ಮತ್ತೂರು ಕೃಷ್ಣಮೂರ್ತಿ ಕೃತಿಚೌರ್ಯ ಮಾಡಿದ್ದರೇ..??

ಆ ಕಾಲದಲ್ಲಿಯೇ ಕೃತಿಚೌರ್ಯವಾಗಿತ್ತೇ ಎನ್ನುವುದಕ್ಕೆ ಇಲ್ಲಿದೆ ಉತ್ತರ.

ಇದು ‘ಸಂಯುಕ್ತ ಕರ್ನಾಟಕ’ದ ಒಳಗೆಯೇ ನಡೆದ ಕೃತಿಚೌರ್ಯದ ಪ್ರಕರಣ.

ಹೆಸರಾಂತ ಮತ್ತೂರು ಕೃಷ್ಣಮೂರ್ತಿ ಅವರು ಕೃತಿಚೌರ್ಯ ಮಾಡಿದ್ದಾರೆ ಎಂದು ‘ಪ್ರಜಾವಾಣಿ’ಯ ವಿಶ್ರಾಂತ ಕಾರ್ಯನಿರ್ವಾಹಕ ಸಂಪಾದಕ ಜಿ.ಎನ್. ರಂಗನಾಥ ರಾವ್‌ ಅವರು ಬೆಳಕು ಚೆಲ್ಲಿದ್ದಾರೆ.

ದೊಡ್ಡವರನ್ನೇ ಒಳಗೊಂಡ ಈ ಕೃತಿಚೌರ್ಯ ಪ್ರಕರಣ ಏನಿದು ?

ಇಲ್ಲಿದೆ ನೋಡಿ ʼಅವಧಿʼಗಾಗಿ ಜಿ.ಎನ್.ರಂಗನಾಥ ರಾವ್‌ ಅವರು ಬರೆಯುತ್ತಿರುವ ಅಂಕಣದಲ್ಲಿ ಕಂಡುಬಂದ ಮಾಹಿತಿ.

‘ಸ್ಟೇಟ್ಸ್ ಮನ್’ ಪತ್ರಿಕೆ ಹಿಮಾಲಯದ ಕೊರೆಯುವ ಚಳಿಯಲ್ಲಿ ಗಡಿ ರಕ್ಷಣೆ ಮಾಡುತ್ತಿರುವ ನಮ್ಮ ವೀರ ಯೋಧರ ಸಾಹಸಗಳು, ಅವರು ಪಡುವ ಬವಣೆ, ಅಲ್ಲಿನ ಸ್ಥಿತಿಗತಿಯ ದರ್ಶನ ಮಾಡಿಸುವ ಒಂದು ಲೇಖನ ಮಾಲೆಯನ್ನು ಪ್ರಕಟಿಸಲಾರಂಭಿಸಿತ್ತು. ಅದು ಚೈನಾದೊಂದಿಗಿನ ನಮ್ಮ ಗಡಿ ಪ್ರದೇಶಕ್ಕೆ ಭೇಟಿ ಕೊಟ್ಟಿದ್ದ ‘ಸ್ಟೇಟ್ಸ್ ಮನ್’ ಪತ್ರಿಕೆಯ ವರದಿಗಾರನ ಪ್ರತ್ಯಕ್ಷದರ್ಶಿ ಕಥನವಾಗಿತ್ತು.

ತುಂಬಾ ಮಾಹಿತಿ ಪೂರ್ಣವೂ ನಮ್ಮ ವೀರ ಯೋಧರ ವೀರತೇಜವನ್ನು ವಿವರಿಸುವ ಲೇಖನ ಮಾಲೆ ಅದಾಗಿತ್ತು. ಓದಿದರೆ ಮೈ ನವಿರೇಳಿಸುತ್ತಿತ್ತು. ಆ ಲೇಖನಗಳನ್ನು  ಕನ್ನಡೀಕರಿಸಿ ‘ಸಂಕ’ ಸಂಪಾದಕೀಯ ಪುಟದಲ್ಲಿ ಪ್ರಕಟಿಸಲು ಸಂಪಾದಕರು ನಿರ್ಧರಿಸಿದ್ದರು. ಆ ಲೇಖನಗಳನ್ನು ನಾನು ಮತ್ತು ‘ಇಂದಿರಾತನಯ’ರು ಹಂಚಿಕೊಂಡು ಅನುವಾದಿಸತಕ್ಕದ್ದೆಂದು ಶಾಮರಾಯರು ಹೇಳಿದ್ದಾರೆಂದು ನಾಗೇಶರಾಯರು ನಮಗೆ ತಿಳಿಸಿದರು. ಅಂದಿನಿಂದ ‘ಸ್ಟೇಟ್ಸ್ ಮನ್’ ಪತ್ರಿಕೆ ಬಂದ ಕೂಡಲೇ ಒಂದು ಪ್ರತಿ ನನ್ನ ಕೈವಶವಾಗುತ್ತಿತ್ತು.

