ಮತ್ತೆ ಐದು ಪೋಲಿಷ್ ಕವನಗಳು

ಮೂಲ : ತಾದೆ ಉಷ್ ರೂಜಾವೀಚ್

ಕನ್ನಡಕ್ಕೆ: ಎಸ್ ಜಯಶ್ರೀನಿವಾಸ‌ ರಾವ್

ಪೋಲೆಂಡ್ ದೇಶಕ್ಕೆ 1918ರಲ್ಲಿ ಸ್ವಾತಂತ್ರ್ಯ ದೊರಕಿದ ನಂತರ ಹುಟ್ಟಿದ ಮೊದಲ ತಲೆಮಾರಿನ ಪ್ರಮುಖ ಬರಹಗಾರರಲ್ಲಿ ಒಬ್ಬರು ತಾದೆ ಉಷ್ ರೂಜಾವೀಚ್. ಸುಮಾರು 15 ಕವನ ಸಂಕಲನಗಳನ್ನು ಪ್ರಕಟಿಸಿದ ರೂಜಾವೀಚ್ ಅವರು ಉತ್ತಮ ನಾಟಕಕಾರರೂ ಆಗಿದ್ದು 12 ನಾಟಕಗಳನ್ನು ಹಾಗೂ ಹಲವಾರು ಚಿತ್ರಕಥೆಗಳನ್ನೂ ಬರೆದಿದ್ದಾರೆ. 

ಆವ್ಶವಿಟ್ಜ್ -ನ (Auschwitz) ದುರಂತದ ನಂತರ ಜೀವನಕ್ಕೆ ಅರ್ಥವನ್ನು ಮರು ಹುಟ್ಟಿಸುವ ದೆಸೆಯಲ್ಲಿ ಕಾವ್ಯಕ್ಕೆ ಒಂದು ಹೊಸ ಆಕಾರ ಕೊಟ್ಟರು ಇವರು. ಪೋಲೆಂಡಿನ ಹಾಗೂ ಅಂತರ್ರಾಷ್ಟ್ರೀಯ ನವ್ಯ ಸಾಹಿತ್ಯ (Avant Garde) ಪ್ರಯೋಗಗಳನ್ನು ಮುಂದುವರಿಸಿಕೊಂಡು ಹೋದ ಲೇಖಕರಲ್ಲಿ ಬಹುಮುಖ ಪ್ರತಿಭೆ ಹಾಗೂ ಸೃಜನಶೀಲತೆಗಾಗಿ ಹೆಸರು ಪಡೆದವರಲ್ಲಿ ರೂಜಾವೀಚ್ ‌ಪ್ರಮುಖರು.

1. ಒಂದು ಕವನದ ವರ್ಣನೆ

(ಮೂಲ: Description of a Poem)

ನೆನಪಿಸಿಕೊಳ್ಳಲು ಯತ್ನಿಸಿದೆ ನಾನು
ಒಂದು ಆದರ್ಶ
ಅಲಿಖಿತ
ಕವನವನ್ನು

ಇನ್ನೇನು ಹಣ್ಣಾದ
ರಾತ್ರಿಯಲ್ಲಿ ರೂಪುಗೊಂಡ
ಮುಟ್ಟಲಾಗುವಂತಹ

ಮುಳುಗುತ್ತಿತ್ತು ಅದು
ಕರಗುತ್ತಿತ್ತು ಹಗಲ ಬೆಳಕಿನಲ್ಲಿ

ಅದು
ಇರಲಿಲ್ಲ
ಕೆಲವು ಸಲ ಅದು ನಾಲಗೆಯ
ತುದಿಯಲ್ಲಿಯೇ ಇದೇಂತ ಅನಿಸುತ್ತಿತ್ತು
ತವಕದಿಂದ
ಕೂತಿರುವೆ ನಾನು ಪೆನ್ನು ಹಿಡಿದು
ಕೈಯಲ್ಲಿ
ಕಾಯುತ್ತಾ ತಾಳ್ಮೆಯಿಂದ
ಖಾತ್ರಿಯಾಗುವವರೆಗೂ
ಅದೊಂದು ಭ್ರಮೆಯೆಂದು
ಆಗ ನಾನಲ್ಲಿಂದೆದ್ದು ನಡೆಯುವೆ
ಈ ಕವನ ಬಹುಶಃ
ತನ್ನ ಬಗ್ಗೆಯೇ ತಾನು ಬರೆದ ಕವನವಿರಬೇಕು
ಒಂದು ಮುತ್ತು ಹೇಗೆ
ಮುತ್ತುಗಳ ಬಗ್ಗೆ ಮಾತಾಡುತ್ತದೆಯೋ,
ಚಿಟ್ಟೆ ಚಿಟ್ಟೆಗಳ ಬಗ್ಗೆ

ಅದೊಂದು ಪ್ರೇಮಗೀತೆಯಾಗಿರಲಿಲ್ಲ
ಶೋಕ ಗೀತೆಯೂ ಅಲ್ಲ
ಅದು ಮರುಗಲಿಲ್ಲ
ಹೊಗಳಲೂ ಇಲ್ಲ
ಅದು ಬಣ್ಣಿಸಲಿಲ್ಲ
ಟೀಕಿಸಲೂ ಇಲ್ಲ

ಹಗಲಲ್ಲಿ ನನ್ನ ಕೈಜಾರಿ ಹೋಗುತ್ತಿದ್ದ
ಆ ಕವನ
ಬಚ್ಚಿಕೊಂಡಿದೆ ತಾನು ತನ್ನೊಳಗೆನೇ

ಕೆಲವು ಸಲ ಮಾತ್ರ ಅರಿಯುತ್ತೇನೆ
ಅದರ ಕಹಿಯನ್ನು
ಅದರ ಒಳ ಶಾಖವನ್ನು
ಆದರೆ ನಾನದನ್ನು
ಅದರ ಕತ್ತಲ ಹಳ್ಳದಾಳದಿಂದ
ಹೊರಗೆಳೆದು ವಾಸ್ತವದ
ದಡದ ಬಯಲಿನಲ್ಲಿ ಹಾಕುವುದಿಲ್ಲ

ಅಜಾತ
ಅದು ಅಳಿಯುತ್ತಿರುವ ಜಗತ್ತಿನ
ಶೂನ್ಯತೆಯಲ್ಲಿ
ಅಜ್ಞಾತ ವಚನಗಳನ್ನು ತುಂಬುತ್ತದೆ

2. ಹೊನ್ನಮಲೆಗಳು

(ಮೂಲ: Golden Mountains)

ಮೊದಲಸಲ
ನಾ ಮಲೆಗಳ ಕಂಡಾಗ
ನನಗಾಗ
ಇಪ್ಪತ್ತಾರು

ಅವುಗಳ ಸಮಕ್ಷದಲ್ಲಿ
ನಾ ನಗಲಿಲ್ಲ
ನಾ ಕಿರುಚಲಿಲ್ಲ
ನಾ ಪಿಸು ದನಿಯಲಿ ಮಾತಾಡಿದೆ

ನಾ ಮನೆಗೆ ಮರಳಿದಾಗ
ಹೇಳಬೇಕೆಂದುಕೊಂಡೆ
ಅಮ್ಮನಿಗೆ
ಮಲೆಗಳು ಹೇಗಿರುತ್ತವೆಂದು

ಅದು ಕಷ್ಟದ ಕೆಲಸವಾಗಿತ್ತು
ಕತ್ತಲಲ್ಲಿ
ಎಲ್ಲವೂ ಬೇರೆಯಾಗಿ ಕಾಣುತ್ತವೆ
ಮಲೆಗಳೂ, ಪದಗಳೂ

ಅಮ್ಮ ಸುಮ್ಮನಿದ್ದಳು
ಆಯಾಸವಾಗಿರಬೇಕು
ನಿದ್ದೆ ಹೋದಳು

ಆ ಚಂದ್ರ,
ಬಡವರ
ಹೊನ್ನಮಲೆ,
ಮೋಡಗಳಲ್ಲಿ ಹಿಗ್ಗುತ್ತಿತ್ತು.

3. ಒಂದು ಹೊಸ ಕವನದ ಹುಟ್ಟು

(ಮೂಲ: Birth of a New Poem)

ಎರಡು ಕವನಗಳು
ರಭಸವಾಗಿ ಧಾವಿಸುತ್ತಿವೆ ರಾತ್ರಿಯಲಿ,
ಒಂದರೆದುರು ಇನ್ನೊಂದನ್ನು
ಎಸೆಯಲ್ಪಟ್ಟಿದೆ

ಈ ಕವನಗಳ ರೂಪಗಳು
ಆಧುನಿಕ
ನಿಖರ
ಅವುಗಳ ಒಳಗಣ ಪ್ರಕಾಶಮಯ
ಹಿತಕರ ಹಾಗೂ ಪ್ರಾಯೋಗಿಕ

ಅವು ಒಂದರ ಮೇಲೊಂದು ಎರಗುತ್ತವೆ
ಕಣ್ಣು ಮುಚ್ಚಿಸಿಕೊಂಡಂತೆ

ರೂಪಕಗಳು
ಚಲ್ಲಾಪಿಲ್ಲಿಯಾಗಿ
ಬಿರುಕು ಬಿಟ್ಟು
ಬಿಗಿಯಾಗಿ
ನುಚ್ಚು ನೂರಾಗಿ
ಮಡಿಯುವ ರೂಪಗಳಲ್ಲಿ
ನುಗ್ಗಿ
ಸಾಲು ಮುರಿದು
ಉಸಿರುಕಟ್ಟಿಸಿ
ಪದಗಳನ್ನು ಕಿತ್ತೊಗೆದು
ಭಾವಗಳನ್ನುಅಳಿಸಿ

ಒಂದು ಘರ್ಷಣ
ಒಂದು ಹೊಸ ಕವನ
ಇದು ಮೂರನೆಯ ಕವನ
ಯಾತನೆಯಲ್ಲಿ ಹುಟ್ಟಿದ್ದು,
ಮಾನವತೆಯ
ಗರ್ಭಜಲದಲ್ಲಿ
ಹರಿಯುತ್ತದೆ.

ಈಗಷ್ಟೇ ಹೊಸದಾಗಿ ಹುಟ್ಟಿದ್ದು
ಯಾರಿಗೂ ಕಾಣಿಸದ ತನ್ನ
ನಿಗೂಢ ನಗುವಿನೊಂದಿಗೆ
ಸಿದ್ಧವಾಗಿದೆ
ಬೆಳವಿಗಾಗಿ
ಒಮ್ಮಿಂದೊಮ್ಮೆಲೇ.

4. ದಾಖಲೆಯಾಗದ ಪತ್ರ

(ಮೂಲ: Unrecorded Epistle)

ಆದರೋ ಏಸು ಬಗ್ಗಿದ
ಹೊಯಿಗೆಯ ಮೇಲೆ ಬರೆದ
ಆಮೇಲೆ ಮತ್ತೆ ಏಸು ಬಗ್ಗಿದ
ಅವನ ಬೆರಳಿನಿಂದ ಬರೆದ

ಅಮ್ಮಾ, ಈ ಮಂದಿ ಎಷ್ಟು ಮಂದ
ಎಷ್ಟು ಮುಗ್ಧ, ನಾನು ಪವಾಡಗಳನ್ನು
ತೋರಿಸಬೇಕಾಗಿದೆ, ನಾನು ಈ ತರದ
ನೀರಸ ನಿರರ್ಥಕ ಕೆಲಸಗಳನ್ನು ಮಾಡುತ್ತೇನೆ
ಆದರೆ ನಿನಗೆ ಅರ್ಥವಾಗುತ್ತೆ
ನಿನ್ನ ಮಗನನ್ನು ಕ್ಷಮಿಸುವೆ
ನಾನು ನೀರನ್ನು ಸುರೆಯಾಗಿಸುತ್ತೇನೆ
ಮಡಿದವರನ್ನು ಎಬ್ಬಿಸುತ್ತೇನೆ
ನೀರಿನ ಮೇಲೆ ನಡೆಯುತ್ತೇನೆ

ಈ ಮಂದಿ ಚಿಕ್ಕಮಕ್ಕಳ ಹಾಗೆ
ಅವರಿಗೆ ಯಾವಾಗಲೂ ಏನಾದರೂ
ಹೊಸತೊಂದನ್ನು ತೋರಿಸುತ್ತಲೇ ಇರಬೇಕು
ತುಸು ಯೋಚಿಸಿನೋಡು

ಈ ಮಂದಿ ಅವನ ಸಮೀಪ ಬರುತ್ತಿದ್ದಂತೇ
ಆತ ಆ ಅಕ್ಷರಗಳನ್ನು
ಮರೆಯಿಸಿ ಮಾಯಿಸಿದ
ಶಾಶ್ವತವಾಗಿ

5. ಒಬ್ಬ ಕವಿಯ ಮತ್ತು ಒಂದು ಪ್ಯಾಸೆಂಜರ್ ಟ್ರೈನ್‌‌‌ನ ನಿರ್ಗಮನದ ಬಗ್ಗೆ
(ಮೂಲ: Upon the Departure of a Poet and a Passenger Train)

ಅವನಿಗೆ ಗೊತ್ತಿಲ್ಲ
ಅವನ
ಕೊನೆಯ ಕವನ ಹೇಗಿರುವುದೆಂದು.
ಇದೂ
ಅವನಿಗೆ ಗೊತ್ತಿಲ್ಲ
ಮೊದಲ ದಿನ ಹೇಗಿರುವುದೆಂದು
ಕಾವ್ಯವಿಲ್ಲದ ಲೋಕದಲ್ಲಿ.

ಬಹುಶಃ ಮಳೆ ಸುರಿಯುತ್ತಿರುತ್ತೆ
ಶೇಕ್ಸ್‌ಪಿಯರ ನಾಟಕದ ಪ್ರದರ್ಶನ ನಡೆಯುತ್ತಿರುತ್ತೆ
ಮತ್ತು ಲಂಚಿಗೆ ಟೊಮಾಟೊ ಸೂಪ್ ಇರುತ್ತೆ

ಯಾಚಿಕನ್ ಸೂಪ್ ಜೊತೆ ನೂಡಲ್ಸ್;
ಶೇಕ್ಸ್‌ಪಿಯರ ನಾಟಕದ ಪ್ರದರ್ಶನ
ಮತ್ತು ಮಳೆ.

ಕಲಾ ದೇವಿಗಳು ಅವನಿಗೇನೂ ವಚನ ಕೊಡಲಿಲ್ಲ,
ಅವನ ಕೊನೆಯ ಉಸಿರಿನಲ್ಲಿ
ಅವನು ಉಚ್ಚರಿಸುವನು
ಉದಾತ್ತವಾದ
ತಿಳಿಯಾದ
ಇನ್ನೂ ಹಗುರವಾದ
ಇನ್ನಿದೇ ತರಹದ
ಒಂದು ವಿಚಾರವನ್ನೆಂದು.

ಎಲ್ಲಾ ಸೂಚನೆಗಳ ಪ್ರಕಾರ
ಅವನು ನಿರ್ಗಮಿಸುವನು
ಒಂದು ತಡವಾಗಿ ಹೊರಟ
ಪ್ಯಾಸೆಂಜೆರ್ ಟ್ರೈನ್‌‌‌ನ ತರಹ
ರಡೊಮ್ಸ್‌ಕೊದಿಂದ ಪ್ಯಾರಿಸ್ವರೆಗೆ
ಜ಼ೆಬಜ಼್ರಿಡೊವಿಚ್ ಮೂಲಕ.

‍ಲೇಖಕರು Avadhi

May 10, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. kamalakar bhat

    Liked these translations of a set of subtle and interesting poems. You work Kannada in ways that are welcome.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: