
ಟಿ ಪಿ ಉಮೇಶ್
ಹೂವಿಗೆ ಮುಳ್ಳುಗಳಿಲ್ಲವೆಂದು
ನಂಬಿಸಿದೆ;
ಜೀವನಪೂರ್ತಿ ನೋವ ಚುಚ್ಚಿಕೊಂಡು ನಗುತ್ತಿರುವೆ!
ಹೂವಿನೆಲ್ಲ ಘಮಗಂಧಗಳು ಒಂದೆಂದು
ಹೊಗಳಿದೆ;
ಮುತ್ತುಗದ ಮರದಡಿಯೆ ಜೀವನ ಹುಡುಕುತ್ತಿರುವೆ!
ಹೂವೆಲ್ಲ ಮಧುಪಾನದ ಪಾತ್ರೆಯೆಂದು
ತೋರಿಸಿದೆ;
ಬದುಕೆಲ್ಲ ಮತ್ತಿನಲೆ ಹಿಡಿಯಲಾಗದೆ ಅಲೆಯುತ್ತಿರುವೆ!
ಹೂವಿಗೆ ಬೇರು ಬಿಳಲುಗಳಿಲ್ಲವೆಂದು
ವಾದಿಸಿದೆ;
ಹೂವ ತೋಟದಲೆ ಬಂಧಿಯಾಗಿ ಬಳಲುತ್ತಿರುವೆ!

ಹೂವಿನ ಬಣ್ಣ ಅಳಿಸಲಾಗದ್ದೆಂದು
ಸಾಧಿಸಿದೆ;
ಬೆಳಗಿ ಬತ್ತುವರಂಗುಗಳಲೆ ಜೀವನ ಮೂಡುತ್ತಿದೆ!
ಹೂವಿಗೆ ವಿಳಾಸವಿಲ್ಲವೆಂದು
ಒಪ್ಪಿಸಿದೆ;
ಹಾಯ್ದ ಹಾದಿಗಳಲ್ಲೆಲ್ಲ ಬೆವರ ವಾಸನೆ ಮತ್ತೇರಿಸುತ್ತಿದೆ!
ಹೂವಿಗೆ ಸಾವೆಂಬುದಿಲ್ಲವೆಂದು
ಛಾಪಿಸಿದೆ;
ಅಡಿಗಡಿಗೆ ಅಕಾಲ ಮರಣ ಶಾಸನಗಳ ಎಡವುತ್ತಿರುವೆ!






0 Comments