ಕೆ ವಿ ತಿರುಮಲೇಶ್
ಲಂಡನ್ ಸೇತುವೆ ಬೀಳುತ್ತಾ ಇದೆ
(London Bridge is Falling Down: Anonymous)
ಲಂಡನ್ ಸೇತುವೆ ಬೀಳುತ್ತಾ ಇದೆ
ಬೀಳುತ್ತಾ ಇದೆ ಬೀಳುತ್ತಾ ಇದೆ
ಲಂಡನ್ ಸೇತುವೆ ಬೀಳುತ್ತಾ ಇದೆ
ಓ ನನ್ನ ರಾಣಿ
ತನ್ನಿರದಕ್ಕೆ ಮರ ಮತ್ತು ಮಣ್ಣು
ಮರ ಮತ್ತು ಮಣ್ಣು ಮರ ಮತ್ತು ಮಣ್ಣು
ತನ್ನಿರದಕ್ಕೆ ಮರ ಮತ್ತು ಮಣ್ಣು
ಓ ನನ್ನ ರಾಣಿ
ಮರ ಮತ್ತು ಮಣ್ಣು ತೊಳೆದೋಗುವುದು
ತೊಳೆದೋಗುವುದು ತೊಳೆದೋಗುವುದು
ಮರ ಮತ್ತು ಮಣ್ಣು ತೊಳೆದೋಗುವುದು
ಓ ನನ್ನ ರಾಣಿ
ತನ್ನಿರದಕ್ಕೆ ಇಟ್ಟಿಗೆ ಸುಣ್ಣ
ಇಟ್ಟಿಗೆ ಸುಣ್ಣ ಇಟ್ಟಿಗೆ ಸುಣ್ಣ
ತನ್ನಿರದಕ್ಕೆ ಇಟ್ಟಿಗೆ ಸುಣ್ಣ
ಓ ನನ್ನ ರಾಣಿ
ಇಟ್ಟಿಗೆ ಸುಣ್ಣ ನಿಂತ್ಕೊಳ್ಳೊದಿಲ್ಲ
ನಿಂತ್ಕೊಳ್ಳೊದಿಲ್ಲ ನಿಂತ್ಕೊಳ್ಳೊದಿಲ್ಲ
ಇಟ್ಟಿಗೆ ಸುಣ್ಣ ನಿಂತ್ಕೊಳ್ಳೊದಿಲ್ಲ
ಓ ನನ್ನ ರಾಣಿ
ತನ್ನಿರದಕ್ಕೆ ಕಬ್ಬಿಣ ಉಕ್ಕು
ಕಬ್ಬಿಣ ಉಕ್ಕು ಕಬ್ಬಿಣ ಉಕ್ಕು
ತನ್ನಿರದಕ್ಕೆ ಕಬ್ಬಿಣ ಉಕ್ಕು
ಓ ನನ್ನ ರಾಣಿ
ಕಬ್ಬಿಣ ಉಕ್ಕು ಬಾಗುತ್ತೆ ಬಳಲುತ್ತೆ
ಬಾಗುತ್ತೆ ಬಳಲುತ್ತೆ ಬಾಗುತ್ತೆ ಬಳಲುತ್ತೆ
ಕಬ್ಬಿಣ ಉಕ್ಕು ಬಾಗುತ್ತೆ ಬಳಲುತ್ತೆ
ಓ ನನ್ನ ರಾಣಿ
ತನ್ನಿರದಕ್ಕೆ ಬೆಳ್ಳಿ ಚಿನ್ನ
ಬೆಳ್ಳಿ ಚಿನ್ನ ಬೆಳ್ಳಿ ಚಿನ್ನ
ತನ್ನಿರದಕ್ಕೆ ಬೆಳ್ಳಿ ಚಿನ್ನ
ಓ ನನ್ನ ರಾಣಿ
ಬೆಳ್ಳಿ ಚಿನ್ನ ಕದ್ದೋಗುತ್ತೆ
ಕದ್ದೋಗುತ್ತೆ ಕದ್ದೋಗುತ್ತೆ
ಬೆಳ್ಳಿ ಚಿನ್ನ ಕದ್ದೋಗುತ್ತೆ
ಓ ನನ್ನ ರಾಣಿ
ಇರಲೊಬ್ಬ ಕಾವಲು ಇಡೀ ರಾತ್ರಿ
ಇಡೀ ರಾತ್ರಿ ಇಡೀ ರಾತ್ರಿ
ಇರಲೊಬ್ಬ ಕಾವಲು ಇಡೀ ರಾತ್ರಿ
ಓ ನನ್ನ ರಾಣಿ
ಒಂದ್ವೇಳೆ ಅವನಿಗೆ ನಿದ್ದೆಯು ಬಂದರೆ
ನಿದ್ದೆಯು ಬಂದರೆ ನಿದ್ದೆಯು ಬಂದರೆ
ಒಂದ್ವೇಳೆ ಅವನಿಗೆ ನಿದ್ದೆಯು ಬಂದರೆ
ಓ ನನ್ನ ರಾಣಿ
ಸೇದಲಿ ಅವನು ಪೈಪನು ಒಂದನು
ಸೇದಲಿ ಅವನು ಸೇದಲಿ ಅವನು
ಸೇದಲಿ ಅವನು ಪೈಪನು ಒಂದನು
ಓ ನನ್ನ ರಾಣಿ

ಬಾ ಬಾ ಕುರಿಮರಿ
(Baa Baa Black Sheep: Anonymous)
ಬಾ ಬಾ ಕುರಿಮರಿ ಬಾ ಬಾ ಕುರಿಮರಿ
ತುಪ್ಪುಳವುಂಟೇ ನಿನ್ನ ಬಳಿ?
ಯಸ್ಸಾರ್, ಯಸ್ಸಾರ್ ಮೂರ್ ಚೀಲ ತುಂಬ
ಒಡೆಯರಿಗೊಂದು ಒಡತಿಗೆ ಒಂದು
ಇನ್ನೊಂದು ನಮ್ಮ ಬೀದಿಯ ಕೊನೆಗೆ
ಇರುವಂಥ ಒಬ್ಬ ಪುಟ್ಟುಡುಗನಿಗೆ!
*
ಹಶ್ಶಾ ಬುಶ್ಶಾ
(Ringa Ringa Roses: Anonymous)
ಗುಲಾಬಿ ಹೂಗಳ ಉಂಗುರ ಸುತ್ತಿ
ಮಲ್ಲಿಗೆ ಹೂಗಳ ಜೇಬಲಿ ಒತ್ತಿ
ಕುಣಿಯುವ ಕಾಲನು ಮೇಲಕ್ಕೆತ್ತಿ
ಹಶ್ಶಾ ಬುಶ್ಶಾ
ಇದೋ ಬಿದ್ದಿವಿ ನಾವುಗಳೆಲ್ಲಾ
ಎಂಥಾ ಚಂದದ ಎಳೆಹೂಬಿಸಿಲು
ಆಚೆಗೆ ಹೂವು ಈಚೆಗೆ ಹೂವು
ನೆಲದಿಂದಿನಿತು ಮೇಲಕೆ ಜಿಗಿದು
ಹಶ್ಶಾ ಬುಶ್ಶಾ
ಇದೋ ಬಿದ್ದಿವಿ ನಾವುಗಳೆಲ್ಲಾ
*
ಬಿಸಿ ಬಿಸಿ ಬನ್ಸು
(Hot Cross Buns: Anonymous)
ಯಾರಿಗೆ ಬೇಕು ಬಿಸಿ ಬಿಸಿ ಬನ್ಸು
ಯಾರಿಗೆ ಬೇಕು ಹೊಸ ಹೊಸ ಬನ್ಸು
ಮೂಗಿಗೆ ಪರಿಮಳ ಬಾಯಿಗೆ ಸ್ವಾದು
ಯಾರಿಗೆ ಬೇಕು ಸಿಹಿ ಸಿಹಿ ಬನ್ಸು
ರೂಪಾಯಿಗೊಂದು ಬಿಸಿ ಬಿಸಿ ಬನ್ಸು
ಎರಡು ರುಪಾಯಿಗೆ ಎರಡೆರಡು ಬನ್ಸು
ಆರುವ ಮೊದಲೇ ಕೊಳ್ಳಿರಿ ಬನ್ಸು
ಬದಲುವ ಮೊದಲೇ ನಿಮ್ಮಯ ಮನಸು
*
ಮರಿಮಲ್ಲಪ್ಪ ಸಾವ್ಕಾರ
(Solomon Grundy: Anonymous)
ಮರಿಮಲ್ಲಪ್ಪ ಸಾವ್ಕಾರ
ಹುಟ್ಟಿದ್ನಪ್ಪ ಸೋಮ್ವಾರ
ಮಂಗಳವಾರ ನಾಮ್ಕಕರಣ
ಬುಧವಾರ ಆಯ್ತು ಪಾಣಿಗ್ರಹಣ
ಕಾಯಿಲೆಬಿದ್ದು ಗುರುವಾರ
ಉಲ್ಬಣಿಸಿತ್ತು ಶುಕ್ರವಾರ
ಪ್ರಾಣವ ಬಿಟ್ಟನು ಶನಿವಾರ
ಮಣ್ಣೊಳಗಾದನು ಭಾನ್ವಾರ

ಗೆಝಳಿ ಕರಡಿ
(The Grizzly Bear: A. E. Housman)
ಗೆಝಳಿ ಕರಡಿ ಗೆಝಳಿ ಕರಡಿ
ಭೀಕರ ಹಾಗೂ ಬೃಹದಾಕಾರ
ಪಾಪನ ಹಿಡಿದು ಕುಡಿದಿದೆ ನೀರ
ಆದರೆ ಪಾಪಗೆ ಗೊತ್ತೇ ಇಲ್ಲ
ಕರಡಿ ತನ್ನನು ನುಂಗಿದ ವಿಚಾರ
*
ಪಿಪ್ಪಾ ಹೊಂಟಾಳೆ
(‘Pippa Passes’: Robert Browning)
ವರ್ಷ ತಲಪಿದೆ ವಸಂತಕಾಲ
ದಿವಸ ತಲಪಿದೆ ಪ್ರಾತಃಕಾಲ
ಮುಂಜಾವಿಗೆ ಇದು ಏಳರ ಹೊತ್ತು
ಬೆಟ್ಟದ ಬದಿಯಲಿ ಇಬ್ಬನಿ ಮುತ್ತು
ಹಕ್ಕಿ ಹಾರುತಿದೆ ಬಾನಿನ ಮೇಲೆ
ಬಸವನ ಹುಳವಿದೆ ಮುಳ್ಳಿನ ಮೇಲೆ
ದೇವನಿರುವನು ಸ್ವರ್ಗದಲಿ
ಎಲ್ಲಾ ಎಲ್ಲಿರಬೇಕೋ ಅಲ್ಲಿ
ಸರಿಯಾಗಿರುವುದು ಲೋಕದಲಿ!
*
ಉಪ್ಪಿನ ಕೊಳ್ಳದಲ್ಲಿ ಕಿವಿಗೆ ಬಿದ್ದದ್ದು
‘Overheard on a Saltmarsh’: Harold Monro
ನಿಂಫ್, ನಿಂಫ್, ಏನಿದು ನಿನ್ನ ಮಣಿಗಳು?
ಪಚ್ಚೆ ಗಾಜು, ಗುಮ್ಮ. ದಿಟ್ಟಿಸ್ತೀ ಯಾಕವನ್ನ?
ಕೊಡು ನನಗವನ್ನ.
ಇಲ್ಲ, ನಾನು ಕೊಡಲ್ಲ.
ಹಾಗಿದ್ರೆ ಇರುಳೆಲ್ಲಾ
ಹುಲ್ಲನೂದಿ ಹುಯ್ಯಲಿಡುವೆ,
ಕೆಸರಲಿ ಬಿದ್ದು ಅತ್ತುಕರೆವೆ
ಆ ನಿನ್ನ ಮಣಿಗಳಿಗೆ
ಗುಮ್ಮ, ನಿನಗೆ ಅವುಗಳೆಂದರೆ
ಯಾಕೆ ಅಷ್ಟೊಂದಿಷ್ಟ?
ಚಿಕ್ಕೆಗಳಿಂತಲು ಚಂದ, ನೀರಿಗಿಂತಲು ಅಂದ,
ಹಾಡುವ ದನಿಗಳಿಗಿಂತಲು ಮಂದ,
ಯಾವನೇ ಮನುಷ್ಯನ ಮಗಳಿಗಿಂತಲು
ಸುಂದರ, ನಿನ್ನ ಉಂಗುರ.
ಶ್ಶ್… ಕದ್ದು ತಂದೆ ನಾನವನ್ನ
ಮುದ್ದು ಚಂದ್ರನಿಂದ.
ಕೊಡು ನನಗೆ ಮಣಿಗಳ, ನಿನ್ನ ಕಣ್ಮಣಿಗಳ.
ಇಲ್ಲ, ನಾನು ಕೊಡಲ್ಲ.
ಆಳವಾದ ಹಳ್ಳದಲ್ಲಿ ಗೋಳಾಡುವೆ ನಾನು
ಪಚ್ಚೆ ಗಾಜಿನ ಮಣಿಗಳಿಗಾಗಿ, ಅವುಗಳ ಮೇಲಿನ ಪ್ರೀತಿಗಾಗಿ.
ಕೊಡು ನನಗವನ್ನ. ಕೊಟ್ಟುಬಿಡೇ ಅವನ್ನ.
ಇಲ್ಲ, ನಾನು ಕೊಡಲ್ಲ.

OLYMPUS DIGITAL CAMERA
ಒಗಟು
(A Riddle: Christina Rossetti)
ತಲೆಯುಂಟು ಕಣ್ಣಿಲ್ಲ
ಕಣ್ಣುಂಟು ತಲೆಯಿಲ್ಲ
ಯಾರಿಗೆ ತಲೆಯುಂಟು
ಯಾರಿಗೆ ಕಣ್ಣಿಲ್ಲ
ಯಾರಿಗೆ ಕಣ್ಣುಂಟು
ಯಾರಿಗೆ ತಲೆಯಿಲ್ಲ?
ದಾರಕೆ ಜೋತು ಬಿದ್ದವ ಬಲ್ಲ!
(ಉತ್ತರ: ಸೂಜಿ)
*
ಯಾರು?
(Emily Dickinson)
ನಾನ್ ಯಾರಲ್ಲ ನೀನ್ ಯಾರ್ ಹೇಳು
ನೀ ಕೂಡ ಯಾರೂ ಅಲ್ವಾ?
ಸರಿ ಹಾಗಿದ್ದರೆ ನಾವೊಂದು ಜೋಡಿ!
ಯಾರಿಗು ಹೇಳೋದು ಬ್ಯಾಡ-
ಎಲ್ಲ ಕಡೆ ಟಾಂ ಟಾಂ ಮಾಡ್ಯಾರು
ಯಾರೋ ಒಬ್ಬ ಆಗಿರೊದೆಂದರೆ
ಎಷ್ಟೊಂದು ಬೇಸರ ಅಲ್ವಾ?
ಎಷ್ಟೊಂದು ಪಬ್ಲಿಕ್-ಕಪ್ಪೆಯ ಹಾಗೆ
ಇಡೀ ಮಳೆಗಾಲ ತಾನ್ಯಾರೆಂದು
ಹೆಸರೇಳ್ತ ಇರೋದು ಅಂದ್ರೆ
ಕೇಳುವ ಹಳ್ಳದ ಖುಷಿಗಾಗಿ
ಟ್ರೊಯ್ಯೋಂ ಟ್ರೊಯ್ಯೋಂ ಟ್ರೊಯ್ಯೋಂ
*
ಪುಟ್ಟಿ, ಪುಟ್ಟಿ
(Little Girl, Little Girl: Anynymous)
ಪುಟ್ಟಿ ಪುಟ್ಟಿ ಎಲ್ಲಿಗೆ ಹೋಗಿದ್ದಿ?
ರಾಣಿಗೆ ಕೊಡಲು ಗುಲಾಬಿ ಆಯಲು ತೋಟಕೆ ಹೋಗಿದ್ದೆ
ಪುಟ್ಟಿ ಪುಟ್ಟಿ ನಿನಗೇನು ಕೊಟ್ಟಳು ಆ ನಿನ್ನ ರಾಣಿ ಎಂಬುವಳು?
ದೊಡ್ಡದೊಂದು ಡಯಮಂಡ್ ಕೊಟ್ಟಳು,
ನಾನಿತ್ತ ಹೂವಿನ ಶೂವಿಗಿಂತ್ಲು ದೊಡ್ಡದು!
*
ಮೂರು ಕುರುಡು ಇಲಿಗಳು
(Three Blind Mice: Anonymous)
ಮೂರು ಕುರುಡು ಇಲಿಗಳು
ನೋಡಿ ಹೆಂಗೆ ಓಡ್ತವೆ
ಒಂದರ ಹಿಂದೆ ಒಂದರ ಹಾಗೆ
ಒಂದನ್ನೊಂದು ಹಿಡಕೊಂಡಿಂಗೆ
ನೋಡಿ ಹೆಂಗೆ ಓಡ್ತವೆ
ರೈತನ ಹೆಂಡ್ತಿಯ ಕಾಡ್ತವೆ
ಅವಳ ಹಿಂದೆ ಬೀಳ್ತವೆ
ರೈತನ ಹೆಂಡ್ತಿ ಕತ್ತರಿ ತೆಗೆದು
ಅವುಗಳ ಬಾಲವ ಕತ್ತರಿಸ್ತಾಳೆ
ನೆತ್ತರು ಸುರಿಸಿ ಇಲಿಗಳು
ನೋಡಿ ಹೆಂಗೆ ಓಡ್ತವೆ
ರೈತನ ಹೆಂಡ್ತಿಯ ಕಾಡ್ತವೆ
*
ಮಳೆಯೇ ಮಳೆಯೇ
(Rain Rain Go Away: Anonymous)
ಮಳೆಯೇ ಮಳೆಯೇ ಹೋಗೆಲೆ ಮಳೆಯೇ
ನಮ್ಮಯ ಪುಟ್ಟನಿಗಾಡ್ಬೇಕಂತೆ
ನಾಳೆ ಬೇಕಾದರೆ ಬರುವಿಯಂತೆ
ಸಂತೆಯ ವೇಳೆಗೆ ಸುರಿಯುವಿಯಂತೆ
*





ತಿರುಮಲೇಶ್ವರರ ಕನ್ನಡಾನುವಾದ ತುಂಬಾ ಸೊಗಸಾಗಿದೆ. ಇಂಗ್ಲಿಷ್ ಕವಿತೆ ಗೊತ್ತಿಲ್ಲದವರಿಗೆ ಅದು ಕನ್ನಡ ಪದ್ಯಗಳೇ ಅನ್ನಿಸುವಂತಿದೆ.
ಅನುವಾದ ಯಾಕೋ ತುಂಬಾ ಸ್ಟಿಫ್ ಆಯಿತು ಅನ್ನಿಸ್ತು, ಕೈಲಾಸಂ ಸ್ಟೈಲ್ ನಲ್ಲಿ ಆಡುಮಾತಲ್ಲಿ ಮಾಡಿದ್ರೆ ಮಕ್ಕಳಿಗೆ ಹೇಳೋಕೆ ಚೆನ್ನಾಗಿರುತ್ತೆ ಅನ್ಸುತ್ತೆ..
ಮೊದಲ ಒಂದೆರೆಡು ಪದ್ಯಗಳನ್ನು ನಾನು ಪ್ರಯತ್ನಿಸಿದೆ, ತಪ್ಪಿದ್ದರೆ ಹೇಳಿ,
ಲಂಡನ್ ಸೇತ್ವೆ ಬೀಳ್ತಾ ಇದೆ
ಬೀಳ್ತಾ ಇದೆ, ಬೀಳ್ತಾ ಇದೆ
ಲಂಡನ್ ಸೇತ್ವೆ ಬೀಳ್ತಾ ಇದೆ
ಓ ರಾಣಿಯೇ!
ಕಟ್ಟು ಅದನ್ನ ಕಬ್ಬಿಣದಿಂದ
ಕಬ್ಬಿಣದಿಂದ, ಕಬ್ಬಿಣದಿಂದ
ಕಟ್ಟು ಅದನ್ನ ಕಬ್ಬಿಣದಿಂದ
ಓ ರಾಣಿಯೇ!
ಕಬ್ಬಿಣ ಮುರಿದು ಮುಕ್ಕಾಗುತ್ತೆ,
ಮುರಿಯುತ್ತೆ, ಮುರಿಯುತ್ತೆ,
ಕಬ್ಬಿಣ ಮುರಿದು ಮುಕ್ಕಾಗುತ್ತೆ,
ಓ ನನ್ನ ರಾಣಿ!
………….