ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮತ್ತೊಮ್ಮೆ ಪ್ರೀತಿಸಬೇಕಿದೆ..

ಅನುಸಂಧಾನ

nam-parvati

ನಂ ಪಾರ್ವತಿ 

 

ಗೆಳೆಯ ಇಬ್ಬರಿಗೂ ನಮ್ಮದೇ ನೋವಿನ ಚರಿತ್ರೆ ಇದೆ

ಅಕಾರಣವಾಗಿ  ನಾನು

ನಿರ್ಲಕ್ಷ್ಯಕ್ಕೆ ಈಡಾದ ನೋವು

ತಿರಸ್ಕಾರಕ್ಕೆ ತುತ್ತಾದ ನೋವು

ನಿನ್ನ ಮನೆಯ ತೊತ್ತಾದ ನೋವು

ನಿನ್ನ ಪ್ರೀತಿಯ ಸುಧೆಯಿಂದ ವಂಚಿತಳಾದ ನೋವು

ಔದಾರ್ಯವ ಕಾಣದೆ  ಕನಲಿದ ನೋವು

girl in loveಅಸಹಾಯಕತೆಯಲ್ಲಿ ಒಬ್ಬಂಟಿಯಾದ ನೋವು

ಬದುಕ ನಂಬಿಕೆಯೇ ಕಂದಿಹೋದ ನೋವು

ನನ್ನ ಒಡಲಲ್ಲಿ ತುಂಬಿ ಹರಿಯುತ್ತಿದೆ

 

ಅರಿವಿಲ್ಲದೇ

ಹಿಂಸಿಸಿ ಕ್ರೂರಿಯಾದ ನೋವು

ದರ್ಪದಲ್ಲಿ ಅಃತಸತ್ವವ ಹೀರಿದ ನೋವು

ಇನ್ನೇನು ಮಾಡಬಲ್ಲೆ ಎಂದು ಕಲ್ಲಾಗಿ ನರಳಿಸಿದ ನೋವು

ಪ್ರೀತಿಯ ಪನ್ನೀರಿನಲಿ ಮಿಂದೂ ಕೃತಜ್ಞನಾಗದೇ ಉಳಿದ ನೋವು

ಮಂದಿಯ ಮಾತ ನಂಬಿ ನಿರ್ದಾಕ್ಷಿಣ್ಯವಾಗಿ ದೂರಿ, ದೂಡಿದ ನೋವು

ನಿನ್ನಿಂದ ನನಗೇನೂ ಬೇಕಿಲ್ಲ ಎಂದು ಬೀಗಿ ಬರಡಾದ ನೋವು

ಕ್ಷಮಿಸು ಎನಲಾಗದೆ, ಅಳಲಾಗದೆ, ಎದೆಭಾರವಾಗಿ ಕಾಡುವ ಪಶ್ಚಾತ್ತಾಪದ ನೋವು

ನಿನ್ನ ಹೃದಯವ ಇರಿಯುತ್ತಿದೆ

 

ಈ ಎಲ್ಲಕ್ಕೂ

ಯಾರು ಕಾರಣವೋ

ಯಾವುದು ಪ್ರೇರಣೆಯೋ

ಹುಡುಕುವ ಗೊಡವೆಯ ಪಕ್ಕಕ್ಕಿಟ್ಟು

ಮತ್ತೊಮ್ಮೆ ಪ್ರೀತಿಸಬೇಕಿದೆ

ಚರಿತ್ರೆಯ ನೋವಿಗೆ ಬಾಗದೆ

ಲೆಕ್ಕ ಚುಕ್ತವಾಗಲು ಬಯಸದೆ

ಎಲ್ಲವನ್ನೂ ಹೊಸತನದಿಂದ ಕಾಣಬಲ್ಲ

ಹೊಸಹುಟ್ಟನ್ನೇ ಪಡೆಯಬೇಕಿದೆ

ಹೊಸ ದಾರಿಯಲ್ಲೇ ಸಾಗಬೇಕಿದೆ

 

ನಾನು ನೋವಿನ ಆಳಕ್ಕೆ ಕುಸಿಯುವಾಗ

ನೀ ನನ್ನ  ಪ್ರೀತಿಯಿಂದ ಕೈಹಿಡಿದೆತ್ತು

ಯಾರಿಗೆ ಗೊತ್ತು

ಅಲ್ಲಿ ನನ್ನ-ನಿನ್ನ ಅಮ್ಮ-ಅಜ್ಜಿ-ಮುತ್ತಜ್ಜಿಯರೂ ಬದುಕಿಬಿಡಬಹುದು

 

ನೀನು ಪಶ್ಚಾತ್ತಾಪದ ಬೇಗೆಯಲ್ಲಿ ಬೇಯುವಾಗ

ನಾ ನಿನಗೆ ಪ್ರೀತಿಯ ತಂಪೆರೆಯುತ್ತೇನೆ

ಯಾರಿಗೆ ಗೊತ್ತು

ಅಲ್ಲಿ ನನ್ನ -ನಿನ್ನ ಅಪ್ಪ-ತಾತ-ಮುತ್ತತಂದಿರೂ ಮತ್ತೇ ಉಸಿರಾಡಿಬಿಡಬಹುದು

 

ನೋವಿಗೆ ತಳ್ಳುವಾಟದಿಂದ

ಮುಕ್ತರಾಗಿ

ನೋವಿಗೆ ಜೊತೆಯಾಗುವಷ್ಟು

ಶಕ್ತರಾದಾಗ

ಹೊಸದಾರಿ ತೆರೆದುಕೊಳ್ಳುತ್ತಾ ಹೋಗಬಹುದು

ಇಬ್ಬರೂ ಬದುಕಿಬಿಡಬಹುದು

‍ಲೇಖಕರು Admin

5 November, 2016

4 Comments

  1. Anonymous

    Chandadakavite

    • Parvathi

      Thank you
      Parvathi

  2. Kusumapatel

    Nice

    • Parvathi

      Thank you
      Parvathi

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading