲ್ಲದೇ ನೀವು ʻರಮಾಬಾಯಿʼ, ʻಬಯಲೆಂಬೊ ಬಯಲುʼ, ʻಮಹಾಬಿಂದುʼ ಕಾದಂಬರಿಗಳನ್ನು ರಚಿಸಿದ್ದೀರಿ. ಈ ನಿಮ್ಮ ಕಥೆ ಮತ್ತು ಕಾದಂಬರಿಗಳಿಗೆ ಸ್ಪೂರ್ತಿ ಏನು?

ಇಲ್ಲಿಯವರೆಗೆ ನನ್ನ ಆರು ಕಥಾಸಂಕಲನಗಳು ಪ್ರಕಟಗೊಂಡಿವೆ. ಲೇಖನಗಳನ್ನು ಬರೆಯುತ್ತಿದ್ದ ನನಗೆ ನಿಮ್ಮ ಲೇಖನಗಳಲ್ಲಿ ಕಥಾ ಗುಣವಿದೆ ನೀವೇಕೆ ಕಥೆ ಬರೆಯಬಾರದು ಎಂದು ಗೆಳೆಯರು ಒತ್ತಾಯ ಮಾಡಿದರು. ಆಗ ನಾನು ಕಥೆ ಬರೆಯಲು ತೊಡಗಿದೆ. ಅಲ್ಲಿಂದ ಕಥಾ ಪಯಣ ಆರಂಭವಾಯಿತು. ನನ್ನ ಕಥೆ, ಕಾದಂಬರಿಗಳಿಗೆ ಸ್ಪೂರ್ತಿ ದಲಿತ ಬದುಕು ಮತ್ತು ಸಾಮಾಜಿಕ ಅಸಮಾನತೆಗಳು. ಅವೇ ನನ್ನನ್ನು ಬಡಿದೆಬ್ಬಿಸಿದವು. ಅದಕ್ಕೆ ಶಕ್ತಿಯಾಗಿ ನಿಂತವರು ಅಂಬೇಡ್ಕರ್.

ನೀವು ಚಳವಳಿಯ ಹಿನ್ನಲೆಯಿಂದ ಬಂದಂತವರು. ಸಾಹಿತಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಚಳುವಳಿಯ ಮಹತ್ವ ಏನು?

ನಾನು ದಲಿತ ಚಳುವಳಿಯಿಂದ ಬಂದವನು ಎನ್ನುವುದು ಸೂರ್ಯನಷ್ಟೇ ಸತ್ಯವಾದುದು. ದಲಿತರ ಆಶಯಗಳು ಈಗಲೂ ನನ್ನ ಮನದಲ್ಲಿ ತಾಕಲಾಟ ಮಾಡುತ್ತವೆ. ಪ್ರತಿಭಟಿಸಲು ಹಚ್ಚುತ್ತವೆ. ಅಸ್ಪೃಶ್ಯತೆ ನಿರ್ಮೂಲನೆಯಾಗಬೇಕು. ಸಮಾನತೆ ಬಾಯಿಮಾತಿನಲ್ಲಿ ಉಳಿದರೆ ಸಾಲದು, ಕೃತಿಯಲ್ಲಿ ಬರಬೇಕು. ದೇವರ ಕಣ್ಣಲ್ಲಿ ಎಲ್ಲರೂ ಸಮಾನರಾಗಿರದೆ, ಮನುಷ್ಯರ ಕಣ್ಣಲ್ಲಿ ಎಲ್ಲರೂ ಸಮಾನರಾಗಿರಬೇಕು ಎಂಬುದು ಅಂಬೇಡ್ಕರ್ ಅವರು ಹೇಳಿದ ಮಾತು, ಅದು ಸಾಕಾರವಾಗಬೇಕು. ಎಲ್ಲವನ್ನೂ ಹೋರಾಟ ಮಾಡಿ ಪಡೆಯಬೇಕಾದ ಸಾಮಾಜಿಕ ಒತ್ತಡದಲ್ಲಿ ನಾವಿದ್ದೇವೆ. ಚಳವಳಿಯ ಮೂಲಕ ನಾವು ಜಾಗೃತಿ ಮೂಡಿಸಲು ಸಾಧ್ಯ.

ಸುಮಾರು ಮೂರು ದಶಕಗಳ ಕಾಲ ನೀವು ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡಿದ್ದೀರಿ. ಈ ಹಿನ್ನಲೆಯಲ್ಲಿ ಕೇಳುವುದಾದರೆ, ವಿಶ್ವವಿದ್ಯಾಲಯಮಟ್ಟದ ಶೈಕ್ಷಣಿಕ ವಲಯದಲ್ಲಿನ ಇಂದಿನ ಬಿಕ್ಕಟ್ಟುಗಳೇನು? ಶೈಕ್ಷಣಿಕ ಗುಣಮಟ್ಟದ ವೃದ್ಧಿಗೆ ನಿಮ್ಮ ಸಲಹೆಗಳೇನು?

ವಿಶ್ವವಿದ್ಯಾಲಯಗಳಂತಹ ಸಂಸ್ಥೆಗಳು ಜ್ಞಾನಸೃಷ್ಟಿಯ ಕೇಂದ್ರಗಳು. ಮುಖ್ಯವಾಗಿ ಅವು ಜಾತಿ ಮಡಿವಂತಿಕೆಯಿಂದ ಹೊರಬರಬೇಕು. ಶಿಕ್ಷಕರು ಸಾಂಪ್ರದಾಯಿಕ ಶಿಕ್ಷಣಕ್ಕಿಂತ ವೈಚಾರಿಕ ಮತ್ತು ವೈಜ್ಞಾನಿಕ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಬೋಧಿಸಬೇಕು. ಅಲ್ಲದೇ ಸರಕಾರಗಳು ವಿಶ್ವವಿದ್ಯಾಲಯಗಳ ಗುಣಮಟ್ಟದ ವೃದ್ಧಿಗೆ ಬೆನ್ನೆಲುಬಾಗಿ ಪ್ರೋತ್ಸಾಹಿಸಬೇಕು. ಉತ್ತಮ ಕಟ್ಟಡ ನಿರ್ಮಾಣ, ಅಧ್ಯಾಪಕರ ನೇಮಕ ಮಾಡಿ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಿಸಿ ಅವುಗಳನ್ನು ಪೋಷಿಸಬೇಕು. ಅಂದಾಗ ಮಾತ್ರ ಗ್ರಾಮೀಣರಲ್ಲಿ ಬದಲಾವಣೆ ಬರಲು ಸಾಧ್ಯವಾದೀತು.

ನಿಮ್ಮ ಗಮನಕ್ಕೆ ಬಂದಂತೆ ಕನ್ನಡ ಸಾಹಿತ್ಯ ವಲಯದಲ್ಲಿನ ಇಂದಿನ ಬಿಕ್ಕಟ್ಟುಗಳೇನು?

ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ. ಬಲಪಂಥೀಯ/ಎಡಪಂಥೀಯ ಎಂಬ ಭೇದ ಹೋಗಿ ಮನುಷ್ಯ ಕೇಂದ್ರಿತ ಸಾಹಿತ್ಯ ರಚನೆಯಾಗಬೇಕು. ಜಾತಿಮುಕ್ತ ಸಮಾಜ ನಿರ್ಮಾಣ ಮಾಡುವ ಕಡೆ ಲೇಖಕರು ಆಲೋಚಿಸಬೇಕು.

‍ಲೇಖಕರು avadhi

July 24, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: