ಡಾ ನಿಂಗು ಸೊಲಗಿ
ನಮಗಿಂದು ಬೇಕಾಗಿರುವುದು ಕೇವಲ ಬುದ್ಧಿವಂತ ಮಕ್ಕಳಲ್ಲ ಸೃಜನಶೀಲ ಮಕ್ಕಳು. ಸೃಜನಶೀಲ ವ್ಯಕ್ತಿಗಳು ಸರಳ, ನಿಷ್ಕಪಟ, ಸ್ಪಷ್ಟ ಆಲೋಚನೆಯ, ಬಹುಮುಖಿ ಸಾಮರ್ಥ್ಯದ, ಸರ್ವತೋಮುಖ ಶಕ್ತಿಯ, ಸ್ವಂತಿಕೆಯ ಸ್ವಭಾವದವರಾಗಿದ್ದು ಆಶಾವಾದಿಗಳಾಗಿರುತ್ತಾರೆ ಎಂಬುದು ಅಧ್ಯಯನದಿಂದ ಸಾಬೀತಾಗಿದೆ. ಸೃಜನಶೀಲರಾದವರು ಬುದ್ಧಿವಂತರಾಗೇ ಇರುತ್ತಾರೆ. ಆದರೆ ಅದೇ ಬುದ್ಧಿವಂತರೆಲ್ಲರೂ ಸೃಜನಶೀಲರಾಗಿರುವುದಿಲ್ಲ.
ಮನೋವಿಜ್ಞಾನಿಗಳು ಕೈಗೊಂಡ ಅಧ್ಯಯನದಿಂದ ಈ ವಿಷಯವನ್ನು ಪರಾಮರ್ಶಿಸಬಹುದು. ಚಿಕಾಗೋ ವಿಶ್ವವಿದ್ಯಾನಿಲಯದ ಮನೋವಿಜ್ಞಾನಿಗಳಾದ ಗೆಸೆಲ್ ಮತ್ತು ಜಾಕ್ಸನ್‌ರವರು ಮಕ್ಕಳ ಮೇಲೆ ಕೈಗೊಂಡ ಪ್ರಯೋಗದಿಂದ ಈ ನಿಲುವಿಗೆ ಬಂದಿದ್ದಾರೆ. ಹಾಗೆಯೇ ಅಮೇರಿಕಾದ ಬರ್‌ಕ್ಲಿಯ ಕ್ಯಾಲಿಪೋರ್ನಿಯಾ ವಿಶ್ವವಿದ್ಯಾನಿಲಯದ ವರ್ತನಾ ವಿಜ್ಞಾನ ಸಂಸ್ಥೆಯಲ್ಲಿನ ವಿಜ್ಞಾನಿಗಳ ಅಧ್ಯಯನದಿಂದಲೂ ಈ ವಿಷಯ ಸ್ಪಷ್ಟವಾಗಿದೆ.
ಈ ಅಭಿಪ್ರಾಯವನ್ನು ಬೆಂಬಲಿಸುವ ಹಾಗೆ ಮನೋವಿಜ್ಞಾನಿ ಡಾ. ಸಿ.ಆರ್. ಚಂದ್ರಶೇಖರ್‌ರವರು ವ್ಯಕ್ತಿ ಹೆಚ್ಚು ಹೆಚ್ಚು ಸೃಜನಶೀಲನಾದಷ್ಟು ಹೆಚ್ಚೆಚ್ಚು ಯಶಸ್ಸನ್ನು ಕಾಣುತ್ತಾನೆ. ಆತನ ಮೂಲಕ ಮನುಕುಲ ಮೇಲ್ಮಟ್ಟವನ್ನು ತಲುಪುತ್ತದೆ. ಸಮಾಜ ಹೆಚ್ಚು ಅಭಿವೃದ್ಧಿಯನ್ನು ಸಾಧಿಸುತ್ತದೆ ಎನ್ನುತ್ತಾರೆ. ಹಾಗಾಗಿ ಶಾಲಾ ಶಿಕ್ಷಣದಲ್ಲಿ ಕೇವಲ ಬುದ್ಧಿವಂತಿಕೆಗೆ ಮಾನ್ಯತೆ ನೀಡದೆ ಮಕ್ಕಳಲ್ಲಿರುವ ಸೃಜನಶೀಲತೆಗೆ ಪೋಷಣೆ ದೊರೆಯಬೇಕು. ಪಾಲಕರು, ಶಿಕ್ಷಕರು, ಶ್ರೇಯೋಕಾಂಕ್ಷಿಗಳು ಮಕ್ಕಳಿಗೆ ಕಲಾನುಭವದ ಮೂಲಕ ಸೃಜನಶೀಲತೆಯನ್ನು ಬೆಳೆಸಿಕೊಳ್ಳಲು ಅವಕಾಶ ಮಾಡಿಕೊಡಬೇಕು. ಸೃಜನಶೀಲ ಚಿಂತನೆಗೆ ಪೂರಕ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹ ನೀಡಿ, ಸೃಜನಶೀಲತೆ ವಿಕಾಸಗೊಂಡು, ಮಕ್ಕಳ ಸರ್ವಾಂಗೀಣ ಬೆಳವಣಿಗೆಯಾಗಲು ಬೆಂಬಲಿಸಬೇಕು.

ನಮ್ಮ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಏನೆಲ್ಲ ಮಾರ್ಪಾಡುಗಳನ್ನು ತರುತ್ತ ಬಂದಿದ್ದರೂ ಒಂದು ಪ್ರಮುಖ ಸಮಸ್ಯೆ ಹಾಗೇ ಉಳಿದಿದೆ. ಅದು ಯಾವುದೆಂದರೆ ’ಕಲಿಕೆಗೆ ಅಕ್ಷರ ಮಾತ್ರ ಮುಖ್ಯವೆಂದು ಭಾವಿಸಿದ್ದು ಹಾಗೂ ಪರೀಕ್ಷೆಯಲ್ಲಿ ಅಂಕಗಳೇ ಪ್ರಾಮುಖ್ಯತೆಯನ್ನು ಪಡೆದದ್ದು.ʼ ಇದರಿಂದಾಗಿ ಕಲಿತವರು-ಕಲಿಯದವರು, ಬುದ್ಧಿವಂತರು-ದಡ್ಡರು ಎಂಬ ಎರಡು ರೀತಿಯ ಜನವರ್ಗ ಹುಟ್ಟಿಕೊಂಡಿದೆ. ಬಹುತೇಕ ಪಾಲಕ ಪೋಷಕರೂ ಇದನ್ನೇ ನಂಬಿ ಹೊರಟಿದ್ದಾರೆ. ಹೀಗಾಗಿಯೇ ಮಕ್ಕಳಲ್ಲಿ ತರತಮಭಾವ ಮೂಡಿ ಆತ್ಮಸ್ಥೈರ‍್ಯ ಕಳೆದುಕೊಂಡು ತಮ್ಮಲ್ಲಿರುವ ಸೃಜನಶೀಲ ಮನೋಭಾವವನ್ನು ಬದಲಿಸಿಕೊಂಡು ಯಥಾಸ್ಥಿತಿವಾದಿಗಳಾಗುತ್ತಿದ್ದಾರೆ. ಶಾಲೆಗಳಲ್ಲಿ ಮಕ್ಕಳ ಪ್ರತಿಭಾ ಶಕ್ತಿಗೆ, ಸೃಜನಾತ್ಮಕ ಆಲೋಚನೆ, ಚಿಂತನೆ ಹಾಗೂ ಕ್ರಿಯಾಶೀಲ ಚಟುವಟಿಕೆಗಳಿಗೆ ಮುಕ್ತ ಅವಕಾಶವಿರಬೇಕು. ಹಾಗೂ ಫಲಿತಾಂಶ ಲಿಖಿತ ಪರೀಕ್ಷೆಗಳಿಂದಲ್ಲದೇ ಭಿನ್ನ ವಿಧಾನಗಳಿಂದಾಗಬೇಕು.
ವಸಾಹತುಶಾಹಿಯಿಂದ ಪ್ರಜಾಸತ್ತೆಗೆ ಮೈಹೊರಳಿಸಿ ಎಪ್ಪತ್ತೈದು ವರ್ಷಗಳು ಕಳೆದವು. ಈ ಹಾದಿಯಲ್ಲಿ ಆರ್ಥಿಕ, ರಾಜಕೀಯ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ವಿಜ್ಞಾನ-ತಂತ್ರಜ್ಞಾನದಲ್ಲಿ ಹಲವು ಬದಲಾವಣೆಗಳಾಗಿವೆ. ಗ್ರಾಮೀಣ ಸಾಂಸ್ಕೃತಿಕ ಬದುಕು ನಿರಂತರವಾಗಿ ಸ್ತಿತ್ಯಂತರವಾಗುತ್ತ ಬಂದಿದೆ. ಜಾಗತೀಕರಣದ ನವಬಂಡವಾಳವಾದದ ಆಕ್ರಮಣದ ನಂತರ ಎಲ್ಲವೂ ಹಣ ಮತ್ತು ವ್ಯಾಪಾರದ ವಹಿವಾಟಾಗಿ ಪರಿವರ್ತನೆಯಾಗುತ್ತಿದೆ. ಸ್ವಾವಲಂಬನೆಯ ಸಾಧನವಾಗಬೇಕಿದ್ದ ಶಿಕ್ಷಣ ನಿರುದ್ಯೋಗಿಗಳನ್ನು ಸೃಷ್ಟಿಸುತ್ತಿದೆ ಎಂಬ ವಾದ ಕೇಳಿಬರುತ್ತಿದೆ. ಗೊತ್ತಿಲ್ಲದಂತೆಯೇ ಮಕ್ಕಳ ಬೆಳವಣಿಗೆಯಲ್ಲಿ ಅಂತರ ಗೋಚರಿಸುತ್ತಿದೆ. ಸೃಜನಶೀಲತೆ ಹಾಗೂ ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಂಡು ಬೆಳೆಯಬೇಕಾದ ಮಕ್ಕಳು ಒಂದೆಡೆ ಐಟಿ-ಬಿಟಿ ಲೋಕದ ಸ್ಪರ್ಧೆಗೆ ಸಿದ್ಧವಾಗುವ ಒತ್ತಡದಲ್ಲಿ, ಇನ್ನೊಂದೆಡೆ ಮಕ್ಕಳ ಲೋಕವನ್ನೇ ಲೆಕ್ಕಕ್ಕೆ ತೆಗೆದುಕೊಳ್ಳದ ಹಣ ಹಾಗೂ ವ್ಯಾಪಾರ ಕೇಂದ್ರಿತ ವ್ಯವಸ್ಥೆಯ ತಾತ್ಸಾರದಲ್ಲಿ ಬೆಳೆಯುತ್ತಿದ್ದಾರೆ. ಅಂಕಗಳೇ ಪ್ರಮುಖವಾಗಿರುವ ಪರೀಕ್ಷಾಧಾರಿತ ಪಾಠ ಪ್ರವಚನಗಳ ಮಿತಿಯಿಂದ ಕೇವಲ ಜ್ಞಾನಾತ್ಮಕ ವಲಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗುತ್ತಿದೆ. ಜೊತೆಗೆ ಮಕ್ಕಳ ಪ್ರತಿಭಾಶಕ್ತಿಯನ್ನೆಲ್ಲ ಮಾಹಿತಿ ತಂತ್ರಜ್ಞಾನಕ್ಕೆ ಒಗ್ಗಿಸುವ ವ್ಯವಸ್ಥಿತ ಚಟುವಟಿಕೆಗಳು ನಡೆಯುತ್ತಿವೆ. ಇದರಿಂದಾಗಿ ಮಗುವಿನ ಸೃಜನಶೀಲ ಮನಸ್ಸು ಮುದುಡುತ್ತಿದೆ.
ಬಹುತೇಕ ಪಾಲಕರು ಹಾಗೂ ಮಕ್ಕಳಲ್ಲಿ ’ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳವುದೇ ಮಹಾತಪ್ಪು ಅದರಿಂದ ಸಮಕಾಲೀನ ಜಗತ್ತಿನ ಸ್ಪರ್ಧೆಯಲ್ಲಿ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಿಲ್ಲʼ ಎಂಬ ಭ್ರಮೆ ಸ್ಥಾಪಿತವಾಗುತ್ತಿದೆ. ಪಠ್ಯವಿಷಯದಿಂದಾಚೆ ಒಂದಿಷ್ಟೂ ಗಮನ ಹರಿಸದಂತೆ ಮಕ್ಕಳನ್ನು ಟ್ಯೂಶನ್ ಹಾಗೂ ನಾನಾ ತರಬೇತಿಗಳ ಜೈಲಿನಲ್ಲಿ ಬಂಧಿಗಳಾಗಿಸುತ್ತಿದ್ದಾರೆ. ಇದರಿಂದಾಗಿ ಮಕ್ಕಳಲ್ಲಿ ವಾಚನಾಭಿರುಚಿ, ಪ್ರಯೋಗಶೀಲತೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಿಕೆ ಕ್ಷೀಣಿಸುತ್ತಿದೆ. ಈ ಎಲ್ಲ ಕಾರಣಗಳಿಂದಾಗಿ ಮಕ್ಕಳು ಭಾವನಾತ್ಮಕವಾಗಿ ದುರ್ಬಲರಾಗುತ್ತಿದ್ದಾರೆ. ಸೃಜನಶೀಲ ಮಕ್ಕಳು ಶಾಲಾ ಅಂಗಳದಲ್ಲಿ ನಡೆಯುವ ಯಾಂತ್ರಿಕವಾದ ಪರೀಕ್ಷಾ ಪಾಠಗಳಿಂದ ದಡ್ಡನೆಂಬ ಹಣೆಪಟ್ಟಿ ಕಟ್ಟಿಕೊಂಡು ಆತ್ಮಸ್ಥೈರ್ಯ ಕಳೆದುಕೊಂಡು ಶಿಕ್ಷಣದಿಂದ ವಿಮುಖರಾಗುತ್ತಿದ್ದಾರೆ. ಇದನ್ನು ತಡೆದು; ಶಾಲಾ ಶಿಕ್ಷಣದಲ್ಲಿ ಸ್ವಯಂಕಲಿಕೆಯ ಅವಕಾಶ, ಆಸಕ್ತ ಕ್ಷೇತ್ರಗಳಲ್ಲಿ ಪ್ರಯೋಗಶೀಲವಾಗಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುವ ಅವಕಾಶ ಕಲ್ಪಿಸುವಂತಾಗಬೇಕು. ಅವರ ಪ್ರತಿಭೆಗೆ ತಕ್ಕ ಪುರಸ್ಕಾರ ಸಿಗುವಂತಾಗಬೇಕು.
ಮಕ್ಕಳಲ್ಲಿರುವ ಸೃಜನಶೀಲ ಗುಣವನ್ನು ಬೆಳೆಸಿ ಅವರ ಕ್ರೀಯಾಶೀಲತೆಗೆ ಇಂಬುಗೊಟ್ಟು, ಅವರ ಭಾವನಾಲೋಕ ವಿಸ್ತರಿಸಿಕೊಂಡು ಬೆಳೆಯಲು ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಿಸರ ತುಂಬಾ ಅಗತ್ಯ. ಇಂಥ ಪರಿಸರ ಮನೆ-ಶಾಲೆ-ಸಮುದಾಯ ಎಲ್ಲೆಂದರಲ್ಲಿ ದೊರೆಯವಂತಾಗಬೇಕು. ಹಣ, ವ್ಯಾಪಾರ, ವ್ಯಕ್ತಿವಾದ, ಮಾರಾಟ, ಕೊಳ್ಳುಬಾಕತನ ಮೊದಲಾದವುಗಳನ್ನೇ ಬದುಕಿನ ಅನಿವಾರ‍್ಯತೆಯನ್ನಾಗಿಸುತ್ತಿರುವ ಜಾಗತೀಕರಣದ ಹೊಸ ವ್ಯವಸ್ಥೆಯಲ್ಲಿ ಮಕ್ಕಳು ಸೃಜನಶೀಲತೆಯನ್ನು ಕಾಪಾಡಿಕೊಳ್ಳಬೇಕಾದ ದಾರಿಗಳನ್ನು ಶೋಧಿಸಬೇಕಾಗಿದೆ. ಇಂಥ ದಾರಿಗಳಲ್ಲಿ ಶಾಲಾ ಅಂಗಳದಲ್ಲಿ ಮಕ್ಕಳಿಗೆ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪೂರಕ ಅವಕಾಶ ಒದಗಿಸಿಕೊಡುವುದಾಗಿದೆ. ಶಾಲಾ ಪಠ್ಯಕ್ರಮ ೨೦೦೫ ಹಾಗೂ ೨೦೨೦ರ ಹೊಸ ಶಿಕ್ಷಣ ನೀತಿ ಇದಕ್ಕೆ ಬೆಂಬಲವಾಗಿದೆ. ಪಠ್ಯಕ್ರಮದಲ್ಲಿ ಸಹಪಠ್ಯ ವಿಷಯಗಳೂ ಸೇರಿಕೊಂಡು ಮಕ್ಕಳ ಭೌತಿಕ, ಮಾನಸಿಕ, ಸಾಮಾಜಿಕ ಹಾಗೂ ಸಂವೇದಾತ್ಮಕ ಬೆಳವಣಿಗೆಗೆ ಸಹಾಯಕವಾಗಿವೆ. ಈ ಚಟುವಟಿಕೆಗಳು ವ್ಯಕ್ತಿಯ ಸಮಗ್ರ ಬೆಳವಣಿಗೆಗೆ ಪೂರಕವಾದವುಗಳಾಗಿದ್ದರೂ, ಇವುಗಳ ಮೇಲೆ ಹೆಚ್ಚಿನ ಒತ್ತನ್ನು ನೀಡದ ಪರೀಕ್ಷೆಗಳೇ ಮುಖ್ಯವಾಗಿವೆ. ಹಾಗಾಗಿ ಈ ಕಾರ್ಯ ನಿರೀಕ್ಷಿತ ಮಟ್ಟದಲ್ಲಿ ಸಾಧ್ಯವಾಗಿಲ್ಲ.
ಇದಕ್ಕಾಗಿ ನಾವು ಮೊಟ್ಟಮೊದಲು ಮಾಡಬೇಕಾದ ಕೆಲಸವೆಂದರೆ ನಮ್ಮ ಶಾಲಾ ಶಿಕ್ಷಣದ ವ್ಯವಸ್ಥೆಯಲ್ಲಿ ಮಕ್ಕಳ ಮಾತಿನ ಹಕ್ಕಿಗೆ ಮಾನ್ಯತೆ ನೀಡುವುದು. ಮಾತನಾಡದ ಮಕ್ಕಳ ಮನ ತುಮುಲಗಳೇನು? ಅವರ ಪ್ರತಿಕ್ರಿಯೆ ಏನಿರಬಹುದು? ಎಂಬುದನ್ನರಿತುಕೊಳ್ಳಬೇಕು. ಜ್ಞಾನವೇ ಶಕ್ತಿ, ಮಾಹಿತಿಯೇ ಶಕ್ತಿ ಎಂದು ನಾಗಾಲೋಟದಲ್ಲಿ ಓಡುತ್ತಿರುವ ನಾಗರಿಕ ಸಮಾಜಕ್ಕೆ, ಮಾಹಿತಿ ಅಥವಾ ಜ್ಞಾನ ಸಂಪಾದನ ಶಿಕ್ಷಣದ ಒಂದಂಶ ಮಾತ್ರವಾಗಿದೆ ಎಂಬುದನ್ನು ತಿಳಿಸಿಕೊಡಬೇಕು. ಇದೇ ಎಲ್ಲವೂ ಅಲ್ಲ ಎಂಬುದನ್ನು ಅರುಹಬೇಕು. ಸಂಪಾದಿಸಿದ ಜ್ಞಾನವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ನೆರವಾಗದಿದ್ದರೆ ಯಾವ ಮಗು ತಾನೇ ಸಮರ್ಥವಾಗಿ ಬೆಳೆಯಲು ಸಾಧ್ಯ ಎಂಬುದನ್ನು ಯೋಚಿಸಬೇಕು. ಶಾಲೆಯಲ್ಲಿ ಮಕ್ಕಳಿಗೆ ತಮ್ಮ ಭಾವನಗಳನ್ನು ಪ್ರಕಟಗೊಳಿಸಲು; ದೇಹ, ಮನಸ್ಸು, ಕಲ್ಪನಾ ಸಾಮರ್ಥ್ಯಕ್ಕೆ ಕಡಿವಾಣ ಹಾಕದೇ ಕಂಡಿದ್ದನ್ನೆಲ್ಲ ತುಂಬಿಕೊಳ್ಳಲು; ಅವಕಾಶ ನೀಡಬೇಕು. ಹೊಸ ಹೊಸ, ಹಸಿ ಹಸಿ ಅನಿಸಿಕೆ, ಅನುಭವಗಳೆನಲ್ಲ ಸಂವಹಿಸಬೇಕೆಂದು ಕಾತರಿಸುತ್ತಿರುವ ಕಿವಿ-ಕಣ್ಣುಗಳಿಗೆ, ಪ್ರಕೃತಿ ಸಹಜವಾದ ಮಗುವಿನ ಎಲ್ಲ ತಹತಹಿಕೆಗಳ ಅಭಿವ್ಯಕ್ತಿಗೆ ಅವಕಾಶ ನೀಡಿ, ಸೂಕ್ತ ಹಾಗೂ ಸಮಾಜ ಸಮ್ಮತವಾದ ವಿಚಾರಗಳನ್ನು ಕಂಡುಕೊಂಡು ಅನುಭವ ವಿಸ್ತರಿಸಿಕೊಳ್ಳಲು ಸೂಕ್ತ ಮಾರ್ಗದರ್ಶನದೊಂದಿಗೆ ನರವಾಗುವ ಕಲಿಕಾ ಪ್ರಕ್ರಿಯೆ ಎಲ್ಲ ಶಾಲೆಗಳಲ್ಲಿ ನಿರ್ಮಾಣವಾಗಬೇಕು.

ಮಕ್ಕಳು ಹುಟ್ಟಿನಿಂದ ಬಂದ ತಮ್ಮ ಎಲ್ಲ ಶಕ್ತಿ ಸಾಮರ್ಥ್ಯಗಳ ಪರಿಧಿಯನ್ನು ವಿಸ್ತರಿಸಿಕೊಂಡು ಹಿಂಜರಿಕೆ, ಕೀಳರಿಮೆ, ಸಂಕೋಚ, ಭಯ, ಮೊದಲಾದ ದೌರ್ಬಲ್ಯಗಳನ್ನು ನಿವಾರಿಸಿಕೊಳ್ಳುತ್ತ ಸರ್ವತೋಮುಖ ಬೆಳವಣಿಗೆ ಸಾಧ್ಯವಾಗಿಸಬೇಕು. ತನ್ನ ಸೃಜನಶೀಲ ಶಕ್ತಿಯ ಮೂಲಕ ಎಲ್ಲ ಚಟುವಟಿಕೆಗಳಲ್ಲಿ ಪಾಲ್ಗೊಂಡು, ಆ ಮೂಲಕ ಅಮಿತ ಆನಂದವನ್ನು ಪಡೆಯುವಂತಾಗಬೇಕು. ಕಲಿಯುವ ಪಠ್ಯ ಸುಲಭ ಗ್ರಾಹ್ಯವಾಗಬೇಕು. ಸರಿ ತಪ್ಪುಗಳ ತರತಮ ಜ್ಞಾನ ಲಭಿಸಬೇಕು. ತನ್ನನ್ನು ತಾನು ಕಂಡುಕೊಂಡು, ಆರೋಗ್ಯವಂತ, ಪ್ರಜ್ಞಾವಂತ ಪ್ರಜೆಯಾಗಿ ರೂಪುಗೊಳ್ಳಲು ಶಾಲಾ ಶಿಕ್ಷಣ ನೆರವಾಗಬೇಕು.
ನಮ್ಮ ಶಿಕ್ಷಣ ವ್ಯವಸ್ಥೆ ಮತ್ತು ಶಾಲೆಗಳು ಮಕ್ಕಳಲ್ಲಿರುವ ಸೃಜನಶೀಲತೆಯನ್ನು ದಮನಿಸಿವೆ ಎನ್ನುವ ಖ್ಯಾತ ಚಿಂತಕ ಇವಾನ್ ಇಲಿಚ್ ಅವರ ಮಾತನ್ನು ಮಕ್ಕಳ ಸೃಜನಶೀಲತೆಯ ಮಹತ್ವದ ಹಿನ್ನೆಲೆಯಲ್ಲಿ ಬಹಳ ಗಂಭೀರವಾಗಿ ಪರಿಗಣಿಸಬೇಕಿದೆ. ’ಮಕ್ಕಳ ಸೃಷ್ಟಿಶೀಲ ಶಕ್ತಿಯನ್ನು ನಿರ್ಲಕ್ಷಿಸಿ ಕಲಿಕೆಗಿಂತ ತರಗತಿಯ ಪರಿಕ್ಷಾ ಕೇಂದ್ರಿತ ಬೋಧನೆಯೇ ಮುಖ್ಯವಾಗಿ ಮಕ್ಕಳನ್ನು ಯಥಾ ಸ್ಥಿತಿವಾದಿಗಳನ್ನಾಗಿ ಮಾಡುತ್ತಿದ್ದೇವೆʼ ಎಂಬ ಭಯ ಇವರ ಮಾತಿನಲ್ಲಡಗಿದೆ. ಮಗುವಿನ ಬೆರಗು, ಸ್ವತಂತ್ರ ಆಲೋಚನೆಗಳ ಬೆಳವಣೆಗೆಗೆ ಶಾಲೆಗಳಲ್ಲಿ ಹೆಚ್ಚು ಅವಕಾಶ ಸಿಗಬೇಕು. ಸ್ವತಂತ್ರವಾದ ಚಿಂತನೆ, ಸೌಂದರ್ಯಾರಾಧನೆ, ಭಾವ ಜೀವನ ಪೋಷಣೆ ಮುಂತಾದ ಮೌಲ್ಯಗಳಿಗೆ ಪ್ರಥಮ ಆದ್ಯತೆ ಪ್ರಾಪ್ತವಾಗಬೇಕು. ’ಸೃಜನಶೀಲತೆ ಹಲವು ಸಾಮರ್ಥ್ಯಗಳ ಒಟ್ಟು ಮೊತ್ತʼ ಎಂಬುದನ್ನು ಅರಿಯಬೇಕು. ನಮ್ಮ ದೇಶದ ಭವಿಷ್ಯವು ವ್ಯಕ್ತಿಯ ಸೃಷ್ಟಿಕ್ರಿಯೆ ಹಾಗೂ ಸೃಜಶೀಲತೆಯನ್ನು ಅವಲಂಭಿಸಿದೆ. ಮುಂಬರುವ ದಿನಗಳಲ್ಲಿ ನಮ್ಮ ದೇಶದ ಸಂಪನ್ಮೂಲವೆಂದರೆ ಮಾನವ ಸಂಪನ್ಮೂಲವೇ ಆಗಿದೆ. ದೇಶ ಮುಂದಿನ ಸವಾಲುಗಳನ್ನು ಎದುರಿಸಿ ಮುಂದುವರೆಯಲು ಇಂದಿನ ಶಾಲೆಗಳು ಸೃಜನ ಶೀಲ ನಾಯಕರನ್ನು ಅಭಿವೃದ್ದಿಗೊಳಿಸಬೇಕು. ಈ ನಿಟ್ಟಿನತ್ತ ಎಲ್ಲರೂ ಗಂಭೀರವಾಗಿ ಯೋಚಿಸಬೇಕು. ಯೋಜಿಸಬೇಕು.






ಪ್ರತಿಕಿಯೇ ಸೇರಿಸಿ
ತುಂಬ ಅದ್ಭುತವಾದ ಆಲೋಚನೆ .ಇದು ಪ್ರಾಯೋಗಿಕವಾಗಿ ಅಳವಡಿಸಿ ಕೊಂಡರೆ ಮಕ್ಕಳ ಸರ್ವತೋಮುಖ ಬೆಳವಣಿಗೆ ಸಾಧ್ಯ.