ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಮದ್ದುಂಟೆ ಎದೆನೋವಿಗೆ, ಕೇಳುವಳು ದಿನರಾತ್ರಿ ಆ ಹುಡುಗಿ' – ವೈದೇಹಿ ಕವನ

ಬೆರಣಿ ತಟ್ಟುವ ಹುಡುಗಿ ಮತ್ತು ಚಂದ್ರಾಮ ದೇವರು

ವೈದೇಹಿ

ಕಾಯಕಷ್ಟದ ತರುಣಿ
ಬೆರಣಿ ತಟ್ಟುವಾಕೆ – ಈಗೀಗ ದಿನವೂ
ಎದೆನೋವು, ಆ ನೋವಿಗೆ
ಕಾಯಕವು ಕಾರಣವೇ ಅಲ್ಲ. ಹಾಗಾಗಿ
ಇದ್ದಬದ್ದವರಲ್ಲಿ ಮದ್ದು ಸಿಗಲಿಲ್ಲ.
ಮದ್ದುಂಟೆ ಎದೆನೋವಿಗೆ ಕೇಳುವಳು
ದಿನರಾತ್ರಿ ಆ ಹುಡುಗಿ
ಬಿದ್ದ ಕನಸುಗಳನ್ನು ಮತ್ತು
ಚಂದ್ರಾಮ ದೇವರನ್ನು.
ಒಂದು ಹುಣ್ಣಿಮೆ ಹಗಲು ಬೆರಣಿ ತಟ್ಟುತಿರಲು
ಆ ಬೆರಣಿ ಬದಲು ಚಂದ್ರಾಮ ಕಾಣಿಸಿದ, ಕಾಣ
ಕಾಣುತ್ತಿದ್ದಂತೆ ಬೆಳ್ಳನಾಗಸವೇರಿದ,
ಬೆಳ್ಳನಾಗಸವೇರಿ ಮರೆನಿಂತ ಚಂದ್ರಾಮ
ಕಬ್ಬು ಜಲ್ಲೆಯನಿಳಿಸಿ ಕರೆದ – ಬಾ ಹುಡುಗಿ
ಮದ್ದುಂಟು ಎದೆನೋವಿಗೆ, ಎಲ್ಲ
ಮದ್ದಲ್ಲ ಎದೆನೋವಿಗೆ
ಕಾಯಕಷ್ಟದ ಹುಡುಗಿ ಬೆವರಿನಾ ತವರು
ಬೆರಳ ಚಡಿಯಲ್ಲಿಯೂ ಸೆಗಣಿ ನಾರು
ಉಟ್ಟ ಉಡುಗೆಗೆ ಉಜ್ಜಿ – ಕೈ
ತಟ್ಟಿ ಕುಣಿದಾಡಿದಳು – ಸುತ್ತ
ಯಾರಿಲ್ಲವಾದರೂ
ನೋಡಿ ಚಂದ್ರಾಮ ದೇವರು!
ಎದೆನೋವು ಮದ್ದು ಅರೆದು ತಂದಿರುವಂಥ
ಮೋಡಿ ಚಂದ್ರಾಮ ದೇವರು!
ಕಬ್ಬು ಜಲ್ಲೆಯನೇರಿ ಬರುವೆನೋ ಚಂದ್ರಾಮ
ನಿಂತಲ್ಲೇ ಕೊಂಚ ನಿಂತಿರು
ತಗ್ಗು ಮೋಡವನೇರಿ ತೇಲಿ ಬರುವೆನೋ ದೇವ
ನಿಂತಲ್ಲೇ ನೀನು ನಿಂತಿರು.
ತಬ್ಬಿ ಎದೆನೋವನ್ನೇ ಕಬ್ಬು ಜಲ್ಲೆಯನೇರಿ
ಬರುತ್ತಿದ್ದಂತೆ ಆಕಾಶ ಲೋಕಕ್ಕೆ
ತಗ್ಗು ಮೋಡದ ಮೇಲೆ ಹಿಗ್ಗು ಹೆಜ್ಜೆಯನಿಟ್ಟು
ನಡೆದಂತೆ ಚಂದ್ರಾಮನುಪ್ಪರಿಗೆಗೆ
ನಿಂತಂತೆ ನಿಂತಿದ್ದ ಚಂದ್ರಾಮ ದೇವರು
ಉರುಟುರುಟು ಬೆರಣಿಯಾಗಿ
ನೆಲಕುರುಳಿ ಚೂರಾಗಿ ಚೆಲ್ಲಿ ಹೋದ!
ಮನಸು ನೆಡುವಾ ಹುಡುಗಿ ಎದೆಯೊಡೆದ ಸದ್ದು
ಕೇಳಿಸಿತೆ ಯಾರಿಗಾದರೂ ? ಅದು
ಹಚ್ಚ ಹಗಲಾದರೂ ?
ಒಡೆದ ನೋವಿನ ಟಿಸಿಲು
ನಮ್ಮೂರ ಕಡಲು. ಅರ್ಥವಾಗದೆ
ಅಚ್ಚರಿಗೊಂಡರು.

ಎಂತಿದ್ದರೂ ಆಕೆ ಕಾಯಕಷ್ಟದ ಬಾಲೆ
ಹಾಡುಹಗಲಿನ ಗಂಟಲೊತ್ತಿ ಹಿಡಿದು
ಕಾದ ಬಿಸಿಲಲಿ ಬತ್ತಿ ಕೆಳಗಿಳಿದಳು
ಚೂರುಗಳ ಸೇರಿಸಿ ನೆತ್ತಿಯಲಿ ಹೊತ್ತು
ಬಾಯಾರು ಒಲೆಗೆ ತುಂಬಿದಳು
ಆಹ! ನೀಲಿ ಜ್ವಾಲೆ!
ತಣಿದು ಘಮದ ವಿಭೂತಿ!
ಇದು ಯಾವ ಭ್ರಾಂತಿ? ಕಣ್ಣುಜ್ಜಿ ಕೇಳಿದಳು
ಉಂಟೇ ಇಂಥ ಚಂದ್ರಾಮ ಪ್ರೀತಿ ಎಲ್ಲಾದರೂ ?
ಹಗಲ ಬಾಗಿಲ ಸರಿಸಿ ವಿಹಾರ ಬಂದ ಚಂದ್ರಾಮ
ಆಚೀಚೆ ತಾರೆ ನೀಹಾರೆ ರೋಹಿಣಿ
ಕಾಣುವಳೆ ಆತನಿಗೆ ಸಣ್ಣ ಗುಡಿಸಲ ಒಳಗೆ
ಚಿಮಿಣಿ ದೀಪದ ವಿರಹಿಣಿ ?
ಚಂದ್ರಾಮ ದೇವರಿಗೂ ಬೇಕು ಬಣ್ಣದ ನಡಿಗೆ!
ಸಲ್ಲ ಅವಳಂಥ ಬರಿ ಹುಡುಗಿಗೆ
ಬರಿ ಸಿರಿಯ ಹುಡುಗಿ ಎಷ್ಟು ಕರೆದರೆ ಏನು?
ಕಾಡಿಗುಂಟೇ ಬೆಳದಿಂಗಳು? ಎಂದಿಗೂ
ಕಾಣಿಸದು ಗಾಢ ಮರುಳು
ಕಾದು ಬಾಡಿದ ಹುಡುಗಿ
ತಟ್ಟುತ್ತಿರುವಳು ಬೆರಣಿ – ನಿತ್ಯವೂ
ಅನ್ನಕ್ಕಾಗಿ
ಎದೆನೋವಿನಾ ಮದ್ದು ಹಣೆಗಿರಿಸಿಕೊಂಡನೋ
ಕರೆಯ ಬೇಡಿರಿ ನನ್ನ ವೈರಾಗಿ
ಎಂದು ಹಾಡುವಳು – ಸುತ್ತ
ಯಾರಿಲ್ಲವಾದರೂ.
 

‍ಲೇಖಕರು avadhi

17 February, 2014

6 Comments

  1. mmshaik

    ede tattuva kavana..

  2. Tejaswini Hegde

    ಎಂಥಾ ಕವಿತೆ!!!
    ಮದ್ದುಂಟು ಎದೆನೋವಿಗೆ, ಎಲ್ಲ
    ಮದ್ದಲ್ಲ ಎದೆನೋವಿಗೆ
    ಕಾಯಕಷ್ಟದ ಹುಡುಗಿ ಬೆವರಿನಾ ತವರು
    ಬೆರಳ ಚಡಿಯಲ್ಲಿಯೂ ಸೆಗಣಿ ನಾರು
    ಉಟ್ಟ ಉಡುಗೆಗೆ ಉಜ್ಜಿ – ಕೈ
    ತಟ್ಟಿ ಕುಣಿದಾಡಿದಳು
    ……..
    ನಿಂತಂತೆ ನಿಂತಿದ್ದ ಚಂದ್ರಾಮ ದೇವರು
    ಉರುಟುರುಟು ಬೆರಣಿಯಾಗಿ
    ನೆಲಕುರುಳಿ ಚೂರಾಗಿ ಚೆಲ್ಲಿ ಹೋದ!

  3. Swarna

    Chandada kavite.

  4. ರಮೇಶ್‌ ಹಿರೇಜಂಬೂರು

    ಮದ್ದುಂಟು ಎದೆನೋವಿಗೆ, ಎಲ್ಲ
    ಮದ್ದಲ್ಲ ಎದೆನೋವಿಗೆ
    ಕಾಯಕಷ್ಟದ ಹುಡುಗಿ ಬೆವರಿನಾ ತವರು
    ಬೆರಳ ಚಡಿಯಲ್ಲಿಯೂ ಸೆಗಣಿ ನಾರು
    ಉಟ್ಟ ಉಡುಗೆಗೆ ಉಜ್ಜಿ – ಕೈ
    ತಟ್ಟಿ ಕುಣಿದಾಡಿದಳು
    ಚಂದ್ರಾಮ ದೇವರಿಗೂ ಬೇಕು ಬಣ್ಣದ ನಡಿಗೆ!
    ಸಲ್ಲ ಅವಳಂಥ ಬರಿ ಹುಡುಗಿಗೆ…
    ಕಾದು ಬಾಡಿದ ಹುಡುಗಿ…
    ಕವಿತೆ ತುಂಬಾ ಚೆನ್ನಾಗಿದೆ ಮೇಡಂ…
    -ರಮೇಶ್ ಹಿರೇಜಂಬೂರು

  5. Ajit

    And this is called Poetry. No parallel to Vaidehi.

  6. pratibha kage

    ಮನ ತಟ್ಟುವ ಕವಿತೆ . ಮತ್ತೆ ಮತ್ತೆ ಓದಬೇಕೆನ್ನಿಸುವ ಅಂದದ ಕವಿತೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading