ಇರುವುದೆಲ್ಲವ ಬಿಟ್ಟು
………ಅರ್ಥ ಮಾಡಿಕೋ ರಾಜು, ನಿಮ್ಮಪ್ಪ ಈ ಜಗತ್ತಿಗೆ ದೊಡ್ಡದೊಂದು ಪರಂಪರೆ ಕೊಟ್ಟರು. ಒಂದಲ್ಲ ನಾಲ್ಕು ಮಕ್ಕಳನ್ನು ಇತ್ತು ಸಂಗೀತ-ಸಂಸ್ಕಾರವನ್ನು ನೀಡಿದರು. ನಿನ್ನಿಂದ ಇನ್ನೂ ಎಷ್ಟೋ ಕೆಲಸವಾಗಬೇಕಿದೆ, ಹೀಗೆ ನೀನು ಮತ್ತೆ ಮತ್ತೆ……
ರಾತ್ರಿ ಮಂದ ಬೆಳಕಿನಲಿ ಹೇಳುತ್ತಿದ್ದೆ. ತಕ್ಷಣ ಅವನೆಂದ ‘ರಿಪೀಟ್’, ಅದು ನನಗಲ್ಲ, ನನ್ನ ಹಿಂದಿದ್ದ ಸರ್ವರ್ಗೆ! ನನಗಂದ, ‘ಸುಮ್ನೆ ಕುಯ್ಯಬೇಡ ಎಲ್ರೂ ಹೇಳಕ್ ಬರ್ತೀರಿ!’ ’ಥತ್’ ಅಂತ ಕುರ್ಚಿ ಒದ್ದು ಮೇಲೆದ್ದೆ. ಇನ್ನೊಂದು ಜೋಕು; ಅಶ್ವಥ್ ಮನೆ ಮುಂದೆ ಕೂಗಿದ್ದ, ಕೂತ್ಕೋ ಅಂದ. ಮತ್ತೆ ಕುಕ್ಕರಿಸಿದೆ. ಮತ್ತೆ ನಗು…ನಗು….ನಗು… ನಕ್ಕು ನಕ್ಕು ನನ್ನ ಗಂಭೀರ ಮಾತುಗಳನ್ನು ಮರೆಯಿಸಿಬಿಡುತ್ತಿದ್ದ.
ವಂಶಪಾರಂಪರ್ಯವಾಗಿ ಬಂದ ಹಾಡುವ ಗುಣ, ನಾಡಿಗೆ ದೊಡ್ಡದು ಕೊಟ್ಟ ಮೈಸೂರು ಅನಂತಸ್ವಾಮಿ, ಅಪಾರ ಮಾತೃತ್ವತೆ ಕೊಟ್ಟ ಅಮ್ಮ, ತೊಂಬತ್ತರ ಅಜ್ಜಿ, ಪ್ರೀತಿಗೆ ಇನ್ನೊಂದು ಹೆಸರು ಅವನ ಸೋದರಿಯರು, ಅಚ್ಚುಕಟ್ಟಾದ ಮನೆ, ಕಾರು, ಬೇಕಾದಷ್ಟು ಹಣ, ಅವನ ರೂಪ ರಾಶಿಗೆ, ಹಾಡುಗಾರಿಕೆಗೆ ಒಲಿದ ಅಸಂಖ್ಯ ರಾಧೆಯರು, ಮೀರಾಬಾಯಿಯರು, ಪ್ರಪಂಚದಾದ್ಯಂತ ಅವನ ಕಂಠಸಿರಿಗೆ ಮಾರು ಹೋದ ಅಸಂಖ್ಯ ಅಭಿಮಾನಿಗಳು, ಶಿಷ್ಯಕೋಟಿ…. ಒಬ್ಬ ಮನುಷ್ಯ ಜೀವಿತಾವಧಿಯಲ್ಲಿ ಪಡೆದುಕೊಳ್ಳಬಹುದಾದನ್ನೆಲ್ಲ ಇದ್ದು… ಸಣ್ಣದೊಂದು ‘ವ್ಯಸನ’ವನ್ನು ಮೀರಲಾಗದೇ ಹಿಂತಿರುಗಿ ಬರಲಾಗದ ಜಾಗಕ್ಕೆ ಸುಮ್ಮನೆ ಸದ್ದಿಲ್ಲದೆ ನಡೆದುಹೋಗಿ ಬಿಡುವುದಿದೆಯೆಲ್ಲಾ…!
ಅವನ ಬದುಕಿಗೆ, ಗತಿಗೆ, ಸಾವಿಗೆ ಅರ್ಥ ಹಚ್ಚಲು ಕೊನೆಗೂ ಸಾಧ್ಯವಾಗಲಿಲ್ಲ. ಅವನ ಹೆಣವನ್ನು ಹೆಗಲ ಮೇಲಿಟ್ಟುಕೊಂಡು ಸಾಗುವಾಗ ಚಿತೆಗೆ ತಳ್ಳುವಾಗ ಅನ್ನಿಸಿದ್ದು; ಸೋತೆ… ನಾನು ಸೋತೆ.
ಗೆಳೆತನದಾರಂಭದಿಂದಲೂ ನಾನು ಸೋಲುತ್ತಲೇ ಬಂದೆ. ಅದೆಂಥ ಚೆಂದ. ಮುಗ್ಧ ಮಗುವಿನಂಥ ಕಣ್ಣು, ಫಳಫಳ ಹೊಳೆವ ಚರ್ಮ, ನಡು ಎತ್ತರ, ಗಂಭೀರತೆ, ಗತ್ತು, ಸಹಜ ನಡಿಗೆ ನಿಧಾನವಾಗಿ ಬಂದು ವೇದಿಕೆಯಲ್ಲಿ ಹಾಡಲು ಕುಳಿತನೆಂದರೆ ಸುತ್ತಲೂ ಒಮ್ಮೆ ಕಣ್ಣು ಹಾಯಿಸಿ ಕಿರುನಗೆ ನಕ್ಕು ಹಾರ್ಮೋನಿಯಮ್ ಮೇಲೆ ಬೆರಳಾಡಿಸಿದನೆಂದರೆ ಅಲ್ಲಿ ಮಾಯಾಲೋಕ ಸೃಷ್ಟಿ, ಪ್ರೇಕ್ಷಕರೊಂದಿಗೆ ಅವನಷ್ಟು ಸೊಗಸಾಗಿ ಸಂಹವನ ಸಾಧಿಸಿದ ಗಾಯಕರನ್ನು ನಾನು ಕಂಡದ್ದು ತುಂಬ ಅಪರೂಪ.
ಅವನ ಉತ್ತುಂಗದ ದಿನಗಳ ಸಂಗೀತವನ್ನು ಅತೀ ಹತ್ತಿರದಿಂದ ಕಂಡವ ನಾನು. ಕನ್ನಡ ಕಾವ್ಯದ ಪದ ವಿಭಜನೆ, ಲಘು, ಗುರು, ಗಣ ಮಾತ್ರೆಗಳನ್ನು ಅರ್ಥೈಸಿಕೊಂಡು ಸುಮಧುರ ರಾಗದಲ್ಲಿ, ವಿಶಿಷ್ಟ ಭಾವದಲ್ಲಿ, ವ್ಯಾಕರಣದೋಷವಾಗದಂತೆ ಪಾರಂಪರಿಕ ಶೈಲಿಗೆ ಪ್ರತಿನಿತ್ಯವೂ ಪ್ರಯೋಗಶೀಲತೆಯನ್ನು ಒಗ್ಗಿಸಬಲ್ಲ ಮತೊಬ್ಬ ಗಾಯಕನನ್ನು ನೋಡಲು ನಾನು ಕಾಯಬೇಕಾಗಬಹುದು.
ಅದು ಬರೀ ಹಾಡಲ್ಲ, ಅದೊಂದು ಶ್ರೇಷ್ಠ ಅನುಭೂತಿ, ವ್ಯಂಜನವಾಗಲೀ, ಸ್ವರವಾಗಲೀ ತನ್ನ ಪಲುಕುಗಳಿಗೆ ಬಗ್ಗಿಸಿ ಎಂಥವರನ್ನೂ ತಲೆದುಗುವಂತೆ ಮಾಡಬಲ್ಲ ಶಕ್ತಿ ಅವನ ಗಾಯನದಲ್ಲಿತ್ತು. ಗುರು ಬಿ.ವಿ.ಕಾರಂತರ ನಂತರ ರಂಗಸಂಗೀತದ ಸೂಕ್ಷ್ಮಗಳನ್ನು ಅವನಷ್ಟು ಸಮರ್ಥವಾಗಿ ಗಮನಿಸಿದವರನ್ನು ನಾನು ಕಂಡಿಲ್ಲ. ನನ್ನೆಲ್ಲ ಮಕ್ಕಳ ನಾಟಕದ ಹಾಡಗಳನ್ನು ಅವನು ಸ್ವರಸಂಯೋಜಿಸುವಾಗ ಅಲ್ಲಿ ಗಂಧರ್ವ ಲೋಕ ಅವತರಿಸುತ್ತಿತ್ತು. ಹಾಡುವವರು ಅಪರೂಪಕ್ಕೆ ಸಿಕ್ಕಾರು. ಅವನ ಹಾಗೆ ಪಾಠಮಾಡಲು ಎಲ್ಲರಿಗೂ ಅಸಾಧ್ಯ. ಕುವೆಂಪು ಕಾವ್ಯವನ್ನಾಗಲೀ, ರತ್ನನ ಪದಗಳಾಗಲೀ, ಮಂಕುತ್ತಿಮ್ಮನ ಕಗ್ಗವಾಗಲೀ, ಹೆಚ್ಎಸ್ವಿ, ಕಣವಿ, ಪುತಿನ, ಬೇಂದ್ರೆ,ನಿಸಾರ್… ಕನ್ನಡದ ನಾನು ಕಂಡ ಎಲ್ಲ ಶ್ರೇಷ್ಠರ ಕಾವ್ಯವೂ ಅವನ ಬಾಯಲ್ಲಿ ಸರಾಗ-ಸುಲಲಿತ-ರಮ್ಯ… ಪದಗಳನ್ನು ಉಚ್ಛರಿಸುವ ಬಗೆ, ಪ್ರತೀ ಪದದ ಗಮನಸೆಳೆಯಲು ಬೇಕಾದ ಆಕರ್ಷಕ ವಿಧಾನಗಳು, ಮಕ್ಕಳಿಗಾಗಲೀ, ಹಿರಿಯರಿಗಾಗಲೀ ಸಾಹಿತ್ಯದ ಅರ್ಥಕ್ಕೆ ತಕ್ಕಂತೆ ರಾಗ ಸಂಯೋಜಿಸಬಲ್ಲ ಶಕ್ತಿ ಅವನೊಳಗೆ ಅವತರಿಸಿ ಬಿಟ್ಟಂತಿತ್ತು. ಅವನ ಸಂಗೀತ ಪಾಠ ಸುಂದರ ಕಛೇರಿಯಂತಿರುತಿತ್ತು. ಅಲ್ಲಲ್ಲಿ ಜೋಕುಗಳು, ಸಾಂತ್ವಾನ, ಚುಡಾಯಿಸುವುದು, ರೇಗುವುದು, ಹಂಗಿಸುವುದು, ಪ್ರೀತಿಯ ಪರಾಕಾಷ್ಠೆಯಿಂದ ಪಾಠ ಮಾಡುವ ಪರಿಯೇ ಅನನ್ಯವಾದದ್ದು.

ರಾಜುವಿನ ಮತ್ತೊಂದು ಹೆಸರು ನಗು. ಅದಕ್ಕೆ ಹೊತ್ತಿಲ್ಲ ಗೊತ್ತಿಲ್ಲ. ಅವನಿಗೆ ಜೋಕ್ ಹೇಳಬೇಕೆಂದರೆ, ಕೇಳಬೇಕೆಂದರೆ ಮಧ್ಯರಾತ್ರಿ ಮೂರಾದರೂ ಸೈ. ಅದು ಎದುರಿಗೆ ಇರಬೇಕೆಂದಿಲ್ಲ! ಪ್ರಪಂಚದ ಯಾವ ಮೂಲೆಯಲದಲಿದ್ದರೂ ಸರ್. ಅವನ ಕೊನೆಯ ಭೇಟಿಯೂ ಅಷ್ಟೇ, ‘ತಾಕತ್’ ಚಿತ್ರದ ಸೆಟ್ಟ್ಗೆ ಬಂದ, ಸುಮಿರು ಎರಡೂವರೆ ಘಂಟೆಗಳೂ ನಗು… ನಗು… ಅವನ ನಗುವಿಗೆ ಸಿಗದ ವಸ್ತುಗಳಿಲ್ಲ, ವ್ಯಕ್ತಿಗಳಿಲ್ಲ, ಸಂಧರ್ಭಗಳಿಲ್ಲ.
ಕುಡುಕರ ಬಗ್ಗೆ ಸ್ವತಃ ಅವನೇ ನೂರಾರು ಜೋಕ್ಗಳನ್ನು ಬಣ್ಣಿಸಿ ನಗುತ್ತಿದ್ದ. ಸಿ.ಅಶ್ವಥ್ ರಂಥ ಹಿರಿಯರಾದಿಯಾಗಿ, ವೈ.ಕೆ.ಮುದ್ದುಕೃಷ್ಣರ ವರೆಗೂ ಅವರ ಶೈಲಿಯನ್ನು ಅನುಕರಿಸಿ ತಾನೆಂಥ ‘ನಟ’ ಎಂಬುದನ್ನು ತೋರಿಸುತ್ತಿದ್ದ. ದೇವರಾದಿಯಾಗಿ ಕಟ್ಟಕಡೆಯ ಹುಲ್ಲುಕಡ್ಡಿಯವರೆಗೂ ಮಾತನಾಡಿಸಿಅವರನ್ನು ತಮಾಷೆಮಾಡಿ ಅದಕ್ಕೊಂದು ನಗೆಹನಿ ಸೃಷ್ಟಿಸಿ ಸಂಗೀತದ ಹಾಗೆಯೆ ನಗುವಿಗೊಂದು ಮಾಂತ್ರಿಕ ಸ್ಪರ್ಷ ನೀಡುತ್ತಿದ್ದ. ಅವನ ಆಪ್ತವಲಯದಲ್ಲಿ ಅನೇಕ ಜೋಕುಗಳು ಸದಾ ಜನಜನಿತ.
ಅತೀವ ಸ್ವಾಭಿಮಾನಿ, ಕೆಲವೊಮ್ಮೆ ಅದು ದುರಭಿಮಾನದ ಮಟ್ಟಕ್ಕೂ ಹೋಗಿಬಿಡುತಿತ್ತು. ಅವನು ಹೇಳಿದ್ದೇ ಆಗಬೇಕು; ಅನುಮಾನದ ಮರಿಭೂತವೊಂದು ಸದಾ ಮನದಲ್ಲಿ ಮನೆ ಮಾಡುರುತ್ತಿತ್ತು. ಹಿತ್ತಾಳೆ ಕಿವಿ. ಅವನ ಸಂಕಟಕ್ಕೆ ಅನೇಕ ಕಾರಣಗಳಿದ್ದರೂ ಮುಖ್ಯವಾಗಿ ಸರೀಕರಲ್ಲಿ ಸಂಗೀತದ ಬಗ್ಗೆ ಸಾಸುವೆ ಕಾಳಿನಷ್ಟು ಗೊತ್ತಿರುವವರಿಗೆಲ್ಲ ಸಿಕ್ಕ ಮಾನ್ಯತೆ ಅವನಲ್ಲಿ ನೋವು ಹುಟ್ಟಿಸಿತ್ತು . ಡೊಗ್ಗು ಸಲಾಮಿಲ್ಲ. ಅವನ ಕೆಲಸದಲ್ಲಿ ಬದ್ಧತೆಯಿಲ್ಲ ಎಂದರೆ ತಪ್ಪಾಗುತ್ತದೆ. ನೆಟ್ಟಗಿದ್ದಾಗ ವಹಿಸಿಕೊಂಡ ಕೆಲಸ ಕಾರ್ಯಗಳನ್ನು ಅದ್ಭುತ ಎನ್ನುವಂತೆ ಮಾಡುತ್ತಿದ್ದ. ಕೆಲಸ ಕೊಟ್ಟವನ ಟೈಮ್ ಚೆನ್ನಾಗಿಲ್ಲದಿದ್ದರೆ ವ್ಯಕ್ತಿಯೇ ನಾಪತ್ತೆ! ಬಂದರೂ ಹಾಡುವ ಸ್ಥಿತಿಯಲ್ಲಿರುತ್ತಿರಲಿಲ್ಲ. ವಿಚಿತ್ರ ಕೋಪ ಬೇರೆ. ಆಕ್ಸಿಡೆಂಟ್ಗಳು, ಆರೋಗ್ಯ ತಪ್ಪುವುದು, ಆಸ್ಪತ್ರೆ ಸೇರುವುದು…. ಜೀವನದ ಭಾಗವಾಗಿಬಿಟ್ಟಿತ್ತು.

ಅಂತಃಕರಣ ಮತ್ತು ಸ್ನೇಹಿಪರತೆ ಅವನೊಳಗಿದ್ದ ಶ್ರೇಷ್ಠ ಮಾನವನ ಗುಣಗಳು, ಕೊನೆಯ ದಿನಗಳಲ್ಲಿ ಅನಾಥ ಹೆಣ್ಣು ಮಗುವೊಂದನ್ನು ದತ್ತು ತಗೋತೀನಿ ಅಂತಿದ್ದ. ಯಾವುದೇ ಪ್ರಾಜೆಕ್ಟಿಗೂ ನಯಾಪೈಸೆ ಬಿಡದೆ ಒದ್ದು ವಸೂಲಿ ಮಾಡಿಬಿಡುತಿದ್ದ. ಆದರೆ ಮರುಕ್ಷಣವೇ ಗುಂಪು ಕಟ್ಟಿಕೊಂಡು ಎಲ್ಲ ಕಳೆದುಬಿಡುತ್ತಿದ್ದ. ಅದಕ್ಕೆ ಸ್ನೇಹಿತರೇ ಬೇಕೆಂದಿಲ್ಲ. ಅವನ ಜೊತೆ ಕೂರಲು ಇಂಥವರೇ ಬೇಕೆಂದಿಲ್ಲ. ಒಂದರ್ಥದಲ್ಲಿ ಅವನು ಸಮಾಜವಾದಿ – ಸರೀ ಮಜಾ ವಾದಿ.
ನನ್ನ ‘ನಟನ’ ಶಾಲೆಯ ಮಕ್ಕಳು ಇವತ್ತು ಇಷ್ಟು ಚೆನ್ನಾಗಿ ಹಾಡುತ್ತಾರೆ ಎಂದರೆ ಅದಕ್ಕೆ ರಾಜು ಕಾರಣ. ನಮ್ಮನೆ ಎದರಿಗಿನ 60ರ ಕರಿ ಮುದುಕಿ ದುಂಡಮ್ಮಳಿಗೆ ಸಿಕ್ಕಾಗೆಲ್ಲ I Love You ಎಂದು ನಗೆ ಹುಟ್ಟಿಸುತ್ತಿದ್ದ.
ಕಡಿಮೆ ಕುಡಿ ಎಮದರೆ ದೂರ ತಳ್ಳುತ್ತಿದ್ದ, ಕುಡಿಯ ಬೇಡಿ ಎಂದರೆ ಸಿಟ್ಟಿಗೆದ್ದು ರಂಪ ಮಾಡುತ್ತಿದ್ದ. ಮತ್ತೆ ಮದುವೆಯಾಗು ಎಂದಿದ್ದಕ್ಕೆ ತಿಂಗಳುಗಟ್ಟಲೆ ಮನೆಗೇ ಬರಲಿಲ್ಲ. ಮದ್ಯದ ನಶೆಯಲ್ಲಿ ಮಧ್ಯರಾತ್ರಿಯಲ್ಲಿ ಸಿಕ್ಕಸಿಕ್ಕವರಿಗೆಲ್ಲಾ ಫೋನಾಯಿಸಬೇಡ ಎಂದು ಬೈದಿದಕ್ಕೆ ನನ್ನೊಡನೆ ಠೂ ಬಿಟ್ಟ.
ಧುತ್ತನೆ ಬರುವ, ಅಡಿಗೆ ಮನೆಯೊಳಗೆ ನುಗ್ಗಿ ಸಿಕ್ಕಿದನ್ನು ಬಡಿಸಿಕೊಂಡು ತಿನ್ನುವ ಅವನು ಸ್ವತಃ ಸೊಗಸಾದ ಬಾಣಸಿಗ. ಮಗಳೊಂದಿಗ ಕುತು ಕೇರಂ ಆಡುವ, ಕಡೇ ಬಾರಿ ಮೈಸೂರು ಬಿಡುವ ಕೊನೆ ಘಳಿಗೆಯಲ್ಲಿ ಕಾರಂತ ರಂಗ ಮನೆಯಲ್ಲಿ ಕೂತು ‘ನಾನೇಕೆ ಬಡವನು ನಾನೇಕೆ ಪರದೇಸಿ’ ಅಂತಾ ಹಾಡಿದ್ದಾನೆ. ಹಾಡು ಕಲಿ ಅಂತಾ ಸರೋಜಳಿಗೆ ಒತ್ತಾಯಿಸಿ ಹೇಳಿಕೊಟ್ಟಿದ್ದಾನೆ.
ತುಂಟ ಕೃಷ್ಣ – ವಿರಾಟ್ ರಾಜಕಾರಣಿಯಾಗಿ ಬೆಳೆದು ಕಾನನದ ಮುಲೆಯಲ್ಲಿ ಸದ್ದಿಲ್ಲದೆ ಮೌನದಿಂದ ಮಡಿದ ಕೃಷ್ಣನ ಕತೆಯನ್ನು ಸುಂದರ ಸಂಗೀತ ನಾಟಕವನ್ನು ಮಕ್ಕಳಿಂದ ಮಾಡಿಸಬೇಕು, ನೀನು ನಿರ್ದೇಶಿಸಬೇಕು ಅಂತಾ ಒತ್ತಾಯಿಸಿದ್ದ. ನಾಟಕದ ಶೀರ್ಷಿಕೆ ‘ಕೃಷ್ಣನ ಕೊಳಲಿನ ಕರೆ’
ಕರೆ ಬಂತು…. ಕೃಷ್ಣನೇ ಹೋಗಿಬಿಟ್ಟ. ಸಂಗೀತ….? ಇನ್ನೆಲ್ಲಿ ನಾಟಕ ಮಾಡಿಸಲಿ….?
ಶೇಕ್ಸ್ಪಿಯರ್ ನಾಟಕದ ಪಾತ್ರಗಳಿಗಾದರೂ ಒಂದಷ್ಟು ವ್ಯಕ್ತಿತ್ವದ ವರ್ಣಗಳಿರುತ್ತವೆ. ಇವನನ್ನು ಅರ್ಥೈಸಲು ಪ್ರಪಂಚದ ಯಾರಿಗೂ ಸಾಧ್ಯವಾಗದ ಮಾತು.
ಸಂಗೀತದ ಮಹಾ ವಿದ್ವತ್, ಸಾಹಿತ್ಯ ಪ್ರಜ್ಞೆ, ಸರಳತೆ, ಪ್ರೀತಿ, ಅಂತಃಕರಣ, ತಿಕ್ಕಲುತನ, ದಾಷ್ಟ್ಯ, ಮುನಿಸು, ಮಿತೃತ್ವಗಳ ಜೊತೆಗೆ ಮನಸ್ಸಿನಾಳದಲ್ಲಿ ಎಂಥದ್ದೋ ಸುಂದರ ಕನಸುಗಳನ್ನಿಟ್ಟುಕೊಂಡು ಬಿಟ್ಟಿರಲಾಗದ ವ್ಯಸನಕ್ಕೆ ಬಲಿಯಾದ ರಾಜುವಿನ ಮೈ ನಮ್ಮೊಟ್ಟಿಗಿಲ್ಲ…….
ಅವನ ದನಿ ಮತ್ತು ಅದರೊಳಗಿನ ಹೃದ್ಯ ಭಾವ ಕನ್ನಡ ಇರುವಲ್ಲಿಯವರೆಗಾದರೂ ಕಾಡುತ್ತಲೇ ಇರುತ್ತದೆ.
………………………ನನಗೆ ಮಾತ್ರ ಅವನ ವ್ಯಸನಕ್ಕೆ, ಸಾವಿಗೆ ನಿಖರ ಅರ್ಥ ಕಡೆಗೂ ಗ್ರಹಿಸಲಾಗದೆ ಹೋದದ್ದಕ್ಕೆ ಕಣ್ಣಂಚಿನಲ್ಲಿ ನೀರಾಡುತ್ತಲೇ ಇದೆ….


ತುಂಬಾ ಕಾಡುವ…..ಪದೇ ಪದೇ ನೆನಪಾಗಿ ನೋವುಂಟುಮಾಡುವ ನೆಚ್ಚಿನ ರಾಜು ಬಗ್ಗೆ ಆಪ್ತತೆಯಿಂದ ಬರೆದಿದ್ದೀರಿ..ಧನ್ಯವಾಧಗಳು.
ನನ್ನ ಆಪ್ತ ಗಾಯಕ ರಾಜು. ಅವರ ತಂದೆ ನನ್ನ ’ವೊತ್ತಾರೆದ್ದು ದೇವುರ್ ಮುಂದೆ ಅಚ್ಚು ನೀನು ದೀಪ ’ ಮತ್ತು ’ ಚಿನ್ನದ್ ಚಿತ್ರ ಬೆಳ್ಳಿಕಟ್ಟು ಬಂಗಾರದ್ ಬಣ್ಣದ್ ರೂಪ… ನನ್ ಗಂಗೇ ರೂ…..ಪ’ ಕವನಗಳಿಗೆ ರಾಗ ಸಂಯೋಜಿಸಿ ಅವರ ಮನೆಗೆ ನನ್ನ ಕರಸಿ ಹಾಡಿ, ಕೇಳಿಸಿ ಅಭಿಪ್ರಾಯ ಕೇಳಿದ ಆ ದಿನವನ್ನು ನಾನು ಇನ್ನೂ ಮರೆತಿಲ್ಲ. ನಂತರ ಅದೇ ಕವನಗಳನ್ನು ತನ್ನದೇ ಮಾಡಿಕೊಂಡು ವೈವಿಧ್ಯವಾಗಿ ಹಾಡುತ್ತಿದ್ದ ರಾಜುವನ್ನು ಮರೆಯಲು ಸಾಧ್ಯವೇ ಇಲ್ಲ. ಆತ ಸದಾ ನನ್ನ ಕವನಗಳೊಡನೆ ಆತನ ಶಿಷ್ಯರು ಹಾಡುವೆಡೆಯಲ್ಲಿ ಇದ್ದೇ ಇರುವ ಚಿರಂಜೀವಿ. ನನ್ನೆರಡು ಪ್ರೇಮ ಕವನಗಳಿಗೆ ಸ್ವತ: ರಾಗ ಸಂಯೋಜಿಸಿ ಶಿಷ್ಯರೊಡನೆ ಕೃತಿ ಬಿಡುಗಡೆ ಸಮಾರಂಭದಲ್ಲಿ ಹಾಡಿದ್ದು, ’ಜಗ್ಗೂ’ ಎಂದು ಪ್ರೀತಿಯಿಂದ ಕರೆಯುತ್ತಿದ್ದದ್ದೂ, ಕಾರ್ಯಕ್ರಮಗಳಲ್ಲಿ ನನ್ನನ್ನು ಕಂಡಾಗ ಮತ್ತೆ ಮತ್ತೆ ’ನನ್ಗಂಗೆ ರೂಪಾ… ’ಕವನವನ್ನು ಹಾಡುತ್ತಿದ್ದುದ್ದು, ..ಓಹ್ I miss you Raju.
chanagide anna article
ಸರ್ ನಾನೊಬ್ಬ ರಾಜು ಅನಂತಸ್ವಾಮಿಯ ಪಕ್ಕಾ ಅಭಿಮಾನಿ ಅವರ ಪ್ರತಿಯೊಂದು ಹಾಡನ್ನು ಕೇಳಿದಾಗ ಅವರನ್ನು ಅವರ ಸಾವನ್ನು ನೆನೆದು ನನ್ನ ಕಣ್ಣಾಲಿಗಳು ಎಷ್ಟೋ ಬಾರಿ ತುಂಬಿ ಈಗ ನಿಮ್ಮ ಲೇಖನ ಓದಿ ಮತ್ತೊಮ್ಮೆ ಅವರ ನೆನಪು ಬರಿಸಿದಿರಿ…………… ಗಾನ ಲೋಕದಲ್ಲಿ ಪದೇ ಪದೇ ನೆನಪಾಗುವ ವ್ಯಕ್ತಿಯ ಬಗ್ಗೆ ಅದ್ಬುತವಾಗಿ ಬರೆದಿದ್ದೀರಿ……………………………
ರಾಜು ಅನಂತಸ್ವಾಮಿಯವರ ಕಗ್ಗದ ಹಾಡುಗಳು, ಬಡವನಾದರೆ ಏನು ಪ್ರಿಯೆ, ಹೆಂಡ್ ಕುಡ್ಕ ರತ್ನನ್ ಪದ್ಗೊಳು, ಲೋಕದ ಕಣ್ಣಿಗೆ ಇತರೆ ಹಾಡುಗಳನ್ನು ಆಗಾಗ ಕೇಳುವ ಅವರಭಿಮಾನಿ. ಆ ವ್ಯಕ್ತಿ ಇಷ್ಟು ಬೇಗ ಈ ಪ್ರಪಂಚವನ್ನು ತೊರೆದದ್ದು, ತೊರೆಯಲು ಕಾರಣವಾದ ವಿಚಾರ, ಎರಡೂ ಬೇಸರವೇ. ಓಡಿಸಿಕೊಂಡು ಓದಿಸಿಕೊಂಡು ಹೋದ ಲೇಖನ…
ಓದಲು ಪ್ರಾರಂಭಿಸಿದ ಕೂಡಲೇ… ರಾಜು ಮತ್ತೆ ಅವನ ಜೊತೆ ಕಳೆದ ಸಮಯ…ಅವನ ಮಾತು …ನಗು.. ಕಿವಿಗಳಿಗಪ್ಪಳಿಸಿ, ಕಣ್ಣು ಮಂಜಾಗಿ ಮುಂದೆ ಓದಲಾಗಿಲ್ಲವಾದರೂ.. ಎಲ್ಲವೂ ಅರ್ಥವಾಯಿತು.. ಕೇಳಿಸಿತು…ಅವನ ಧ್ವನಿಯಲ್ಲೇ !!
ರಮೇಶ್.. ನಿಮಗೆ ನನ್ನ ಅನಂತ ಪ್ರೀತಿ !!
ಆಸಿಫ್ ಕ್ಷತ್ರಿಯ