ಸುಮಾರು ಹದಿನೈದು ಕಂತುಗಳಲ್ಲಿ ಈ ಲೇಖನಮಾಲೆ ಪ್ರಕಟವಾಯಿತು. ಇಂದಿರಾತನಯರು ‘ನಿಮ್ಮಿಂದಲೇ ಶುರುವಾಗಲೀ’ ಎಂದು ಅನುವಾದವನ್ನು ಮೊದಲು ನನಗೆ ಒಪ್ಪಿಸಿದರು. ಒಂದೆರೆಡು ಅನುವಾದಗಳು ಪ್ರಕಟವಾದ ನಂತರ ‘ಭಾಷೆ ಶೈಲಿಗಳಲ್ಲಿ ಏಕರೂಪತೆ ಇರಬೇಕು. ಆದ್ದರಿಂದ ನೀವೇ ಇದನ್ನು ಮಾಡಿ ಬಿಡಿ’ ಎಂದು ಇಂದಿರಾತನಯರು ಈ ಲೇಖನ ಮಾಲೆಯ ಅನುವಾದವನ್ನು ಪೂರ್ತಿಯಾಗಿ ನನಗೆ ವಹಿಸಿಬಿಟ್ಟರು. ಇದಕ್ಕೆ ನಾಗೇಶರಾಯರ ಸಮ್ಮತಿಯೂ ಇತ್ತು. ಈ ಲೇಖನಗಳನ್ನು ‘ಸಂಕ’ ಓದುಗರು ಮೆಚ್ಚಿಕೊಂಡಿದ್ದರು.

ಇದಾದ ಆರೆಂಟು ತಿಂಗಳ ನಂತರ ‘ಹಿಮಾಲಯದ ವೀರರು’ ಲೇ: ಮತ್ತೂರು ಕೃಷ್ಣಮೂರ್ತಿ ಎಂಬ ಪುಸ್ತಕವೊಂದು ನನ್ನ ಕಣ್ಣಿಗೆ ಬಿತ್ತು. ಕೈಗೆತ್ತಿಕೊಂಡು ನೋಡಿದೆ. ಅದು ‘ಸಂಕ’ದಲ್ಲಿ ಪ್ರಕಟವಾದ ‘ಸ್ಟೇಟ್ಸ್ ಮನ್’ ಪತ್ರಿಕೆಯಿಂದ ನಾನು ಅನುವಾದಿಸಿದ ಲೇಖನಗಳ ಸಂಗ್ರಹವಾಗಿತ್ತು. ಲೇಖಕರು ಮುನ್ನುಡಿಯಲ್ಲಿ ಇದು ‘ಸಂಕ’ಕ್ಕೆ ತಾವು ಬರೆದ ಸ್ವತಂತ್ರ ಲೇಖನಗಳ ಸಂಕಲನವೆಂದು ಭಿನ್ನವಿಸಿಕೊಂಡಿದ್ದರು.

ನಾನು ಇದನ್ನು ಇಂದಿರಾತನಯರ ಬಳಿ ಪ್ರಸ್ತಾಪಿಸಿದೆ. ಆ ವೇಳೆಗಾಗಲೇ ಆ ಪುಸ್ತಕದ ಒಂದು ಪ್ರತಿಯನ್ನು ಇಂದಿರಾತನಯರ ಕೈಯ್ಯಲ್ಲಿರಿಸಿ “ಶ್ಯಾಮೂ ಹೆಚ್ಚು ಜನಕ್ಕೆ ನಮ್ಮ ವೀರ ಯೋಧರ ಪರಿಚಯವಾಗಲಿ ಎಂದು ಇದನ್ನು ಪುಸ್ತಕ ರೂಪದಲ್ಲಿ ತಂದಿದ್ದೇನೆ. ರಾಯಲ್ಟಿ ಹಂಚಿಕೊಳ್ಳೋಣ” ಎಂದು ಹೇಳಿದ್ದರಂತೆ.

“ಸಾರ್, ಇದು ಕೃತಿಚೌರ್ಯವಲ್ಲದೆ ಬೇರೇನೂ ಅಲ್ಲ. ಹಗಲು ದರೋಡೆ. ನಾನು ಅನುವಾದಿಸಿದ್ದನ್ನು ಅವರು ತಮ್ಮ ಹೆಸರಲ್ಲಿ ಪ್ರಕಟಿಸಿರುವುದು ಸರಿಯೇ?” ಎಂದು ಇಂದಿರಾತನಯರಲ್ಲಿ ನನ್ನ ನೋವು ಆಕ್ರೋಶಗಳನ್ನು ತೋಡಿಕೊಂಡೆ.

“ನೀವು ಮಾಡಿದ್ದೂ ಕೃತಿಚೌರ್ಯವಲ್ಲವೆ? ನೀವೂ ‘ಸ್ಟೇಟ್ಸ್ ಮನ್’ ನಿಂದ ಅನುವಾದಿಸಿದ್ದು, ಅದರಲ್ಲಿ ನಿಮ್ಮ ಕಾಪಿರೈಟ್ ಸಾಧಿಸುವುದು ಹೇಗೆ ಸಾಧ್ಯ?”

“ಸಾರ್, ನಾನು ಕೃತಿಚೌರ್ಯ ಮಾಡಿಲ್ಲ. ಅನುವಾದ ಮಾಡಿದ್ದೇನೆ. ಅನುವಾದ ಮಾಡಲು ಹೇಳಿದ ಸಂಪಾದಕರು ‘ಸ್ಟೇಟ್ಸ್ ಮನ್’ ಪತ್ರಿಕೆಯಿಂದ ಅನುಮತಿ ಪಡೆದಿರಬೇಕಲ್ಲವೆ?”

ಸ್ವಲ್ಪ ಹೊತ್ತು ಗಂಭೀರವದನರಾಗಿದ್ದ ಇಂದಿರಾತನಯರು. “ರಂಗನಾಥ ರಾವ್, ಇದನ್ನ ಇಲ್ಲಿಗೇ ಬಿಟ್ಟುಬಿಡಿ. ಮುಂದುವರಿಸಬೇಡಿ. ನೀವು ನಡೆಯಬೇಕಾದ ಹಾದಿ ಇನ್ನು ಬಹಳಷ್ಟಿದೆ. ಇದೊಂದು ‘ಸಣ್ಣ ದರ್ಶನವಷ್ಟೆ’ ಎಂದು ನನ್ನನ್ನು ಸಮಾಧಾನಗೊಳಿಸಿದರು.

‘ಹಿಮಾಲಯದ ವೀರರು’ ಎಸ್ ಎಸ್ ಎಲ್ ಸಿ ಗೆ ಕನ್ನಡ ಪಠ್ಯವಾಯಿತು. ರಾಯಲ್ಟಿ ಹಂಚಿಕೊಳ್ಳುವುದು ಮಾತಾಗಿಯೇ ಉಳಿಯಿತು. ಈ ಮಧ್ಯೆ ಇಂದಿರಾಯತನಯ ‘ಪ್ರಜಾವಾಣಿ’ಗೆ ಹೋದರು. ಈ ಬೌದ್ಧಿಕ ಅಪ್ರಮಾಣಿಕತೆ ಕಂಡು ನಾನು ಕ್ಷುದ್ರನಾಗಿದ್ದರೂ ಅಸಹಾಯಕನಾಗಿದ್ದೆ. ಅಲ್ಲಿ ನನ್ನ ಬೆಂಬಲಕ್ಕೆ ನಿಲ್ಲುವವರು, ನೈತಿಕತೆಯನ್ನು ಎತ್ತಿ ಹಿಡಿಯುವವರು ಯಾರೂ ಇರಲಿಲ್ಲ.

ಇಡೀ ಲೇಖನ ಓದಲು ಇಲ್ಲಿ ಕ್ಲಿಕ್ಕಿಸಿ

‍ಲೇಖಕರು Avadhi

September 19, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: